ಆದಿಕಾಂಡ 2

2
1ಹೀಗೆ ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ಸಂಪೂರ್ಣವಾಗಿ ನಿರ್ಮಿತವಾದವು.
2ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. 3ಅನಂತರ ದೇವರು ಏಳನೆಯ ದಿನವನ್ನು ಆಶೀರ್ವದಿಸಿ, ಅದನ್ನು ಪವಿತ್ರ ದಿನವನ್ನಾಗಿ ಮಾಡಿದರು. ಏಕೆಂದರೆ ಆ ದಿನದಲ್ಲಿ ದೇವರು ಸೃಷ್ಟಿಸಿದ ತಮ್ಮ ಎಲ್ಲಾ ಕೆಲಸಗಳಿಂದ ವಿಶ್ರಮಿಸಿಕೊಂಡರು.
ಆದಾಮ ಮತ್ತು ಹವ್ವ
4ಯೆಹೋವ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದರು. ಇದೇ ಭೂಮ್ಯಾಕಾಶಗಳ ನಿರ್ಮಾಣ ಚರಿತ್ರೆ.
5ಭೂಮಿಯಲ್ಲಿ ಯಾವ ಗಿಡವೂ ಇನ್ನೂ ಬೆಳೆದಿರಲಿಲ್ಲ, ಯಾವ ಪಲ್ಯವೂ ಇನ್ನೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ. ಆಗ ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ. 6ಆದರೆ ಭೂಮಿಯಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸಿತು. 7ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ, ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು ಆಗ ಅವನು ಜೀವಿಸುವ ವ್ಯಕ್ತಿಯಾದನು.
8ಯೆಹೋವ ದೇವರು ಪೂರ್ವದಿಕ್ಕಿಗಿರುವ ಏದೆನ್ ಸೀಮೆಯಲ್ಲಿ ತೋಟವನ್ನು ಮಾಡಿ, ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. 9ಯೆಹೋವ ದೇವರು ನೋಟಕ್ಕೆ ರಮ್ಯವೂ ಊಟಕ್ಕೆ ಒಳ್ಳೆಯವೂ ಆದ ಎಲ್ಲಾ ಮರಗಳನ್ನೂ ಭೂಮಿಯಲ್ಲಿ ಬೆಳೆಯುವಂತೆ ಮಾಡಿದರು. ತೋಟದ ಮಧ್ಯದಲ್ಲಿ ಜೀವದ ಮರವನ್ನೂ ಒಳ್ಳೆಯದರ ಮತ್ತು ಕೆಟ್ಟದ್ದರ ತಿಳುವಳಿಕೆಯ ಮರವನ್ನೂ ಬೆಳೆಯುವಂತೆ ಮಾಡಿದರು.
10ಏದೆನ್ ಸೀಮೆಯಿಂದ ಒಂದು ನದಿ ಹರಿದು, ತೋಟವನ್ನು ತೋಯಿಸುತ್ತಿತ್ತು. ಅದು ಅಲ್ಲಿಂದ ಹರಿದು ವಿಭಾಗವಾಗಿ, ನಾಲ್ಕು ಉಪನದಿಗಳಾದವು. 11ಮೊದಲನೆಯದರ ಹೆಸರು ಪೀಶೋನ್; ಅದು ಬಂಗಾರವಿರುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು. 12ಆ ದೇಶದ ಬಂಗಾರವು ಉತ್ತಮವಾಗಿತ್ತು. ಅಲ್ಲಿ ಬದೋಲಖ ಧೂಪ ಮತ್ತು ಗೋಮೇಧಿಕ ರತ್ನ ಇದ್ದವು. 13ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು. 14ಮೂರನೆಯ ನದಿಯ ಹೆಸರು ಟೈಗ್ರಿಸ್; ಅದು ಅಸ್ಸೀರಿಯಾ ದೇಶದ ಪೂರ್ವಕ್ಕೆ ಹರಿಯುತ್ತಿತ್ತು. ನಾಲ್ಕನೆಯ ನದಿಯು ಯೂಫ್ರೇಟೀಸ್.
15ಯೆಹೋವ ದೇವರು ಮನುಷ್ಯನನ್ನು ಕರೆದುಕೊಂಡು ಹೋಗಿ, ಏದೆನ್ ತೋಟದಲ್ಲಿ ಕೆಲಸ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇಟ್ಟರು. 16ಇದಲ್ಲದೆ ಯೆಹೋವ ದೇವರು ಮನುಷ್ಯನಿಗೆ, “ನೀನು ತೋಟದ ಎಲ್ಲಾ ಮರಗಳ ಹಣ್ಣುಗಳನ್ನು ನಿನ್ನ ಇಷ್ಟಾನುಸಾರವಾಗಿ ತಿನ್ನಬಹುದು. 17ಆದರೆ ಒಳ್ಳೆಯದರ, ಕೆಟ್ಟದ್ದರ ತಿಳುವಳಿಕೆಯ ಮರದ ಹಣ್ಣನ್ನು ನೀನು ತಿನ್ನಬಾರದು. ಏಕೆಂದರೆ, ನೀನು ಅದನ್ನು ತಿಂದ ದಿನವೇ ಸಾಯುವಿ,” ಎಂದು ಹೇಳಿದರು.
18ಅನಂತರ ಯೆಹೋವ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಬೀಳುವ ಸಹಕಾರಿಣಿಯನ್ನು ಉಂಟುಮಾಡುವೆನು,” ಎಂದರು.
19ಯೆಹೋವ ದೇವರು ಭೂಮಿಯಲ್ಲಿರುವ ಎಲ್ಲಾ ಕಾಡುಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿದ ಮೇಲೆ, ಅವುಗಳಿಗೆ ಮನುಷ್ಯನು ಏನು ಹೆಸರಿಡುವನೋ ಎಂದು ನೋಡುವುದಕ್ಕೆ, ಅವುಗಳನ್ನು ಅವನ ಬಳಿಗೆ ತಂದರು. ಒಂದೊಂದು ಜೀವಿಗೂ ಮನುಷ್ಯನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು. 20ಹೀಗೆ ಮನುಷ್ಯನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು.
ಆದರೆ ಆದಾಮನಿಗೆ#2:20 ಆದಾಮ ಅಂದರೆ ಮನುಷ್ಯ ಸರಿಬೀಳುವ ಸಹಕಾರಿಣಿಯು ಕಾಣಿಸಲಿಲ್ಲ. 21ಆದಕಾರಣ ಯೆಹೋವ ದೇವರು ಮನುಷ್ಯನಿಗೆ ಗಾಢನಿದ್ರೆ ಬರಮಾಡಿದರು. ಅವನು ನಿದ್ರಿಸುತ್ತಿರುವಾಗ, ಅವರು ಅವನ ಪಕ್ಕೆಯನ್ನು ತೆಗೆದುಕೊಂಡು, ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು. 22ಬಳಿಕ ಯೆಹೋವ ದೇವರು ಮನುಷ್ಯನಿಂದ ತೆಗೆದಿದ್ದ ಪಕ್ಕೆಯಿಂದ ಒಬ್ಬ ಸ್ತ್ರೀಯನ್ನು ಉಂಟುಮಾಡಿ, ಆಕೆಯನ್ನು ಆ ಮನುಷ್ಯನ ಬಳಿಗೆ ತಂದರು.
23ಆಗ ಮನುಷ್ಯನು ಹೀಗೆ ಹೇಳಿದನು:
“ಇದು ನನ್ನ ಎಲುಬಿನಿಂದಾದ ಎಲುಬು
ಮತ್ತು ನನ್ನ ಮಾಂಸದಿಂದಾದ ಮಾಂಸವಾಗಿದೆ.
ಈಕೆ ನರನಿಂದ ತೆಗೆದಿರುವುದರಿಂದ,
ಈಕೆ, ‘ನಾರಿ’ ಎಂದು ಎನಿಸಿಕೊಳ್ಳುವಳು.”
24ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗಿರುವರು.
25ಆದಾಮನೂ ಅವನ ಹೆಂಡತಿಯೂ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

वर्तमान में चयनित:

ಆದಿಕಾಂಡ 2: KSB

हाइलाइट

शेयर

कॉपी

None

Want to have your highlights saved across all your devices? Sign up or sign in