YouVersion Logo
Search Icon

ಲೂಕ 6

6
ಯೇಸುವೂ ಆತನ ಶಿಷ್ಯರೂ ಸಬ್ಬತ್ ದಿನವನ್ನು ಅಲಕ್ಷ್ಯ ಮಾಡುತ್ತಾರೆಂದು ಫರಿಸಾಯರು ಆತನ ಮೇಲೆ ಆಕ್ಷೇಪಣೆಮಾಡಿದ್ದು
(ಮತ್ತಾ. 12.1-14; ಮಾರ್ಕ. 2.23—3.6)
1ಒಂದಾನೊಂದು ಸಬ್ಬತ್‍ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದು ಹೋಗುತ್ತಿರುವಾಗ ಆತನ ಶಿಷ್ಯರು ತೆನೆಗಳನ್ನು ಮುರಿದು ಕೈಗಳಲ್ಲಿ ಹೊಸಗಿಕೊಂಡು ತಿನ್ನುತ್ತಿದ್ದರು. 2ಆದರೆ ಫರಿಸಾಯರಲ್ಲಿ ಕೆಲವರು - ಸಬ್ಬತ್‍ದಿನದಲ್ಲಿ ಮಾಡಬಾರದ ಕೆಲಸವನ್ನು ನೀವು ಯಾಕೆ ಮಾಡುತ್ತೀರಿ ಎಂದು ಕೇಳಿದ್ದಕ್ಕೆ 3ಯೇಸು ಅವರಿಗೆ - ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂಬದನ್ನು ನೀವು ಓದಲಿಲ್ಲವೋ? 4ಅವನು ದೇವರ ಮಂದಿರದೊಳಕ್ಕೆ ಹೋಗಿ ಯಾಜಕರು ಮಾತ್ರವೇ ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತೆಗೆದುಕೊಂಡು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ? ಎಂದು ಉತ್ತರಕೊಟ್ಟು 5ಮನುಷ್ಯಕುಮಾರನು ಸಬ್ಬತ್‍ದಿನಕ್ಕೆ ಒಡೆಯನಾಗಿದ್ದಾನೆ ಎಂದು ಅವರಿಗೆ ಹೇಳಿದನು.
6ಮತ್ತೊಂದು ಸಬ್ಬತ್‍ದಿನದಲ್ಲಿ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿದ್ದಾಗ ಅಲ್ಲಿ ಬಲಗೈ ಬತ್ತಿದವನೊಬ್ಬನು ಇದ್ದನು. 7ಶಾಸ್ತ್ರಿಗಳೂ ಫರಿಸಾಯರೂ ಆತನ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದ ಸಿಕ್ಕಬೇಕೆಂದು ಸಬ್ಬತ್‍ದಿನದಲ್ಲಿ ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚಿನೋಡುತ್ತಿದ್ದರು. 8ಆದರೆ ಆತನು ಅವರ ಯೋಚನೆಗಳನ್ನು ತಿಳಿದು ಕೈ ಬತ್ತಿಹೋಗಿದ್ದ ಆ ಮನುಷ್ಯನಿಗೆ - ಎದ್ದು ನಡುವೆ ಬಂದು ನಿಂತುಕೋ ಎಂದು ಹೇಳಿದನು. 9ಅವನು ಎದ್ದು ನಿಂತುಕೊಂಡನು. ಆಗ ಯೇಸು ಅವರಿಗೆ - ನಿಮ್ಮನ್ನು ಒಂದು ಮಾತು ಕೇಳುತ್ತೇನೆ; ಸಬ್ಬತ್‍ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ, ಕೇಡನ್ನು ಮಾಡುವದೋ? ಪ್ರಾಣವನ್ನು ಉಳಿಸುವದೋ, ಹಾಳುಮಾಡುವದೋ ಎಂದು ಹೇಳಿ 10ಸುತ್ತಲೂ ಅವರೆಲ್ಲರನ್ನು ನೋಡಿ ಆ ಮನುಷ್ಯನಿಗೆ - ನಿನ್ನ ಕೈಚಾಚು ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು; ಕೈ ವಾಸಿಯಾಯಿತು. 11ಆದರೆ ಅವರಲ್ಲಿ ದುರ್ಬುದ್ಧಿ ತುಂಬಿದ್ದದರಿಂದ - ಈ ಯೇಸುವಿಗೆ ಏನು ಮಾಡೋಣ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ನೇವಿುಸಿದ್ದು
(ಮತ್ತಾ. 10.2-4; ಮಾರ್ಕ. 3.13-19)
12ಆ ದಿವಸಗಳಲ್ಲಿ ಆತನು ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೋಗಿ ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲೇ ಕಳೆದನು. 13ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ ಅಪೊಸ್ತಲರೆಂತ ಹೆಸರಿಟ್ಟನು. 14ಅವರು ಯಾರಾರಂದರೆ - ಆತನಿಂದ ಪೇತ್ರನೆಂಬ ಹೆಸರನ್ನು ಹೊಂದಿದ ಸೀಮೋನ, ಅವನ ತಮ್ಮನಾದ ಅಂದ್ರೆಯ, ಯಾಕೋಬ, ಯೋಹಾನ, 15ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿ ಅನ್ನಿಸಿಕೊಂಡ ಸೀಮೋನ, 16ಯಾಕೋಬನ ಮಗನಾದ ಯೂದ, ಆತನನ್ನು ಹಿಡಿದುಕೊಡುವ ದ್ರೋಹಿಯಾದ ಇಸ್ಕರಿಯೋತ ಯೂದ, ಇವರೇ.
ಯೇಸು ಪರ್ವತದ ಮೇಲೆ ಒಂದು ಸಮಭೂವಿುಯಲ್ಲಿ ಮಾಡಿದ ಪ್ರಸಂಗವು
(ಮತ್ತಾ. 5.3-12,39-48, 7.1-5,16-18,24-27)
17ಆಮೇಲೆ ಆತನು ಅವರ ಸಂಗಡ ಬೆಟ್ಟದಿಂದ ಇಳಿದು ಸಮಭೂವಿುಯಲ್ಲಿ ನಿಂತನು. ಆತನ ಶಿಷ್ಯರ ದೊಡ್ಡ ಗುಂಪು ಮತ್ತು ಎಲ್ಲಾ ಯೂದಾಯದಿಂದಲೂ ಯೆರೂಸಲೇವಿುನಿಂದಲೂ ತೂರ್ ಸೀದೋನ್ ಪಟ್ಟಣಗಳಿರುವ ಸಮುದ್ರತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದವು. ಆ ಜನರು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ರೋಗಗಳನ್ನು ವಾಸಿಮಾಡಿಸಿಕೊಳ್ಳುವದಕ್ಕೂ ಬಂದಿದ್ದರು. 18ಅವರಲ್ಲಿ ದೆವ್ವಗಳ ಕಾಟವಿದ್ದವರು ಸ್ವಸ್ಥವಾದರು. 19ಮತ್ತು ಆತನಿಂದ ಶಕ್ತಿ ಹೊರಟು ಎಲ್ಲರನ್ನು ವಾಸಿಮಾಡುತ್ತಿದ್ದದರಿಂದ ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವದಕ್ಕೆ ಪ್ರಯತ್ನಮಾಡಿದರು. 20ತರುವಾಯ ಆತನು ತನ್ನ ಶಿಷ್ಯರ ಕಡೆಗೆ ಕಣ್ಣೆತ್ತಿ ನೋಡಿ ಹೇಳಿದ್ದೇನಂದರೆ -
21ಬಡವರಾದ ನೀವು ಧನ್ಯರು; ದೇವರ ರಾಜ್ಯವು ನಿಮ್ಮದೇ. ಈಗ ಹಸಿದಿರುವವರಾದ ನೀವು ಧನ್ಯರು; ನಿಮಗೆ ತೃಪ್ತಿಯಾಗುವದು. ಈಗ ಅಳುವವರಾದ ನೀವು ಧನ್ಯರು; ನೀವು ನಗುವಿರಿ. 22ಮನುಷ್ಯಕುಮಾರನ ನಿವಿುತ್ತವಾಗಿ ಜನರು ನಿಮ್ಮನ್ನು ಹಗೆಮಾಡಿ ನಿಮಗೆ ಬಹಿಷ್ಕಾರಹಾಕಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದೆಂದು ತೆಗೆದುಹಾಕಿದರೆ ನೀವು ಧನ್ಯರು. 23ಆ ದಿನದಲ್ಲಿ ಸಂತೋಷಪಡಿರಿ, ಕುಣಿದಾಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು ಎಂದು ತಿಳುಕೊಳ್ಳಿರಿ. ಈ ಜನರ ಪಿತೃಗಳು ಪ್ರವಾದಿಗಳಿಗೂ ಹಾಗೆಯೇ ಮಾಡಿದರು. 24ಆದರೆ ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮ ಸುಖ ನಿಮಗೆ ಬಂದದೆ. 25ಈಗ ಹೊಟ್ಟೆತುಂಬಿದವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಹಸಿಯುವಿರಿ. ಈಗ ನಗುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದುಃಖಪಟ್ಟು ಅಳುವಿರಿ. 26ಜನರೆಲ್ಲಾ ನಿಮ್ಮನ್ನು ಹೊಗಳಿದರೆ ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳುಪ್ರವಾದಿಗಳನ್ನು ಹಾಗೆಯೇ ಹೊಗಳಿದರು.
27ಕೇಳುವವರಾದ ನಿಮಗೆ ನಾನು ಹೇಳುವದೇನಂದರೆ - ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ; 28ನಿಮ್ಮನ್ನು ಶಪಿಸುವವರಿಗೆ ಆಶೀರ್ವಾದಮಾಡಿರಿ; ನಿಮ್ಮನ್ನು ಬಯ್ಯುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. 29ನಿನ್ನನ್ನು ಕೆನ್ನೆಯ ಮೇಲೆ ಬಡಿದವನಿಗೆ ಮತ್ತೊಂದು ಕೆನ್ನೆಯನ್ನೂ ತಿರುಗಿಸು; ನಿನ್ನ ಮೇಲಂಗಿಯನ್ನು ಕಸುಕೊಳ್ಳುವವನಿಗೆ ಒಳಂಗಿಯನ್ನೂ ತಡೆಯಬೇಡ. 30ನಿನ್ನನ್ನು ಬೇಡುವವರೆಲ್ಲರಿಗೆ ಕೊಡು; ನಿನ್ನ ಸೊತ್ತು ಕಸುಕೊಳ್ಳುವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ. 31ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ. 32ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ. 33ನಿಮಗೆ ಮೇಲನ್ನು ಮಾಡುವವರಿಗೇ ನೀವು ಮೇಲನ್ನು ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ. 34ಅವರು ನಮಗೂ ಸಾಲಕೊಟ್ಟಾರೆಂದು ನೀವು ಯಾರಿಗಾದರೂ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಾವು ಕೊಟ್ಟಷ್ಟು ತಮಗೆ ತಿರಿಗಿ ಸಿಕ್ಕೀತೆಂದು ಪಾಪಿಷ್ಠರಿಗೆ ಸಾಲ ಕೊಡುತ್ತಾರಲ್ಲಾ. 35ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಧೈರ್ಯವನ್ನು#6.35 ಅಥವಾ, ತಿರಿಗಿ ಸಿಕ್ಕೀತೆಂದು ಆಶೆಯಿಟ್ಟುಕೊಳ್ಳದೆ. ಬಿಡದೆ ಸಾಲಕೊಡಿರಿ;#6.35 ಕೆಲವು ಪ್ರತಿಗಳಲ್ಲಿ - ಒಬ್ಬರ ವಿಷಯದಲ್ಲಿಯೂ ನಿರಾಶೆಪಡದೆ, ನಿಮ್ಮ ವೈರಿಗಳನ್ನು ಪ್ರೀತಿಸಿ, ಉಪಕಾರ ಮಾಡಿರಿ, ಸಾಲಕೊಡಿರಿ ಎಂದು ಬರೆದದೆ. ಹೀಗೆ ಮಾಡಿದರೆ, ನಿಮಗೆ ಬಹಳ ಫಲ ಸಿಕ್ಕುವದು, ಮತ್ತು ನೀವು ಪರಾತ್ಪರನ ಮಕ್ಕಳಾಗುವಿರಿ. ಆತನಂತೂ ಉಪಕಾರ ನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ. 36ನಿಮ್ಮ ತಂದೆ ಕರುಣವುಳ್ಳವನಾಗಿರುವ ಪ್ರಕಾರವೇ ನೀವೂ ಕರುಣವುಳ್ಳವರಾಗಿರಿ.
37ಇದಲ್ಲದೆ ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವದಿಲ್ಲ; ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವದಿಲ್ಲ; ಬಿಡಿಸಿರಿ, ಆಗ ನಿಮ್ಮನ್ನೂ ಬಿಡಿಸುವರು; 38ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಅಂದನು.
39ಇದಲ್ಲದೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಕುರುಡನು ಕುರುಡನಿಗೆ ದಾರೀ ತೋರಿಸುವದಕ್ಕಾದೀತೇ? ಅವರಿಬ್ಬರೂ ಕುಣಿಯಲ್ಲಿ ಬೀಳುವರಲ್ಲವೆ. 40ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ; ಆದರೆ ತೀರಾ ಕಲಿತವನಾದ ಪ್ರತಿಯೊಬ್ಬನು ತನ್ನ ಗುರುವಿನಂತಾಗಿರುವನು.
41ಇದಲ್ಲದೆ ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ? 42ಇಲ್ಲವೆ ನಿನ್ನ ಕಣ್ಣಿನಲ್ಲಿರುವ ತೊಲೆಯನ್ನೇ ನೀನು ನೋಡದೆ ನಿನ್ನ ಸಹೋದರನಿಗೆ - ಅಣ್ಣಾ, ನಿನ್ನ ಕಣ್ಣಿನೊಳಗಿನ ರವೆಯನ್ನು ತೆಗೆಯುತ್ತೇನೆ ಬಾ ಎಂದು ಹೇಳುವದಕ್ಕೆ ಹೇಗಾದೀತು? ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ, ಆಮೇಲೆ ನಿನ್ನ ಸಹೋದರನ ಕಣ್ಣಿನೊಳಗಿನ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು. 43ಒಳ್ಳೆಯ ಮರವು ಹುಳುಕು ಫಲವನ್ನು ಕೊಡುವದಿಲ್ಲ; ಹಾಗೆಯೇ ಹುಳುಕು ಮರವು ಒಳ್ಳೆಯ ಫಲವನ್ನು ಕೊಡುವದಿಲ್ಲ. 44ಪ್ರತಿಯೊಂದು ಮರದ ಗುಣವು ಅದರ ಫಲದಿಂದಲೇ ಗೊತ್ತಾಗುವದು. ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನು ಕೀಳುವದಿಲ್ಲ; ಗಜ್ಜುಗದ ಮೆಳೆಯಲ್ಲಿ ದ್ರಾಕ್ಷೇಹಣ್ಣುಗಳನ್ನು ಕೊಯ್ಯುವದಿಲ್ಲ. 45ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.
46ಇದಲ್ಲದೆ ನೀವು ನನ್ನನ್ನು ಸ್ವಾಮೀ ಸ್ವಾಮೀ ಅಂತ ಕರೆದು ನಾನು ಹೇಳುವದನ್ನು ನಡಿಸದೆ ಇರುವದೇಕೆ? 47ನನ್ನ ಬಳಿಗೆ ಬಂದು ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಯಾರಿಗೆ ಸಮಾನನೆಂಬದನ್ನು ನಿಮಗೆ ತೋರಿಸುತ್ತೇನೆ. 48ಅವನು ಆಳವಾಗಿ ಅಗೆದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೇ ಕಟ್ಟಿದವನಿಗೆ ಸಮಾನನು; ಹೊಳೆಬಂದು ಪ್ರವಾಹವು ಆ ಮನೆಗೆ ಬಡಿದಾಗ್ಯೂ ಅದು ಚೆನ್ನಾಗಿ ಕಟ್ಟಿದ್ದರಿಂದ ಆ ಪ್ರವಾಹವು ಅದನ್ನು ಅಲ್ಲಾಡಿಸಲಾರದೆ ಹೋಯಿತು. 49ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದಿರುವವನು ಅಸ್ತಿವಾರವಿಲ್ಲದೆ ನೆಲದ ಮೇಲೆ ಮನೇ ಕಟ್ಟಿದವನಿಗೆ ಸಮಾನನು. ಪ್ರವಾಹವು ಅದಕ್ಕೆ ಬಡಿಯಿತು; ಬಡಿದ ಕೂಡಲೆ ಅದು ಕುಸಿದುಬಿದ್ದು ಪೂರಾ ಹಾಳಾಯಿತು.

Currently Selected:

ಲೂಕ 6: KANJV-BSI

Tõsta esile

Share

Copy

None

Want to have your highlights saved across all your devices? Sign up or sign in