Λογότυπο YouVersion
Εικονίδιο αναζήτησης

ಯೊವಾನ್ನ 4

4
ಯೇಸು ಮತ್ತು ಸಮಾರಿಯದ ಮಹಿಳೆ
1ಯೊವಾನ್ನನಿಗಿಂತಲೂ ಯೇಸು ಸ್ವಾಮಿಯೇ ಹೆಚ್ಚುಮಂದಿ ಜನರನ್ನು ಶಿಷ್ಯರನ್ನಾಗಿಸಿಕೊಳ್ಳುತ್ತಾ, ಅವರಿಗೆ ದೀಕ್ಷಾಸ್ನಾನವನ್ನು ಮಾಡಿಸುತ್ತಾ ಇದ್ದಾರೆಂಬ ವಾರ್ತೆ ಫರಿಸಾಯರ ಕಿವಿಗೆ ಬಿದ್ದಿತು. 2(ವಾಸ್ತವವಾಗಿ ದೀಕ್ಷಾಸ್ನಾನವನ್ನು ಮಾಡಿಸುತ್ತಿದ್ದವರು ಯೇಸುವಿನ ಶಿಷ್ಯರೇ ಹೊರತು ಯೇಸುವಲ್ಲ). 3ಯೇಸು ಇದನ್ನು ತಿಳಿದು ಜುದೇಯವನ್ನು ಬಿಟ್ಟು ಮತ್ತೆ ಗಲಿಲೇಯಕ್ಕೆ ಹೊರಟರು. 4ದಾರಿಯಲ್ಲಿ ಸಮಾರಿಯ ಪ್ರಾಂತ್ಯವನ್ನು ಹಾದುಹೋಗಬೇಕಾಗಿತ್ತು.
5ಯೇಸು ಹೋಗುತ್ತಿರುವಾಗ ಸಮಾರಿಯದ ಸಿಖಾರೆಂಬ ಊರನ್ನು ತಲುಪಿದರು. ಈ ಊರಿನ ಪಕ್ಕದಲ್ಲೇ ಯಕೋಬನು ತನ್ನ ಮಗನಾದ ಜೋಸೆಫನಿಗೆ ಕೊಟ್ಟ ಭೂಮಿ ಇದೆ. 6ಅಲ್ಲೇ ಯಕೋಬನ ಬಾವಿಯೂ ಇದೆ. ಪಯಣದಿಂದ ಬಳಲಿದ್ದ ಯೇಸು ಬಾವಿಯ ಬಳಿ ಕುಳಿತುಕೊಂಡರು. ಆಗ ಸುಮಾರು ಮಧ್ಯಾಹ್ನದ ಹೊತ್ತು. 7ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, “ಕುಡಿಯಲು ಕೊಂಚ ನೀರು ಕೊಡು,” ಎಂದು ಕೇಳಿದರು. 8ಶಿಷ್ಯರು ಊಟಕ್ಕೆ ಏನಾದರೂ ಕೊಂಡುತರುವುದಕ್ಕೆ ಊರಿನೊಳಗೆ ಹೋಗಿದ್ದರು. 9ಅದಕ್ಕೆ ಆಕೆ, “ನೀವು ಯೆಹೂದ್ಯರು, ನಾನು ಸಮಾರಿಯದವಳು. ಹೀಗಿರುವಲ್ಲಿ ನೀವು ನನ್ನಿಂದ ನೀರು ಕೇಳಬಹುದೆ?” ಎಂದಳು. (ಯೆಹೂದ್ಯರಿಗೂ ಸಮಾರಿಯದವರಿಗೂ ಹೊಕ್ಕುಬಳಕೆ ಇರಲಿಲ್ಲ). 10ಆಗ ಯೇಸು, “ದೇವರು ಕೊಡುವ ವರದಾನವನ್ನು ಮತ್ತು ಕುಡಿಯಲು ನಿನ್ನಿಂದ ನೀರು ಕೇಳುತ್ತಿರುವ ವ್ಯಕ್ತಿಯನ್ನು ನೀನು ಅರಿತಿದ್ದರೆ ಆಗ ನೀನೇ ಆತನಲ್ಲಿ ಬೇಡುತ್ತಿದ್ದೆ. ಆತನು ನಿನಗೆ ಜೀವಜಲವನ್ನು ಕೊಡುತ್ತಿದ್ದನು,” ಎಂದು ಉತ್ತರಕೊಟ್ಟರು. 11ಅದಕ್ಕೆ ಆಕೆ, “ನೀರು ಸೇದುವುದಕ್ಕೆ ನಿಮ್ಮಲ್ಲಿ ಏನೂ ಇಲ್ಲ, ಬಾವಿಯೂ ಆಳವಾಗಿದೆ; ಹೀಗಿರುವಲ್ಲಿ ನಿಮಗೆ ಜೀವಜಲ ಎಲ್ಲಿಂದ ಬಂದೀತು? 12ನಮಗೆ ಈ ಬಾವಿಯನ್ನು ಕೊಟ್ಟವನು ನಮ್ಮ ಪಿತಾಮಹ ಯಕೋಬನು. ಆತನು, ಆತನ ಮಕ್ಕಳು ಮತ್ತು ದನಕರುಗಳು ಇದೇ ಬಾವಿಯ ನೀರನ್ನು ಕುಡಿದರು. ಅಂಥ ಪಿತಾಮಹನಿಗಿಂತ ತಾವು ದೊಡ್ಡವರೋ?” ಎಂದಳು. 13ಆಗ ಯೇಸು, “ಈ ನೀರನ್ನು ಕುಡಿಯುವ ಎಲ್ಲರಿಗೂ ಮತ್ತೆ ದಾಹವಾಗುತ್ತದೆ. 14ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ದಾಹವಾಗದು; ಆ ನೀರು ಅವನಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ, ನಿತ್ಯಜೀವವನ್ನು ತರುತ್ತದೆ,” ಎಂದು ಉತ್ತರಕೊಟ್ಟರು. 15ಅದಕ್ಕೆ ಆಕೆ, “ಸ್ವಾಮೀ, ಅಂಥ ನೀರನ್ನು ಕೊಡಿ; ಇನ್ನು ಮುಂದೆ ನನಗೆ ದಾಹವಾಗದಿರಲಿ. ನೀರು ಸೇದಲು ಇಷ್ಟು ದೂರ ಬರುವುದು ತಪ್ಪಲಿ,” ಎಂದಳು. 16ಅದಕ್ಕೆ ಯೇಸು, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದು ಹೇಳಿದರು. 17ಆಕೆ, “ನನಗೆ ಗಂಡನಿಲ್ಲ,” ಎಂದಳು. 18“ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. ನಿನಗೆ ಐದು ಜನ ಗಂಡಂದಿರು ಇದ್ದರು. ಈಗ ನಿನ್ನೊಡನೆ ಇರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು ಯೇಸು ಸ್ವಾಮಿ. 19ಅದಕ್ಕೆ ಆ ಮಹಿಳೆ, “ಸ್ವಾಮೀ, ತಾವು ಪ್ರವಾದಿ ಎಂದು ನನಗೀಗ ತಿಳಿಯಿತು. 20ನಮ್ಮ ಪೂರ್ವಜರು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸುತ್ತಿದ್ದರು. ಆದರೆ ಆರಾಧಿಸತಕ್ಕ ಕ್ಷೇತ್ರ ಇರುವುದು ಜೆರುಸಲೇಮಿನಲ್ಲೇ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ,” ಎಂದಳು. 21ಆಗ ಯೇಸು, “ತಾಯಿ, ನಾನು ಹೇಳುವುದನ್ನು ಕೇಳು. ಪಿತನ ಆರಾಧನೆಗೆ ಈ ಬೆಟ್ಟಕ್ಕೂ ಬರಬೇಕಾಗಿಲ್ಲ; ಜೆರುಸಲೇಮಿಗೂ ಹೋಗಬೇಕಾಗಿಲ್ಲ. ಅಂಥ ಕಾಲವೂ ಬರುವುದು. 22ನೀವು ಆರಾಧಿಸುವುದು ಯಾರೆಂದು ನಿಮಗೇ ತಿಳಿಯದು. ನಾವು ಆರಾಧಿಸುವುದು ಯಾರೆಂದು ನಮಗೆ ತಿಳಿದಿದೆ. ಏಕೆಂದರೆ ಲೋಕೋದ್ಧಾರಕ ಬರುವುದು ಯೆಹೂದ್ಯರಿಂದಲೇ. 23ಕಾಲ ಬರುವುದು; ಅದು ಈಗಲೇ ಬಂದಿದೆ. ಇನ್ನು ಮೇಲೆ ನಿಜವಾದ ಆರಾಧಕರು ಪಿತನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು. ಅಂಥವರೇ ತಮ್ಮನ್ನು ಆರಾಧಿಸಬೇಕೆಂದು ಪಿತ ಆಶಿಸುತ್ತಾರೆ. 24ದೇವರು ಆತ್ಮಸ್ವರೂಪಿ, ಅವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು,” ಎಂದು ಹೇಳಿದರು. 25ಆಕೆ, “ಅಭಿಷಿಕ್ತನಾದ ಲೋಕೋದ್ಧಾರಕ ಬರುವನೆಂದು ನಾನು ಬಲ್ಲೆ. ಆತನು ಬಂದಾಗ ಎಲ್ಲವನ್ನೂ ತಿಳಿಸುವನು,” ಎಂದು ಹೇಳಿದಳು. 26ಆಗ ಯೇಸು, “ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದು ನುಡಿದರು. 27ಅಷ್ಟರಲ್ಲಿ ಹಿಂದಿರುಗಿ ಬಂದ ಶಿಷ್ಯರು ಯೇಸು ಆ ಮಹಿಳೆಯೊಡನೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೆ, “ಏನು ಬೇಕು?” ಎಂದು ಆಕೆಯನ್ನಾಗಲಿ. “ಆಕೆಯೊಡನೆ ಏಕೆ ಮಾತನಾಡುತ್ತಿದ್ದೀರಿ?” ಎಂದು ಯೇಸುವನ್ನಾಗಲಿ ಅವರು ಕೇಳಲಿಲ್ಲ. 28ಆ ಮಹಿಳೆ ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ನಡೆದಳು. 29“ನಾನು ಮಾಡಿದ್ದ ಕೃತ್ಯಗಳನ್ನೆಲ್ಲಾ ಕಂಡಂತೆ ತಿಳಿಸಿದ ಒಬ್ಬ ವ್ಯಕ್ತಿ ಅಲ್ಲಿ ಇದ್ದಾರೆ, ಬಂದು ನೋಡಿ, ಅವರೇ ಅಭಿಷಿಕ್ತನಾದ ಲೋಕೋದ್ಧಾರಕ ಏಕಾಗಿರಬಾರದು?” ಎಂದು ಊರಿನ ಜನರನ್ನು ಕರೆದಳು. 30ಅವರು ಯೇಸುವಿನ ಬಳಿಗೆ ಬಂದರು.
31ಈ ಮಧ್ಯೆ ಶಿಷ್ಯರು, “ಗುರುದೇವಾ, ಊಟಮಾಡಿ,” ಎಂದು ಯೇಸುವನ್ನು ಒತ್ತಾಯಮಾಡಿದರು. 32ಆಗ ಯೇಸು, “ನಿಮಗೆ ತಿಳಿಯದಂಥ ಆಹಾರ ನನ್ನಲ್ಲಿದೆ,” ಎಂದರು. 33ಶಿಷ್ಯರು, “ಯಾರಾದರೂ ಅವರಿಗೆ ತಿನ್ನಲು ತಂದುಕೊಟ್ಟಿರಬಹುದೆ?” ಎಂದು ಮಾತನಾಡಿಕೊಂಡರು. 34ಯೇಸು ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸುವುದೇ ನನಗೇ ಆಹಾರ. ಆತನು ಕೊಟ್ಟ ಕಾರ್ಯಗಳನ್ನು ಪೂರೈಸುವುದೇ ನನಗೆ ತಿಂಡಿತೀರ್ಥ. 35ಇನ್ನು ನಾಲ್ಕು ತಿಂಗಳು ಆದ ಮೇಲೆ ಸುಗ್ಗಿ ಬರುತ್ತದೆ ಎಂದು ನೀವು ಹೇಳುವುದಿಲ್ಲವೆ? ಇಗೋ, ಕಣ್ಣುಹಾಯಿಸಿ ನೋಡಿ; ಬಲಿತು ಕೊಯ್ಲಿಗೆ ಬಂದಿರುವ ಹೊಲಗಳನ್ನು ನೋಡಿ. 36ಕೊಯ್ದವನು ಈಗಾಗಲೇ ಕೂಲಿಯನ್ನು ಪಡೆಯುತ್ತಾನೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಪಡುತ್ತಾರೆ. 37ಬಿತ್ತುವವನೊಬ್ಬ, ಕೊಯ್ಯುವವನಿನ್ನೊಬ್ಬ,’ ಎಂಬ ನಾಣ್ನುಡಿ ನಿಜವಾದುದು. 38ನೀವು ದುಡಿಯದ ಎಡೆಯಲ್ಲಿ ಕೊಯ್ಲುಮಾಡಲು ನಾನು ನಿಮ್ಮನ್ನು ಕಳುಹಿಸಿದ್ದೇನೆ. ದುಡಿದವರು ಬೇರೆ, ಅವರ ದುಡಿಮೆಯ ಫಲ ಬರುವುದು ನಿಮ್ಮ ಪಾಲಿಗೆ,” ಎಂದು ಹೇಳಿದರು.
39‘ನಾನು ಮಾಡಿದ ಕೃತ್ಯಗಳನ್ನೆಲ್ಲಾ ಕಂಡಂತೆ ಹೇಳಿದ ವ್ಯಕ್ತಿ’ ಎಂದು ಸಾರಿದ ಮಹಿಳೆಯ ಮಾತಿನಿಂದ ಸಮಾರಿಯ ಊರಿನ ಹಲವು ಮಂದಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು. 40ಎಂದೇ ಆ ಊರಿನ ಜನರು ಯೇಸುವಿನ ಬಳಿಗೆ ಬಂದು ತಮ್ಮಲ್ಲಿಯೇ ತಂಗಬೇಕೆಂದು ಬೇಡಿಕೊಂಡರು. ಅಂತೆಯೇ ಯೇಸು, ಅಲ್ಲಿ ಎರಡು ದಿನ ಉಳಿದರು. 41ಇನ್ನೂ ಅನೇಕರಿಗೆ ಯೇಸುವಿನ ಬೋಧನೆಯನ್ನು ಅವರ ಬಾಯಿಂದಲೇ ಕೇಳಿ ಅವರಲ್ಲಿ ನಂಬಿಕೆ ಮೂಡಿತು. 42ಆಗ ಅವರು, ಆ ಮಹಿಳೆಗೆ, “ನೀನು ಹೇಳಿದುದರಿಂದ ಮಾತ್ರವೇ ಈಗ ನಾವು ನಂಬುತ್ತಿಲ್ಲ, ನಾವೇ ಕಿವಿಯಾರೆ ಕೇಳಿ ನಂಬಿದ್ದೇವೆ; ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,” ಎಂದರು.
ಅಧಿಕಾರಿಯ ಮಗನಿಗೆ ಆರೋಗ್ಯದಾನ
43ಎರಡು ದಿನಗಳಾದ ಬಳಿಕ ಯೇಸು ಸ್ವಾಮಿ ಅಲ್ಲಿಂದ ಗಲಿಲೇಯಕ್ಕೆ ಹೊರಟರು. 44ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು. 45ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು.
46ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು. 47ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು. 48ಯೇಸು ಅವನಿಗೆ, “ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,” ಎಂದರು. 49ಆದರೂ ಆ ಅಧಿಕಾರಿ, “ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮೀ,” ಎಂದು ಅಂಗಲಾಚಿದನು. 50ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು. 51ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,” ಎಂದು ತಿಳಿಸಿದರು. 52ಎಷ್ಟುಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, “ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು,” ಎಂದು ಆಳುಗಳು ಉತ್ತರಕೊಟ್ಟರು. 53‘ನಿನ್ನ ಮಗ ಬದುಕುತ್ತಾನೆ’ ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು.
54ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕಕಾರ್ಯ ಇದು.

Επιλέχθηκαν προς το παρόν:

ಯೊವಾನ್ನ 4: KANCLBSI

Επισημάνσεις

Κοινοποίηση

Αντιγραφή

None

Θέλετε να αποθηκεύονται οι επισημάνσεις σας σε όλες τις συσκευές σας; Εγγραφείτε ή συνδεθείτε