YouVersion Logo
Search Icon

ಲೂಕ 9

9
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಸುವಾರ್ತೆ ಸಾರುವದಕ್ಕೆ ಕಳುಹಿಸಿದ್ದು
(ಮತ್ತಾ. 10.1,5-14; ಮಾರ್ಕ. 6.7-13)
1ಆತನು ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಅಧಿಕಾರಗಳನ್ನು ಕೊಟ್ಟು 2ದೇವರ ರಾಜ್ಯದ ವಿಷಯವನ್ನು ಸಾರುವದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವದಕ್ಕೂ ಅವರನ್ನು ಕಳುಹಿಸಿದನು. 3ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ - ದಾರಿಗೆ ಏನೂ ತಕ್ಕೊಂಡು ಹೋಗಬೇಡಿರಿ, ಕೋಲು ಹಸಿಬೆ ಬುತ್ತಿ ಹಣ ಬೇಡ; ಎರಡಂಗಿಗಳಿರಬಾರದು. 4ಇದಲ್ಲದೆ ನೀವು ಯಾವ ಮನೆಯಲ್ಲಿ ಇಳುಕೊಂಡರೂ ಅಲ್ಲೇ ಇರ್ರಿ. ಅಲ್ಲಿಂದಲೇ ಹೊರಡಿರಿ. 5ಮತ್ತು ಯಾವ ಊರಿನವರಾದರೂ ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಆ ಊರನ್ನು ನೀವು ಬಿಟ್ಟು ಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿ ಬಿಡಿರಿ; ಅದು ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರಲಿ ಅಂದನು. 6ಆಗ ಅವರು ಹೊರಟುಹೋಗಿ ಎಲ್ಲೆಲ್ಲಿಯೂ ಸುವಾರ್ತೆಯನ್ನು ಸಾರುತ್ತಾ ರೋಗಿಗಳಿಗೆ ವಾಸಿಮಾಡುತ್ತಾ ಗ್ರಾಮಗಳಲ್ಲೆಲ್ಲಾ ಸಂಚರಿಸಿದರು.
ಅರಸನಾದ ಹೆರೋದನು ಯೇಸುವಿನ ಸುದ್ದಿಯನ್ನು ಕೇಳಿದ್ದು
(ಮತ್ತಾ. 14.1-12; ಮಾರ್ಕ. 6.14-29)
7ಹೀಗಿರಲಾಗಿ ಉಪರಾಜನಾದ ಹೆರೋದನು ನಡೆದ ಸಂಗತಿಗಳನ್ನೆಲ್ಲಾ ಕೇಳಿ ಬಹಳವಾಗಿ ಕಳವಳಪಡುವವನಾದನು. ಯಾಕಂದರೆ ಸತ್ತಿದ್ದ ಯೋಹಾನನು ತಿರಿಗಿ ಬದುಕಿಬಂದಿದ್ದಾನೆಂದು ಕೆಲವರೂ, 8ಎಲೀಯನು ಕಾಣಿಸಿಕೊಂಡನೆಂದು ಕೆಲವರೂ, ಪೂರ್ವದ ಪ್ರವಾದಿಗಳಲ್ಲಿ ಯಾವನೋ ಒಬ್ಬನು ಎದ್ದಿದ್ದಾನೆಂದು ಕೆಲವರೂ ಹೇಳಿಕೊಳ್ಳುತ್ತಿದ್ದರು. 9ಆದರೆ ಹೆರೋದನು - ಯೋಹಾನನನ್ನು ನಾನೇ ತಲೆಹೊಯ್ಸಿದೆನಷ್ಟೆ. ಇವನಾರು? ಇವನ ವಿಷಯವಾಗಿ ಆಶ್ಚರ್ಯಕರವಾದ ಸಂಗತಿಗಳನ್ನು ಕೇಳುತ್ತೇನಲ್ಲಾ ಎಂದು ಹೇಳಿ ಅವನನ್ನು ನೋಡಬೇಕೆಂದು ಪ್ರಯತ್ನಿಸಿದನು.
ಯೇಸು ಐದು ಸಾವಿರ ಜನರಿಗೆ ಊಟಮಾಡಿಸಿದ್ದು
(ಮತ್ತಾ. 14.13-21; ಮಾರ್ಕ. 6.30-44; ಯೋಹಾ. 6.1-13)
10ಇತ್ತಲಾಗಿ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದ್ದನ್ನೆಲ್ಲಾ ಯೇಸುವಿಗೆ ವಿವರವಾಗಿ ಹೇಳಲು ಆತನು ಅವರನ್ನು ಬೇತ್ಸಾಯಿದವೆಂಬ ಊರಿಗೆ ವಿಂಗಡವಾಗಿ ಕರಕೊಂಡು ಹೋದನು. 11ಆದರೆ ಜನರ ಗುಂಪು ಇದನ್ನು ತಿಳಿದು ಆತನ ಹಿಂದೆ ಹೋಗಲು ಆತನು ಅವರನ್ನು ಪ್ರೀತಿಯಿಂದ ಸ್ವೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತಾಡಿ ಕ್ಷೇಮಬೇಕಾದವರಿಗೆ ವಾಸಿಮಾಡಿದನು. 12ಹೊತ್ತು ಇಳಿಯುತ್ತಾ ಬಂತು. ಆ ಹನ್ನೆರಡು ಮಂದಿ ಶಿಷ್ಯರು ಆತನ ಬಳಿಗೆ ಬಂದು - ಈ ಗುಂಪಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ಇಳುಕೊಂಡು ಊಟಕ್ಕೆ ಬೇಕಾದ ಪದಾರ್ಥಗಳನ್ನು ದೊರಕಿಸಿಕೊಳ್ಳಲಿ; ನಾವು ಇಲ್ಲಿ ಅಡವಿಯ ಸ್ಥಳದಲ್ಲಿ ಇದ್ದೇವಲ್ಲಾ ಎಂದು ಆತನಿಗೆ ಹೇಳಲಾಗಿ 13ಆತನು - ನೀವೇ ಅವರಿಗೆ ಊಟಕ್ಕೆ ಕೊಡಿರಿ ಅಂದನು. ಅದಕ್ಕವರು - ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ; ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳಬೇಕೋ? ಅಂದರು. 14ಗಂಡಸರೇ ಹೆಚ್ಚು ಕಡಿಮೆ ಐದುಸಾವಿರ ಮಂದಿಯಿದ್ದರು. ಆಗ ಆತನು ತನ್ನ ಶಿಷ್ಯರಿಗೆ - ಇವರನ್ನು ಒಂದೊಂದು ಪಂಙ್ತಿಗೆ ಹೆಚ್ಚು ಕಡಿಮೆ ಐವತ್ತೈವತ್ತರಂತೆ ಕೂಡ್ರಿಸಿರಿ ಎಂದು ಹೇಳಲು 15ಅವರು ಹಾಗೆಯೇ ಎಲ್ಲರನ್ನೂ ಕೂಡ್ರಿಸಿದರು. 16ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ ಮುರಿದು ಶಿಷ್ಯರ ಕೈಗೆ ಕೊಟ್ಟು - ಈ ಜನರ ಗುಂಪಿಗೆ ಹಂಚಿರಿ ಅಂದನು. 17ಅವರೆಲ್ಲರು ಊಟಮಾಡಿ ತೃಪ್ತರಾದರು; ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.
ಪೇತ್ರನು ಯೇಸುವನ್ನು ಕ್ರಿಸ್ತನೆಂದು ಅರಿಕೆಮಾಡಿದ್ದು; ಯೇಸು ತನ್ನ ಮರಣವನ್ನು ಮುಂತಿಳಿಸಿದ್ದು
(ಮತ್ತಾ. 16.13-28; ಮಾರ್ಕ. 8.27—9.1)
18ಒಂದಾನೊಂದು ದಿವಸ ಆತನು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಆತನು - ನನ್ನನ್ನು ಸಾಮಾನ್ಯ ಜನರು ಯಾರು ಅನ್ನುತ್ತಾರೆ ಎಂದು ಅವರನ್ನು ಕೇಳಿದ್ದಕ್ಕೆ 19ಅವರು - ನಿನ್ನನ್ನು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ; ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾವನೋ ಒಬ್ಬನು ಎದ್ದಿದ್ದಾನೆ ಅನ್ನುತ್ತಾರೆ ಎಂದು ಹೇಳಿದರು. 20ಆತನು ಅವರನ್ನು - ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ ಎಂದು ಕೇಳಲಾಗಿ ಪೇತ್ರನು - ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು ಎಂದು ಉತ್ತರಕೊಟ್ಟನು. 21ಆಗ ಆತನು - ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆಕೊಟ್ಟು - 22ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕೃತನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ ಎಂದು ಹೇಳಿದನು. 23ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ. 24ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು. 25ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು? 26ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಪ್ರಭಾವದೊಡನೆ ಬರುವಾಗ ನಾಚಿಕೊಳ್ಳುವನು. 27ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣ ಹೊಂದುವದಿಲ್ಲವೆಂದು ಅಂದನು.
ಯೇಸು ಪ್ರಕಾಶರೂಪದಿಂದ ಕಾಣಿಸಿಕೊಂಡದ್ದು
(ಮತ್ತಾ. 17.1-8; ಮಾರ್ಕ. 9.2-8)
28ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿವಸಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರಕೊಂಡು ಪ್ರಾರ್ಥನೆಮಾಡುವದಕ್ಕೆ ಬೆಟ್ಟವನ್ನು ಹತ್ತಿದನು. 29ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬೇರೆಯಾಯಿತು. 30ಆತನ ಉಡುಪು ಬೆಳ್ಳಗಾಗಿ ವಿುಂಚುತ್ತಾ ಬಂತು. ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತಾಡುತ್ತಿದ್ದರು. ಇವರು ಯಾರಂದರೆ ಮೋಶೆಯೂ ಎಲೀಯನೂ. 31ಇವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇವಿುನಲ್ಲಿ ಆತನು ನೆರವೇರಿಸಬೇಕಾಗಿದ್ದ ಮರಣದ ವಿಷಯವಾಗಿ ಮಾತಾಡುತ್ತಿದ್ದರು. 32ಇಷ್ಟರಲ್ಲಿ ಪೇತ್ರನಿಗೂ ಅವನ ಸಂಗಡ ಇದ್ದವರಿಗೂ ನಿದ್ರೆಯಿಂದ ಮೈಭಾರವಾಗಿತ್ತು. ಆದರೆ ಎಚ್ಚರವಾದ ಮೇಲೆ ಅವರು ಆತನ ಮಹಿಮೆಯನ್ನೂ ಆತನ ಸಂಗಡ ನಿಂತಿದ್ದ ಆ ಇಬ್ಬರು ಪುರುಷರನ್ನೂ ಕಂಡರು. 33ಇವರು ಆತನನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ - ಗುರುವೇ ನಾವು ಇಲ್ಲೇ ಇರುವದು ಒಳ್ಳೇದು, ಮೂರು ಪರ್ಣಶಾಲೆಗಳನ್ನು ಕಟ್ಟುವೆವು; ನಿನಗೊಂದು ಮೋಶೆಗೊಂದು ಎಲೀಯನಿಗೊಂದು ಎಂದು ಹೇಳಿದನು. ತಾನಂದದ್ದು ತನಗೇ ಗೊತ್ತಾಗಲಿಲ್ಲ. 34ಅವನು ಇದನ್ನು ಹೇಳುತ್ತಿರುವಲ್ಲಿ ಮೋಡವು ಬಂದು ಅವರ ಮೇಲೆ ಕವಿಯಿತು. ಅವರು ಮೋಡದೊಳಗೆ ಸೇರಿದಾಗ ಹೆದರಿದರು. 35ಆಗ ಆ ಮೋಡದೊಳಗಿಂದ - ಈತನು ನನ್ನ ಮಗನು. ನಾನು ಆರಿಸಿಕೊಂಡವನು; ಈತನ ಮಾತನ್ನು ಕೇಳಿರಿ ಎಂಬ ಆಕಾಶವಾಣಿ ಆಯಿತು. 36ಆ ವಾಣಿ ಆದ ಮೇಲೆ ಯೇಸುವನ್ನು ಮಾತ್ರ ಕಂಡರು. ತಾವು ಕಂಡ ಈ ಸಂಗತಿಗಳೊಳಗೆ ಒಂದನ್ನಾದರೂ ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು.
ಯೇಸು ಅಪಸ್ಮಾರರೋಗಿಯನ್ನು ಸ್ವಸ್ಥಮಾಡಿದ್ದು
(ಮತ್ತಾ. 17.14-18; ಮಾರ್ಕ. 9.14-27)
37ಮರುದಿವಸ ಅವರು ಬೆಟ್ಟದಿಂದ ಇಳಿದು ಬಂದಾಗ ಜನರ ದೊಡ್ಡ ಗುಂಪು ಆತನೆದುರಿಗೆ ಬಂತು. 38ಆಗ ಆ ಗುಂಪಿನಲ್ಲಿ ಒಬ್ಬನು - ಬೋಧಕನೇ, ನನ್ನ ಮಗನ ಮೇಲೆ ದೃಷ್ಟಿಯಿಡಬೇಕು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು. ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. 39ಬಾಯಲ್ಲಿ ನೊರೆ ಬರುವಷ್ಟು ಅವನನ್ನು ಒದ್ದಾಡಿಸುತ್ತದೆ; ಮತ್ತು ಬಹು ಕಷ್ಟಕೊಟ್ಟು ಜಜ್ಜಿದ ಹೊರತು ಬಿಡುವದಿಲ್ಲ. 40ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು ಎಂದು ಕೂಗಿ ಹೇಳಿದನು. 41ಅದಕ್ಕೆ ಯೇಸು - ಎಲಾ, ನಂಬಿಕೆಯಿಲ್ಲದಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ? ನಿನ್ನ ಮಗನನ್ನು ಇಲ್ಲಿಗೆ ಕರಕೊಂಡು ಬಾ ಅಂದನು. 42ಆ ಹುಡುಗನು ಇನ್ನೂ ಬರುತ್ತಿರುವಾಗ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಯ ಕೈಗೆ ಕೊಟ್ಟನು. 43ಅದನ್ನು ನೋಡಿ ಎಲ್ಲರು ದೇವರ ಮಹತ್ವಕ್ಕೆ ಬೆರಗಾದರು.
ಯೇಸು ತನ್ನ ಮರಣವನ್ನು ಎರಡನೆಯ ಸಾರಿ ಮುಂತಿಳಿಸಿದ್ದು
(ಮತ್ತಾ. 17.22-23; ಮಾರ್ಕ. 9.30-32)
44ಯೇಸು ಮಾಡಿದ ಎಲ್ಲಾ ಕಾರ್ಯಗಳಿಗೆ ಎಲ್ಲರು ಆಶ್ಚರ್ಯಪಡುತ್ತಿರಲಾಗಿ ಆತನು ತನ್ನ ಶಿಷ್ಯರಿಗೆ - ನೀವಂತೂ ಈ ಮಾತುಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ; ಯಾಕಂದರೆ ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಲ್ಪಡುವನು ಎಂದು ಹೇಳಿದನು. 45ಅವರು ಈ ಮಾತನ್ನು ಗ್ರಹಿಸಲಿಲ್ಲ; ಅದು ಅವರಿಗೆ ಮರೆಯಾದದರಿಂದ ಅದರ ಅರ್ಥವನ್ನು ಅವರು ತಿಳಿಯದೆಹೋದರು. ಆ ಮಾತಿನ ವಿಷಯದಲ್ಲಿ ಅವರು ಆತನನ್ನು ಕೇಳುವದಕ್ಕೆ ಅಂಜಿದರು.
ಯೇಸು ತನ್ನ ಶಿಷ್ಯರಲ್ಲಿ ನಮ್ರತೆಯುಳ್ಳವನೇ ದೊಡ್ಡವನೆಂದು ತೋರಿಸಿದ್ದು
(ಮತ್ತಾ. 18.1-5; ಮಾರ್ಕ. 9.33-37)
46ತರುವಾಯ ಶಿಷ್ಯರೊಳಗೆ - ತಮ್ಮಲ್ಲಿ ಯಾವನು ಹೆಚ್ಚಿನವನಾಗುವನು ಎಂಬ ವಿಚಾರ ಹುಟ್ಟಿತು. 47ಯೇಸು ಅವರ ಮನಸ್ಸಿನ ವಿಚಾರವನ್ನು ತಿಳಿದು ಒಂದು ಚಿಕ್ಕ ಮಗುವನ್ನು ಹಿಡಿದುಕೊಂಡು ತನ್ನ ಬಳಿಯಲ್ಲಿ ನಿಲ್ಲಿಸಿ ಅವರಿಗೆ - 48ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು; ಯಾಕಂದರೆ ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು ಎಂದು ಹೇಳಿದನು.
ಯೇಸುವಿನ ಶಿಷ್ಯರನ್ನು ಎದುರಿಸದವರು ಅವರ ಪಕ್ಷದವರಾಗಿದ್ದಾರೆಂಬುವ ಬೋಧೆ
(ಮಾರ್ಕ. 9.38-40)
49ಅದಕ್ಕೆ ಯೋಹಾನನು - ಗುರುವೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವಬಿಡಿಸುವದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು ಅನ್ನಲು 50ಯೇಸು ಅವನಿಗೆ - ಅಡ್ಡಿಮಾಡಬೇಡಿರಿ; ನಿಮ್ಮನ್ನು ಎದುರಿಸದವನು ನಿಮ್ಮ ಪಕ್ಷದವನೇ ಎಂದು ಹೇಳಿದನು.
ಯೇಸು ಯೆರೂಸಲೇವಿುಗೆ ಹೋಗುವಾಗ ಆತನನ್ನು ಸಮಾರ್ಯರು ಸೇರಿಸಿಕೊಳ್ಳದೆ ಹೋದದ್ದು
51ಯೇಸು ತಾನು ಪರಲೋಕವನ್ನೇರುವ ದಿವಸಗಳು ತುಂಬುತ್ತಾ ಬರುವಾಗ ಯೆರೂಸಲೇವಿುಗೆ ಹೋಗುವದಕ್ಕೆ ಮನಸ್ಸನ್ನು#9.51 ಮೂಲ: ಮುಖವನ್ನು. ದೃಢಮಾಡಿಕೊಂಡು 52ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು. 53ಆದರೆ ಆತನು ಯೆರೂಸಲೇವಿುಗೆ ಹೋಗುವವನಾದದರಿಂದ ಆ ಸಮಾರ್ಯದವರು ಆತನನ್ನು ಸೇರಿಸಿಕೊಳ್ಳಲಿಲ್ಲ. 54ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ಕಂಡು - ಸ್ವಾಮೀ, ಆಕಾಶದಿಂದ ಬೆಂಕಿಬಿದ್ದು ಇವರನ್ನು ನಾಶಮಾಡಲಿ 55ಎಂದು#9.55 ಕೆಲವು ಪ್ರತಿಗಳಲ್ಲಿ - ಎಲೀಯನು ಹೇಳಿದಂತೆ ನಾವೂ ಎಂದು ಬರೆದದೆ. 2 ಅರಸು 1.10, 12 ನೋಡಿರಿ. ನಾವು ಹೇಳುವದಕ್ಕೆ ನಿನಗೆ ಮನಸ್ಸುಂಟೋ ಎಂದು ಕೇಳಲು ಆತನು ತಿರುಗಿಕೊಂಡು ಅವರನ್ನು ಗದರಿಸಿದನು.#9.55 ಕೆಲವು ಪ್ರತಿಗಳಲ್ಲಿ - ಗದರಿಸಿ ಹೇಳಿದ್ದೇನಂದರೆ, ನೀವೆಂಥ ಆತ್ಮಕ್ಕೆ ಅಧೀನರಾದಿರೆಂದು ನಿಮಗೆ ತಿಳಿಯದು; ಮನುಷ್ಯಕುಮಾರನು ಮನುಷ್ಯರ ಪ್ರಾಣಗಳನ್ನು ನಾಶಮಾಡುವದಕ್ಕೆ ಬಂದವನಲ್ಲ, ರಕ್ಷಿಸುವದಕ್ಕೇ ಬಂದವನು ಎಂದು ಬರೆದದೆ. ಲೂಕ. 19.10; ಯೋಹಾ. 3.17 ನೋಡಿರಿ. 56ಆಗ ಅವರೆಲ್ಲರು ಬೇರೆ ಹಳ್ಳಿಗೆ ಹೋದರು.
ತನ್ನ ಶಿಷ್ಯರು ದೇವರ ಸೇವೆಗೆ ಮೊದಲಾಗಿ ಬೇರೆ ಯಾವದನ್ನೂ ಚಿಂತಿಸಕೂಡದೆಂದು ಯೇಸು ಬೋಧಿಸಿದ್ದು
(ಮತ್ತಾ. 8.19-22)
57ಅವರು ದಾರಿಯಲ್ಲಿ ಹೋಗುತ್ತಿರುವಾಗ ಯಾವನೋ ಒಬ್ಬನು ಯೇಸುವಿಗೆ - ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂದೆ ಬರುತ್ತೇನೆ ಎಂದು ಹೇಳಲು 58ಆತನು ಅವನಿಗೆ - ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ ಎಂದು ಹೇಳಿದನು. 59ಆತನು ಮತ್ತೊಬ್ಬನಿಗೆ - ನನ್ನನ್ನು ಹಿಂಬಾಲಿಸು ಎಂದು ಹೇಳಲು ಅವನು - ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರುವಂತೆ ನನಗೆ ಅಪ್ಪಣೆಯಾಗಬೇಕು ಅಂದನು. 60ಆದರೆ ಆತನು ಅವನಿಗೆ - ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು ಎಂದು ಹೇಳಿದನು. 61ಇನ್ನೊಬ್ಬನು ಸಹ - ಸ್ವಾಮೀ, ನಿನ್ನನ್ನು ಹಿಂಬಾಲಿಸುತ್ತೇನೆ; ಆದರೆ ಮೊದಲು ನನ್ನ ಮನೆಯವರಿಗೆ ಹೇಳಿಬರುವದಕ್ಕೆ ನನಗೆ ಅಪ್ಪಣೆಯಾಗಬೇಕು ಅಂದನು. 62ಯೇಸು ಅವನಿಗೆ - ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲವೆಂದು ಹೇಳಿದನು.

Currently Selected:

ಲೂಕ 9: KANJV-BSI

Tõsta esile

Share

Copy

None

Want to have your highlights saved across all your devices? Sign up or sign in