ಆದಿಕಾಂಡ 15

15
ದೇವರು ಅಬ್ರಾಮನಿಗೆ ಸಂತತಿಯನ್ನೂ ಆ ಸಂತತಿಗೆ ಕಾನಾನ್‍ದೇಶವನ್ನೂ ವಾಗ್ದಾನಮಾಡಿದ್ದು
1ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಯಿತು; ಏನಂದರೆ- ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ; ನಿನಗೋಸ್ಕರ ಅತ್ಯಧಿಕ ಬಹುಮಾನವು ಇಟ್ಟದೆ ಎಂಬುದೇ. 2ಅದಕ್ಕೆ ಅಬ್ರಾಮನು - ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನಾಗಿ ಹೋಗುವೆನಾದದರಿಂದ ನನ್ನ ಆಸ್ತಿಯೆಲ್ಲಾ ದಮಸ್ಕದ ಎಲೀಯೆಜರನ ಪಾಲಾಗುವದಲ್ಲಾ ಅಂದನು. 3ತಿರಿಗಿ ಅಬ್ರಾಮನು - ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು ಎಂದು ಹೇಳಲು ಯೆಹೋವನು ಅವನ ಸಂಗಡ ಮಾತಾಡಿ - 4ಇವನು ನಿನಗೆ ಬಾಧ್ಯಸ್ಥನಾಗುವದಿಲ್ಲ; ನಿನ್ನ ಹೊಟ್ಟೆಯಲ್ಲೇ ಹುಟ್ಟುವವನು ನಿನಗೆ ಬಾಧ್ಯಸ್ಥನಾಗುವನು ಎಂದು ಹೇಳಿ 5ಅವನನ್ನು ಹೊರಗೆ ಕರತಂದು - ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವದು ನಿನ್ನಿಂದಾದರೆ ಲೆಕ್ಕಿಸು; ನಿನ್ನ ಸಂತಾನವು ಅಷ್ಟಾಗುವದು ಅಂದನು. 6ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು.
7ಆಮೇಲೆ ಆತನು ಅವನಿಗೆ - ಈ ದೇಶದ ಬಾಧ್ಯತೆಯನ್ನು ನಿನಗೆ ಕೊಡುವದಕ್ಕೋಸ್ಕರ ನಿನ್ನನ್ನು ಊರ್ ಎಂಬ ಕಲ್ದೀಯರ ಪಟ್ಟಣದಿಂದ ಬರಮಾಡಿದ ಯೆಹೋವನೇ ನಾನು ಎಂದು ಹೇಳಲು ಅವನು - 8ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳುಕೊಳ್ಳುವದು ಹೇಗೆ ಎಂದು ಕೇಳಿದನು. 9ಅದಕ್ಕೆ ಆತನು - ನೀನು ಮೂರು ಮೂರು ವರುಷಗಳ ಮಣಕ, ಆಡು, ಟಗರು ಇವುಗಳನ್ನೂ ಬೆಳವಕ್ಕಿಯನ್ನೂ ಪಾರಿವಾಳದ ಮರಿಯನ್ನೂ ತೆಗೆದುಕೊಂಡು ಬಾ ಅಂದನು. 10ಅವನು ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಪಶುಗಳನ್ನು ಕಡಿದು ಎರಡೆರಡು ಹೋಳುಮಾಡಿ ತುಂಡಿಗೆ ತುಂಡನ್ನು ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. 11ಆ ಶವಗಳ ಮೇಲೆ ಹದ್ದುಗಳು ಎರಗಲು ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.
12ಹೊತ್ತು ಮುಣುಗುತ್ತಿರುವಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು; ಕಾರ್ಗತ್ತಲು ಅವನ ಮೇಲೆ ಕವಿಯಿತು; ಅವನು ಭಯಭ್ರಾಂತನಾದನು. 13ಆಗ ಯೆಹೋವನು ಅವನಿಗೆ - ನೀನು ಚೆನ್ನಾಗಿ ತಿಳಿಯತಕ್ಕದ್ದೇನಂದರೆ - ನಿನ್ನ ಸಂತತಿಯವರು ಅನ್ಯದೇಶದಲ್ಲಿ ಕೆಲವು ಕಾಲವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರುಷ ಆ ದೇಶದವರಿಂದ ಬಾಧೆಪಡುವರು. 14ಅವರಿಂದ ಬಿಟ್ಟೀಕೆಲಸ ಮಾಡಿಸಿಕೊಂಡ ಜನಾಂಗವನ್ನು ನಾನು ಶಿಕ್ಷಿಸಿದ ನಂತರ ಅವರು ಬಹಳ ಆಸ್ತಿವಂತರಾಗಿ ಆ ದೇಶದಿಂದ ಬಿಡುಗಡೆಯಾಗಿ ಬರುವರು. 15ನೀನಂತೂ ಸಮಾಧಾನದೊಡನೆ ಪಿತೃಗಳ ಬಳಿಗೆ ಸೇರುವಿ; ತುಂಬಾ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ. 16ನಿನ್ನ ಸಂತತಿಯವರು ನಾಲ್ಕನೆಯ ತಲಾಂತರದಲ್ಲಿ ಇಲ್ಲಿಗೆ ತಿರಿಗಿಬರುವರು; ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ ಎಂದು ಹೇಳಿದನು.
17ಹೊತ್ತು ಮುಣುಗಿ ಕಾರ್ಗತ್ತಲಾದಾಗ ಇಗೋ ಹೊಗೆಹಾಯುವ ಒಲೆಯೂ ಉರಿಯುವ ದೀವಟಿಗೆಯೂ ಕಾಣಿಸಿ ಆ ತುಂಡುಗಳ ನಡುವೆ ಹೋದವು. 18ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು - ಐಗುಪ್ತದೇಶದ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ ಅಂದನು; 19ಅಂದರೆ ಕೇನಿಯರೂ ಕೆನಿಜೀಯರೂ ಕದ್ಮೋನಿಯರೂ 20ಹಿತ್ತಿಯರೂ ಪೆರಿಜೀಯರೂ ರೆಫಾಯರೂ ಅಮೋರಿಯರೂ 21ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ಕೊಡುವೆನೆಂದು ವಾಗ್ದಾನ ಮಾಡಿದನು.

Pati Souliye

Pataje

Kopye

None

Ou vle gen souliye ou yo sere sou tout aparèy ou yo? Enskri oswa konekte