ಮಲಾಕಿ 3
3
1“ಇಗೋ, ನಾನು ನನ್ನ ದೂತನನ್ನು ಕಳುಹಿಸುತ್ತೇನೆ. ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು. ನೀವು ಹುಡುಕುವ ಕರ್ತರು ಫಕ್ಕನೆ ತಮ್ಮ ಆಲಯಕ್ಕೆ ಬರುವರು. ನೀವು ಇಷ್ಟಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
2ಆದರೆ ಅವರ ಆಗಮನದ ದಿವಸದಲ್ಲಿ ಯಾರು ತಾಳುವರು? ಅವರು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಏಕೆಂದರೆ ಅವರು ಅಕ್ಕಸಾಲಿಗನ ಪರಿಶೋಧಿಸುವ ಬೆಂಕಿಯ ಹಾಗೆಯೂ, ಅಗಸನ ಸಾಬೂನಿನ ಹಾಗೆಯೂ ಇದ್ದಾರೆ. 3ದೇವರು ಬೆಳ್ಳಿಯನ್ನು ಪರಿಶೋಧಿಸಿ ಶುದ್ಧೀಕರಿಸುವ ಅಕ್ಕಸಾಲಿಗನಂತೆ ಕುಳಿತುಕೊಂಡು ಲೇವಿಯರನ್ನು ಶುದ್ಧಮಾಡುವರು. ಬಂಗಾರದ ಹಾಗೆಯೂ, ಬೆಳ್ಳಿಯ ಹಾಗೆಯೂ ಶುದ್ಧಮಾಡುವರು. ಆಗ ಅವರು ಯೆಹೋವ ದೇವರಿಗೆ ನೀತಿಯ ಕಾಣಿಕೆಯನ್ನು ಅರ್ಪಿಸುವರು. 4ಯೆಹೂದದ ಮತ್ತು ಯೆರೂಸಲೇಮಿನ ಕಾಣಿಕೆಯು ಪೂರ್ವದಿನಗಳಲ್ಲಿ ಪುರಾತನ ಕಾಲದಲ್ಲಿ ಇದ್ದಂತೆ ಯೆಹೋವ ದೇವರಿಗೆ ಮೆಚ್ಚಿಕೆಯಾಗಿರುವುದು.
5“ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುತ್ತೇನೆ. ಆಗ ಮಾಟಗಾರರಿಗೆ, ವ್ಯಭಿಚಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ, ಮತ್ತು ನನಗೆ ಭಯಪಡದಿರುವವರಿಗೂ ನ್ಯಾಯತೀರಿಸಿ, ಶೀಘ್ರಸಾಕ್ಷಿಯಾಗಿರುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ದಶಮಾಂಶಗಳನ್ನು ತಡೆಹಿಡಿಯುವ ಮೂಲಕ ಒಡಂಬಡಿಕೆಯನ್ನು ಮುರಿಯುವುದು
6“ನಾನು ಯೆಹೋವ ದೇವರು. ನಾನು ಬದಲಾಗುವುದಿಲ್ಲ. ಆದ್ದರಿಂದ ನೀವು ಯಾಕೋಬಿನ ವಂಶಜರೇ, ನಾಶವಾಗುವುದಿಲ್ಲ. 7ನಿಮ್ಮ ತಂದೆಗಳ ದಿವಸಗಳಿಂದಲೇ ನನ್ನ ನಿಯಮಗಳನ್ನು ಬಿಟ್ಟುಹೋಗಿದ್ದೀರಿ. ಅವುಗಳನ್ನು ಅನುಸರಿಸಲಿಲ್ಲ. ನನ್ನ ಬಳಿಗೆ ತಿರುಗಿಕೊಳ್ಳಿರಿ. ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
“ಆದರೆ ನೀವು, ‘ಯಾವುದರಲ್ಲಿ ತಿರುಗಿಕೊಳ್ಳೋಣ?’ ಎಂದು ಹೇಳುತ್ತೀರಿ.
8“ಮನುಷ್ಯನು ದೇವರಿಂದ ಕದ್ದುಕೊಳ್ಳಲು ಸಾಧ್ಯವೇ? ಆದರೂ ನೀವು ನನ್ನಿಂದ ಕಳ್ಳತನ ಮಾಡಿದ್ದೀರಿ.
“ಆದರೆ ನೀವು, ‘ಯಾವುದರಲ್ಲಿ ನಿನ್ನದನ್ನು ಕಳ್ಳತನ ಮಾಡಿದ್ದೇವೆ?’ ಎಂದು ಕೇಳುತ್ತೀರಿ.
“ದಶಮಭಾಗ ಮತ್ತು ಅರ್ಪಣೆಗಳಲ್ಲಿಯೇ! 9ಇದರಿಂದ ಶಾಪವು ನಿಮಗಾಯಿತು, ಏಕೆಂದರೆ ನೀವು, ಈ ಸಮಸ್ತ ಜನಾಂಗವೇ ನನ್ನಲ್ಲಿ ಕಳ್ಳತನ ಮಾಡುತ್ತಿದ್ದಿರಿ. 10ನನ್ನ ಆಲಯದಲ್ಲಿ ಆಹಾರ ಇರುವಂತೆ ಹತ್ತನೆಯ ಪಾಲುಗಳನ್ನೆಲ್ಲಾ ಬೊಕ್ಕಸಕ್ಕೆ ತನ್ನಿರಿ. ನಾನು ನಿಮಗೆ ಪರಲೋಕದ ಮಹಾದ್ವಾರಗಳನ್ನು ತೆರೆದು, ಸ್ಥಳ ಹಿಡಿಸಲಾರದಷ್ಟು ನಿಮಗೆ ಆಶೀರ್ವಾದವನ್ನು ಸುರಿಸದಿರುವೆನೋ, ಇಲ್ಲವೋ ಎಂಬುದನ್ನು ನೀವು ಈಗ ನನ್ನನ್ನು ಪರೀಕ್ಷಿಸಿ ನೋಡಿರಿ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 11“ನಿಮ್ಮ ಬೆಳೆಯನ್ನು ತಿಂದು ಬಿಡದಂತೆ ಕ್ರಿಮಿಕೀಟಗಳನ್ನು ತಡೆಯುವೆನು. ನಿಮ್ಮ ದ್ರಾಕ್ಷಿ ತೋಟಗಳಲ್ಲಿಂದ ದ್ರಾಕ್ಷಿಹಣ್ಣುಗಳನ್ನು ಉದುರಿಸಿ ಬಿಡುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 12“ಆಗ ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು. ಏಕೆಂದರೆ ನೀವು ರಮ್ಯವಾದ ದೇಶವಾಗುವಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
ಇಸ್ರಾಯೇಲ್ ದೇವರ ವಿರುದ್ಧ ಅಹಂಕಾರದಿಂದ ಮಾತನಾಡಿದರು
13“ನೀವು ನನಗೆ ವಿರೋಧವಾಗಿ ಅಹಂಕಾರದಿಂದ ಮಾತುಗಳನ್ನಾಡಿದಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
“ಆದರೂ ನೀವು, ‘ನಿನಗೆ ವಿರೋಧವಾಗಿ ನಾವು ಏನು ಮಾತಾಡಿದ್ದೇವೆ?’ ಎನ್ನುತ್ತೀರಿ.”
14“ನೀವು, ‘ದೇವರನ್ನು ಸೇವಿಸುವುದು ವ್ಯರ್ಥ, ನಾವು ಆತನ ನಿಯಮಗಳನ್ನು ಕೈಗೊಂಡು ಸೇನಾಧೀಶ್ವರ ಯೆಹೋವ ದೇವರ ಮುಂದೆ ದುಃಖಪಡುವುದರಿಂದ ಏನು ಪ್ರಯೋಜನವೆಂದೂ, 15ಈಗ ನಾವು ಗರ್ವಿಷ್ಠರನ್ನು ಭಾಗ್ಯವಂತರೆಂದನ್ನುತ್ತೇವೆ. ದುಷ್ಟರು ಅಭಿವೃದ್ಧಿಯಾಗುತ್ತಿದ್ದಾರೆ. ದೇವರಿಗೆ ಸವಾಲು ಹಾಕಿದವರು ತಪ್ಪಿಸಿಕೊಂಡಿದ್ದಾರೆ’ ಎಂದು ಹೇಳಿದ್ದೀರಿ.”
ಅಲ್ಪಸ್ವಲ್ಪ ಉಳಿದ ನಿಷ್ಠಾವಂತರು
16ಆಗ ಯೆಹೋವ ದೇವರಿಗೆ ಭಯಪಡುವವರು, ಒಬ್ಬರ ಸಂಗಡಲೊಬ್ಬರು ಮಾತಾಡಿಕೊಂಡರು. ಯೆಹೋವ ದೇವರು ಕಿವಿಗೊಟ್ಟು ಅದನ್ನು ಕೇಳಿದರು. ಇದಲ್ಲದೆ ಯೆಹೋವ ದೇವರಿಗೆ ಭಯಪಟ್ಟು, ಅವರ ನಾಮವನ್ನು ಗೌರವಿಸುವವರ ಬಗ್ಗೆ ಅವರು ತಮ್ಮ ಮುಂದೆ ಇದ್ದ ಜ್ಞಾಪಕ ಪುಸ್ತಕದಲ್ಲಿ ಬರೆಸಿದರು.
17“ನಾನು ನನ್ನ ಅಮೂಲ್ಯ ಸೊತ್ತನ್ನು ಸೇರಿಸಿಕೊಳ್ಳುವ ಆ ದಿವಸದಲ್ಲಿ ಅವರು ನನ್ನವರಾಗಿರುವರು. ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ, ಅವರನ್ನು ಕನಿಕರಿಸುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 18ಆಗ ನೀವು ನೀತಿವಂತನಿಗೂ, ದುಷ್ಟನಿಗೂ, ದೇವರ ಸೇವೆ ಮಾಡುವವನಿಗೂ, ಮಾಡದವನಿಗೂ ಇರುವ ವ್ಯತ್ಯಾಸವನ್ನು ಪುನಃ ನೋಡುವಿರಿ.
Currently Selected:
ಮಲಾಕಿ 3: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.