ಆದಿಕಾಂಡ 19

19
ಲೋಟನ ಸಂದರ್ಶಕರು
1ಆ ಸಾಯಂಕಾಲ, ದೇವದೂತರಿಬ್ಬರು ಸೊದೋಮ್ ನಗರಕ್ಕೆ ಬಂದರು. ನಗರದ ಬಾಗಿಲುಗಳ ಬಳಿ ಕುಳಿತುಕೊಂಡಿದ್ದ ಲೋಟನು ದೇವದೂತರನ್ನು ಕಂಡು, ಅವರ ಬಳಿಗೆ ಹೋಗಿ ನಮಸ್ಕರಿಸಿದನು. 2ಲೋಟನು ಅವರಿಗೆ, “ಸ್ವಾಮಿಗಳೇ, ದಯವಿಟ್ಟು ನನ್ನ ಮನೆಗೆ ಬನ್ನಿ. ನಾನು ನಿಮ್ಮನ್ನು ಉಪಚರಿಸುವೆನು. ನಿಮ್ಮ ಕೈಕಾಲುಗಳನ್ನು ತೊಳೆದುಕೊಂಡು ಈ ರಾತ್ರಿ ನಮ್ಮ ಮನೆಯಲ್ಲೇ ಇರಿ. ನಾಳೆ ಮುಂಜಾನೆ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು” ಎಂದು ಹೇಳಿದನು.
ದೇವದೂತರು, “ಈ ಚೌಕದಲ್ಲಿ ನಾವು ಈ ರಾತ್ರಿ ಕಳೆಯುತ್ತೇವೆ” ಎಂದು ಉತ್ತರಿಸಿದರು.
3ಆದರೆ ಲೋಟನು ತನ್ನ ಮನೆಗೆ ಬರುವಂತೆ ಒತ್ತಾಯಿಸಿದ್ದರಿಂದ ಅವರು ಅವನ ಮನೆಗೆ ಹೋದರು. ಲೋಟನು ಅವರಿಗಾಗಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಡಿಸಿ ಅಡಿಗೆ ಮಾಡಿಸಿದನು. ದೇವದೂತರು ಅದನ್ನು ಊಟಮಾಡಿದರು.
4ಆ ರಾತ್ರಿ ಮಲಗುವುದಕ್ಕಿಂತ ಮುಂಚೆ ಸೊದೋಮಿನ ಗಂಡಸರೆಲ್ಲರೂ ಬಂದು ಲೋಟನ ಮನೆಯ ಸುತ್ತಲೂ ನಿಂತುಕೊಂಡು ಲೋಟನಿಗೆ, 5“ನಿನ್ನ ಮನೆಗೆ ಬಂದ ಆ ಇಬ್ಬರು ಪುರುಷರು ಎಲ್ಲಿದ್ದಾರೆ? ಅವರನ್ನು ಹೊರಗೆ ಕಳುಹಿಸು. ನಾವು ಅವರನ್ನು ಸಂಭೋಗಿಸಬೇಕು” ಎಂದು ಕೂಗಿ ಹೇಳಿದರು.
6ಲೋಟನು ಹೊರಗೆ ಬಂದು ಬಾಗಿಲಿಗೆ ಬೀಗ ಹಾಕಿ, 7ಆ ಗಂಡಸರಿಗೆ, “ನನ್ನ ಸಹೋದರರೇ, ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ಕೆಟ್ಟಕಾರ್ಯವನ್ನು ಮಾಡಬೇಡಿ. 8ನೋಡಿ! ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರು ಹಿಂದೆಂದೂ ಗಂಡಸರೊಡನೆ ಮಲಗಿದವರಲ್ಲ. ನೀವು ಅವರಿಗೆ ಏನುಬೇಕಾದರೂ ಮಾಡಿ, ಆದರೆ ದಯವಿಟ್ಟು ಈ ಪುರುಷರಿಗೆ ಏನನ್ನೂ ಮಾಡಬೇಡಿ. ಇವರು ನನ್ನ ಮನೆಗೆ ಬಂದಿದ್ದಾರೆ; ಇವರನ್ನು ಕಾಪಾಡುವುದು ನನ್ನ ಕರ್ತವ್ಯ” ಎಂದು ಹೇಳಿದನು.
9ಮನೆಯ ಸುತ್ತಲೂ ನಿಂತುಕೊಂಡಿದ್ದ ಗಂಡಸರು ಅವನಿಗೆ, “ದಾರಿಬಿಡು” ಎಂದು ಕೂಗಿದರು. ಆಮೇಲೆ ಅವರು ತಮ್ಮೊಳಗೆ, “ಈ ಲೋಟನು ನಮ್ಮ ನಗರಕ್ಕೆ ಪ್ರವಾಸಿಗನಂತೆ ಬಂದು ಈಗ ನಮಗೇ ನ್ಯಾಯವನ್ನು ಹೇಳಿಕೊಡುತ್ತಿದ್ದಾನೆ” ಎಂದು ಮಾತಾಡಿಕೊಂಡರು. ಆಮೇಲೆ ಅವರು ಲೋಟನಿಗೆ, “ನಾವು ಆ ಪುರುಷರಿಗೆ ಮಾಡುವುದಕ್ಕಿಂತ ನಿನಗೇ ಹೆಚ್ಚು ಕೆಟ್ಟದ್ದನ್ನು ಮಾಡುತ್ತೇವೆ” ಎಂದು ಕೂಗಿಹೇಳಿ ಲೋಟನ ಸಮೀಪಕ್ಕೆ ಬಂದು ಬಾಗಿಲನ್ನು ಮುರಿದುಹಾಕಲು ಸಿದ್ಧರಾದರು.
10ಆದರೆ ಮನೆಯೊಳಗಿದ್ದ ಇಬ್ಬರು ಪುರುಷರು ಬಾಗಿಲನ್ನು ತೆರೆದು ಲೋಟನನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು. 11ಆ ಇಬ್ಬರು ಪುರುಷರು ಮನೆಯ ಹೊರಗೆ ಇದ್ದ ಗಂಡಸರನ್ನೆಲ್ಲಾ ಕುರುಡರಾಗುವಂತೆ ಮಾಡಿದ್ದರಿಂದ ಅವರು ಬಾಗಿಲನ್ನು ಗುರುತಿಸಲಾರದೆ ಹೋದರು.
ಸೊದೋಮಿನಿಂದ ಪಲಾಯನ
12ಆ ಇಬ್ಬರು ಪುರುಷರು ಲೋಟನಿಗೆ, “ನಿನ್ನ ಕುಟುಂಬದ ಬೇರೆ ಯಾರಾದರೂ ಈ ನಗರದಲ್ಲಿ ಇದ್ದಾರೆಯೇ? ನಿನಗೆ ಅಳಿಯಂದಿರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಇಲ್ಲಿ ವಾಸವಾಗಿದ್ದಾರೆಯೇ? ನಿನ್ನ ಕುಟುಂಬದ ಯಾರಾದರೂ ಈ ನಗರದಲ್ಲಿದ್ದರೆ ಈಗಲೇ ಇಲ್ಲಿಂದ ಹೊರಡುವಂತೆ ಅವರಿಗೆ ತಿಳಿಸು. 13ನಾವು ಈ ನಗರವನ್ನು ನಾಶಮಾಡುತ್ತೇವೆ. ಈ ನಗರದ ದುಷ್ಟತನವನ್ನು ಯೆಹೋವನು ನೋಡಿದ್ದಾನೆ. ಆದ್ದರಿಂದ ಇದನ್ನು ನಾಶಮಾಡಲು ಆತನೇ ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.
14ಆದ್ದರಿಂದ ಲೋಟನು ಹೊರಗೆ ಹೋಗಿ, ತನ್ನ ಹೆಣ್ಣುಮಕ್ಕಳೊಡನೆ ನಿಶ್ಚಿತಾರ್ಥವಾಗಿದ್ದ ಅಳಿಯಂದಿರೊಡನೆ ಮಾತಾಡಿ, “ಬೇಗನೆ ಈ ಪಟ್ಟಣವನ್ನು ಬಿಟ್ಟು ಹೊರಡಿರಿ; ಯೆಹೋವನು ಈ ಪಟ್ಟಣವನ್ನು ನಾಶಮಾಡುವನು” ಎಂದು ಹೇಳಿದನು. ಲೋಟನ ಈ ಮಾತು ಅವರಿಗೆ ತಮಾಷೆಯಂತೆ ಕಂಡಿತು.
15ಸೂರ್ಯೋದಯಕ್ಕಿಂತ ಮೊದಲೇ ಹೊರಡುವಂತೆ ದೇವದೂತರು ಲೋಟನನ್ನು ಒತ್ತಾಯಿಸಿ, “ಈ ನಗರವನ್ನು ನಾಶಗೊಳಿಸಲಾಗುವುದು. ಆದ್ದರಿಂದ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಈ ಸ್ಥಳದಿಂದ ಓಡಿಹೋಗು, ಆಗ ನೀನು ಈ ನಗರದೊಡನೆ ನಾಶವಾಗುವುದಿಲ್ಲ” ಎಂದು ಹೇಳಿದರು.
16ಆದರೆ ಲೋಟನು ಗಲಿಬಿಲಿಗೊಂಡು ತಡಮಾಡಲು ಆ ಇಬ್ಬರು ಪುರುಷರು ಲೋಟನನ್ನೂ ಅವನ ಹೆಂಡತಿಯನ್ನೂ ಅವನ ಇಬ್ಬರು ಹೆಣ್ಣುಮಕ್ಕಳನ್ನೂ ಕೈಹಿಡಿದುಕೊಂಡು ನಗರದ ಹೊರಕ್ಕೆ ಸುರಕ್ಷಿತವಾಗಿ ತಂದುಬಿಟ್ಟರು. ಹೀಗೆ ಯೆಹೋವನು ಲೋಟನಿಗೂ ಅವನ ಕುಟುಂಬದವರಿಗೂ ದಯೆತೋರಿದನು. 17ಅವರು ನಗರದ ಹೊರಕ್ಕೆ ಬಂದ ಮೇಲೆ ಆ ಪುರುಷರಲ್ಲಿ ಒಬ್ಬನು, “ಈಗ ಓಡಿಹೋಗಿ ನಿಮ್ಮ ಪ್ರಾಣವನ್ನು ಕಾಪಾಡಿಕೊಳ್ಳಿ; ನಗರದ ಕಡೆಗೆ ತಿರುಗಿ ನೋಡಬೇಡಿ; ಕಣಿವೆಯ ಯಾವ ಸ್ಥಳದಲ್ಲೂ ನಿಂತುಕೊಳ್ಳಬೇಡಿ; ತಪ್ಪಿಸಿಕೊಂಡು ಬೆಟ್ಟಗಳಿಗೆ ಓಡಿಹೋಗಿರಿ; ಇಲ್ಲವಾದರೆ, ಈ ನಗರದೊಡನೆ ನೀವೂ ನಾಶವಾಗುವಿರಿ” ಎಂದು ಹೇಳಿದನು.
18ಆದರೆ ಲೋಟನು ಆ ಪುರುಷರಿಗೆ, “ಸ್ವಾಮಿಗಳೇ, ದಯವಿಟ್ಟು ಬಹುದೂರದವರೆಗೆ ಓಡಿಹೋಗುವಂತೆ ನಮ್ಮನ್ನು ಒತ್ತಾಯಿಸಬೇಡಿ. 19ನಿಮ್ಮ ಸೇವಕನಾದ ನನಗೆ ಮಹಾಕರುಣೆಯನ್ನು ತೋರಿ ನನ್ನನ್ನು ಕಾಪಾಡಿದ್ದೀರಿ. ಆದರೆ ನಾನು ಬೆಟ್ಟಗಳವರೆಗೂ ಓಡಿಹೋಗಲಾರೆ. ನಾನು ನಿಧಾನವಾಗಿ ಹೋಗುವುದಾದರೆ ಕೇಡು ಸಂಭವಿಸಿ ಕೊಲ್ಲಲ್ಪಡುವೆನು. 20ಅಗೋ, ಅಲ್ಲಿ ಒಂದು ಚಿಕ್ಕ ಊರಿದೆ. ಆ ಊರಿಗೆ ಓಡಿಹೋಗಲು ನನಗೆ ಅಪ್ಪಣೆಕೊಡಿ. ನಾನು ಅಲ್ಲಿಗೆ ಓಡಿಹೋಗಿ ಸುರಕ್ಷಿತವಾಗಿರುವೆನು” ಎಂದು ಹೇಳಿದನು.
21ಆ ಪುರುಷನು ಲೋಟನಿಗೆ, “ಆಗಲಿ, ನಿನಗೆ ಅಪ್ಪಣೆ ಕೊಟ್ಟಿದ್ದೇನೆ. ನಾನು ಆ ಊರನ್ನು ನಾಶಮಾಡುವುದಿಲ್ಲ. 22ಆದರೆ ಅಲ್ಲಿಗೆ ಬೇಗನೆ ಓಡಿಹೋಗು, ನೀನು ಆ ಊರಿಗೆ ಸುರಕ್ಷಿತವಾಗಿ ಸೇರುವತನಕ ನಾನು ಸೊದೋಮನ್ನು ನಾಶಗೊಳಿಸಲಾಗುವುದಿಲ್ಲ” ಎಂದು ಹೇಳಿದನು. (ಆ ಊರಿಗೆ ಚೋಗರ್ ಎಂದು ಕರೆಯಲಾಯಿತು; ಯಾಕೆಂದರೆ ಅದು ಚಿಕ್ಕ ಊರು.)
ಸೊದೋಮ್ ಮತ್ತು ಗೊಮೋರ ಪಟ್ಟಣಗಳ ನಾಶನ
23ಸೂರ್ಯೋದಯವಾಗುವಷ್ಟರಲ್ಲಿ ಲೋಟನು ಚೋಗರಿಗೆ ಪ್ರವೇಶಿಸುತ್ತಿದ್ದನು. 24ಆಗ ಯೆಹೋವನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಮೇಲೆ ಆಕಾಶದಿಂದ ಉರಿಯುವ ಗಂಧಕದ ಮಳೆಯನ್ನು ಸುರಿಸಿದನು. 25ಹೀಗೆ ಯೆಹೋವನು ಆ ಎರಡು ನಗರಗಳನ್ನು ನಾಶಮಾಡಿದನು; ಇಡೀ ಕಣಿವೆಯನ್ನೂ ಅದರಲ್ಲಿ ಬೆಳೆಯುತ್ತಿದ್ದ ಸಸ್ಯಗಳನ್ನೂ ನಗರಗಳಲ್ಲಿದ್ದ ಎಲ್ಲಾ ಜನರನ್ನೂ ನಾಶಮಾಡಿದನು.
26ಅವರು ಓಡಿಹೋಗುತ್ತಿರುವಾಗ ಲೋಟನ ಹೆಂಡತಿ ನಗರದ ಕಡೆಗೆ ಹಿಂತಿರುಗಿ ನೋಡಿದಳು. ಆ ಕೂಡಲೇ ಆಕೆಯು ಉಪ್ಪಿನ ಕಂಬವಾದಳು.
27ಅಂದು ಮುಂಜಾನೆ ಅಬ್ರಹಾಮನು ಎದ್ದು ತಾನು ಯೆಹೋವನ ಮುಂದೆ ನಿಂತುಕೊಂಡಿದ್ದ ಸ್ಥಳಕ್ಕೆ ಹೋದನು. 28ಅಬ್ರಹಾಮನು ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಕಡೆಗೂ ಕಣಿವೆ ಪ್ರದೇಶದ ಕಡೆಗೂ ನೋಡಿದಾಗ ಆ ಪ್ರದೇಶದಿಂದ ಹೊಗೆ ಮೇಲೇರುತ್ತಿರುವುದನ್ನು ಕಂಡನು; ಧಗಧಗಿಸುವ ಬೆಂಕಿಯಿಂದ ಬರುವ ಹೊಗೆಯಂತೆ ಅದು ಕಂಡಿತು.
29ದೇವರು ಆ ಸೀಮೆಯ ನಗರಗಳನ್ನು ನಾಶಮಾಡಿದರೂ ಅಬ್ರಹಾಮನನ್ನು ಜ್ಞಾಪಿಸಿಕೊಂಡು ಲೋಟನ ಪ್ರಾಣವನ್ನು ಉಳಿಸಿದನು; ಆದರೆ ಲೋಟನು ವಾಸಿಸುತ್ತಿದ್ದ ನಗರವನ್ನು ನಾಶಮಾಡಿದನು.
ಲೋಟ ಮತ್ತು ಅವನ ಹೆಣ್ಣುಮಕ್ಕಳು
30ಚೋಗರ್ ಊರಿನಲ್ಲಿ ವಾಸಮಾಡಿಕೊಂಡಿರಲು ಲೋಟನಿಗೆ ಹೆದರಿಕೆಯಾಯಿತು. ಆದ್ದರಿಂದ ಅವನು ಮತ್ತು ಅವನ ಹೆಣ್ಣುಮಕ್ಕಳು ಬೆಟ್ಟಪ್ರದೇಶಕ್ಕೆ ಹೋಗಿ ಗುಹೆಯೊಂದರಲ್ಲಿ ವಾಸಿಸತೊಡಗಿದರು. 31ಒಂದು ದಿನ ಹಿರಿಯ ಮಗಳು ತನ್ನ ತಂಗಿಗೆ, “ಭೂಲೋಕದಲ್ಲೆಲ್ಲಾ ಸ್ತ್ರೀಯರೂ ಪುರುಷರೂ ಮದುವೆಯಾಗುತ್ತಾರೆ. ಆದರೆ ಇಲ್ಲಿ ನಾವು ಮದುವೆಯಾಗಲು ಯಾವ ಗಂಡಸರೂ ಇಲ್ಲ. ನಮ್ಮ ತಂದೆಗೂ ವಯಸ್ಸಾಗಿದೆ. 32ಆದರೆ ನಾವು ಮಕ್ಕಳನ್ನು ನಮ್ಮ ತಂದೆಯಿಂದಲೇ ಪಡೆದುಕೊಳ್ಳೋಣ. ಆಗ ನಮ್ಮ ಕುಟುಂಬ ಕೊನೆಗೊಳ್ಳುವುದಿಲ್ಲ. ನಮ್ಮ ತಂದೆಯನ್ನು ಮತ್ತನನ್ನಾಗಿ ಮಾಡಿ ಅವನೊಂದಿಗೆ ಮಲಗಿಕೊಳ್ಳೋಣ” ಎಂದು ಹೇಳಿದಳು.
33ಆ ರಾತ್ರಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ಅಮಲೇರಿಸಿದರು. ಬಳಿಕ ಹಿರಿಯ ಮಗಳು ತನ್ನ ತಂದೆಯ ಹಾಸಿಗೆಗೆ ಹೋಗಿ ಅವನೊಂದಿಗೆ ಮಲಗಿಕೊಂಡಳು. ಲೋಟನು ಮತ್ತನಾಗಿದ್ದುದರಿಂದ ಆಕೆ ಅವನೊಂದಿಗೆ ಮಲಗಿಕೊಂಡದ್ದು ಅವನಿಗೆ ತಿಳಿಯಲಿಲ್ಲ.
34ಮರುದಿನ, ಹಿರಿಯ ಮಗಳು ತನ್ನ ತಂಗಿಗೆ, “ಕಳೆದ ರಾತ್ರಿ ನಾನು ನನ್ನ ತಂದೆಯೊಂದಿಗೆ ಮಲಗಿಕೊಂಡೆ. ಈ ರಾತ್ರಿಯೂ ಅವನನ್ನು ದ್ರಾಕ್ಷಾರಸ ಕುಡಿಸಿ ಅಮಲೇರಿಸೋಣ. ಆಮೇಲೆ ನೀನು ಹಾಸಿಗೆಯ ಮೇಲೆ ಅವನೊಂದಿಗೆ ಮಲಗಿಕೊಳ್ಳಬಹುದು. ಹೀಗೆ ನಾವು ಮಕ್ಕಳನ್ನು ನಮ್ಮ ತಂದೆಯಿಂದಲೇ ಪಡೆದುಕೊಳ್ಳೋಣ” ಎಂದು ಹೇಳಿದಳು. 35ಆ ರಾತ್ರಿಯೂ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ಅಮಲೇರಿಸಿದರು. ಆಮೇಲೆ ಚಿಕ್ಕಮಗಳು ಅವನ ಹಾಸಿಗೆಗೆ ಹೋಗಿ ಅವನೊಂದಿಗೆ ಮಲಗಿಕೊಂಡಳು. ಆಕೆ ಮಲಗಿಕೊಂಡದ್ದು ಲೋಟನಿಗೆ ತಿಳಿಯಲಿಲ್ಲ.
36ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದಲೇ ಗರ್ಭಧರಿಸಿದರು. 37ಹಿರಿಯ ಮಗಳು ಗಂಡುಮಗನನ್ನು ಹೆತ್ತಳು. ಆಕೆ ಅವನಿಗೆ ಮೋವಾಬ್ ಎಂದು ಹೆಸರಿಟ್ಟಳು. ಈಗ ಜೀವಿಸುತ್ತಿರುವ ಎಲ್ಲಾ ಮೋವಾಬ್ಯರಿಗೆ ಮೋವಾಬನೇ ಮೂಲಪುರುಷ. 38ಚಿಕ್ಕಮಗಳು ಸಹ ಗಂಡುಮಗುವನ್ನು ಹೆತ್ತಳು. ಆಕೆ ತನ್ನ ಮಗನಿಗೆ ಬೆನಮ್ಮಿ ಎಂದು ಹೆಸರಿಟ್ಟಳು. ಈಗ ಜೀವಿಸುತ್ತಿರುವ ಅಮ್ಮೋನಿಯರಿಗೆ ಬೆನಮ್ಮಿಯೇ ಮೂಲಪುರುಷ.

Áherslumerki

Deildu

Afrita

None

Want to have your highlights saved across all your devices? Sign up or sign in