ಯೋಹಾನನ ಸುವಾರ್ತೆ 1

1
ಜಗತ್ತಿಗೆ ಕ್ರಿಸ್ತನ ಆಗಮನ
1ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ#1:1 ವಾಕ್ಯ ಇಲ್ಲಿ ಇದರರ್ಥ ಕ್ರಿಸ್ತನು. ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು. 2ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು. 3ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ. 4ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. 5ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.
6ಯೋಹಾನ#1:6 ಯೋಹಾನ ಸ್ನಾನಿಕ ಯೋಹಾನ. ಇವನು ಕ್ರಿಸ್ತನ ಬರುವಿಕೆಯ ಬಗ್ಗೆ ಜನರಿಗೆ ಬೋಧಿಸಿದನು. ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. 7ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. 8ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು. 9ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.
10ವಾಕ್ಯ ಎಂಬಾತನು ಆಗಲೇ ಈ ಲೋಕದಲ್ಲಿದ್ದನು. ಈ ಲೋಕವು ವಾಕ್ಯ ಎಂಬಾತನ ಮೂಲಕ ನಿರ್ಮಾಣಗೊಂಡಿತು. ಆದರೆ ಈ ಲೋಕದವರು ಆತನನ್ನು ತಿಳಿದಿರಲಿಲ್ಲ. 11ಆತನು ತನ್ನ ಸ್ವಾಸ್ತ್ಯಕ್ಕೆ ಬಂದನು. ಆದರೆ ಆತನ ಸ್ವಂತ ಜನರು ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. 12ಯಾರ್ಯಾರು ಆತನನ್ನು ಸ್ವೀಕರಿಸಿಕೊಂಡರೋ ಅಂದರೆ ಆತನಲ್ಲಿ ನಂಬಿಕೆ ಇಟ್ಟರೋ ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. 13ಇವರು ರಕ್ತದಿಂದಾಗಲಿ ಕಾಮದಿಂದಾಗಲಿ ಪುರುಷನ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ. ಇವರು ದೇವರಿಂದಲೇ ಹುಟ್ಟಿದವರು.
14ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. 15ಯೋಹಾನನು ಆತನ ಬಗ್ಗೆ ಜನರಿಗೆ ತಿಳಿಸುತ್ತಾ, “‘ನನ್ನ ನಂತರ ಬರುವ ಒಬ್ಬನು ನನಗಿಂತಲೂ ಶ್ರೇಷ್ಠನಾಗಿದ್ದಾನೆ. ಆತನು ನನಗಿಂತ ಮೊದಲೇ ಜೀವಿಸುತ್ತಿದ್ದನು’ ಎಂದು ನಾನು ಹೇಳಿದಾಗ ಈತನ ಬಗ್ಗೆಯೇ ಮಾತಾಡುತ್ತಿದ್ದೆನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
16ವಾಕ್ಯ ಎಂಬಾತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆತನಿಂದಲೇ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17ಧರ್ಮಶಾಸ್ತ್ರವು ಮೋಶೆಯ ಮೂಲಕ ಕೊಡಲ್ಪಟ್ಟಿತು. ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮೂಲಕ ಬಂದವು. 18ದೇವರನ್ನು ಯಾರೂ ಎಂದೂ ಕಂಡಿಲ್ಲ. ಆದರೆ ಒಬ್ಬನೇ ಮಗನು (ಯೇಸು) ದೇವರಾಗಿದ್ದಾನೆ ಮತ್ತು ಆತನು ತಂದೆಯ (ದೇವರ) ಎದೆಯಲ್ಲಿದ್ದಾನೆ. ಆತನೇ ತಂದೆಯನ್ನು ತಿಳಿಯಪಡಿಸಿದ್ದಾನೆ.
ಯೇಸುವಿನ ಕುರಿತು ಯೋಹಾನನ ಸಂದೇಶ
(ಮತ್ತಾಯ 3:1-12; ಮಾರ್ಕ 1:2-8; ಲೂಕ 3:15-17)
19“ನೀನು ಯಾರು?” ಎಂದು ಯೋಹಾನನನ್ನು ಕೇಳುವುದಕ್ಕಾಗಿ ಜೆರುಸಲೇಮಿನ ಯೆಹೂದ್ಯರು ಯೋಹಾನನ ಬಳಿಗೆ ಕೆಲವು ಯಾಜಕರನ್ನು ಮತ್ತು ಲೇವಿಯರನ್ನು ಕಳುಹಿಸಿದರು. 20ಯೋಹಾನನು ಮರೆಮಾಚದೆ, “ನಾನು ಕ್ರಿಸ್ತನಲ್ಲ” ಎಂದು ಹೇಳಿದನು.
21ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?”#1:21 ಎಲೀಯ ಕ್ರಿ. ಪೂ. 850ರಲ್ಲಿ ಜೀವಿಸಿದ್ದ ಪ್ರವಾದಿ. ಎಂದು ಕೇಳಿದರು.
ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು.
ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು.
ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.
22ಆಗ ಯೆಹೂದ್ಯರು, “ನಮಗೆ ಹೇಳು. ನಮ್ಮನ್ನು ಕಳುಹಿಸಿದವರಿಗೆ ನಾವು ತಿಳಿಸಬೇಕಾಗಿದೆ. ನಿನ್ನ ಬಗ್ಗೆ ನೀನು ಏನು ಹೇಳುವೆ?” ಎಂದು ಕೇಳಿದರು.
23ಅದಕ್ಕೆ ಯೋಹಾನನು,
“‘ಪ್ರಭುವಿಗಾಗಿ ನೇರವಾದ ದಾರಿಯನ್ನು ಸಿದ್ಧಗೊಳಿಸಿರಿ’
ಎಂದು ಅಡವಿಯಲ್ಲಿ ಕೂಗುವವನ ಸ್ವರವೇ ನಾನು”#ಯೆಶಾಯ 40:3.
ಎಂದು ಪ್ರವಾದಿಯಾದ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು.
24ಕಳುಹಿಸಲ್ಪಟ್ಟಿದ್ದವರಲ್ಲಿ ಕೆಲವು ಮಂದಿ ಫರಿಸಾಯರೂ#1:24 ಫರಿಸಾಯರು ಯೆಹೂದ್ಯರ ಒಂದು ಧಾರ್ಮಿಕ ಪಂಗಡದವರು. ಇದ್ದರು. 25ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.
26ಯೋಹಾನನು, “ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನಿಮಗೆ ಗೊತ್ತಿಲ್ಲದ ಒಬ್ಬನು ಇಲ್ಲಿದ್ದಾನೆ. 27ನನ್ನ ನಂತರ ಬರುವವನು ಆತನೇ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಎಂದು ಹೇಳಿದನು.
28ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿ ಎಂಬ ಊರಲ್ಲಿ ಈ ಸಂಗತಿಗಳೆಲ್ಲಾ ನಡೆದವು. ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದದ್ದು ಇಲ್ಲಿಯೇ.
ಯೇಸು — ದೇವರ ಕುರಿಮರಿ
29ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು. 30‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ. 31ಆತನು ಯಾರೆಂಬುದು ನನಗೂ ಗೊತ್ತಿರಲಿಲ್ಲ. ಆದರೆ ಆತನನ್ನು ಇಸ್ರೇಲರಿಗೆ ತಿಳಿಸುವುದಕ್ಕೋಸ್ಕರ ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೆನು” ಎಂದು ಹೇಳಿದನು.
32-33ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು. 34ಆದ್ದರಿಂದ ಆತನೇ (ಯೇಸುವೇ) ದೇವರ ಮಗನೆಂದು ನಾನು ಜನರಿಗೆ ತಿಳಿಸುವೆನು” ಎಂದನು.
ಯೇಸುವಿನ ಪ್ರಥಮ ಶಿಷ್ಯರು
35ಮರುದಿನ ಯೋಹಾನನು ತನ್ನ ಇಬ್ಬರು ಶಿಷ್ಯರೊಂದಿಗೆ ಇದ್ದಾಗ, 36ಸಮೀಪದಲ್ಲಿ ನಡೆದುಹೋಗುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕೆ ದೇವರು ನೇಮಿಸಿದ ಕುರಿಮರಿ!” ಎಂದು ಹೇಳಿದನು.
37ಯೋಹಾನನ ಈ ಮಾತನ್ನು ಕೇಳಿದ ಆ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು.
ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)
39ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.
40ಈ ಇಬ್ಬರು ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಇವರಲ್ಲಿ ಒಬ್ಬನಾಗಿದ್ದನು. 41ಮೊದಲನೆಯದಾಗಿ, ಅವನು ತನ್ನ ಅಣ್ಣನಾದ ಸೀಮೋನನನ್ನು ಕಾಣಲು ಹೋಗಿ ಅವನಿಗೆ, “ನಾವು ಮೆಸ್ಸೀಯನನ್ನು ಕಂಡುಕೊಂಡೆವು” ಎಂದು ಹೇಳಿದನು. (“ಮೆಸ್ಸೀಯ” ಅಂದರೆ “ಕ್ರಿಸ್ತನು” ಎಂದರ್ಥ.)
42ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).
43ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 44ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು. 45ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.
46ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು.
ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.
47ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.
48ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು.
ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.
49ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.
50ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು. 51ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.

वर्तमान में चयनित:

ಯೋಹಾನನ ಸುವಾರ್ತೆ 1: KERV

हाइलाइट

शेयर

कॉपी

None

Want to have your highlights saved across all your devices? Sign up or sign in