Logo de YouVersion
Icono de búsqueda

ಲೂಕ 22

22
ಯೇಸುವಿನ ಕೊಲೆಗೆ ಒಳಸಂಚು
ಮತ್ತಾ 26:1-5; ಮಾರ್ಕ 14:1,2; ಯೋಹಾ 11:45-53
1ಪಸ್ಕವೆಂದು ಕರೆಯಲ್ಪಡುವ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹತ್ತಿರವಾದಾಗ, 2ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಬೇಕೆಂದಿದ್ದರು. ಆದರೆ ಜನರಿಗೆ ಹೆದರಿ ತಕ್ಕ ಮಾರ್ಗವನ್ನು ಹುಡುಕುತ್ತಿದ್ದರು.
ಯೂದನ ಯೇಸುವನ್ನು ಹಿಡಿದುಕೊಡಲು ಒಪ್ಪಿಕೊಂಡದ್ದು
ಮತ್ತಾ 26:14-16; ಮಾರ್ಕ 14:10,11
3ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತನೆಂಬ ಯೂದನಲ್ಲಿ ಪ್ರವೇಶಿಸಲು, 4ಅವನು ಮುಖ್ಯಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡಿದುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತನಾಡಿದನು. 5ಅವರು ಸಂತೋಷಪಟ್ಟು ನಿನಗೆ ಹಣ ಕೊಡುತ್ತೇವೆಂದು ಒಪ್ಪಂದ ಮಾಡಲು, 6ಅವನು ಒಪ್ಪಿಕೊಂಡು, ಜನಸಮೂಹವಿಲ್ಲದಿರುವಾಗ ಆತನನ್ನು ಅವರಿಗೆ ಹಿಡಿದುಕೊಡುವುದಕ್ಕೆ ಅನುಕೂಲವಾದ ಸಂದರ್ಭವನ್ನು ನೋಡುತ್ತಿದ್ದನು.
ಯೇಸು ತನ್ನ ಶಿಷ್ಯರ ಸಂಗಡ ಕಡೆಯ ಭೋಜನ ಮಾಡಿದ್ದು
ಮತ್ತಾ 26:17-30; ಮಾರ್ಕ 14:12-26; ಯೋಹಾ 13:21-30; 1ಕೊರಿ 11:23-25
7ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿನ ಬಂದಾಗ, 8ಯೇಸು ಪೇತ್ರನಿಗೂ ಯೋಹಾನನಿಗೂ, “ನೀವು ಹೋಗಿ ನಾವು ಪಸ್ಕದ ಊಟಮಾಡುವಂತೆ ಸಿದ್ಧಮಾಡಿರಿ” ಎಂದು ಹೇಳಿ ಅವರನ್ನು ಕಳುಹಿಸಿದನು. 9ಅವರು, “ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತೀ?” ಎಂದು ಆತನನ್ನು ಕೇಳಲು, 10ಆತನು ಅವರಿಗೆ, “ನೋಡಿರಿ, ನೀವು ಪಟ್ಟಣದೊಳಕ್ಕೆ ಹೋದ ಮೇಲೆ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ, 11ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವುದಕ್ಕಾಗಿ ವಿಶೇಷವಾದ ಕೊಠಡಿ ಎಲ್ಲಿ?’ ಎಂದು ನಿನ್ನನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾನೆ, ಎಂದು ಹೇಳಿರಿ. 12ಅವನು ತಕ್ಕ ಪೀಠೋಪಕರಣಗಳಿಂದ ಅಲಂಕೃತವಾದ ಮೇಲ್ಮಾಳಿಗೆಯಲ್ಲಿ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನೀವು ಭೋಜನಕ್ಕೆ ಸಿದ್ಧ ಮಾಡಿರಿ” ಎಂದು ಹೇಳಿ ಕಳುಹಿಸಿದನು. 13ಅವರು ಹೊರಟು ಆತನು ತಮಗೆ ಹೇಳಿದಂತೆ ಕಂಡು ಪಸ್ಕ ಹಬ್ಬಕ್ಕೆ ಸಿದ್ಧಮಾಡಿದರು.
14ಆ ಸಮಯ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕುಳಿತುಕೊಂಡನು. 15ಆಗ ಆತನು ಅವರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕಿಂತ ಮೊದಲೇ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವುದಕ್ಕೆ ಮನಃಪೂರ್ವಕವಾಗಿ ಬಯಸಿದ್ದೇನೆ. 16ಇನ್ನು ದೇವರ ರಾಜ್ಯದಲ್ಲಿ#22:16 ಲೂಕ 17:20-37 ಇದು ನೆರವೇರುವ ತನಕ ನಾನು ಇನ್ನು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಎಂದು ಹೇಳಿದನು.
17ಆ ಮೇಲೆ ಆತನು (ದ್ರಾಕ್ಷಾರಸದ) ಪಾತ್ರೆಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ, “ಇದನ್ನು ತೆಗೆದುಕೊಂಡು ಹಂಚಿಕೊಂಡು ಕುಡಿಯಿರಿ. 18ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು.
19ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು. 20ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ, ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
21 “ಆದರೂ ನೋಡಿರಿ, ನನ್ನನ್ನು ಹಿಡಿದುಕೊಡುವವನು ನನ್ನೊಡನೆ ಮೇಜಿನ ಮೇಲೆ ಕೈಯಿಟ್ಟು ಊಟಮಾಡುತ್ತಿದ್ದಾನೆ. 22ನಿರ್ಣಯವಾಗಿರುವ ಪ್ರಕಾರ ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ, ಆದರೆ ಆತನನ್ನು ಹಿಡಿದುಕೊಡುವ ಮನುಷ್ಯನ ಗತಿಯನ್ನು ಏನು ಹೇಳಲಿ” ಅಂದನು.
23ಇದನ್ನು ಕೇಳಿ ಅವರು, ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮಲ್ಲಿ ಯಾವನಾಗಿರಬಹುದು ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
ದೊಡ್ಡವನು ಯಾರು ಎಂಬ ಚರ್ಚೆ
24ಇದಲ್ಲದೆ ತಮ್ಮಲ್ಲಿ ದೊಡ್ಡವನು ಯಾರು ಎಂಬ ವಿಷಯದಲ್ಲಿ ಅವರೊಳಗೆ ಚರ್ಚೆ ಹುಟ್ಟಿತು. 25ಆಗ ಆತನು ಅವರಿಗೆ, “ಅನ್ಯಜನಾಂಗದ ಅರಸರು ತಮ್ಮ ತಮ್ಮ ಜನಗಳ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮೇಲೆ ಅಧಿಕಾರದಿಂದ ಆಡಳಿತ ನಡಿಸುವವರು ಉಪಕಾರಿಗಳೆಂದು ಕರೆಸಿಕೊಳ್ಳುತ್ತಾರೆ. 26ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು. 27ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. 28ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. 29ಆದುದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿರುವ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; 30ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರ್ಪುಮಾಡುವಿರಿ.
ಯೇಸು ಪೇತ್ರನ ನಿರಾಕರಣೆಯನ್ನು ಮುಂತಿಳಿಸಿದ್ದು
ಮತ್ತಾ 26:31-35; ಮಾರ್ಕ 14:27-31; ಯೋಹಾ 13:36-38
31 “ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು. 32ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು. 33ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು, 34ಆತನು, “ಪೇತ್ರನೇ, ನನ್ನ ವಿಷಯದಲ್ಲಿ ಇವನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ತನಕ ಈಹೊತ್ತು ಕೋಳಿ ಕೂಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” ಅಂದನು.
35ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲ#22:35 ಹಣದ ಚೀಲ, ಹೆಗಲು ಚೀಲ ಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು. 36ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ. 37ಏಕೆಂದರೆ, ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನ್ನ ವಿಷಯದಲ್ಲಿ ಬರೆಯಲ್ಪಟ್ಟಿರುವ ಎಲ್ಲವು ನೆರವೇರಬೇಕು” ಎಂದು ಹೇಳಿದನು.
38ಅವರು, “ಕರ್ತನೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ” ಅನ್ನಲು, ಆತನು ಅವರಿಗೆ, “ಅಷ್ಟು ಸಾಕು” ಅಂದನು.
ಯೇಸು ಎಣ್ಣೇಮರಗಳ ಗುಡ್ಡಕ್ಕೆ ಹೋಗಿ ಪ್ರಾರ್ಥಿಸಿದ್ದು
ಮತ್ತಾ 26:36-46; ಮಾರ್ಕ 14:32-42
39ತರುವಾಯ ಆತನು ಪ್ರತಿದಿನದಂತೆ ಹೊರಟು ಎಣ್ಣೆಮರಗಳ ಗುಡ್ಡಕ್ಕೆ ಹೋದನು. ಶಿಷ್ಯರೂ ಆತನ ಹಿಂದೆ ಹೋದರು. 40ಆತನು ಆ ಕ್ಲುಪ್ತ ಸ್ಥಳಕ್ಕೆ ಬಂದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
41ಆ ಮೇಲೆ ಆತನು ಅವರನ್ನು ಬಿಟ್ಟು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ, 42“ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತದಂತೆಯೇ ಆಗಲಿ” ಪ್ರಾರ್ಥಿಸಿದನು. 43ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು, ಆತನನ್ನು ಬಲಪಡಿಸಿದನು. 44ಯೇಸು ತೀವ್ರವಾದ ಮನೋವ್ಯಥೆಯುಳ್ಳವನಾಗಿ, ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ, ಆತನ ಬೆವರು ರಕ್ತದ ಹನಿಗಳೋಪಾದಿಯಲ್ಲಿ ನೆಲಕ್ಕೆ ಬೀಳುತ್ತಿತ್ತು.
45ಆತನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದು, ಅವರು ದುಃಖದಿಂದ ಬಳಲಿಹೋದವರಾಗಿ ನಿದ್ರೆಹತ್ತಿರುವುದನ್ನು ಕಂಡು, 46ಅವರಿಗೆ, “ನೀವು ನಿದ್ರೆಮಾಡುವುದೇನು? ಏಳಿರಿ, ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
ಯೇಸುವಿನ ಬಂಧನ
ಮತ್ತಾ 26:47-56; ಮಾರ್ಕ 14:43-50; ಯೋಹಾ 18:3-11
47ಆತನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನೆಂಬುವನು ಆ ಜನರ ಗುಂಪಿನ ಮುಂದೆ ನಡೆಯುತ್ತಾ, ಯೇಸುವಿಗೆ ಮುದ್ದಿಡುವುದಕ್ಕಾಗಿ ಆತನ ಬಳಿಗೆ ಬರಲು, 48ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುತ್ತೀಯಾ?” ಎಂದು ಕೇಳಿದನು. 49ಆತನ ಸುತ್ತಲಿದ್ದವರು ಘಟನೆಯ ಸೂಕ್ಷ್ಮತೆಯನ್ನು ತಿಳಿದು ತಕ್ಷಣ, “ಕರ್ತನೇ, ನಾವು ಕತ್ತಿಯಿಂದ ಹೊಡೆಯೋಣವೋ?” ಎಂದು ಕೇಳಿದರು. 50ಅಷ್ಟರಲ್ಲಿ ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಕತ್ತಿಯಿಂದ ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿ ಹಾಕಿದನು. 51ಆದರೆ ಯೇಸು, “ಇಷ್ಟಕ್ಕೇ ಬಿಡಿರಿ” ಎಂದು ಹೇಳಿ ಆ ಆಳಿನ ಕಿವಿಯನ್ನು ಮುಟ್ಟಿ ವಾಸಿಮಾಡಿದನು. 52ಬಳಿಕ ಯೇಸು ತನ್ನನ್ನು ಹಿಡಿಯುವುದಕ್ಕೆ ಬಂದ ಮುಖ್ಯಯಾಜಕರಿಗೂ, ದೇವಾಲಯದ ಕಾವಲಿನ ದಳವಾಯಿಗಳಿಗೂ, ಸಭೆಯ ಹಿರಿಯರಿಗೂ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ಬಂದಿರುವಿರಾ? 53ನಾನು ಪ್ರತಿದಿನ ದೇವಾಲಯದಲ್ಲಿ ನಿಮ್ಮ ಸಂಗಡ ಇದ್ದಾಗ ನೀವು ನನ್ನ ಮೇಲೆ ಕೈಹಾಕಲಿಲ್ಲ. ಆದರೆ ಇದು ನಿಮ್ಮ ಕಾಲ, ಇದು ಅಂಧಕಾರದ ದೊರೆತನದ ಕಾಲ” ಎಂದು ಹೇಳಿದನು.
ಪೇತ್ರನು ಯೇಸುವನ್ನು ನಿರಾಕರಿಸಿದ್ದು
ಮತ್ತಾ 26:57,58,69-75; ಮಾರ್ಕ 14:53,54,66-72; ಯೋಹಾ 18:12-18,25-27
54ಅವರು ಆತನನ್ನು ಹಿಡಿದು ಮಹಾಯಾಜಕನ ಮನೆಯೊಳಕ್ಕೆ ಕರೆದುಕೊಂಡು ಹೋದರು. ಪೇತ್ರನು ದೂರದಿಂದ ಅವರನ್ನು ಹಿಂಬಾಲಿಸುತ್ತಿದ್ದನು. 55ಅಂಗಳದ ನಡುವೆ ಅವರು ಬೆಂಕಿ ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡಿರಲು ಅವರ ನಡುವೆ ಪೇತ್ರನೂ ಕುಳಿತುಕೊಂಡನು. 56ಅವನು ಬೆಳಕಿಗೆ ಮುಖವಾಗಿ ಕುಳಿತಿರುವಾಗ ಒಬ್ಬ ದಾಸಿಯು ಅವನನ್ನು ಕಂಡು, ಅವನನ್ನು ದೃಷ್ಟಿಸಿ ನೋಡಿ, “ಇವನು ಸಹ ಅವನ ಸಂಗಡ ಇದ್ದವನು” ಅಂದಳು. 57ಆದರೆ ಅವನು, “ನಾನು ಅವನನ್ನು ಅರಿಯೆನಮ್ಮಾ” ಎಂದು ಹೇಳಿದನು.
58ಸ್ವಲ್ಪಹೊತ್ತಿನ ಮೇಲೆ ಮತ್ತೊಬ್ಬನು ಬಂದು ಅವನನ್ನು ಕಂಡು, “ನೀನೂ ಸಹ ಅವರಲ್ಲಿ ಒಬ್ಬನು” ಅನ್ನಲು ಪೇತ್ರನು, “ನಾನಲ್ಲಪ್ಪಾ” ಅಂದನು.
59ಹೆಚ್ಚು ಕಡಿಮೆ ಒಂದು ಘಂಟೆ ಹೊತ್ತಿನ ಮೇಲೆ ಇನ್ನೊಬ್ಬನು, “ನಿಶ್ಚಯವಾಗಿ ಇವನು ಸಹ ಅವನ ಸಂಗಡ ಇದ್ದವನು, ಇವನು ಗಲಿಲಾಯದವನಷ್ಟೆ” ಎಂದು ದೃಢವಾಗಿ ಹೇಳಿದನು.
60ಆದರೆ ಪೇತ್ರನು, “ನೀನು ಹೇಳುವುದೇನೋ ನಾನರಿಯೆನಪ್ಪಾ” ಅಂದನು. ಅವನು ಈ ಮಾತನ್ನು ಆಡುತ್ತಿರುವಾಗಲೇ ಕೋಳಿ ಕೂಗಿತು. 61ಕರ್ತನು ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಪೇತ್ರನು, “ಈಹೊತ್ತು ಕೋಳಿ ಕೂಗುವುದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ” ಎಂದು ಕರ್ತನು ನುಡಿದ ಮಾತನ್ನು ನೆನಪಿಸಿಕೊಂಡು, 62ಹೊರಗೆ ಹೋಗಿ ತುಂಬಾ ವ್ಯಥೆಪಟ್ಟು ಅತ್ತನು.
63-64ಆ ಮೇಲೆ ಯೇಸುವನ್ನು ಹಿಡಿದವರು ಆತನನ್ನು ಪರಿಹಾಸ್ಯಮಾಡುತ್ತಾ, ಆತನಿಗೆ ಮುಸುಕುಹಾಕಿ ಹೊಡೆದು, “ನಿನ್ನನ್ನು ಹೊಡೆದವನಾರು? ಪ್ರವಾದನೆ ಹೇಳು” ಎಂದು ಆತನನ್ನು ಕೇಳಿದರು. 65ಆತನ ಕುರಿತು ಇನ್ನೂ ಅನೇಕ ದೂಷಣೆಯ ಮಾತುಗಳನ್ನಾಡಿದರು.
ಯೇಸುವನ್ನು ಹಿರೀಸಭೆಯವರ ನಿಲ್ಲಿಸಿದ್ದು
ಮತ್ತಾ 26:59-66; ಮಾರ್ಕ 14:55-64; ಯೋಹಾ 18:19-24
66ಬೆಳಗಾಗುವಾಗ ಯೆಹೂದ್ಯರ ಹಿರೀಸಭೆಯವರು, ಮುಖ್ಯಯಾಜಕರು ಮತ್ತು ಶಾಸ್ತ್ರಿಗಳು ಕೂಡಿ ಆತನನ್ನು ತಮ್ಮ ನ್ಯಾಯವಿಚಾರಣಾಸಭೆಗೆ ತೆಗೆದುಕೊಂಡು ಬಂದು, 67“ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಅಂದರು. ಆತನು ಅವರಿಗೆ, “ನಾನು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ. 68ನಾನು ನಿಮ್ಮನ್ನು ಏನಾದರೂ ಕೇಳಿದರೆ ನೀವು ಉತ್ತರಕೊಡುವುದಿಲ್ಲ. 69ಆದರೆ ಇಂದಿನಿಂದ ಮನುಷ್ಯಕುಮಾರನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು. 70ಆಗ ಎಲ್ಲರು, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಲು ಆತನು ಅವರಿಗೆ, “ನನ್ನನ್ನು ಕುರಿತು ದೇವಕುಮಾರನೆಂದು ನೀವೇ ಹೇಳಿದ್ದೀರಿ” ಎಂದು ಹೇಳಿದನು. 71ಅದಕ್ಕೆ ಅವರು, “ನಮಗೆ ಸಾಕ್ಷಿ ಇನ್ನು ಯಾತಕ್ಕೆ ಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ” ಅಂದರು.

Actualmente seleccionado:

ಲೂಕ 22: IRVKan

Destacar

Compartir

Copiar

None

¿Quieres tener guardados todos tus destacados en todos tus dispositivos? Regístrate o inicia sesión