ಯೋಹಾನ 5
5
ಯೇಸು ಸಬ್ಬತ್‍ದಿನದಲ್ಲಿ ಒಬ್ಬ ರೋಗಿಯನ್ನು ಸ್ವಸ್ಥಮಾಡಿದ್ದರಿಂದ ಯೆಹೂದ್ಯರು ಆತನನ್ನು ವಿರೋಧಿಸಿದ್ದು
1ಇದಾದ ಮೇಲೆ ಯೆಹೂದ್ಯರದೊಂದು ಜಾತ್ರೆ ಬಂದದರಿಂದ ಯೇಸು ಯೆರೂಸಲೇವಿುಗೆ ಹೋದನು. 2ಯೆರೂಸಲೇವಿುನಲ್ಲಿ ಕುರೀ ಅಗಸೇಬಾಗಲಿನ ಹತ್ತಿರದಲ್ಲಿ ಒಂದು ಕೊಳವಿದೆ; ಇದಕ್ಕೆ ಇಬ್ರಿಯ ಮಾತಿನಲ್ಲಿ ಬೇತ್ಸಥಾ#5.2 ಕೆಲವು ಪ್ರತಿಗಳಲ್ಲಿ ಬೇತ್ಸಾಯಿದವೆಂದು, ಬೇರೆ ಕೆಲವು ಪ್ರತಿಗಳಲ್ಲಿ ಬೇಥೆಸ್ಥ ಎಂದು ಬರೆದಿದೆ. ಎಂದು ಹೆಸರು. 3ಅಲ್ಲಿ ಐದು ಮಂಟಪಗಳಿವೆ; ಇವುಗಳಲ್ಲಿ ಬಹುಮಂದಿ ರೋಗಿಗಳೂ ಕುರುಡರೂ ಕುಂಟರೂ ಮೈಒಣಗಿದವರೂ ಬಿದ್ದುಕೊಂಡಿರುವರು.#5.3 ಕೆಲವು ಪ್ರತಿಗಳಲ್ಲಿ ಇನ್ನೂ ಬರೆದಿರುವದೇನಂದರೆ - ಇವರು ನೀರು ಉಕ್ಕುವದನ್ನು ಕಾದುಕೊಂಡಿರುವರು. (4) ಒಬ್ಬ ದೇವದೂತನು ಆಗಾಗ್ಗೆ ಕೊಳದಲ್ಲಿ ಇಳಿದುಬಂದು ನೀರನ್ನು ಉಕ್ಕಿಸುವನು; ನೀರನ್ನು ಉಕ್ಕಿಸಿದ ಮೇಲೆ ಮೊದಲು ಒಳಗೆ ಹೋದವನು ಯಾವ ರೋಗದಲ್ಲಿ ಬಿದ್ದಿದ್ದರೂ ಸ್ವಸ್ಥವಾಗುವನು. 5ಅಲ್ಲಿ ಮೂವತ್ತೆಂಟು ವರುಷದಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು. 6ಅವನು ಬಿದ್ದಿರುವದನ್ನು ಯೇಸು ಕಂಡು ಇವನು ಹೀಗಾಗಿ ಬಹು ಕಾಲವಾಗಿದೆ ಎಂದು ತಿಳಿದು - ನಿನಗೆ ಸ್ವಸ್ಥವಾಗಲಿಕ್ಕೆ ಮನಸ್ಸುಂಟೋ? ಎಂದು ಅವನನ್ನು ಕೇಳಿದ್ದಕ್ಕೆ 7ಆ ರೋಗಿಯು - ಸ್ವಾಮೀ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವವರು ಒಬ್ಬರೂ ಇಲ್ಲ; ನಾನು ಬರುವದರೊಳಗೆ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ ಅಂದನು. 8ಯೇಸು ಅವನಿಗೆ - ಎದ್ದು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ಎಂದು ಹೇಳಿದನು. 9ಆ ಕ್ಷಣವೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆದನು.
10ಆದರೆ ಆ ದಿವಸ ಸಬ್ಬತ್‍ದಿನವಾಗಿತ್ತು; ಹೀಗಿರುವದರಿಂದ ಯೆಹೂದ್ಯರು ಸ್ವಸ್ಥವಾದವನಿಗೆ - ಈ ಹೊತ್ತು ಸಬ್ಬತ್‍ದಿನವಾಗಿದೆ; ನೀನು ಹಾಸಿಗೆಯನ್ನು ಹೊರುವದು ಸರಿಯಲ್ಲವೆಂದು ಹೇಳಿದ್ದಕ್ಕೆ 11ಅವನು - ನನ್ನನ್ನು ಸ್ವಸ್ಥಮಾಡಿದವನೇ ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ಎಂದು ನನಗೆ ಹೇಳಿದನು ಅಂದನು. 12ಹೊತ್ತುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರೆಂದು ಅವನನ್ನು ಕೇಳಿದರು. 13ಆದರೆ ಅವನಾರೆಂಬದು ಸ್ವಸ್ಥವಾದವನಿಗೆ ತಿಳಿದಿರಲಿಲ್ಲ; ಆ ಸ್ಥಳದಲ್ಲಿ ಜನರ ಗುಂಪು ಇದ್ದದರಿಂದ ಯೇಸು ಸರಕೊಂಡುಹೋಗಿದ್ದನು. 14ಇದಾದ ಮೇಲೆ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು - ನಿನಗೆ ಸ್ವಸ್ಥವಾಯಿತಲ್ಲಾ; ಇನ್ನು ಮೇಲೆ ಪಾಪಮಾಡಬೇಡ; ನಿನಗೆ ಹೆಚ್ಚಿನ ಕೇಡು ಬಂದೀತು ಅಂದನು. 15ಆ ಮನುಷ್ಯನು ಅಲ್ಲಿಂದ ಹೋಗಿ - ನನ್ನನ್ನು ಸ್ವಸ್ಥಮಾಡಿದವನು ಯೇಸುವೇ ಎಂದು ಯೆಹೂದ್ಯರಿಗೆ ತಿಳಿಸಿದನು. 16ಆದಕಾರಣ ಯೆಹೂದ್ಯರು - ಯೇಸು ಸಬ್ಬತ್‍ದಿನದಲ್ಲಿ ಇಂಥ ಕೆಲಸಗಳನ್ನು ಮಾಡುತ್ತಾನಲ್ಲಾ ಎಂದು ಆತನನ್ನು ಹಿಂಸಿಸುವವರಾದರು. 17ಅದಕ್ಕೆ ಯೇಸು - ನನ್ನ ತಂದೆಯು ಇಂದಿನವರೆಗೂ ಕೆಲಸಮಾಡುತ್ತಾನೆ, ನಾನೂ ಕೆಲಸಮಾಡುತ್ತೇನೆ ಅಂದನು. 18ಈ ಮಾತನ್ನು ಹೇಳಿದ್ದರಿಂದ ಆತನು ಸಬ್ಬತ್‍ದಿನವನ್ನು ಅಲಕ್ಷ್ಯಮಾಡಿದ್ದಲ್ಲದೆ ದೇವರನ್ನು ತನ್ನ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಗಟ್ಟಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಮತ್ತಷ್ಟು ಪ್ರಯತ್ನಮಾಡಿದರು.
ದೇವಕುಮಾರನ ಅಧಿಕಾರವನ್ನು ಕುರಿತು ಮತ್ತು ಆತನಿಗಿರುವ ಸಾಕ್ಷಿಯನ್ನು ಕುರಿತು ಯೇಸು ಮಾಡಿದ ಉಪದೇಶ
19ಅದಕ್ಕೆ ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ. 20ತಂದೆಯು ಮಗನ ಮೇಲೆ ಮಮತೆಯಿಟ್ಟು ತಾನು ಮಾಡುವವುಗಳನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ದೊಡ್ಡ ಕೆಲಸಗಳನ್ನು ಅವನಿಗೆ ತೋರಿಸುವನು; ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವದು. 21ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆಂದು ತಿಳುಕೊಳ್ಳಿರಿ. 22ಇದಲ್ಲದೆ ತಂದೆಯು ಯಾರಿಗೂ ತೀರ್ಪುಮಾಡುವದೂ ಇಲ್ಲ; ತೀರ್ಪುಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ; 23ಎಲ್ಲರು ತನಗೆ ಮಾನ ಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತಂದೆಯು ಇಚ್ಫೈಸುತ್ತಾನೆ. ಮಗನಿಗೆ ಮಾನಕೊಡದವನು ಅವನನ್ನು ಕಳುಹಿಸಿದ ತಂದೆಗೂ ಮಾನಕೊಡದವನಾಗಿದ್ದಾನೆ. 24ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಮರಣದಿಂದ ಪಾರಾಗಿ ಜೀವಕ್ಕೆ ಸೇರಿದ್ದಾನೆ. 25ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಕಾಲ ಬರುತ್ತದೆ, ಈಗಲೇ ಬಂದಿದೆ; ಕೇಳಿದವರು ಬದುಕುವರು. 26ತಂದೆಯು ತಾನು ಹೇಗೆ ಸ್ವತಃಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃಜೀವವುಳ್ಳವನಾಗಿರುವಂತೆ ಮಾಡಿದನು. 27ಮತ್ತು ಮಗನು ಮನುಷ್ಯಕುಮಾರನಾಗಿರುವದರಿಂದ ತೀರ್ಪುಮಾಡುವ ಅಧಿಕಾರವನ್ನೂ ಅವನಿಗೆ ಕೊಟ್ಟನು. 28ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ 29ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವದು; ಕೆಟ್ಟದ್ದನ್ನು ನಡಿಸಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವದು.
30ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯತೀರಿಸುತ್ತೇನೆ; ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ. 31ನನ್ನ ವಿಷಯವಾಗಿ ನಾನೇ ಸಾಕ್ಷಿ ಹೇಳಿಕೊಂಡರೆ ನನ್ನ ಸಾಕ್ಷಿ ನಿಜವಾಗದು. 32ನನ್ನ ವಿಷಯವಾಗಿ ಸಾಕ್ಷಿಹೇಳುವವನು ಮತ್ತೊಬ್ಬನಿದ್ದಾನೆ; ಆತನು ನನ್ನ ವಿಷಯವಾಗಿ ಹೇಳುವ ಸಾಕ್ಷಿ ನಿಜವೆಂದು ಬಲ್ಲೆನು. 33ನೀವು ಯೋಹಾನನ ಬಳಿಯಲ್ಲಿ ಕೇಳಿಕೊಂಡು ಬರುವದಕ್ಕೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿ ಹೇಳಿದನು. 34ನಾನಂತೂ ನನಗೆ ಬೇಕಾದ ಸಾಕ್ಷಿಯನ್ನು ಮನುಷ್ಯರಿಂದ ತಕ್ಕೊಳ್ಳುವದಿಲ್ಲ; ಆದರೂ ನಿಮಗೆ ರಕ್ಷಣೆ ಆಗಬೇಕೆಂದು ಇದನ್ನು ಹೇಳಿದ್ದೇನೆ. 35ಯೋಹಾನನು ಉರಿಯುವ ದೀಪದೋಪಾದಿಯಲ್ಲಿ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪಕಾಲ ವಿನೋದಗೊಳ್ಳುವದಕ್ಕೆ ಮನಸ್ಸುಮಾಡಿದಿರಿ. 36ನನಗಂತೂ ಯೋಹಾನನ ಸಾಕ್ಷಿಗಿಂತ ಹೆಚ್ಚಿನ ಸಾಕ್ಷಿ ಉಂಟು; ಹೇಗಂದರೆ ಪೂರೈಸುವದಕ್ಕೆ ತಂದೆ ನನಗೆ ಕೊಟ್ಟಿರುವ ಕೆಲಸಗಳು, ಅಂದರೆ ನಾನು ಮಾಡುವ ಕೆಲಸಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟನೆಂಬದಾಗಿ ನನ್ನ ವಿಷಯದಲ್ಲಿ ಸಾಕ್ಷಿಕೊಡುತ್ತವೆ. 37ಇದಲ್ಲದೆ ನನ್ನನ್ನು ಕಳುಹಿಸಿಕೊಟ್ಟ ತಂದೆಯು ನನ್ನ ವಿಷಯವಾಗಿ ಸಾಕ್ಷಿ ಹೇಳಿದ್ದಾನೆ. ನೀವು ಎಂದಾದರೂ ಆತನ ಧ್ವನಿಯನ್ನು ಕೇಳಿದ್ದೂ ಇಲ್ಲ, ಆತನ ರೂಪವನ್ನು ನೋಡಿದ್ದೂ ಇಲ್ಲ, 38ಆತನ ವಾಕ್ಯವು ನಿಮ್ಮಲ್ಲಿ ನೆಲೆಗೊಂಡದ್ದೂ ಇಲ್ಲ; ಆತನು ಕಳುಹಿಸಿಕೊಟ್ಟವನ ಮಾತನ್ನು ನೀವು ನಂಬದೆ ಇದ್ದೀರಷ್ಟೆ. 39ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. 40ಆದರೂ ಜೀವ ಹೊಂದುವದಕ್ಕಾಗಿ ನನ್ನ ಬಳಿಗೆ ಬರುವದಕ್ಕೆ ನಿಮಗೆ ಮನಸ್ಸಿಲ್ಲ.
41ನಾನು ಮನುಷ್ಯರಿಂದಾಗುವ ಮಾನವನ್ನು ಅಂಗೀಕರಿಸುವದಿಲ್ಲ. 42ಆದರೆ ನಿಮ್ಮನ್ನು ನಾನು ಬಲ್ಲೆನು, ದೇವರಲ್ಲಿ ನಿಮಗೆ ಪ್ರೀತಿಯಿಲ್ಲವೆಂದು ನನಗೆ ತಿಳಿದದೆ. 43ನಾನು ನನ್ನ ತಂದೆಯ ಹೆಸರಿನ ಮೇಲೆ ಬಂದಿದ್ದೇನೆ; ನನ್ನನ್ನು ನೀವು ಒಪ್ಪಿಕೊಳ್ಳುವದಿಲ್ಲ; ಮತ್ತೊಬ್ಬನು ಸ್ವಂತ ಹೆಸರಿನ ಮೇಲೆ ಬಂದರೆ ಅವನನ್ನು ಒಪ್ಪಿಕೊಳ್ಳುವಿರಿ. 44ಒಬ್ಬನೇ ದೇವರಿಂದ ಬರುವಂಥ ಮಾನವನ್ನು ಅಪೇಕ್ಷಿಸದೆ ಒಬ್ಬರಿಂದೊಬ್ಬರು ಮಾನವನ್ನು ಅಂಗೀಕರಿಸುವವರಾದ ನೀವು ಹೇಗೆ ನಂಬೀರಿ? 45ನಾನು ತಂದೆಯ ಮುಂದೆ ನಿಮ್ಮ ಮೇಲೆ ತಪ್ಪುಹೊರಿಸುವೆನೆಂದು ನೆನಸಬೇಡಿರಿ; ನೀವು ಆಶ್ರಯಿಸಿಕೊಂಡಿರುವ ಮೋಶೆಯೇ ನಿಮ್ಮ ಮೇಲೆ ತಪ್ಪುಹೊರಿಸುವವನು. 46ಅವನು ನನ್ನ ವಿಷಯವಾಗಿ ಬರೆದನು; ಆದದರಿಂದ ನೀವು ಮೋಶೆಯ ಮಾತನ್ನು ನಂಬುವವರಾಗಿದ್ದರೆ ನನ್ನ ಮಾತನ್ನೂ ನಂಬುತ್ತಿದ್ದಿರಿ. 47ಅವನು ಬರೆದ ಮಾತುಗಳನ್ನು ನೀವು ನಂಬದಿದ್ದರೆ ನಾನು ಹೇಳುವ ಮಾತುಗಳನ್ನು ಹೇಗೆ ನಂಬೀರಿ? ಅಂದನು.
Valgt i Øjeblikket:
ಯೋಹಾನ 5: KANJV-BSI
Markering
Del
Kopiér
Vil du have dine markeringer gemt på tværs af alle dine enheder? Tilmeld dig eller log ind
Kannada J.V. Bible © The Bible Society of India, 2016.
Used by permission. All rights reserved worldwide.