ಮತ್ತಾಯನ ಸುವಾರ್ತೆ 8
8
ಗುಣಮುಖನಾದ ಕುಷ್ಠರೋಗಿ
(ಮಾರ್ಕ 1:40-45; 5:12-16)
1ಯೇಸು ಬೆಟ್ಟದಿಂದ ಕೆಳಗೆ ಇಳಿದು ಬಂದನು. ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು. 2ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದನು. ಅವನು ಯೇಸುವಿನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಇಷ್ಟಪಟ್ಟರೆ ನನ್ನನ್ನು ಗುಣಪಡಿಸಬಲ್ಲೆ” ಎಂದನು.
3ಯೇಸು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸಿದೆ, ಗುಣವಾಗು” ಎಂದನು. ಆ ಕ್ಷಣವೇ ಅವನ ಕುಷ್ಠರೋಗ ವಾಸಿಯಾಯಿತು. 4ಯೇಸು ಅವನಿಗೆ, “ಇದು ಹೇಗಾಯಿತೆಂಬುದನ್ನು ಯಾರಿಗೂ ಹೇಳಬೇಡ. ಈಗ ನೀನು ಹೋಗಿ ಯಾಜಕನಿಗೆ ನಿನ್ನ ಮೈಯನ್ನು ತೋರಿಸು. ಗುಣಹೊಂದಿದವರು ಮೋಶೆಯ ಆಜ್ಞೆಗನುಸಾರವಾಗಿ ಕೊಡತಕ್ಕ ಕಾಣಿಕೆಯನ್ನು ಅರ್ಪಿಸು. ನೀನು ಗುಣವಾದದ್ದಕ್ಕೆ ಅದು ಸಾಕ್ಷಿಯಾಗಿರುವುದು” ಎಂದು ಹೇಳಿದನು.#8:4 ನೋಡಿರಿ: ಯಾಜಕ. 14:1-32.
ಆರೋಗ್ಯ ಹೊಂದಿದ ಅಧಿಕಾರಿಯ ಸೇವಕ
(ಲೂಕ 7:1-10; ಯೋಹಾನ 4:43-54)
5ಯೇಸು ಕಪೆರ್ನೌಮ್ ಪಟ್ಟಣಕ್ಕೆ ಹೊರಟುಹೋದನು. ಆತನು ಪಟ್ಟಣಕ್ಕೆ ಪ್ರವೇಶಿಸಿದಾಗ ಸೈನ್ಯದ ಅಧಿಕಾರಿಯೊಬ್ಬನು ಬಂದು, 6“ಪ್ರಭುವೇ, ನನ್ನ ಸೇವಕನು ಕಾಯಿಲೆಯಿಂದ ಹಾಸಿಗೆಯ ಮೇಲಿದ್ದಾನೆ. ಅವನು ಬಹಳ ನೋವಿನಿಂದ ನರಳುತ್ತಿದ್ದಾನೆ” ಎಂದು ಸಹಾಯಕ್ಕಾಗಿ ಬೇಡಿಕೊಂಡನು.
7ಯೇಸು ಆ ಅಧಿಕಾರಿಗೆ, “ನಾನು ಬಂದು ಅವನನ್ನು ಗುಣಪಡಿಸುತ್ತೇನೆ” ಎಂದು ಹೇಳಿದನು.
8ಅದಕ್ಕೆ ಆ ಅಧಿಕಾರಿ, “ಪ್ರಭುವೇ, ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ. ಅವನಿಗೆ ಗುಣವಾಗಲಿ ಎಂದು ನೀನು ಆಜ್ಞಾಪಿಸಿದರೆ ಸಾಕು, ಅವನಿಗೆ ಗುಣವಾಗುವುದು. 9ನಾನು ಸಹ ಬೇರೆ ಅಧಿಕಾರಿಗಳ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿ ಸಿಪಾಯಿಗಳಿದ್ದಾರೆ. ನಾನು ಒಬ್ಬ ಸಿಪಾಯಿಗೆ ‘ಹೋಗು’ ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬ ಸಿಪಾಯಿಗೆ ‘ಬಾ’ ಅಂದರೆ ಅವನು ಬರುತ್ತಾನೆ. ನಾನು ನನ್ನ ಸೇವಕನಿಗೆ, ‘ಇದನ್ನು ಮಾಡು’ ಅಂದರೆ ಅವನು ವಿಧೇಯತೆಯಿಂದ ಮಾಡುತ್ತಾನೆ. ನಿನಗೂ ಇದೇ ರೀತಿಯ ಅಧಿಕಾರವಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.
10ಇದನ್ನು ಕೇಳಿ ಯೇಸುವಿಗೆ ಆಶ್ಚರ್ಯವಾಯಿತು. ಯೇಸು ತನ್ನ ಸಂಗಡ ಇದ್ದವರಿಗೆ, “ನಾನು ಇಸ್ರೇಲಿನಲ್ಲಿಯೂ ಸಹ ಇಷ್ಟು ನಂಬಿಕೆಯುಳ್ಳ ವ್ಯಕ್ತಿಯನ್ನು ಕಾಣಲಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದನು. 11ಅನೇಕ ಜನರು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಂದ ಬರುತ್ತಾರೆ. ಅವರು ಪರಲೋಕರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂಗಡ ಕುಳಿತುಕೊಂಡು ಊಟಮಾಡುತ್ತಾರೆ. 12ಪರಲೋಕರಾಜ್ಯವನ್ನು ಹೊಂದತಕ್ಕವರು ಹೊರಗೆ ಕತ್ತಲೆಗೆ ಎಸೆಯಲ್ಪಡುವರು. ಅಲ್ಲಿ ಅವರು ಗೋಳಾಡುವರು ಮತ್ತು ನೋವಿನಿಂದ ಹಲ್ಲುಗಳನ್ನು ಕಡಿಯುವರು” ಎಂದನು.
13ಬಳಿಕ ಯೇಸು ಆ ಅಧಿಕಾರಿಗೆ, “ಮನೆಗೆ ಹೋಗು, ನೀನು ನಂಬಿದಂತೆಯೇ ನಿನ್ನ ಸೇವಕನಿಗೆ ಗುಣವಾಗುವುದು” ಎಂದನು. ಅದೇ ಸಮಯದಲ್ಲಿ ಅವನ ಸೇವಕನಿಗೆ ಗುಣವಾಯಿತು.
ಗುಣಮುಖರಾದ ವಿವಿಧ ಜನರು
(ಮಾರ್ಕ 1:29-34; ಲೂಕ 4:38-41)
14ಯೇಸುವು ಪೇತ್ರನ ಮನೆಗೆ ಹೋದನು. ಅಲ್ಲಿ ಪೇತ್ರನ ಅತ್ತೆಯು ಬಹಳ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದನ್ನು ಯೇಸು ನೋಡಿದನು. 15ಯೇಸು ಅವಳ ಕೈ ಮುಟ್ಟಿದಾಗ ಜ್ವರವು ಅವಳನ್ನು ಬಿಟ್ಟುಹೋಯಿತು. ಆಗ ಅವಳು ಮೇಲೆದ್ದು, ಆತನ ಸೇವೆಮಾಡಿದಳು.
16ಅಂದು ಸಾಯಂಕಾಲ ಜನರು ದೆವ್ವದಿಂದ ಪೀಡಿತರಾಗಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಯೇಸುವು ಮಾತಿನಿಂದಲೇ ದೆವ್ವಗಳನ್ನು ಅವರಿಂದ ಓಡಿಸಿದನು; ಕಾಯಿಲೆಯಾಗಿದ್ದ ಜನರೆಲ್ಲರನ್ನೂ ಗುಣಪಡಿಸಿದನು.
17“ಆತನು ನಮ್ಮ ಬೇನೆಗಳನ್ನು ತೆಗೆದುಕೊಂಡನು, ನಮ್ಮ ರೋಗಗಳನ್ನು ಹೊತ್ತುಕೊಂಡನು”#ಯೆಶಾಯ 53:4.
ಎಂದು ಪ್ರವಾದಿಯಾದ ಯೆಶಾಯನು ಹೇಳಿದ್ದು ಇದರ ಮೂಲಕ ನೆರವೇರಿತು.
ಯೇಸುವನ್ನು ಹಿಂಬಾಲಿಸಿ
(ಲೂಕ 9:57-62)
18ಯೇಸು ತನ್ನ ಸುತ್ತಲೂ ಇದ್ದ ಜನರೆಲ್ಲರನ್ನು ನೋಡಿ ತನ್ನ ಶಿಷ್ಯರಿಗೆ ಸರೋವರದ ಆಚೆಯ ತೀರಕ್ಕೆ ಹೋಗುವಂತೆ ಹೇಳಿದನು. 19ಆಗ ಧರ್ಮೋಪದೇಶಕನು ಯೇಸುವಿನ ಬಳಿಗೆ ಬಂದು, “ಬೋಧಕನೇ, ನೀನು ಯಾವ ಸ್ಥಳಕ್ಕೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.
20ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಅಂದನು.
21ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರಲು ನನಗೆ ಅಪ್ಪಣೆಯಾಗಲಿ. ಆಮೇಲೆ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.
22ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಿಕೊಳ್ಳಲಿ. ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ
(ಮಾರ್ಕ 4:35-41; ಲೂಕ 8:22-25)
23ಯೇಸು ದೋಣಿಯೊಳಗೆ ಹೋದನು. ಆತನ ಶಿಷ್ಯರೂ ಆತನೊಂದಿಗೆ ಹೋದರು. 24ದೋಣಿಯು ದಡವನ್ನು ಬಿಟ್ಟಮೇಲೆ ದೊಡ್ಡ ಬಿರುಗಾಳಿಯು ಸರೋವರದ ಮೇಲೆ ಪ್ರಾರಂಭವಾಯಿತು. ಅಲೆಗಳು ದೋಣಿಯನ್ನು ಮುಚ್ಚಿಕೊಂಡವು. ಆದರೆ ಯೇಸು ನಿದ್ರಿಸುತ್ತಿದ್ದನು. 25ಯೇಸುವಿನ ಶಿಷ್ಯರು ಆತನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಪ್ರಭುವೇ, ನಮ್ಮನ್ನು ರಕ್ಷಿಸು! ನಾವು ಮುಳುಗುತ್ತಿದ್ದೇವೆ!” ಎಂದು ಹೇಳಿದರು.
26ಯೇಸು, “ನೀವು ಭಯಪಡುವುದೇಕೆ? ನಿಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲ” ಎಂದು ಉತ್ತರಿಸಿ ಎದ್ದುನಿಂತುಕೊಂಡು ಆ ದೊಡ್ಡ ಬಿರುಗಾಳಿಗೂ ಅಲೆಗಳಿಗೂ ಆಜ್ಞಾಪಿಸಿದನು. ಆ ಕೂಡಲೇ ಬಿರುಗಾಳಿ ನಿಂತುಹೋಯಿತು. ಸರೋವರ ಪ್ರಶಾಂತವಾಯಿತು.
27ಜನರೆಲ್ಲರೂ ಆಶ್ಚರ್ಯಪಟ್ಟರು. “ಈತನು ಎಂತಹ ಮನುಷ್ಯ? ಬಿರುಗಾಳಿ ಮತ್ತು ನೀರು ಈತನಿಗೆ ವಿಧೇಯವಾಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.
ದೆವ್ವದಿಂದ ಪೀಡಿತರಾಗಿದ್ದ ಇಬ್ಬರಿಗೆ ಬಿಡುಗಡೆ
(ಮಾರ್ಕ 5:1-20; ಲೂಕ 8:26-39)
28ಯೇಸು ಸರೋವರದ ಮತ್ತೊಂದು ತೀರದಲ್ಲಿದ್ದ ಗದರೇನ ಪ್ರಾಂತ್ಯಕ್ಕೆ ಬಂದನು. ಅಲ್ಲಿ ದೆವ್ವಗಳಿಂದ ಪೀಡಿತರಾಗಿದ್ದ ಇಬ್ಬರು ಯೇಸುವಿನ ಬಳಿಗೆ ಬಂದರು. ಅವರು ಸಮಾಧಿಯ ಗವಿಗಳಲ್ಲಿ ವಾಸವಾಗಿದ್ದರು ಮತ್ತು ಬಹಳ ಅಪಾಯಕಾರಿಗಳಾಗಿದ್ದರು. ಆದ್ದರಿಂದ ಜನರು ಆ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. 29ಅವರಿಬ್ಬರು ಯೇಸುವಿನ ಬಳಿಗೆ ಬಂದು. “ನೀನು ನಮಗೆ ಏನು ಮಾಡಬೇಕೆಂದಿರುವೆ? ದೇವಕುಮಾರನೇ, ನೇಮಿತ ಕಾಲಕ್ಕಿಂತ ಮುಂಚೆಯೇ ನಮ್ಮನ್ನು ಶಿಕ್ಷಿಸಲು ಇಲ್ಲಿಗೆ ಬಂದೆಯಾ?” ಎಂದು ಗಟ್ಟಿಯಾಗಿ ಕೂಗಿಕೊಂಡರು.
30ಆ ಸ್ಥಳದ ಹತ್ತಿರ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. 31ಆ ದೆವ್ವಗಳು, “ನಾವು ಇವರಿಬ್ಬರನ್ನು ಬಿಟ್ಟುಹೋಗುವಂತೆ ನೀನು ಮಾಡಬೇಕೆಂದಿದ್ದರೆ, ದಯವಿಟ್ಟು ನಮ್ಮನ್ನು ಆ ಹಂದಿಗಳೊಳಗೆ ಕಳುಹಿಸು” ಎಂದು ಬೇಡಿಕೊಂಡವು.
32ಯೇಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಗಳು ಅವರಿಬ್ಬರನ್ನು ಬಿಟ್ಟು ಹಂದಿಗಳೊಳಗೆ ಹೋದವು. ಕೂಡಲೇ ಹಂದಿಗಳೆಲ್ಲಾ ಗುಡ್ಡದ ಕೆಳಗೆ ಓಡಿ ಸರೋವರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿಹೋದವು. 33ಹಂದಿಗಳನ್ನು ಮೇಯಿಸುತ್ತಿದ್ದವರು ಪಟ್ಟಣದೊಳಕ್ಕೆ ಓಡಿಹೋಗಿ ಹಂದಿಗಳಿಗೂ ದೆವ್ವಗಳಿಂದ ಪೀಡಿತರಾಗಿದ್ದವರಿಗೂ ಸಂಭವಿಸಿದ್ದನ್ನು ಜನರಿಗೆ ತಿಳಿಸಿದರು. 34ಆಗ ಪಟ್ಟಣದ ಜನರೆಲ್ಲರೂ ಯೇಸುವನ್ನು ನೋಡಲು ಹೋಗಿ, ತಮ್ಮ ಸ್ಥಳವನ್ನು ಬಿಟ್ಟುಹೋಗಬೇಕೆಂದು ಆತನನ್ನು ಬೇಡಿಕೊಂಡರು.
Currently Selected:
ಮತ್ತಾಯನ ಸುವಾರ್ತೆ 8: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International