ಲೂಕ 10
10
ಯೇಸು ಎಪ್ಪತ್ತು ಮಂದಿ ಶಿಷ್ಯರನ್ನು ಸುವಾರ್ತೆ ಸಾರುವದಕ್ಕೆ ಕಳುಹಿಸಿದ್ದು; ಅವರು ಹಿಂತಿರುಗಿ ಬಂದು ತಾವು ಮಾಡಿದ್ದನ್ನು ತಿಳಿಸಿದ್ದು
(ಮತ್ತಾ. 9.37,38, 10.7-16, 11.25-27)
1ಇದಾದ ಮೇಲೆ ಸ್ವಾವಿುಯು ಇನ್ನೂ ಎಪ್ಪತ್ತು#10.1 ಇಲ್ಲಿಯೂ 17ನೆಯ ವಚನದಲ್ಲಿಯೂ ಕೆಲವು ಪ್ರತಿಗಳೊಳಗೆ - ಎಪ್ಪತ್ತೆರಡು ಎಂದು ಬರೆದದೆ. ಮಂದಿಯನ್ನು ನೇವಿುಸಿ ಅವರನ್ನು ಇಬ್ಬಿಬ್ಬರಾಗಿ 2ತಾನು ಹೋಗಬೇಕೆಂದಿದ್ದ ಪ್ರತಿಯೊಂದೂರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು. ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ - ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು - ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ. 3ಹೋಗಿರಿ; ತೋಳಗಳ ನಡುವೆ ಕುರಿಮರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ ನೋಡಿರಿ. 4ಹಣದ ಚೀಲವನ್ನಾಗಲಿ ಹಸಿಬೆಯನ್ನಾಗಲಿ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ. 5ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ - ಈ ಮನೆಗೆ ಶುಭವಾಗಲಿ ಎಂದು ಮೊದಲು ಹೇಳಿರಿ. 6ಆಶೀರ್ವಾದಪಾತ್ರನು ಅಲ್ಲಿ ಇದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನಿಲ್ಲುವದು; ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವದು. 7ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನ ಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿ ಇಳುಕೊಳ್ಳಬೇಡಿರಿ. 8ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ. 9ಅಲ್ಲಿರುವ ರೋಗಿಗಳಿಗೆ ವಾಸಿಮಾಡಿ ಅವರಿಗೆ - ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದದೆ ಎಂದು ಹೇಳಿರಿ. 10ಆದರೆ ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ನೀವು ಆ ಊರ ಬೀದಿಗಳಿಗೆ ಬಂದು - 11ನಿಮ್ಮ ಊರಿಂದ ನಮ್ಮ ಕಾಲುಗಳಿಗೆ ಹತ್ತಿದ ಧೂಳನ್ನೂ ಒರಸಿಬಿಡುತ್ತೇವೆ; ಅದು ನಿಮಗೇ ಇರಲಿ; ಆದಾಗ್ಯೂ ದೇವರ ರಾಜ್ಯವು ಸಮೀಪಕ್ಕೆ ಬಂದದೆ ಎಂದು ನಿಮಗೆ ತಿಳಿದಿರಲಿ ಎಂಬದಾಗಿ ಹೇಳಿರಿ. 12ಆ ದಿವಸದಲ್ಲಿ ಅಂಥ ಊರಿನ ಗತಿಯು ಸೊದೋಮೂರಿನ ಗತಿಗಿಂತಲೂ ಕಠಿಣವಾಗಿರುವದು ಎಂದು ನಿಮಗೆ ಹೇಳುತ್ತೇನೆ. 13ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. 14ಆದರೆ ನ್ಯಾಯವಿಚಾರಣೆಯಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವದು. 15ಎಲಾ ಕಪೆರ್ನೌಮೇ, ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? ಪಾತಾಳಕ್ಕೇ ಇಳಿಯುವಿ. 16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನು ಅಲಕ್ಷ್ಯಮಾಡುವವನಾಗಿದ್ದಾನೆ; ನನ್ನನ್ನು ಅಲಕ್ಷ್ಯಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಅಲಕ್ಷ್ಯಮಾಡುವವನಾಗಿದ್ದಾನೆ ಅಂದನು.
17ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು - ಸ್ವಾಮೀ, ದೆವ್ವಗಳು ಕೂಡಾ ನಿನ್ನ ಹೆಸರನ್ನು ಕೇಳಿ ನಮಗೆ ಅಧೀನವಾಗುತ್ತವೆ ಅಂದರು. 18ಆತನು ಅವರಿಗೆ - ಸೈತಾನನು ಸಿಡಿಲಿನಂತೆ ಆಕಾಶದಿಂದ ಬೀಳುವದನ್ನು ಕಂಡೆನು. 19ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವದೂ ನಿಮಗೆ ಕೇಡುಮಾಡುವದೇ ಇಲ್ಲ. 20ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ ಎಂಬದಾಗಿ ಹೇಳಿದನು.
21ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನ ಪ್ರೇರಣೆಯಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ - ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವದೇ ಒಳ್ಳೇದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. 22ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ಮಗನು ಇಂಥವನೆಂದು ತಂದೆಯೇ ಹೊರತು ಇನ್ಯಾವನೂ ತಿಳಿದವನಲ್ಲ; ತಂದೆ ಇಂಥವನೆಂದು ಮಗನೇ ಹೊರತು ಇನ್ನಾವನೂ ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ ಅಂದನು. 23ಆಮೇಲೆ ಆತನು ಶಿಷ್ಯರ ಕಡೆಗೆ ತಿರುಗಿಕೊಂಡು ವಿಂಗಡವಾಗಿ ಹೇಳಿದ್ದೇನಂದರೆ - ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು. ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು 24ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ, ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ ಎಂಬದಾಗಿ ನಿಮಗೆ ಹೇಳುತ್ತೇನೆ ಅಂದನು.
ಯೇಸು ಕರುಣೆಯುಳ್ಳ ಸಮಾರ್ಯದವನ ದೃಷ್ಟಾಂತವನ್ನು ಹೇಳಿದ್ದು
25ಆಗ ಒಬ್ಬ ಧರ್ಮೋಪದೇಶಕನು ಎದ್ದು ಆತನನ್ನು ಪರೀಕ್ಷಿಸುವದಕ್ಕಾಗಿ - ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು ಎಂದು ಕೇಳಲು 26ಆತನು ಅವನಿಗೆ - ಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ? ಎಂದು ಹೇಳಿದನು. 27ಅದಕ್ಕೆ ಅವನು - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು. ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದು ಬರೆದದೆ ಅಂದನು. 28ಆತನು ಅವನಿಗೆ - ನೀನು ಸರಿಯಾಗಿ ಉತ್ತರಕೊಟ್ಟಿ; ಇದರಂತೆ ಮಾಡು, ಮಾಡಿದರೆ ಜೀವಿಸುವಿ ಎಂದು ಹೇಳಿದನು. 29ಆದರೆ ಅವನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳುವದಕ್ಕೆ ಅಪೇಕ್ಷಿಸಿ - ನನ್ನ ನೆರೆಯವನು ಯಾರು ಎಂದು ಯೇಸುವನ್ನು ಕೇಳಲು 30ಯೇಸು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ - ಒಬ್ಬಾನೊಬ್ಬ ಮನುಷ್ಯನು ಯೆರೂಸಲೇವಿುನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. 31ಆಗ ಹೇಗೋ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು. 32ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು. 33ಆದರೆ ಒಬ್ಬ ಸಮಾರ್ಯದವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದು ಅವನನ್ನು ಕಂಡು 34ಕನಿಕರಿಸಿ ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. 35ಮರುದಿನ ಅವನು ಎರಡು ಹಣಗಳನ್ನು ತೆಗೆದು ಛತ್ರದವನಿಗೆ ಕೊಟ್ಟು - ಇವನನ್ನು ಆರೈಕೆಮಾಡು; ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು ಅಂದನು. 36ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು ಎಂದು ಕೇಳಿದ್ದಕ್ಕೆ 37ಆ ಧರ್ಮೋಪದೇಶಕನು - ಅವನಿಗೆ ದಯತೋರಿಸಿದವನೇ ಅಂದನು. ಆಗ ಯೇಸು ಅವನಿಗೆ - ಹೋಗು, ನೀನೂ ಅದರಂತೆ ಮಾಡು ಎಂದು ಹೇಳಿದನು.
ಮಾರ್ಥಳು ಮರಿಯಳು ಎಂಬವರ ಮನೆಯಲ್ಲಿ ಯೇಸು ಇಳುಕೊಂಡದ್ದು
38ಅವರು ಸಂಚಾರಮಾಡುತ್ತಿರುವಾಗ ಆತನು ಒಂದಾನೊಂದು ಹಳ್ಳಿಗೆ ಬಂದನು; ಅಲ್ಲಿ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯಲ್ಲಿ ಇಳಿಸಿಕೊಂಡಳು. 39ಆಕೆಗೆ ಮರಿಯಳೆಂಬ ಒಬ್ಬ ತಂಗಿ ಇದ್ದಳು. ಈಕೆಯು ಸ್ವಾವಿುಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ವಾಕ್ಯವನ್ನು ಕೇಳುತ್ತಿದ್ದಳು. 40ಆದರೆ ಮಾರ್ಥಳು ಬಹಳ ಸೇವೆಯ ವಿಷಯವಾಗಿ ಬೇಸತ್ತು ಆತನ ಬಳಿಗೆ ಬಂದು - ಸ್ವಾಮೀ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು ಅಂದಳು. 41ಸ್ವಾವಿುಯು ಆಕೆಗೆ - ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. 42ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ,#10.42 ಕೆಲವು ಪ್ರತಿಗಳಲ್ಲಿ - ಬೇಕಾದದ್ದು ಒಂದೇ ಎಂದು ಬರೆದದೆ. ಕೀರ್ತ. 27.4; ಮಾರ್ಕ. 10.21 ನೋಡಿರಿ. ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಎಂದು ಉತ್ತರಕೊಟ್ಟನು.
Επιλέχθηκαν προς το παρόν:
ಲೂಕ 10: KANJV-BSI
Επισημάνσεις
Κοινοποίηση
Αντιγραφή
Θέλετε να αποθηκεύονται οι επισημάνσεις σας σε όλες τις συσκευές σας; Εγγραφείτε ή συνδεθείτε
Kannada J.V. Bible © The Bible Society of India, 2016.
Used by permission. All rights reserved worldwide.