Λογότυπο YouVersion
Εικονίδιο αναζήτησης

ಲೂಕ 7

7
ಯೇಸು ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು
(ಮತ್ತಾ. 8.5-13)
1ಆತನು ತನ್ನ ಮಾತುಗಳನ್ನೆಲ್ಲಾ ಜನರು ಕೇಳುವಂತೆ ಹೇಳಿ ಮುಗಿಸಿದ ಮೇಲೆ ಕಪೆರ್ನೌವಿುಗೆ ಬಂದನು. 2ಅಲ್ಲಿ ದಂಡಿನ ಶತಾಧಿಪತಿಗೆ#7.2 ಶತಾಧಿಪತಿ ಅಂದರೆ ನೂರು ಸಿಪಾಯಿಗಳ ಮೇಲಿರುವ ಸರದಾರನು. ಇಷ್ಟನಾದ ಒಬ್ಬ ಆಳು ಕ್ಷೇಮವಿಲ್ಲದೆ ಸಾಯುವ ಹಾಗಿದ್ದನು. 3ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ - ನೀನು ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು. 4ಅವರು ಯೇಸುವಿನ ಬಳಿಗೆ ಬಂದು - ನಿನ್ನಿಂದ ಇಂಥ ಉಪಕಾರ ಹೊಂದುವದಕ್ಕೆ ಅವನು ಯೋಗ್ಯನು; 5ಅವನು ನಮ್ಮ ಜನರನ್ನು ಪ್ರೀತಿಸುವವನು, ತಾನೇ ನಮ್ಮ ಸಭಾಮಂದಿರವನ್ನು ನಮಗಾಗಿ ಕಟ್ಟಿಸಿದನು ಎಂದು ಆತನನ್ನು ಬಹಳವಾಗಿ ಬೇಡಿಕೊಳ್ಳಲು 6ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ - ಪ್ರಭುವೇ, ತೊಂದರೆ ತೆಗೆದುಕೊಳ್ಳಬೇಡ; ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ. 7ಈ ಕಾರಣದಿಂದ ನಾನು ನನ್ನನ್ನು ನಿನ್ನ ಬಳಿಗೆ ಬರುವದಕ್ಕೆ ತಕ್ಕವನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀನು ಒಂದು ಮಾತು ಹೇಳು, ನನ್ನ ಆಳಿಗೆ ಗುಣವಾಗುವದು. 8ನಾನು ಸಹ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ಹೋಗು ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ಬಾ ಎಂದು ಹೇಳಿದರೆ ಬರುತ್ತಾನೆ; ನನ್ನ ಆಳಿಗೆ ಇಂಥಿಂಥದನ್ನು ಮಾಡು ಎಂದು ಹೇಳಿದರೆ ಮಾಡುತ್ತಾನೆ ಎಂಬದಾಗಿ ಹೇಳಿಸಿದನು. 9ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ಹಿಂತಿರುಗಿ ನೋಡಿ - ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು. 10ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರಿಗಿ ಮನೆಗೆ ಹೋಗಿ ಆಳು ಆರೋಗ್ಯವಾಗಿರುವದನ್ನು ಕಂಡರು.
ನಾಯಿನೆಂಬ ಊರಿನಲ್ಲಿ ಸತ್ತುಹೋಗಿದ್ದ ಒಬ್ಬ ಯೌವನಸ್ಥನನ್ನು ಯೇಸು ಬದುಕಿಸಿದ್ದು
11ಸ್ವಲ್ಪಕಾಲದ ಮೇಲೆ ಆತನು ನಾಯಿನೆಂಬ ಊರಿಗೆ ಹೋದನು. ಆತನ ಜೊತೆಯಲ್ಲಿ ಆತನ ಶಿಷ್ಯರೂ ಇನ್ನೂ ಅನೇಕ ಜನರೂ ಹೋಗುತ್ತಿದ್ದರು. 12ಆತನು ಊರಬಾಗಿಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊರಗೆ ತರುತ್ತಿದ್ದರು. ಇವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ಗಂಡಸತ್ತವಳಾಗಿದ್ದಳು. ಆಕೆಯ ಸಂಗಡ ಗ್ರಾಮಸ್ಥರು ಅನೇಕರಿದ್ದರು. 13ಸ್ವಾವಿುಯು ಆಕೆಯನ್ನು ಕಂಡು ಕನಿಕರಿಸಿ - ಅಳಬೇಡ ಎಂದು ಆಕೆಗೆ ಹೇಳಿ 14ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು - ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. 15ಅನ್ನುತ್ತಲೇ ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು. 16ಎಲ್ಲರು ಭಯಹಿಡಿದವರಾಗಿ - ಮಹಾ ಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರಿಗೆ ದರ್ಶನವನ್ನು ಅನುಗ್ರಹಿಸಿದ್ದಾನೆ ಎಂದು ದೇವರನ್ನು ಕೊಂಡಾಡುವವರಾದರು. 17ಈ ವಾರ್ತೆಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.
ಸ್ನಾನಿಕನಾದ ಯೋಹಾನನು ಹೇಳಿಕಳುಹಿಸಿದ ಮಾತಿಗೆ ಯೇಸು ಉತ್ತರಕೊಟ್ಟದ್ದು
(ಮತ್ತಾ. 11.2-19)
18ಯೋಹಾನನ ಶಿಷ್ಯರು ನಡೆದ ಸಂಗತಿಗಳನ್ನೆಲ್ಲಾ ಅವನಿಗೆ ತಿಳಿಸಲು 19ಅವನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು - ಬರಬೇಕಾದವನು ನೀನೋ, ನಾವು ಬೇರೊಬ್ಬನ ದಾರಿಯನ್ನು ನೋಡಬೇಕೋ ಎಂದು ಸ್ವಾವಿುಗೆ ಹೇಳಿಕಳುಹಿಸಿದನು. 20ಅವರು ಆತನ ಬಳಿಗೆ ಬಂದು - ಬರಬೇಕಾದವನು ನೀನೋ, ನಾವು ಮತ್ತೊಬ್ಬನ ದಾರಿಯನ್ನು ನೋಡಬೇಕೋ ಎಂದು ಕೇಳುವದಕ್ಕಾಗಿ ಸ್ನಾನಿಕನಾದ ಯೋಹಾನನು ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ ಅಂದರು. 21ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ ಉಪದ್ರವ ದೆವ್ವ ಇಂಥವುಗಳಿಂದ ಬಿಡಿಸಿ ವಾಸಿಮಾಡಿದನು; ಮತ್ತು ಅನೇಕ ಮಂದಿ ಕುರುಡರಿಗೆ ಕಣ್ಣನ್ನು ದಯಪಾಲಿಸಿದನು. 22ಹೀಗಿರಲು ಆತನು ಅವರಿಗೆ ಪ್ರತ್ಯುತ್ತರವಾಗಿ - ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರಿಗೆ ಕಣ್ಣು ಬರುತ್ತವೆ, ಕುಂಟರಿಗೆ ಕಾಲು ಬರುತ್ತವೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿ ಬರುತ್ತವೆ, ಸತ್ತವರು ಜೀವವನ್ನು ಹೊಂದುತ್ತಾರೆ, ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ. 23ನನ್ನ ವಿಷಯದಲ್ಲಿ ಸಂಶಯ ಪಡದವನೇ ಧನ್ಯನು ಎಂದು ಹೇಳಿದನು.
24ಯೋಹಾನನ ದೂತರು ಹಿಂತಿರುಗಿ ಹೋಗಲು ಆತನು ಯೋಹಾನನ ವಿಷಯವಾಗಿ ಆ ಜನರ ಗುಂಪುಗಳಿಗೆ ಹೇಳತೊಡಗಿದ್ದೇನಂದರೆ - ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? 25ಅಲ್ಲವಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಹಾಕಿಕೊಂಡ ಮನುಷ್ಯನನ್ನೋ? ಶೋಭಾಯಮಾನವಾದ ಉಡುಪನ್ನು ಧರಿಸಿ ಭೋಗದಲ್ಲಿ ಬಾಳುವವರು ಅರಮನೆಗಳಲ್ಲಿ ಇರುತ್ತಾರಷ್ಟೆ. 26ಹಾಗಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ ಎಂದು ನಿಮಗೆ ಹೇಳುತ್ತೇನೆ.
27ಇಗೋ, ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸರಿಮಾಡುವನು
ಎಂದು ಯಾರ ವಿಷಯವಾಗಿ ಬರೆದಿದೆಯೋ ಆ ಪುರುಷನು ಇವನೇ. 28ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಯೋಹಾನನಿಗಿಂತ ದೊಡ್ಡವನು ಒಬ್ಬನೂ ಇಲ್ಲ; ಆದರೂ ದೇವರ ರಾಜ್ಯದಲ್ಲಿ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಹೇಳುತ್ತೇನೆ. 29ಇದಲ್ಲದೆ ಜನರೆಲ್ಲರೂ ಸುಂಕದವರೂ ಯೋಹಾನನ ಉಪದೇಶವನ್ನು ಕೇಳಿದಾಗ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಂಡದ್ದರಲ್ಲಿ ದೇವರು ನೀತಿವಂತನೆಂದು ಒಪ್ಪಿಕೊಂಡರು. 30ಆದರೆ ಫರಿಸಾಯರೂ ಧರ್ಮೋಪದೇಶಕರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಲ್ಲಿ ತಮ್ಮ ವಿಷಯವಾಗಿ#7.30 ಅಥವಾ, ಕೇಡಿಗಾಗಿ. ದೇವರ ಸಂಕಲ್ಪವನ್ನು ನಿರಾಕರಿಸಿದರು. 31ಹೀಗಿರುವಲ್ಲಿ ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32ಪೇಟೆಯಲ್ಲಿ ಕೂತುಕೊಂಡು - ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ; ಗೋಳಾಡಿದೆವು, ನೀವು ಅಳಲಿಲ್ಲ ಎಂದು ಒಬ್ಬರಿಗೊಬ್ಬರು ಕೂಗಿ ಹೇಳುವಂಥ ಹುಡುಗರನ್ನು ಹೋಲುತ್ತಾರೆ. 33ಹೇಗಂದರೆ ಸ್ನಾನಿಕನಾದ ಯೋಹಾನನು ಬಂದಿದ್ದಾನೆ; ಅವನು ರೊಟ್ಟಿ ತಿನ್ನದವನು, ದ್ರಾಕ್ಷಾರಸ ಕುಡಿಯದವನು; ನೀವು - ಅವನಿಗೆ ದೆವ್ವ ಹಿಡಿದದೆ ಅನ್ನುತ್ತೀರಿ. 34ಮನುಷ್ಯಕುಮಾರನು ಬಂದಿದ್ದಾನೆ, ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ; ನೀವು - ಇಗೋ, ಇವನು ಹೊಟ್ಟೆಬಾಕನು, ಕುಡುಕನು, ಭ್ರಷ್ಟರ#7.34 ಮೂಲ: ಸುಂಕದವರ. ಮತ್ತು ಪಾಪಿಷ್ಠರ ಗೆಳೆಯನು ಅನ್ನುತ್ತೀರಿ. 35ಆದರೆ ಜ್ಞಾನವು ಸಕಲ ಜ್ಞಾನಾವಲಂಬಿಗಳ ಮೂಲಕ ಜ್ಞಾನವೇ ಎಂದು ಗೊತ್ತಾಗುವದು ಅಂದನು.
ಯೇಸು ಒಬ್ಬ ಫರಿಸಾಯನ ಮನೆಯಲ್ಲಿ ಊಟಮಾಡುವಾಗ ದುರಾಚಾರಿಯಾದ ಒಬ್ಬ ಹೆಂಗಸು ಬಂದು ಆತನ ಪಾದಸೇವೆ ಮಾಡಿದ್ದು
36ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡಾಗ ಆತನು ಆ ಫರಿಸಾಯನ ಮನೆಗೆ ಹೋಗಿ ಊಟಕ್ಕೆ ಒರಗಿಕೊಂಡನು. 37ಆಗ ಆ ಊರಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಒರಗಿದ್ದಾನೆಂದು ಗೊತ್ತುಹಿಡುಕೊಂಡು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು 38ಹಿಂದೆ ಆತನ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತ್ಯಾವಮಾಡಿ ತನ್ನ ತಲೇಕೂದಲಿನಿಂದ ಒರಸಿ ಅವುಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು. 39ಆದರೆ ಆತನನ್ನು ಊಟಕ್ಕೆ ಕರೆದ ಫರಿಸಾಯನು ಇದನ್ನು ಕಂಡು - ಇವಳು ದುರಾಚಾರಿ; ಇವನು ಪ್ರವಾದಿಯಾಗಿದ್ದರೆ#7.39 ಕೆಲವು ಪ್ರತಿಗಳಲ್ಲಿ - ಆ ಪ್ರವಾದಿಯಾಗಿದ್ದರೆ ಎಂದು ಬರೆದದೆ; ಯೋಹಾ. 1.21, 25 ನೋಡಿರಿ. ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳುಕೊಳ್ಳುತ್ತಿದ್ದನು ಅಂದುಕೊಂಡನು. 40ಅದಕ್ಕೆ ಯೇಸು - ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ಮಾತದೆ ಅಂದಾಗ ಅವನು - ಬೋಧಕನೇ, ಹೇಳು ಅಂದನು. 41ಆಗ ಯೇಸು - ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐನೂರು ಹಣ ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಹಣ ಕೊಡಬೇಕಾಗಿತ್ತು. 42ತೀರಿಸುವದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಬಿಟ್ಟುಬಿಟ್ಟನು. ಹಾಗಾದರೆ ಅವರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸಾನು ಎಂದು ಕೇಳಿದ್ದಕ್ಕೆ ಸೀಮೋನನು - 43ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ ಎಂದು ಭಾವಿಸುತ್ತೇನೆ ಅಂದನು. ಯೇಸು ಅವನಿಗೆ - ನೀನು ಸರಿಯಾಗಿ ತೀರ್ಪುಮಾಡಿದಿ ಎಂದು ಹೇಳಿ 44ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ - ಈ ಹೆಂಗಸನ್ನು ನೋಡಿದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ತ್ಯಾವಮಾಡಿ ತನ್ನ ತಲೆಯಕೂದಲಿನಿಂದ ಒರಸಿದಳು. 45ನೀನು ನನಗೆ ಮುದ್ದಿಡಲಿಲ್ಲ; ಇವಳಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಕಾಲಿಗೆ ಮುದ್ದಿಡುವದನ್ನು ಬಿಟ್ಟಿಲ್ಲ. 46ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧತೈಲವನ್ನು ಕಾಲಿಗೆ ಹಚ್ಚಿದಳು. 47ಹೀಗಿರಲು ನಾನು ಹೇಳುವ ಮಾತೇನಂದರೆ - ಇವಳ ಪಾಪಗಳು ಬಹಳವಾಗಿದ್ದರೂ ಅವು ಕ್ಷವಿುಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷವಿುಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ ಅಂದನು. 48ಆಮೇಲೆ ಆತನು ಅವಳಿಗೆ - ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಎಂದು ಹೇಳಿದನು. 49ಆತನ ಸಂಗಡ ಊಟಕ್ಕೆ ಒರಗಿಕೊಂಡವರು - ಪಾಪಗಳನ್ನು ಸಹ ಕ್ಷವಿುಸಿಬಿಡುವವನು ಇವನಾರು ಎಂದು ತಮ್ಮತಮ್ಮೊಳಗೆ ಅಂದುಕೊಂಡರು. 50ಆದರೆ ಆತನು ಆ ಹೆಂಗಸಿಗೆ - ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿ ಅದೆ; ಸಮಾಧಾನದಿಂದ ಹೋಗು ಎಂದು ಹೇಳಿದನು.

Επιλέχθηκαν προς το παρόν:

ಲೂಕ 7: KANJV-BSI

Επισημάνσεις

Κοινοποίηση

Αντιγραφή

None

Θέλετε να αποθηκεύονται οι επισημάνσεις σας σε όλες τις συσκευές σας; Εγγραφείτε ή συνδεθείτε