ಲೂಕ 4
4
ಸೈತಾನನು ಯೇಸುವನ್ನು ಪಾಪದಲ್ಲಿ ಸಿಕ್ಕಿಸುವದಕ್ಕೆ ಪ್ರಯತ್ನಿಸಿದ್ದು
(ಮತ್ತಾ. 4.1-11; ಮಾರ್ಕ. 1.12-13)
1ಯೇಸು ಪವಿತ್ರಾತ್ಮಭರಿತನಾಗಿ ಯೊರ್ದನ್‍ಹೊಳೆಯಿಂದ ಹಿಂತಿರುಗಿ ದೇವರಾತ್ಮನಿಂದ ನಾಲ್ವತ್ತು ದಿವಸ ಅಡವಿಯಲ್ಲಿ ನಡಿಸಲ್ಪಡುತ್ತಾ ಸೈತಾನನಿಂದ ಶೋಧಿಸಲ್ಪಟ್ಟನು. 2ಆ ದಿವಸಗಳಲ್ಲಿ ಆತನು ಏನೂ ತಿನ್ನಲಿಲ್ಲ. ಅವು ಕಳೆದ ಮೇಲೆ ಆತನಿಗೆ ಹಸಿವಾಯಿತು. 3ಆಗ ಸೈತಾನನು ಆತನಿಗೆ - ನೀನು ದೇವರ ಮಗನಾಗಿದ್ದರೆ ಈ ಕಲ್ಲು ರೊಟ್ಟಿಯಾಗುವಂತೆ ಇದಕ್ಕೆ ಅಪ್ಪಣೆಕೊಡು ಎಂದು ಹೇಳಲು 4ಯೇಸು ಅವನಿಗೆ - ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವದಿಲ್ಲ ಎಂದು ಬರೆದದೆ ಎಂತ ಉತ್ತರಕೊಟ್ಟನು.
5ಬಳಿಕ ಸೈತಾನನು ಆತನನ್ನು ಮೇಲಕ್ಕೆ ಕರೆದುಕೊಂಡು ಹೋಗಿ ಕ್ಷಣಮಾತ್ರದಲ್ಲಿ ಲೋಕದ ಎಲ್ಲಾ ರಾಜ್ಯಗಳನ್ನು ಆತನಿಗೆ ತೋರಿಸಿ - 6ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ; 7ನೀನು ನನ್ನ ಮುಂದೆ ಅಡ್ಡಬಿದ್ದರೆ ಇದೆಲ್ಲಾ ನಿನ್ನದಾಗುವದು ಎಂದು ಆತನಿಗೆ ಹೇಳಿದನು. 8ಅದಕ್ಕೆ ಯೇಸು - ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ ಎಂದು ಉತ್ತರಕೊಟ್ಟನು.
9ಇದಲ್ಲದೆ ಅವನು ಆತನನ್ನು ಯೆರೂಸಲೇವಿುಗೆ ಕರೆದುಕೊಂಡು ಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ - ನೀನು ದೇವರ ಮಗನಾಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು.
10ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು;
11ಮತ್ತು ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು
ಎಂಬದಾಗಿ ಬರೆದದೆಯಲ್ಲಾ ಎಂದು ಹೇಳಿದನು. 12ಅದಕ್ಕೆ ಯೇಸು - ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದೆಂದು ಹೇಳಿಯದೆ ಎಂತ ಉತ್ತರಕೊಟ್ಟನು.
13ಸೈತಾನನು ಸಕಲವಿಧವಾದ ಶೋಧನೆಯನ್ನು ಮುಗಿಸಿ ಸ್ವಲ್ಪಕಾಲ ಆತನನ್ನು ಬಿಟ್ಟು ಹೊರಟುಹೋದನು.
ಯೇಸು ಗಲಿಲಾಯದಲ್ಲಿ ಉಪದೇಶಮಾಡಿ ಕೀರ್ತಿಹೊಂದಿದ್ದು
(ಮತ್ತಾ. 4.12-17; ಮಾರ್ಕ. 1.14-15)
14ತರುವಾಯ ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ತಿರಿಗಿ ಗಲಿಲಾಯಕ್ಕೆ ಹೋದನು; ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು. 15ಆತನು ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ಬಂದನು; ಎಲ್ಲರೂ ಆತನನ್ನು ಹೊಗಳಿದರು.
ನಜರೇತಿನವರು ಯೇಸುವನ್ನು ತಳ್ಳಿಬಿಟ್ಟದ್ದು
(ಮತ್ತಾ. 13.54-58; ಮಾರ್ಕ. 6.1-6)
16ಹೀಗಿರಲಾಗಿ ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ವಾಡಿಕೆಯ ಪ್ರಕಾರ ಸಬ್ಬತ್‍ದಿನದಲ್ಲಿ ಸಭಾಮಂದಿರಕ್ಕೆ ಹೋಗಿ ಓದುವದಕ್ಕಾಗಿ ಎದ್ದು ನಿಂತನು. 17ಆಗ ಯೆಶಾಯನೆಂಬ ಪ್ರವಾದಿಯ ಗ್ರಂಥದ ಸುರಳಿಯನ್ನು ಆತನ ಕೈಗೆ ಕೊಡಲಾಗಿ ಆತನು ಆ ಸುರಳಿಯನ್ನು ಬಿಚ್ಚಿ ಮುಂದೆ ಹೇಳುವ ಮಾತು ಬರೆದಿರುವ ಸ್ಥಳವನ್ನು ಕಂಡು ಓದಿದನು; ಆ ಮಾತೇನಂದರೆ -
18ಕರ್ತನ ಆತ್ಮವು ನನ್ನ ಮೇಲೆ ಅದೆ,
ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು,
ಸೆರೆಯವರಿಗೆ ಬಿಡುಗಡೆಯಾಗುವದನ್ನು
ಮತ್ತು ಕುರುಡರಿಗೆ ಕಣ್ಣು ಬರುವದನ್ನು ಪ್ರಸಿದ್ಧಿಪಡಿಸುವದಕ್ಕೂ
ಮನಮುರಿದವರನ್ನು ಬಿಡಿಸಿ ಕಳುಹಿಸುವದಕ್ಕೂ
19ಕರ್ತನು ನೇವಿುಸಿರುವ ಶುಭವರ್ಷವನ್ನು ಪ್ರಚುರಪಡಿಸುವದಕ್ಕೂ
ಆತನು ನನ್ನನ್ನು ಕಳುಹಿಸಿದ್ದಾನೆ ಎಂಬದು.
20ಓದಿದ ಮೇಲೆ ಆತನು ಆ ಸುರಳಿಯನ್ನು ಸುತ್ತಿ ಸಭಾಮಂದಿರದ ಆಳಿನ ಕೈಗೆ ಕೊಟ್ಟು ಕೂತುಕೊಂಡನು. ಅಲ್ಲಿದ್ದವರೆಲ್ಲರ ಕಣ್ಣುಗಳು ಆತನ ಮೇಲೆಯೇ ಬಿದ್ದಿರಲಾಗಿ 21ಆತನು ಅವರಿಗೆ - ಈ ಹೊತ್ತು ನೀವು#4.21 ಅಥವಾ, ನೀವು ಸುದ್ದಿ ಕೇಳಿದ ಪ್ರಕಾರ; ಮೂಲ: ನಿಮ್ಮ ಕಿವಿಗಳಲ್ಲಿ. ನನ್ನ ಮಾತನ್ನು ಕೇಳುವಲ್ಲಿ ಈ ವೇದೋಕ್ತಿ ನೆರವೇರಿದೆ ಎಂದು ಹೇಳುತ್ತಿರುವಾಗ 22ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು ಇವನು ಯೋಸೇಫನ ಮಗನಲ್ಲವೇ ಎಂದು ಮಾತಾಡಿಕೊಂಡರು. 23ಆತನು ಅವರಿಗೆ - ನೀವಂತೂ ವೈದ್ಯನೇ, ನಿನ್ನನ್ನೇ ವಾಸಿಮಾಡಿಕೋ ಎಂಬ ಗಾದೆಯನ್ನು ನನಗೆ ಹೇಳಿ ಕಪೆರ್ನೌವಿುನಲ್ಲಿ ಎಂಥೆಂಥ ಕಾರ್ಯಗಳು ನಡೆದವೆಂದು ನಾವು ಕೇಳಿದೆವೋ ಅಂಥವುಗಳನ್ನು ಈ ನಿನ್ನ ಸ್ವಂತ ಸ್ಥಳದಲ್ಲಿ ಮಾಡು ಅನ್ನುವಿರಷ್ಟೆ. 24ಆದರೆ ಯಾವ ಪ್ರವಾದಿಯೂ ಸ್ವದೇಶದಲ್ಲಿ ಸಮ್ಮತನಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 25ಕೇಳಿರಿ, ಎಲೀಯನ ಕಾಲದಲ್ಲಿ ಮೂರು ವರುಷ ಆರು ತಿಂಗಳು ಮಳೆಬಾರದೆ ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ ಇಸ್ರಾಯೇಲ್ ಜನರಲ್ಲಿ ಎಷ್ಟೋ ಮಂದಿ ವಿಧವೆಯರು ಇದ್ದದ್ದು ನಿಜ; 26ಆದರೆ ಅವರಲ್ಲಿ ಒಬ್ಬರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ ಸೀದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದನು. 27ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಎಷ್ಟೋ ಮಂದಿ ಕುಷ್ಠರೋಗಿಗಳು ಇದ್ದಾಗ್ಯೂ ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸುರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು ಎಂದು ಹೇಳಿದನು. 28ಸಭಾಮಂದಿರದಲ್ಲಿರುವವರೆಲ್ಲರು ಈ ಮಾತುಗಳನ್ನು ಕೇಳಿ ಬಹಳವಾಗಿ ಸಿಟ್ಟುಗೊಂಡು ಎದ್ದು ಆತನನ್ನು ಊರಹೊರಕ್ಕೆ ಅಟ್ಟಿ 29ತಮ್ಮ ಊರು ಕಟ್ಟಿದ್ದ ಗುಡ್ಡದ ಕಡಿದಾದ ಸ್ಥಳಕ್ಕೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಬೇಕೆಂದಿದ್ದರು. 30ಆದರೆ ಆತನು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.
ಯೇಸು ಕಪೆರ್ನೌಮೆಂಬ ಊರಿನಲ್ಲಿ ದೆವ್ವಗಳನ್ನು ಬಿಡಿಸಿ ರೋಗಿಗಳನ್ನು ಸ್ವಸ್ಥಮಾಡಿದ್ದು
(ಮತ್ತಾ. 8.14-17; ಮಾರ್ಕ. 1.21-39)
31ಬಳಿಕ ಆತನು ಗಟ್ಟಾ ಇಳಿದು ಗಲಿಲಾಯಕ್ಕೆ ಸೇರಿದ ಕಪೆರ್ನೌಮೆಂಬ ಊರಿಗೆ ಬಂದನು. 32ಅಲ್ಲಿ ಸಬ್ಬತ್‍ದಿನದಲ್ಲಿ ಅವರಿಗೆ ಉಪದೇಶ ಮಾಡುತ್ತಿರಲು ಆತನ ಮಾತು ಅಧಿಕಾರವುಳ್ಳದ್ದಾಗಿದ್ದದರಿಂದ ಅವರು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು. 33ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. 34ಆ ದೆವ್ವವು - ಹಾ! ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕೆ ಬಂದೆಯಾ? ನಿನ್ನನ್ನು ಬಲ್ಲೆನು. ನೀನು ದೇವರು ಪ್ರತಿಷ್ಠಿಸಿದವನೇ ಎಂದು ಅಬ್ಬರಿಸಿ ಹೇಳಿತು. 35ಯೇಸು ಅದನ್ನು ಗದರಿಸಿ - ಸುಮ್ಮನಿರು, ಇವನನ್ನು ಬಿಟ್ಟುಹೋಗು ಎನ್ನಲಾಗಿ ಆ ದೆವ್ವವು ಅವನನ್ನು ನಡುವೆ ಕೆಡವಿ ಅವನಿಗೆ ಯಾವ ಕೇಡನ್ನೂ ಮಾಡದೆ ಬಿಟ್ಟುಹೋಯಿತು. 36ಅದಕ್ಕೆ ಎಲ್ಲರು ಬೆರಗಾಗಿ - ಇದೆಂಥ ಮಾತಾಗಿರಬಹುದು? ಈತನು ಅಧಿಕಾರದಿಂದಲೂ ಬಲದಿಂದಲೂ ದೆವ್ವಗಳಿಗೆ ಅಪ್ಪಣೆ ಕೊಡುತ್ತಾನೆ, ಅವು ಬಿಟ್ಟುಹೋಗುತ್ತವೆ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. 37ಮತ್ತು ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದ ಊರುಗಳಲ್ಲೆಲ್ಲಾ ಹಬ್ಬಿತು.
38ಆತನು ಸಭಾಮಂದಿರದಿಂದೆದ್ದು ಸೀಮೋನನ ಮನೆಗೆ ಬಂದನು. ಅಲ್ಲಿ ಸೀಮೋನನ ಅತ್ತೆಯು ಕಠಿನ ಜ್ವರದಿಂದ ಬಹಳ ಕಷ್ಟಪಡುತ್ತಿರಲಾಗಿ ಆಕೆಯ ವಿಷಯದಲ್ಲಿ ಆತನನ್ನು ಬೇಡಿಕೊಂಡರು. 39ಆತನು ಆಕೆಯ ಬಳಿ ನಿಂತು ಬಾಗಿ ಆ ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೆ ಆಕೆಯು ಎದ್ದು ಅವರಿಗೆ ಉಪಚಾರ ಮಾಡಿದಳು.
40ಹೊತ್ತು ಮುಣುಗುವಾಗ ಆದದ್ದೇನಂದರೆ ಯಾರಾರ ಮನೆಯಲ್ಲಿ ತರತರದ ರೋಗಗಳಿಂದ ಅಸ್ವಸ್ಥವಾದವರಿದ್ದರೋ ಅವರೆಲ್ಲರು ಆ ರೋಗಿಗಳನ್ನು ಆತನ ಹತ್ತಿರಕ್ಕೆ ಕರಕೊಂಡು ಬಂದರು; ಆತನು ಪ್ರತಿಯೊಬ್ಬನ ಮೇಲೆಯೂ ಕೈಯಿಟ್ಟು ಅವರನ್ನು ವಾಸಿಮಾಡಿದನು. 41ದೆವ್ವಗಳು ಸಹ - ನೀನು ದೇವರ ಕುಮಾರನು ಎಂದು ಅಬ್ಬರಿಸಿ ಅನೇಕರನ್ನು ಬಿಟ್ಟು ಹೋದವು. ತಾನು ಕ್ರಿಸ್ತನೆಂದು ಅವುಗಳಿಗೆ ತಿಳಿದದ್ದರಿಂದ ಆತನು ಅವುಗಳನ್ನು ಮಾತಾಡದಂತೆ ಗದರಿಸಿದನು.
42ಬೆಳಗಾದ ಮೇಲೆ ಆತನು ಹೊರಟು ಅಡವಿಯ ಸ್ಥಳಕ್ಕೆ ಹೋದನು; ಜನರು ಗುಂಪುಗುಂಪಾಗಿ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು - ನೀನು ನಮ್ಮನ್ನು ಬಿಟ್ಟುಹೋಗಬೇಡ ಎಂದು ಆತನನ್ನು ತಡೆದರು. 43ಆದರೆ ಆತನು ಅವರಿಗೆ - ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ ಎಂದು ಹೇಳಿದನು.
44ಬಳಿಕ ಆತನು ಯೂದಾಯ#4.44 ಕೆಲವು ಪ್ರತಿಗಳಲ್ಲಿ - ಗಲಿಲಾಯದ ಎಂದು ಬರೆದದೆ. ದೇಶದ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಇದ್ದನು.
Επιλέχθηκαν προς το παρόν:
ಲೂಕ 4: KANJV-BSI
Επισημάνσεις
Κοινοποίηση
Αντιγραφή
Θέλετε να αποθηκεύονται οι επισημάνσεις σας σε όλες τις συσκευές σας; Εγγραφείτε ή συνδεθείτε
Kannada J.V. Bible © The Bible Society of India, 2016.
Used by permission. All rights reserved worldwide.