ಮಲಾಕಿ 1
1
1ದೇವರಿಂದ ಬಂದ ಸಂದೇಶ. ಯೆಹೋವ ದೇವರು ಮಲಾಕಿಯ ಮೂಲಕ ಇಸ್ರೇಲರಿಗೆ ಕೊಟ್ಟ ಸಂದೇಶ.
ದೇವರು ಇಸ್ರೇಲರನ್ನು ಪ್ರೀತಿಸುತ್ತಾನೆ
2ಯೆಹೋವನು, “ನಾನು ನಿಮ್ನನ್ನೆಲ್ಲಾ ಪ್ರೀತಿಸುತ್ತೇನೆ” ಎಂದು ಹೇಳುತ್ತಾನೆ.
ಆದರೆ ನೀವು, “ನೀನು ಪ್ರೀತಿಸುವದಕ್ಕೆ ಗುರುತು ಏನು?” ಎಂದು ಕೇಳುತ್ತೀರಿ.
ಯೆಹೋವನು ಅದಕ್ಕುತ್ತರವಾಗಿ, “ಏಸಾವನು ಯಾಕೊಬನ ಅಣ್ಣನಲ್ಲವೋ? ಆದರೆ ನಾನು ಯಾಕೋಬನನ್ನು ಆರಿಸಿಕೊಂಡೆನು. 3ಏಸಾವನನ್ನು ನಾನು ಸ್ವೀಕರಿಸಲಿಲ್ಲ. ಏಸಾವನಿರುವ ಬೆಟ್ಟಪ್ರದೇಶವನ್ನು ನಾನು ಹಾಳುಮಾಡಿದೆನು. ಈಗ ಕಾಡುನಾಯಿಗಳು ಮಾತ್ರ ಅಲ್ಲಿ ವಾಸಿಸುತ್ತವೆ.” ಎಂದು ಹೇಳಿದನು.
4ಎದೋಮ್ಯರು ಒಂದುವೇಳೆ ಹೀಗೆ ಹೇಳಿಯಾರು: “ನಾವು ನಾಶವಾಗಿದ್ದೇವೆ. ಹೌದು, ಆದರೆ ನಾವು ಹಿಂದೆ ಹೋಗಿ ತಿರುಗಿ ನಮ್ಮ ಪಟ್ಟಣಗಳನ್ನು ಕಟ್ಟುವೆವು.”
ಸರ್ವಶಕ್ತನಾದ ಯೆಹೋವನು, “ಅವರು ಪಟ್ಟಣಗಳನ್ನು ತಿರುಗಿ ಕಟ್ಟಿದರೆ ನಾನು ತಿರುಗಿ ನಾಶಮಾಡುವೆನು” ಎಂದು ಹೇಳುತ್ತಾನೆ. ಇದಕ್ಕಾಗಿಯೇ ಜನರು, “ಎದೋಮ್ ದುಷ್ಟ ಪ್ರಾಂತ್ಯವಾಗಿದೆ, ಯೆಹೋವನು ನಿರಂತರವಾಗಿ ಅದನ್ನು ದ್ವೇಷಿಸುತ್ತಾನೆ” ಎಂದು ಅನ್ನುವರು.
5ಇದನ್ನು ನೋಡಿದವರಾದ ನೀವು ಹೇಳುತ್ತೀರಿ, “ಯೆಹೋವನು ಮಹಾದೇವರು. ಇಸ್ರೇಲಿನ ಹೊರಗೂ ತನ್ನ ಪ್ರತಾಪವನ್ನು ತೋರಿಸುವನು.”
ಜನರು ಯೆಹೋವನನ್ನು ಗೌರವಿಸುವುದಿಲ್ಲ
6ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ, “ಮಕ್ಕಳು ಹೆತ್ತವರನ್ನು ಗೌರವಿಸುವರು. ಸೇವಕರು ಯಜಮಾನನನ್ನು ಗೌರವಿಸುತ್ತಾರೆ. ನಾನು ನಿಮ್ಮ ತಂದೆಯಾಗಿದ್ದೇನೆ, ಆದರೆ ನನ್ನನ್ನು ಯಾಕೆ ಗೌರವಿಸುವದಿಲ್ಲ? ನಾನು ನಿಮ್ಮ ಯಜಮಾನನಾಗಿದ್ದೇನೆ, ಆದರೆ ನನ್ನನ್ಯಾಕೆ ಗೌರವಿಸುವದಿಲ್ಲ? ಯಾಜಕರೇ, ನೀವು ನನ್ನ ಹೆಸರನ್ನು ಗೌರವಿಸುವದಿಲ್ಲ.”
ಆದರೆ ನೀವು, “ನಾವು ನಿನಗೆ ಯಾವ ವಿಷಯದಲ್ಲಿ ಗೌರವ ಕೊಟ್ಟಿಲ್ಲ” ಎಂದು ಕೇಳುತ್ತೀರಿ.
7“ನನ್ನ ಯಜ್ಞವೇದಿಕೆಗೆ ನೀವು ಅಶುದ್ಧ ರೊಟ್ಟಿಗಳನ್ನು ಅರ್ಪಿಸುತ್ತೀರಿ” ಎಂದು ಯೆಹೋವನು ಹೇಳುತ್ತಾನೆ.
“ಯಾವ ವಿಷಯದಲ್ಲಿ ಅದು ಅಶುದ್ಧವಾಯಿತು?” ಎಂದು ನೀವು ಕೇಳುತ್ತೀರಿ.
ಅದಕ್ಕೆ ಯೆಹೋವನು, “ನನ್ನ ಯಜ್ಞವೇದಿಕೆಯನ್ನು ನೀವು ಗೌರವಿಸುವದಿಲ್ಲ. 8ನೀವು ಕುರುಡು ಪ್ರಾಣಿಗಳನ್ನು ಯಜ್ಞಕ್ಕಾಗಿ ತರುತ್ತೀರಿ. ಅದು ತಪ್ಪಲ್ಲವೇ? ಕುಂಟು, ರೋಗಪೀಡಿತ ಪಶುಗಳನ್ನು ಯಜ್ಞಾರ್ಪಣೆಗಾಗಿ ತರುತ್ತೀರಿ. ಅದು ತಪ್ಪಲ್ಲವೇ? ನಿಮ್ಮ ರಾಜ್ಯಪಾಲನಿಗೆ ನೀವು ಅಂಥಾ ಪ್ರಾಣಿಗಳನ್ನು ಕಾಣಿಕೆಯಾಗಿ ಕೊಟ್ಟರೆ ಅವನು ಅದನ್ನು ಸ್ವೀಕರಿಸುವನೋ? ಇಲ್ಲ, ಅಂಥಾ ಕಾಣಿಕೆಯನ್ನು ಅವನು ಸ್ವೀಕರಿಸುವದೇ ಇಲ್ಲ” ಸರ್ವಶಕ್ತನಾದ ಯೆಹೋವನು ಇದನ್ನು ಹೇಳುತ್ತಿದ್ದಾನೆ.
9“ಯಾಜಕರೇ, ಯೆಹೋವನು ನಮಗೆ ಶುಭವನ್ನು ಉಂಟುಮಾಡುವಂತೆ ಆತನನ್ನು ಕೇಳಿಕೊಳ್ಳಿರಿ. ಆದರೆ ಆತನು ನಿಮಗೆ ಕಿವಿಗೊಡುವುದಿಲ್ಲ. ನಿಮ್ಮ ತಪ್ಪು ದೋಷಗಳೇ ಅದಕ್ಕೆ ಕಾರಣ.” ಇದು ಸರ್ವಶಕ್ತನಾದ ಯೆಹೋವನ ನುಡಿ.
10“ನಿಮ್ಮಲ್ಲಿ ಕೆಲವು ಯಾಜಕರು ಆಲಯದ ಬಾಗಿಲುಗಳನ್ನು ಮುಚ್ಚಿ ಬೆಂಕಿಯನ್ನು ಸರಿಯಾದ ರೀತಿಯಲ್ಲಿ ಹಚ್ಚುವರು. ಆದರೆ ನಾನು ನಿಮ್ಮನ್ನು ಮೆಚ್ಚುವದಿಲ್ಲ. ನಿಮ್ಮ ಕಾಣಿಕೆಗಳನ್ನು ಸ್ವೀಕರಿಸುವದಿಲ್ಲ” ಇದು ಸರ್ವಶಕ್ತನಾದ ಯೆಹೋವನ ನುಡಿ.
11“ಭೂಲೋಕದ ಜನರೆಲ್ಲಾ ನನ್ನ ಹೆಸರನ್ನು ಗೌರವಿಸುತ್ತಾರೆ; ಒಳ್ಳೆಯ ಕಾಣಿಕೆಗಳನ್ನು ತಂದೊಪ್ಪಿಸುತ್ತಾರೆ, ಒಳ್ಳೆಯ ಧೂಪವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಯಾಕೆಂದರೆ ಅವರಿಗೆಲ್ಲಾ ನನ್ನ ನಾಮ ಮಹತ್ತರವಾದದ್ದು, ವಿಶೇಷವಾದದ್ದು.” ಇದು ಸರ್ವಶಕ್ತನಾದ ಯೆಹೋವನ ನುಡಿ.
12“ಆದರೆ ನೀವು ನನ್ನ ನಾಮವನ್ನು ಘನಪಡಿಸುವದಿಲ್ಲ. ನನ್ನ ಮೇಜು ಅಶುದ್ಧವಾದದ್ದೆಂದು ನೀವು ಹೇಳುತ್ತೀರಿ. 13ನೀವು ಆ ಮೇಜಿನಿಂದ ಆಹಾರವನ್ನು ತೆಗೆದುಕೊಳ್ಳುವದಿಲ್ಲ. ನೀವು ಆಹಾರವನ್ನು ಮೂಸಿನೋಡಿ ಅದನ್ನು ತಿನ್ನಲು ನಿರಾಕರಿಸುತ್ತೀರಿ. ಅದು ಚೆನ್ನಾಗಿಲ್ಲ ಎಂದು ಹೇಳುತ್ತೀರಿ. ಆದರೆ ಅದು ನಿಜವಲ್ಲ. ಆ ಮೇಲೆ, ನೀವು ರೋಗಪೀಡಿತವಾದ ಕುಂಟಾದ ಮತ್ತು ಕಳುವು ಮಾಡಿದ ಪಶುಗಳನ್ನು ನನಗರ್ಪಿಸುತ್ತೀರಿ. ಆದರೆ ಅಂಥಾ ಪಶುಗಳನ್ನು ನಿಮ್ಮಿಂದ ನಾನು ಸ್ವೀಕರಿಸುವದಿಲ್ಲ. 14ನಿಮ್ಮಲ್ಲಿ ಕೆಲವರಲ್ಲಿ ಯಜ್ಞಕ್ಕೆ ಬೇಕಾಗಿರುವ ಒಳ್ಳೆಯ ಗಂಡು ಪಶುಗಳು ಇದ್ದಾಗ್ಯೂ ಅವರು ನನಗೆ ಅವುಗಳನ್ನು ಸಮರ್ಪಿಸುವದಿಲ್ಲ. ಕೆಲವರು ಕಳಂಕವಿಲ್ಲದ ಪಶುಗಳನ್ನು ನನಗೆ ತರುತ್ತಾರೆ. ಅವರು ಅಂಥಾ ಆರೋಗ್ಯಕರ ಪಶುಗಳನ್ನು ನನಗೆ ಸಮರ್ಪಿಸಲು ವಾಗ್ದಾನ ಮಾಡುವರು. ಆದರೆ ಗುಪ್ತವಾಗಿ ಅವರು ಆ ಪಶುವನ್ನು ಬದಲಿಸಿ ನನಗೆ ರೋಗಿಯಾದ ಪಶುಗಳನ್ನು ಕೊಡುತ್ತಾರೆ. ಅವರಿಗೆ ದುರ್ದೆಶೆ ಸಂಭವಿಸಲಿರುವದು. ನಾನು ದೊಡ್ಡ ಅರಸನು. ನೀವು ನನ್ನನ್ನು ಗೌರವಿಸಬೇಕು. ಭೂಲೋಕದ ಸರ್ವಜನರು ನನ್ನನ್ನು ಸನ್ಮಾನಿಸುವರು.” ಇವು ಸರ್ವಶಕ್ತನಾದ ಯೆಹೋವನ ನುಡಿಗಳು.
Currently Selected:
ಮಲಾಕಿ 1: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International