Λογότυπο YouVersion
Εικονίδιο αναζήτησης

ಆದಿಕಾಂಡ 8

8
1ತರುವಾಯ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಮೃಗಪಶುಗಳನ್ನೂ ನೆನಪಿಗೆ ತಂದುಕೊಂಡು ಭೂಲೋಕದ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು. 2ಭೂವಿುಯ ಕೆಳಗಿರುವ ಸಾಗರದ ಸೆಲೆಗಳೂ ಆಕಾಶದ ತೂಬುಗಳೂ ಮುಚ್ಚಿಹೋದವು. ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತುಹೋಯಿತು. ಆಗ ಭೂವಿುಯ ಮೇಲಿದ್ದ ನೀರು ಕ್ರಮವಾಗಿ ತಗ್ಗುತ್ತಾ ಬಂತು. 3ಹೀಗೆ ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆಯಾಯಿತು.
4ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಸೀಮೆಯ ಬೆಟ್ಟಗಳಲ್ಲಿ ನಿಂತಿತು. 5ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆ ಕಡಿಮೆಯಾಗುತ್ತಾ ಬಂತು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಬಂದವು.
6ನಾಲ್ವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು ಕಾಗೆಯನ್ನು ಹೊರಕ್ಕೆ ಬಿಟ್ಟನು. 7ಭೂವಿುಯ ಮೇಲಿದ್ದ ನೀರು ಒಣಗುವ ತನಕ ಆ ಕಾಗೆ ಹೋಗುತ್ತಾ ಬರುತ್ತಾ ಇತ್ತು. 8ಹೀಗಿರಲಾಗಿ ನೀರು ಇಳಿಯಿತೋ ಇಲ್ಲವೋ ಎಂದು ತಿಳುಕೊಳ್ಳುವದಕ್ಕೆ ನೋಹನು ಪಾರಿವಾಳವನ್ನು ಹೊರಕ್ಕೆ ಬಿಟ್ಟನು. 9ನೀರು ಭೂವಿುಯ ಮೇಲೆಲ್ಲಾ ಇರುವದರಿಂದ ಪಾರಿವಾಳವು ಕಾಲಿಡುವದಕ್ಕೆ ಸ್ಥಳವನ್ನು ಎಲ್ಲಿಯೂ ಕಾಣದೆ ತಿರಿಗಿ ನಾವೆಗೆ ಬಂತು. ನೋಹನು ಕೈಚಾಚಿ ಅದನ್ನು ಹಿಡಿದು ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು. 10ಅವನು ಇನ್ನೂ ಏಳು ದಿವಸ ತಡೆದು ಪಾರಿವಾಳವನ್ನು ತಿರಿಗಿ ಹೊರಕ್ಕೆ ಬಿಟ್ಟನು. 11ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರಿಗಿ ಬರಲು, ಆಹಾ, ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂವಿುಯ ಮೇಲಿಂದ ಹರಿದು ಇಳಿದು ಹೋಯಿತು ಎಂದು ತಿಳುಕೊಂಡನು. 12ಮತ್ತೇಳು ದಿವಸದ ಮೇಲೆ ಪಾರಿವಾಳವನ್ನು ಬಿಡಲು ಅದು ಅವನ ಬಳಿಗೆ ತಿರಿಗಿ ಬರಲೇ ಇಲ್ಲ. 13ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಭೂವಿುಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಸಣಿಗೆಯನ್ನು ತೆಗೆದು ನೋಡಲಾಗಿ, ಆಹಾ, ಭೂವಿುಯು ಆರಿಹೋಗಿತ್ತು. 14ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂವಿುಯು ಒಣಗಿತ್ತು.
15,16ಆಗ ದೇವರು ನೋಹನಿಗೆ - ನೀನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ; 17ನಿನ್ನ ಬಳಿಯಲ್ಲಿರುವ ಪಶು, ಪಕ್ಷಿ, ಕ್ರಿವಿು ಮುಂತಾದ ಎಲ್ಲಾ ಜೀವಿಗಳೂ ಹೊರಗೆ ಬರಲಿ; ಅವುಗಳಿಗೆ ಭೂವಿುಯ ಮೇಲೆ ಬಹುಸಂತಾನವಾಗಲಿ; ಅವು ಅಭಿವೃದ್ಧಿಯಾಗಿ ಹೆಚ್ಚಲಿ ಎಂದು ಆಜ್ಞಾಪಿಸಲು 18ನೋಹನು ಹೆಂಡತಿ - ಮಕ್ಕಳು ಸೊಸೆಯರು ಸಹಿತವಾಗಿ ಹೊರಗೆ ಬಂದನು. 19ಮೃಗ ಪಶುಪಕ್ಷಿಕ್ರಿವಿುಗಳೆಲ್ಲವು ತಮ್ಮ ತಮ್ಮ ಜಾತಿಗನುಸಾರವಾಗಿ ನಾವೆಯಿಂದ ಹೊರಗೆ ಬಂದವು.
20ಆಗ ನೋಹನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಮಾಡಿ ಅದರ ಮೇಲೆ ಶುದ್ಧವಾದ ಎಲ್ಲಾ ಪಶುಪಕ್ಷಿಜಾತಿಗಳಲ್ಲಿ ಸರ್ವಾಂಗಹೋಮ ಮಾಡಿದನು. 21ಅದರ ಸುವಾಸನೆಯು ಯೆಹೋವನಿಗೆ ಗಮಗವಿುಸಲು ಆತನು ಹೃದಯದೊಳಗೆ - ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು; ಆದರೂ ನಾನು ಇನ್ನು ಮೇಲೆ ಅವರ ನಿವಿುತ್ತವಾಗಿ ಭೂವಿುಯನ್ನು ಶಪಿಸುವದಿಲ್ಲ; ನಾನು ಎಲ್ಲಾ ಜೀವಿಗಳನ್ನೂ ಈಗ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವದಿಲ್ಲ. 22ಭೂವಿುಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಹಗಲೂ ಇರುಳೂ ಇವುಗಳ ಕ್ರಮ ತಪ್ಪುವದೇ ಇಲ್ಲ ಅಂದುಕೊಂಡನು.

Επιλέχθηκαν προς το παρόν:

ಆದಿಕಾಂಡ 8: KANJV-BSI

Επισημάνσεις

Κοινοποίηση

Αντιγραφή

None

Θέλετε να αποθηκεύονται οι επισημάνσεις σας σε όλες τις συσκευές σας; Εγγραφείτε ή συνδεθείτε