ಆದಿಕಾಂಡ 17
17
ಸುನ್ನತಿ — ಒಡಂಬಡಿಕೆ
1ಅಬ್ರಾಮನಿಗೆ ತೊಂಭತ್ತೊಂಬತ್ತು ವರ್ಷವಾಗಿದ್ದಾಗ ಯೆಹೋವನು ಅವನಿಗೆ ಪ್ರತ್ಯಕ್ಷನಾಗಿ, “ನಾನು ಸರ್ವಶಕ್ತನಾದ ದೇವರು. ನನಗೆ ವಿಧೇಯನಾಗಿದ್ದು ನಿರ್ದೋಷಿಯಾಗಿರು. 2ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವುದಾಗಿ ವಾಗ್ದಾನ ಮಾಡುತ್ತೇನೆ” ಎಂದು ಹೇಳಿದನು.
3ಆ ಕೂಡಲೇ ಅಬ್ರಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ದೇವರು ಅವನಿಗೆ, 4“ನಾನು ನಿನಗೆ ಮಾಡುವ ವಾಗ್ದಾನವೇನೆಂದರೆ: 5‘ಅಬ್ರಾಮ’ ಎಂಬ ನಿನ್ನ ಹೆಸರನ್ನು ಬದಲಾಯಿಸಿ ನಿನಗೆ ‘ಅಬ್ರಹಾಮ’ ಎಂದು ಹೆಸರಿಡುವೆನು. ನಿನ್ನನ್ನು ಅಬ್ರಹಾಮ ಎಂದೇ ಕರೆಯುವರು; ಯಾಕೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆ. 6ಹೊಸ ಜನಾಂಗಗಳು ನಿನ್ನಿಂದ ಹುಟ್ಟುವವು; ರಾಜರುಗಳು ನಿನ್ನಿಂದ ಬರುವರು. 7ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು. 8ನೀನು ಪ್ರಯಾಣ ಮಾಡುತ್ತಿರುವ ಈ ಕಾನಾನ್ ದೇಶವನ್ನೆಲ್ಲ ನಿನಗೂ ನಿನ್ನ ಸಂತತಿಯವರಿಗೂ ಶಾಶ್ವತವಾಗಿ ಕೊಡುವೆನು. ನಾನೇ ನಿಮ್ಮ ದೇವರಾಗಿರುವೆನು” ಎಂದು ಹೇಳಿದನು.
9ಇದಲ್ಲದೆ ದೇವರು ಅಬ್ರಹಾಮನಿಗೆ, “ನಮ್ಮ ಒಡಂಬಡಿಕೆಯ ಪ್ರಕಾರ ನೀನು ಮತ್ತು ನಿನ್ನ ಸಂತತಿಯವರೆಲ್ಲರೂ ನನ್ನ ಒಡಂಬಡಿಕೆಗೆ ವಿಧೇಯರಾಗಬೇಕು. 10ನೀನೂ ಮತ್ತು ನಿನ್ನ ಎಲ್ಲಾ ಸಂತತಿಯವರು ಕೈಕೊಳ್ಳಬೇಕಾದ ನಿಬಂಧನೆಯೇನೆಂದರೆ, ನಿಮ್ಮಲ್ಲಿ ಹುಟ್ಟಿದ ಪ್ರತಿಯೊಂದು ಗಂಡುಮಗುವಿಗೂ ಸುನ್ನತಿ ಮಾಡಿಸಬೇಕು. 11-12ಇಂದಿನಿಂದ ನಿಮ್ಮಲ್ಲಿ ಗಂಡುಮಗು ಹುಟ್ಟಿ ಎಂಟು ದಿನಗಳಾದ ಮೇಲೆ ಆ ಮಗುವಿಗೆ ಸುನ್ನತಿ ಮಾಡಿಸಬೇಕು; ಈ ನಿಯಮವು ನಿಮ್ಮ ಮನೆಯಲ್ಲಿ ಹುಟ್ಟಿದ ಸೇವಕರಿಗೂ, ಪರದೇಶದಿಂದ ಕೊಂಡುತಂದ ಸೇವಕರಿಗೂ ಸಹ ಅನ್ವಯಿಸುತ್ತದೆ. ನನಗೂ ನಿನಗೂ ಆದ ಒಡಂಬಡಿಕೆಗೆ ಇದು ಗುರುತಾಗಿರುವುದು. 13-14ಹೀಗೆ ಪ್ರತಿಯೊಬ್ಬನಿಗೂ ಸುನ್ನತಿಯಾಗಲೇಬೇಕು. ನಾನು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯು ಶಾಶ್ವತವಾದದ್ದು ಎಂಬುದಕ್ಕೆ ಈ ಸುನ್ನತಿಯೇ ದೈಹಿಕ ಗುರುತಾಗಿದೆ. ಸುನ್ನತಿಯಾಗಿಲ್ಲದ ಪುರುಷನು ನನ್ನ ಒಡಂಬಡಿಕೆಗೆ ವಿಧೇಯನಾಗದ ಕಾರಣ ಅವನನ್ನು ಕುಲದಿಂದ ತೆಗೆದುಹಾಕಲ್ಪಡಬೇಕು” ಎಂದು ಹೇಳಿದನು.
ಇಸಾಕನು ವಾಗ್ದಾನದ ಮಗನು
15ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿಯಾದ, ಸಾರಯಳಿಗೆ ನಾನು ಒಂದು ಹೆಸರನ್ನು ಕೊಡುತ್ತೇನೆ. ಆಕೆಯ ಹೊಸ ಹೆಸರು ಸಾರ. 16ನಾನು ಆಕೆಯನ್ನು ಆಶೀರ್ವದಿಸಿ ಆಕೆಗೆ ಒಬ್ಬ ಮಗನನ್ನು ದಯಪಾಲಿಸುವೆನು; ನೀನೇ ಅವನ ತಂದೆ. ಅನೇಕ ಜನಾಂಗಗಳಿಗೂ ರಾಜರುಗಳಿಗೂ ಆಕೆಯು ಮೂಲಮಾತೆಯಾಗಿರುವಳು” ಎಂದು ಹೇಳಿದನು.
17ಅಬ್ರಹಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆದರೆ ಅವನು ಮನಸ್ಸಿನಲ್ಲಿ ನಗುತ್ತಾ, “ನನಗೆ ನೂರು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ನನಗೂ ಸಾಧ್ಯವಿಲ್ಲ. ಸಾರಳಿಗೆ ತೊಂಭತ್ತು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ಆಕೆಗೂ ಸಾಧ್ಯವಿಲ್ಲ” ಅಂದುಕೊಂಡನು.
18ಆಮೇಲೆ ಅಬ್ರಹಾಮನು ದೇವರಿಗೆ, “ಇಷ್ಮಾಯೇಲನೇ ನಿನ್ನ ಆಶೀರ್ವಾದವನ್ನು ಹೊಂದಿಕೊಂಡು ಜೀವಿಸಬಾರದೇಕೆ?” ಎಂದು ಕೇಳಿದನು.
19ಅದಕ್ಕೆ ದೇವರು ಅವನಿಗೆ, “ಇಲ್ಲ! ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನು ಹುಟ್ಟುವನು. ನೀನು ಅವನಿಗೆ, ‘ಇಸಾಕ’ ಎಂದು ಹೆಸರಿಡಬೇಕು. ನಾನು ಒಂದು ಒಡಂಬಡಿಕೆಯನ್ನು ಅವನೊಡನೆ ಮಾಡಿಕೊಳ್ಳುವೆನು. ಆ ಒಡಂಬಡಿಕೆಯು ಅವನ ಎಲ್ಲಾ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
20“ನೀನು ಇಷ್ಮಾಯೇಲನ ಬಗ್ಗೆ ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ನಾನು ಅವನನ್ನು ಆಶೀರ್ವದಿಸುವೆನು. ಅವನು ಅನೇಕ ಮಕ್ಕಳನ್ನು ಪಡೆದುಕೊಳ್ಳುವನು. ಹನ್ನೆರಡು ಮಹಾನಾಯಕರುಗಳಿಗೆ ಅವನು ತಂದೆಯಾಗುವನು. ಅವನ ಸಂತತಿಯು ಮಹಾಜನಾಂಗವಾಗುವುದು. 21ಆದರೆ ನಾನು ನನ್ನ ಒಡಂಬಡಿಕೆಯನ್ನು ಇಸಾಕನೊಡನೆ ಮಾಡಿಕೊಳ್ಳುವೆನು. ಸಾರಳಲ್ಲಿ ಹುಟ್ಟುವ ಮಗನೇ ಇಸಾಕನು. ಮುಂದಿನ ವರ್ಷ ಇದೇ ಸಮಯದಲ್ಲಿ ಇಸಾಕನು ಹುಟ್ಟುವನು” ಎಂದು ಹೇಳಿದನು.
22ದೇವರು ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿದ ಮೇಲೆ ಮೇಲೋಕಕ್ಕೆ ಹೊರಟುಹೋದನು. 23ಅದೇ ದಿನದಲ್ಲಿ ಅಬ್ರಹಾಮನು ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಸೇವಕರಿಗೆ ಹುಟ್ಟಿದ ಗಂಡುಮಕ್ಕಳಿಗೂ ಪರದೇಶಿಯರಿಂದ ಕೊಂಡುತಂದಿದ್ದ ಸೇವಕರಿಗೂ ದೇವರು ಹೇಳಿದಂತೆಯೇ ಸುನ್ನತಿ ಮಾಡಿಸಿದನು.
24ಅಬ್ರಹಾಮನು ಸುನ್ನತಿ ಮಾಡಿಸಿಕೊಂಡಾಗ ತೊಂಭತ್ತೊಂಭತ್ತು ವರ್ಷದವನಾಗಿದ್ದನು. 25ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷವಾಗಿತ್ತು. 26ಅಬ್ರಹಾಮನಿಗೂ ಅವನ ಮಗನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು. 27ಅಬ್ರಹಾಮನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೆ ಅಂದರೆ ಅವನ ಮನೆಯಲ್ಲಿ ಹುಟ್ಟಿದ ಎಲ್ಲಾ ಸೇವಕರಿಗೆ ಮತ್ತು ಅವನು ಕ್ರಯಕ್ಕೆ ತೆಗೆದುಕೊಂಡಿದ್ದ ಎಲ್ಲಾ ಸೇವಕರಿಗೆ ಸುನ್ನತಿಯಾಯಿತು.
Chwazi Kounye ya:
ಆದಿಕಾಂಡ 17: KERV
Pati Souliye
Pataje
Kopye

Ou vle gen souliye ou yo sere sou tout aparèy ou yo? Enskri oswa konekte
Kannada Holy Bible: Easy-to-Read Version
All rights reserved.
© 1997 Bible League International