YouVersion Logo
Search Icon

ಆದಿಕಾಂಡ 12

12
ಅಬ್ರಾಮನಿಗಾದ ಕರೆ
1ಯೆಹೋವ ದೇವರು ಅಬ್ರಾಮನಿಗೆ ಹೀಗೆ ಹೇಳಿದರು, “ನೀನು ನಿನ್ನ ಸ್ವದೇಶದಿಂದಲೂ ಬಂಧುಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರಬಂದು, ನಾನು ನಿನಗೆ ತೋರಿಸುವ ನಾಡಿಗೆ ಹೋಗು.
2“ನಾನು ನಿನ್ನನ್ನು ದೊಡ್ಡ ಜನಾಂಗದವನನ್ನಾಗಿ ಮಾಡಿ,
ನಿನ್ನನ್ನು ಆಶೀರ್ವದಿಸಿ,
ನಿನ್ನ ಹೆಸರನ್ನು ಪ್ರಸಿದ್ಧ ಮಾಡುವೆನು.
ನೀನು ಆಶೀರ್ವಾದವಾಗಿ ಇರುವಿ.
3ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು.
ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು.
ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ
ಆಶೀರ್ವಾದ ಉಂಟಾಗುವುದು.”
4ಆದ್ದರಿಂದ ಯೆಹೋವ ದೇವರು ತನಗೆ ಹೇಳಿದ ಪ್ರಕಾರ, ಅಬ್ರಾಮನು ಹೊರಟುಹೋದನು. ಲೋಟನು ಅವನೊಂದಿಗೆ ಹೋದನು. ಅಬ್ರಾಮನು ಹಾರಾನಿನಿಂದ ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು. 5ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ಸಹೋದರನ ಮಗ ಲೋಟನನ್ನೂ, ತಾವು ಕೂಡಿಸಿಕೊಂಡಿದ್ದ ಎಲ್ಲಾ ಆಸ್ತಿಯನ್ನೂ, ಹಾರಾನಿನಲ್ಲಿ ಸಂಪಾದಿಸಿಕೊಂಡಿದ್ದ ಎಲ್ಲಾ ಜನರನ್ನೂ ತಮ್ಮ ಸಂಗಡ ಕರೆದುಕೊಂಡು ಕಾನಾನ್ ದೇಶಕ್ಕೆ ಸೇರಿದನು.
6ಅಬ್ರಾಮನು ಆ ದೇಶದಲ್ಲಿ ಶೆಕೆಮ್ ಎಂಬ ಸ್ಥಳದ ಮೋರೆ ಎಂಬ ಮಹಾವೃಕ್ಷದವರೆಗೆ ಪ್ರಯಾಣಮಾಡಿದನು. ಆಗ ಕಾನಾನ್ಯರು ಆ ದೇಶದಲ್ಲಿ ಇದ್ದರು. 7ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನು ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನು,” ಎಂದರು. ಆದ್ದರಿಂದ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿದನು.
8ಅಲ್ಲಿಂದ ಅವರು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ, ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರೂ ಇರುವ ಹಾಗೆ ತನ್ನ ಗುಡಾರವನ್ನು ಹಾಕಿಕೊಂಡನು. ಅಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಆರಾಧಿಸಿದನು.
9ಅಬ್ರಾಮನು ಪ್ರಯಾಣಮಾಡಿ, ನೆಗೆವ#12:9 ನೆಗೆವ ಅರ್ಥ ದೇಶದ ದಕ್ಷಿಣ ಪ್ರಾಂತ್ಯದ ಕಡೆಗೆ ಕಡೆಗೆ ಹೊರಟನು.
ಈಜಿಪ್ಟಿನಲ್ಲಿ ಅಬ್ರಾಮನು
10ಆಗ ಆ ದೇಶದಲ್ಲಿ ಬರ ಉಂಟಾದದ್ದರಿಂದ, ಅಬ್ರಾಮನು ಈಜಿಪ್ಟಿನಲ್ಲಿ ಕೆಲವು ಸಮಯ ಇರಲು ಇಳಿದು ಹೋದನು. ಏಕೆಂದರೆ ಬರವು ಆ ದೇಶದಲ್ಲಿ ಘೋರವಾಗಿತ್ತು. 11ಅವನು ಈಜಿಪ್ಟನ್ನು ಸಮೀಪಿಸುತ್ತಿದ್ದಾಗ, ತನ್ನ ಹೆಂಡತಿ ಸಾರಯಳಿಗೆ, “ನೀನು ನೋಡುವುದಕ್ಕೆ ರೂಪವತಿಯೆಂದು ನನಗೆ ತಿಳಿದಿದೆ. 12ಹೀಗಿರುವುದರಿಂದ ಈಜಿಪ್ಟಿನವರು ನಿನ್ನನ್ನು ಕಂಡು, ‘ಈಕೆಯು ಅವನ ಹೆಂಡತಿ’ ಎಂದು ಹೇಳಿ, ನನ್ನನ್ನು ಕೊಂದುಹಾಕಿ, ನಿನ್ನನ್ನು ಉಳಿಸುವರು. 13ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ, ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ದಯಮಾಡಿ ಹೇಳಬೇಕು,” ಎಂದು ಹೇಳಿದನು.
14ಅಬ್ರಾಮನು ಈಜಿಪ್ಟಿಗೆ ಬಂದಾಗ, ಈಜಿಪ್ಟಿನವರು, ಆ ಸಾರಯಳು ಬಹಳ ಸುಂದರಿ ಎಂದುಕೊಂಡರು. 15ಫರೋಹನ ಅಧಿಕಾರಿಗಳು ಆಕೆಯನ್ನು ನೋಡಿ, ಫರೋಹನ ಮುಂದೆ ಆಕೆಯನ್ನು ಹೊಗಳಿ, ಆ ಸ್ತ್ರೀಯನ್ನು ಅವನ ಅರಮನೆಗೆ ಕರೆದುಕೊಂಡು ಹೋದರು. 16ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೆಯದನ್ನು ಮಾಡಿದನು. ಅವನಿಗೆ ಕುರಿ, ಎತ್ತು, ಕತ್ತೆಗಳೂ ದಾಸದಾಸಿಯರೂ ಹೆಣ್ಣು ಕತ್ತೆಗಳೂ ಒಂಟೆಗಳೂ ದೊರೆತವು.
17ಆದರೆ ಯೆಹೋವ ದೇವರು ಫರೋಹನನ್ನೂ, ಅವನ ಮನೆಯನ್ನೂ ಅಬ್ರಾಮನ ಹೆಂಡತಿ ಸಾರಯಳಿಗಾಗಿ ಭಯಂಕರವಾದ ರೋಗಗಳಿಂದ ಬಾಧಿಸಿದರು. 18ಅನಂತರ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿ ಎಂದು ಯಾಕೆ ನನಗೆ ತಿಳಿಸಲಿಲ್ಲ? 19‘ಆಕೆಯು ನನ್ನ ಸಹೋದರಿ,’ ಎಂದು ಯಾಕೆ ಹೇಳಿದೆ? ನೀನು ಹಾಗೆ ಹೇಳಿದ್ದರಿಂದ ಆಕೆಯನ್ನು ನನಗೆ ಹೆಂಡತಿಯಾಗಿ ಇಟ್ಟುಕೊಳ್ಳುವುದರಲ್ಲಿದ್ದೆನು. ಆದರೆ ಈಗ, ನಿನ್ನ ಹೆಂಡತಿ, ಈಕೆಯನ್ನು ನೀನು ಕರೆದುಕೊಂಡು ಹೋಗು,” ಎಂದನು. 20ಫರೋಹನು ತನ್ನ ಜನರಿಗೆ ಅವನ ವಿಷಯದಲ್ಲಿ ಆಜ್ಞಾಪಿಸಲು, ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಎಲ್ಲದರ ಸಮೇತ ಅಲ್ಲಿಂದ ಕಳುಹಿಸಿಬಿಟ್ಟನು.

Tõsta esile

Share

Copy

None

Want to have your highlights saved across all your devices? Sign up or sign in