ಜೆಕರ್ಯ 11
11
1ಲೆಬನೋನೇ, ಬೆಂಕಿ ನಿನ್ನ ದೇವದಾರುಗಳನ್ನು ನುಂಗುವ ಹಾಗೆ,
ನಿನ್ನ ಬಾಗಿಲುಗಳನ್ನು ತೆರೆ.
2ತುರಾಯಿ ಗಿಡವೇ, ಗೋಳಾಡು. ಏಕೆಂದರೆ ದೇವದಾರು ಬಿದ್ದುಹೋಯಿತು.
ಭವ್ಯವಾದ ಮರಗಳು ಹಾಳಾದವು.
ಬಾಷಾನಿನ ಅಲ್ಲೋನ್ ಮರಗಳೇ, ಗೋಳಾಡಿರಿ.
ದಟ್ಟವಾದ ಅಡವಿಯು ಕಡಿಯಲಾಗಿದೆ.
3ಕುರುಬರ ಗೋಳಾಟವನ್ನು ಕೇಳಿರಿ,
ಅವರ ಸೊಂಪಾದ ಹುಲ್ಲುಗಾವಲುಗಳು ಹಾಳಾಗಿವೆ
ಪ್ರಾಯದ ಸಿಂಹಗಳು ಗರ್ಜಿಸುವ ಶಬ್ದ ಕೇಳಿಸುತ್ತಿದೆ,
ಯೊರ್ದನಿನ ದಟ್ಟವಾದ ಪೊದೆಗಳು ನಾಶವಾಗಿವೆ.
ಇಬ್ಬರು ಕುರುಬರು
4ನನ್ನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಹತ್ಯೆಗಾಗಿ ಗುರುತಿಸಲಾಗಿರುವ ಮಂದೆಯನ್ನು ಮೇಯಿಸು. 5ಅವುಗಳನ್ನು ಕೊಂಡುಕೊಳ್ಳುವವರು, ಅವುಗಳನ್ನು ಕೊಂದು ತಮ್ಮನ್ನು ನಿರಪರಾಧಿಗಳೆಂದೆಣಿಸುತ್ತಾರೆ. ಅವುಗಳನ್ನು ಮಾರುವವರು, ‘ನಾನು ಐಶ್ವರ್ಯವಂತನಾದೆನು, ಯೆಹೋವ ದೇವರಿಗೆ ಸ್ತೋತ್ರ,’ ಎಂದೆನ್ನುತ್ತಾರೆ. ಅವರ ಸ್ವಂತ ಕುರುಬರೂ ಅವುಗಳನ್ನು ಕನಿಕರಿಸುವುದಿಲ್ಲ. 6ಏಕೆಂದರೆ ನಾನು ದೇಶದ ನಿವಾಸಿಗಳನ್ನು ಇನ್ನು ಕನಿಕರಿಸುವುದೇ ಇಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ. “ಆದರೆ ನಾನು ಒಬ್ಬೊಬ್ಬನನ್ನು ಅವನವನ ನೆರೆಯವನ ಕೈಗೂ, ಅವನ ಅರಸನ ಕೈಗೂ ಒಪ್ಪಿಸುವೆನು. ಅವರು ದೇಶವನ್ನು ಧ್ವಂಸಮಾಡುವರು. ಅವರ ಕೈಯೊಳಗಿಂದ ನಾನು ಅವರನ್ನು ತಪ್ಪಿಸುವುದಿಲ್ಲ.”
7ಆಗ ಹತ್ಯೆಗಾಗಿ ಗುರುತಿಸಲಾಗಿರುವ ಮಂದೆಯನ್ನು, ವಿಶೇಷವಾಗಿ ಬಡವಾದ ಮಂದೆಯನ್ನು ಮೇಯಿಸಿದೆನು. ನಾನು ಎರಡು ಕೋಲುಗಳನ್ನು ತೆಗೆದುಕೊಂಡೆನು. ಒಂದಕ್ಕೆ “ಕೃಪೆ” ಎಂದೂ ಮತ್ತೊಂದಕ್ಕೆ “ಐಕ್ಯ” ಎಂದು ಹೆಸರಿಟ್ಟೆನು. ಹೀಗೆ ಮಂದೆಯನ್ನು ಮೇಯಿಸಿದೆನು. 8ಇದಲ್ಲದೆ, ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು.
ಮಂದೆಯು ನನ್ನನ್ನು ಅಸಹ್ಯಪಡಿಸಿತು, ಮತ್ತು ಅವುಗಳಿಂದ ನನಗೆ ಬೇಸರವಾಯಿತು. 9ಆಗ ನಾನು, “ನಾನು ನಿಮ್ಮನ್ನು ಮೇಯಿಸುವುದಿಲ್ಲ, ಸಾಯುವಂಥದ್ದು ಸಾಯಲಿ, ಕೆಡುವಂಥದ್ದು ಕೆಡಲಿ, ಮಿಕ್ಕಾದವುಗಳು ಒಂದರ ಮಾಂಸವನ್ನು ಒಂದು ತಿನ್ನಲಿ,” ಎಂದು ಹೇಳಿದೆನು.
10ಆಗ “ಕೃಪೆ” ಎಂಬ ನನ್ನ ಕೋಲನ್ನು ತೆಗೆದುಕೊಂಡು ಅದನ್ನು ಮುರಿದುಬಿಟ್ಟೆನು. ಹೀಗೆ ಎಲ್ಲಾ ಜನಾಂಗಗಳ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ರದ್ದುಗೊಳಿಸಿದೆನು. 11ಅದೇ ದಿವಸದಲ್ಲಿ ಅದು ರದ್ದುಗೊಂಡಿತು. ಆಗ ನನ್ನನ್ನು ನೋಡಿಕೊಳ್ಳುತ್ತಿದ್ದ ಬಡ ಕುರಿ ಮಂದೆಯು, ಅದು ಯೆಹೋವ ದೇವರ ವಾಕ್ಯವೆಂದು ತಿಳಿದುಕೊಂಡಿತು.
12ನಾನು ಅವರಿಗೆ, “ಇದು ನಿಮ್ಮ ಕಣ್ಣುಗಳಲ್ಲಿ ಒಳ್ಳೆಯದಾಗಿ ತೋರಿದರೆ, ನನ್ನ ಸಂಬಳವನ್ನು ಕೊಡಿರಿ, ಇಲ್ಲದಿದ್ದರೆ ಬಿಡಿರಿ,” ಎಂದೆನು. ಆಗ ಅವರು ನನಗೆ ಸಂಬಳವಾಗಿ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು.
13ಆಗ ಯೆಹೋವ ದೇವರು ನನಗೆ, “ಅದನ್ನು ಕುಂಬಾರನಿಗೆ ಎಸೆ. ಅವರು ನನಗೆ ಕಟ್ಟಿದ ಬೆಲೆ ಸರಿಯಾಗಿದೆ,” ಎಂದನು. ಆಗ ನಾನು, ಆ ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು, ಯೆಹೋವ ದೇವರ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಎಸೆದೆನು.
14ಆಗ ನನ್ನ ಎರಡನೆಯ ಕೋಲಾದ “ಐಕ್ಯ” ಎಂಬುದನ್ನು ಮುರಿದುಬಿಟ್ಟೆನು. ಹೀಗೆ ಯೆಹೂದಕ್ಕೂ, ಇಸ್ರಾಯೇಲಿಗೂ ಮಧ್ಯೆ ಇರುವ ಸಹೋದರತನವನ್ನು ಇಲ್ಲದ ಹಾಗೆ ಮಾಡಿದೆನು.
15ಯೆಹೋವ ದೇವರು ನನಗೆ, “ಇನ್ನು ಬುದ್ಧಿಹೀನವಾದ ಕುರುಬನ ಆಯುಧಗಳನ್ನು ತೆಗೆದುಕೋ. 16ಏಕೆಂದರೆ ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು. ಅವನು ಕಳೆದುಹೋದ ಕುರಿಗಳ ಬಗ್ಗೆ ಕಾಳಜಿವಹಿಸುವುದಿಲ್ಲ ಮತ್ತು ಪ್ರಾಯದ ಕುರಿಗಳನ್ನು ಹುಡುಕುವುದಿಲ್ಲ, ಗಾಯಗೊಂಡದ್ದನ್ನು ಅವನು ಗುಣ ಮಾಡುವುದಿಲ್ಲ, ಇನ್ನೂ ಆರೋಗ್ಯದಿಂದಿರುವುದನ್ನು ಅವನು ಪೋಷಿಸುವುದಿಲ್ಲ. ಆದರೆ ಕೊಬ್ಬಿದವುಗಳ ಮಾಂಸವನ್ನು ತಿನ್ನುವನು. ಅವುಗಳ ಗೊರಸುಗಳನ್ನು ಮುರಿದು ಬಿಡುವನು.
17“ಮಂದೆಯನ್ನು ಕೈಬಿಡುವಂಥ
ಮೈಗಳ್ಳನಾದ ಕುರುಬನಿಗೆ ಕಷ್ಟ! ಖಡ್ಗವು
ಅವನ ತೋಳಿನ ಮೇಲೆಯೂ, ಅವನ ಬಲಗಣ್ಣಿನ ಮೇಲೆಯೂ ಇರುವುದು.
ಅವನ ತೋಳು ಪೂರ್ತಿಯಾಗಿ ಒಣಗುವುದು.
ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವುದು.”
Currently Selected:
ಜೆಕರ್ಯ 11: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.