ಯೋಹಾನನ ಸುವಾರ್ತೆ 8
8
ಸಿಕ್ಕಿಕೊಂಡ ವ್ಯಭಿಚಾರಿಣಿ
1ಯೇಸು ಆಲಿವ್ ಮರಗಳ ಗುಡ್ಡಕ್ಕೆ ಹೋದನು. 2ಮರುದಿನ ನಸುಕಿನಲ್ಲೇ ಯೇಸು ದೇವಾಲಯಕ್ಕೆ ಮರಳಿ ಹೋದನು. ಎಲ್ಲಾ ಜನರು ಯೇಸುವಿನ ಬಳಿಗೆ ನೆರೆದುಬಂದರು. ಯೇಸು ಕುಳಿತುಕೊಂಡು ಜನರಿಗೆ ಉಪದೇಶಿಸಿದನು.
3ಧರ್ಮೋಪದೇಶಕರು ಮತ್ತು ಫರಿಸಾಯರು ಒಬ್ಬ ಸ್ತ್ರೀಯನ್ನು ಅಲ್ಲಿಗೆ ಕರೆದುಕೊಂಡು ಬಂದರು. ಆ ಸ್ತ್ರೀಯು ವ್ಯಭಿಚಾರ ಮಾಡುವಾಗಲೇ ಸಿಕ್ಕಿಕೊಂಡಿದ್ದಳು. ಅವರು ಆ ಸ್ತ್ರೀಯನ್ನು ಜನರ ಮುಂದೆ ಬಲವಂತವಾಗಿ ನಿಲ್ಲಿಸಿ, 4ಯೇಸುವಿಗೆ, “ಉಪದೇಶಕನೇ, ಈ ಸ್ತ್ರೀಯು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಕೊಂಡಳು. 5ಇಂಥ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಸ್ತ್ರೀಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸುತ್ತದೆ. ಈಗ ನಾವೇನು ಮಾಡಬೇಕು? ನೀನೇ ಹೇಳು” ಎಂದರು.
6ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿದರೆ ಆತನ ಮೇಲೆ ಅಪವಾದ ಹೊರಿಸಲು ಸಾಧ್ಯವಾಗುತ್ತದೆ ಎಂದು ಈ ಪ್ರಶ್ನೆಯನ್ನು ಕೇಳಿದರು. ಆದರೆ ಯೇಸು ತಲೆ ಬಾಗಿಸಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು. 7ಯೆಹೂದ್ಯ ನಾಯಕರು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ಆಗ ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪ ಮಾಡಿಲ್ಲದವನು ಆಕೆಯ ಮೇಲೆ ಮೊದಲನೆಯ ಕಲ್ಲನ್ನು ಎಸೆಯಲಿ” ಎಂದು ಹೇಳಿ, 8ಮತ್ತೆ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದನು.
9ಯೇಸುವಿನ ಈ ಮಾತನ್ನು ಕೇಳಿದ ಆ ಜನರು ಒಬ್ಬೊಬ್ಬರಾಗಿ ಅಲ್ಲಿಂದ ಹೊರಟುಹೋದರು. ಮೊದಲು ಹಿರಿಯರು, ನಂತರ ಇತರರು ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ಆ ಸ್ತ್ರೀ. ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು. 10ಯೇಸು ನೆಟ್ಟಗೆ ಕುಳಿತುಕೊಂಡು, “ಅಮ್ಮಾ, ನಿನ್ನ ಮೇಲೆ ತಪ್ಪು ಹೊರಿಸಿದವರು ಎಲ್ಲಿದ್ದಾರೆ? ಅವರಲ್ಲಿ ಒಬ್ಬರಾದರೂ ನಿನಗೆ ಶಿಕ್ಷೆ ವಿಧಿಸಲಿಲ್ಲವೇ?” ಎಂದು ಕೇಳಿದನು.
11ಆ ಸ್ತ್ರೀಯು, “ಸ್ವಾಮೀ, ಅವರಲ್ಲಿ ಯಾರೂ ನನಗೆ ತೀರ್ಪು ನೀಡಲಿಲ್ಲ” ಎಂದು ಉತ್ತರಕೊಟ್ಟಳು.
ಯೇಸು ಆಕೆಗೆ, “ಆದ್ದರಿಂದ ನಾನು ಸಹ ನಿನಗೆ ತೀರ್ಪು ನೀಡುವುದಿಲ್ಲ. ಈಗ ನೀನು ಹೋಗಬಹುದು, ಆದರೆ ಇನ್ನು ಮುಂದೆ ಪಾಪ ಮಾಡಬೇಡ” ಎಂದು ಹೇಳಿದನು.
ಯೇಸುವೇ ಲೋಕಕ್ಕೆ ಬೆಳಕು
12ಬಳಿಕ, ಯೇಸುವು ಜನರೊಂದಿಗೆ ಮತ್ತೆ ಮಾತಾಡುತ್ತಾ, “ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ಎಂದಿಗೂ ಜೀವಿಸುವುದಿಲ್ಲ. ಅವನು ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು” ಎಂದು ಹೇಳಿದನು.
13ಫರಿಸಾಯರು ಯೇಸುವಿಗೆ, “ನೀನು ನಿನ್ನ ಬಗ್ಗೆ ಮಾತಾಡುವ ಈ ಸಂಗತಿಗಳು ಸತ್ಯವೆಂದು ಹೇಳುವವನು ನೀನೊಬ್ಬನು ಮಾತ್ರ. ಆದ್ದರಿಂದ, ನೀನು ಹೇಳುವ ಈ ಸಂಗತಿಗಳನ್ನು ನಾವು ಸ್ವೀಕರಿಸಿಕೊಳ್ಳಲಾರೆವು” ಎಂದು ಹೇಳಿದರು.
14ಯೇಸು, “ಹೌದು, ನಾನೇ ನನ್ನ ಬಗ್ಗೆ ಈ ಸಂಗತಿಗಳನ್ನು ಹೇಳುತ್ತಿದ್ದರೂ ಈ ಸಂಗತಿಗಳು ಜನರ ನಂಬಿಕೆಗೆ ಯೋಗ್ಯವಾಗಿವೆ. ಏಕೆಂದರೆ, ನಾನು ಎಲ್ಲಿಂದ ಬಂದೆನೆಂಬುದೂ ನಾನು ಎಲ್ಲಿಗೆ ಹೋಗುತ್ತೇನೆಂಬುದೂ ನನಗೆ ತಿಳಿದಿದೆ. ನಾನು ನಿಮ್ಮಂಥ ವ್ಯಕ್ತಿಯಲ್ಲ. ನಾನು ಎಲ್ಲಿಂದ ಬಂದೆನೆಂಬುದು ಮತ್ತು ಎಲ್ಲಿಗೆ ಹೋಗುತ್ತೇನೆಂಬುದು ನಿಮಗೆ ಗೊತ್ತಿಲ್ಲ. 15ನೀವು ಹೊರತೋರಿಕೆಯ ಪ್ರಕಾರ ತೀರ್ಪು ಮಾಡುತ್ತಿದ್ದೀರಿ. ಆದರೆ ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16ನಾನು ಮಾಡುವ ತೀರ್ಪು ನ್ಯಾಯಬದ್ಧವಾಗಿರುತ್ತದೆ. ಏಕೆಂದರೆ ನಾನು ತೀರ್ಪು ಮಾಡುವಾಗ ಒಬ್ಬಂಟಿಗನಾಗಿರುವುದಿಲ್ಲ. ನನ್ನನ್ನು ಕಳುಹಿಸಿದ ತಂದೆಯೂ ನನ್ನೊಂದಿಗಿರುತ್ತಾನೆ. 17ಇಬ್ಬರ ಸಾಕ್ಷಿ ಒಂದೇ ಆಗಿದ್ದರೆ ಅವರ ಹೇಳಿಕೆಯನ್ನು ಸ್ವೀಕರಿಸಿಕೊಳ್ಳಬೇಕೆಂದು ನಿಮ್ಮ ಧರ್ಮಶಾಸ್ತ್ರವೇ ತಿಳಿಸುತ್ತದೆ. 18ನನ್ನ ಪರವಾದ ಸಾಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ, ನನ್ನನ್ನು ಕಳುಹಿಸಿದ ತಂದೆಯು ನನ್ನ ಮತ್ತೊಬ್ಬ ಸಾಕ್ಷಿಯಾಗಿದ್ದಾನೆ” ಎಂದು ಉತ್ತರಕೊಟ್ಟನು.
19ಜನರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದು ಕೇಳಿದರು.
ಯೇಸು, “ನಿಮಗೆ ನಾನಾಗಲಿ, ನನ್ನ ತಂದೆಯಾಗಲಿ ಗೊತ್ತಿಲ್ಲ. ನೀವು ನನ್ನನ್ನು ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದಿರುವಿರಿ” ಎಂದು ಹೇಳಿದನು. 20ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಿದ್ದಾಗ ಈ ಮಾತುಗಳನ್ನು ಹೇಳಿದನು. ಜನರು ಕೊಡುವ ಕಾಣಿಕೆಯನ್ನು ಇಟ್ಟಿದ್ದ ಸ್ಥಳದ ಸಮೀಪದಲ್ಲಿ ಆತನಿದ್ದನು. ಆದರೆ ಆತನನ್ನು ಯಾರೂ ಬಂಧಿಸಲಿಲ್ಲ. ಏಕೆಂದರೆ ಆತನನ್ನು ಬಂಧಿಸತಕ್ಕ ಸಮಯ ಇನ್ನೂ ಬಂದಿರಲಿಲ್ಲ.
ಯೆಹೂದ್ಯರ ಅಪನಂಬಿಕೆ
21ಯೇಸು ಅವರಿಗೆ, “ನಾನು ನಿಮ್ಮನ್ನು ಬಿಟ್ಟುಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ. ಆದರೆ ನೀವು ನಿಮ್ಮ ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂದು ಹೇಳಿದನು.
22ಆದ್ದರಿಂದ ಯೆಹೂದ್ಯರು, “ಯೇಸು ತನ್ನನ್ನು ತಾನೇ ಕೊಂದುಕೊಳ್ಳುವನೇ? ಅದಕ್ಕಾಗಿಯೇ, ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳಿದನೇ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
23ಅದಕ್ಕೆ ಯೇಸು, “ನೀವು ಕೆಳಗಿನವರಾಗಿದ್ದೀರಿ. ನಾನಾದರೋ ಮೇಲಿನವನು. ನೀವು ಈ ಲೋಕದವರಾಗಿದ್ದೀರಿ. ಆದರೆ ನಾನು ಈ ಲೋಕದವನಲ್ಲ. 24ನೀವು ನಿಮ್ಮ ಪಾಪಗಳಲ್ಲೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆ. ಹೌದು, ನಾನೇ ಆತನೆಂಬುದನ್ನು ನೀವು ನಂಬದಿದ್ದರೆ ನಿಮ್ಮ ಪಾಪಗಳಲ್ಲಿಯೇ ನೀವು ಸಾಯುವಿರಿ” ಎಂದು ಹೇಳಿದನು.
25ಯೆಹೂದ್ಯರು, “ಹಾಗಾದರೆ, ನೀನು ಯಾರು?” ಎಂದು ಕೇಳಿದರು.
ಯೇಸು, “ನಾನು ಯಾರೆಂದು ನಿಮಗೆ ಮೊದಲಿಂದ ತಿಳಿಸುತ್ತಾ ಬಂದೆನೋ, ಆತನೇ ನಾನು. 26ನಿಮ್ಮ ಬಗ್ಗೆ ಹೇಳಲು ನನ್ನಲ್ಲಿ ಅನೇಕ ಸಂಗತಿಗಳಿವೆ. ನಾನು ನಿಮಗೆ ತೀರ್ಪು ಮಾಡಬಲ್ಲೆನು. ಆದರೆ ನನ್ನನ್ನು ಕಳುಹಿಸಿದಾತನಿಂದ ನಾನು ಕೇಳಿದ ಸಂಗತಿಗಳನ್ನು ಮಾತ್ರ ಜನರಿಗೆ ಹೇಳುತ್ತೇನೆ. ಆತನು ಸತ್ಯವನ್ನೇ ತಿಳಿಸುತ್ತಾನೆ” ಎಂದು ಉತ್ತರಕೊಟ್ಟನು.
27ಯೇಸು ಯಾರ ಬಗ್ಗೆ ಮಾತಾಡುತ್ತಿದ್ದಾನೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲಿಲ್ಲ. ಯೇಸು ಅವರಿಗೆ ತಂದೆಯ (ದೇವರ) ಬಗ್ಗೆ ಹೇಳುತ್ತಿದ್ದನು. 28ಆದ್ದರಿಂದ ಆತನು ಅವರಿಗೆ, “ನೀವು ಮನುಷ್ಯಕುಮಾರನನ್ನು ಮೇಲಕ್ಕೇರಿಸುವಿರಿ (ಕೊಲ್ಲುವಿರಿ). ನಾನೇ ಆತನೆಂಬುದು ಆಗ ನಿಮಗೆ ತಿಳಿಯುವುದು. ನಾನು ಈ ಕಾರ್ಯಗಳನ್ನು ನನ್ನ ಸ್ವಂತ ಅಧಿಕಾರದಿಂದ ಮಾಡುತ್ತಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. ಅಲ್ಲದೆ, ತಂದೆಯು ನನಗೆ ಉಪದೇಶಿಸಿದ ಸಂಗತಿಗಳನ್ನು ಮಾತ್ರ ನಾನು ಹೇಳುತ್ತೇನೆಂಬುದೂ ನಿಮಗೆ ಅರಿವಾಗುವುದು. 29ನನ್ನನ್ನು ಕಳುಹಿಸಿದಾತನು (ದೇವರು) ನನ್ನೊಂದಿಗೆ ಇದ್ದಾನೆ. ಆತನಿಗೆ ಮೆಚ್ಚಿಕೆಯಾದದ್ದನ್ನೇ ನಾನು ಯಾವಾಗಲೂ ಮಾಡುತ್ತೇನೆ. ಆದ್ದರಿಂದ ಆತನು ನನ್ನನ್ನು ಒಬ್ಬಂಟಿಗನಾಗಿ ಬಿಟ್ಟುಬಿಟ್ಟಿಲ್ಲ” ಎಂದು ಹೇಳಿದನು. 30ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಅನೇಕ ಜನರು ಆತನಲ್ಲಿ ನಂಬಿಕೆಯಿಟ್ಟರು.
ಪಾಪವಿಮೋಚನೆಯ ಬಗ್ಗೆ ಯೇಸುವಿನ ಉಪದೇಶ
31ಆದ್ದರಿಂದ ಯೇಸು ತನ್ನಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ, “ನೀವು ನನ್ನ ಉಪದೇಶಕ್ಕೆ ವಿಧೇಯರಾಗಿದ್ದರೆ, ನೀವು ನಿಜವಾಗಿಯೂ ನನ್ನ ಹಿಂಬಾಲಕರಾಗಿದ್ದೀರಿ. 32ನೀವು ಸತ್ಯವನ್ನು ತಿಳಿದುಕೊಳ್ಳುವಿರಿ. ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.
33ಯೆಹೂದ್ಯರು, “ನಾವು ಅಬ್ರಹಾಮನ ಮಕ್ಕಳು. ನಾವೆಂದೂ ಯಾರ ಗುಲಾಮರೂ ಆಗಿರಲಿಲ್ಲ. ಹೀಗಿದ್ದರೂ, ನಮಗೆ ಬಿಡುಗಡೆ ಆಗುವುದೆಂದು ನೀನು ಹೇಳುವುದೇಕೆ?” ಎಂದು ಉತ್ತರಕೊಟ್ಟರು.
34ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪಾಪಮಾಡುವ ಪ್ರತಿಯೊಬ್ಬನೂ ಪಾಪಕ್ಕೆ ಗುಲಾಮನಾಗಿದ್ದಾನೆ. ಪಾಪವು ಅವನ ಯಜಮಾನನಾಗಿದೆ. 35ಗುಲಾಮನು ಒಂದು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಮಗನು ಕುಟುಂಬಕ್ಕೆ ಶಾಶ್ವತವಾಗಿ ಸೇರಿದವನಾಗಿದ್ದಾನೆ. 36ಆದ್ದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನೀವು ನಿಜವಾಗಿಯೂ ಬಿಡುಗಡೆಯಾಗಿರುವಿರಿ. 37ನೀವು ಅಬ್ರಹಾಮನ ಮಕ್ಕಳೆಂದು ನನಗೆ ಗೊತ್ತಿದೆ. ಆದರೆ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ. ಏಕೆಂದರೆ ನನ್ನ ಉಪದೇಶವನ್ನು ಸ್ವೀಕರಿಸಿಕೊಳ್ಳಲು ನಿಮಗೆ ಇಷ್ಟವಿಲ್ಲ. 38ನನ್ನ ತಂದೆಯು ನನಗೆ ತೋರಿಸಿರುವುದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ. ನೀವಾದರೋ ನಿಮ್ಮ ತಂದೆ ನಿಮಗೆ ಹೇಳಿದ ಸಂಗತಿಗಳನ್ನೇ ಮಾಡುತ್ತೀರಿ” ಎಂದು ಹೇಳಿದನು.
39ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ” ಎಂದು ಹೇಳಿದರು.
ಯೇಸು, “ನೀವು ನಿಜವಾಗಿಯೂ ಅಬ್ರಹಾಮನ ಮಕ್ಕಳಾಗಿದ್ದರೆ, ಅಬ್ರಹಾಮನು ಮಾಡಿದ ಕಾರ್ಯಗಳನ್ನೇ ಮಾಡುತ್ತಿದ್ದಿರಿ. 40ನಾನು ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದವನಾಗಿದ್ದೇನೆ. ಆದರೆ ನೀವು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೀರಿ. ಅಬ್ರಹಾಮನು ಅಂಥದ್ದೇನನ್ನೂ ಮಾಡಲಿಲ್ಲ. 41ಆದ್ದರಿಂದ ನಿಮ್ಮ ಸ್ವಂತ ತಂದೆ ಮಾಡಿದ್ದನ್ನೇ ನೀವು ಮಾಡುತ್ತಿದ್ದೀರಿ” ಎಂದು ಹೇಳಿದನು.
ಆದರೆ ಯೆಹೂದ್ಯರು, “ನಾವು ಹಾದರಕ್ಕೆ ಹುಟ್ಟಿದವರಲ್ಲ. ದೇವರೇ ನಮ್ಮ ತಂದೆ. ನಮಗಿರುವ ತಂದೆ ಆತನೊಬ್ಬನೇ” ಎಂದು ಹೇಳಿದರು.
42ಯೇಸು ಆ ಯೆಹೂದ್ಯರಿಗೆ, “ದೇವರು ನಿಜವಾಗಿಯೂ ನಿಮ್ಮ ತಂದೆಯಾಗಿದ್ದರೆ, ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ನಾನು ದೇವರಿಂದ ಬಂದು ಈಗ ಇಲ್ಲಿದ್ದೇನೆ. ನಾನು ಬಂದದ್ದು ನನ್ನ ಸ್ವಂತ ಅಧಿಕಾರದಿಂದಲ್ಲ. ದೇವರೇ ನನ್ನನ್ನು ಕಳುಹಿಸಿದನು. 43ನಾನು ಹೇಳುವ ಈ ಸಂಗತಿಗಳನ್ನು ನೀವು ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ನನ್ನ ಉಪದೇಶವನ್ನು ನೀವು ಸ್ವೀಕರಿಸಿಕೊಳ್ಳಲಾರಿರಿ. 44ಸೈತಾನನೇ ನಿಮ್ಮ ತಂದೆ. ನೀವು ಅವನಿಗೆ ಹುಟ್ಟಿದವರಾಗಿದ್ದೀರಿ. ಅವನ ದುರಿಚ್ಛೆಗಳನ್ನು ಮಾಡಬಯಸುತ್ತೀರಿ. ಅವನು ಆರಂಭದಿಂದಲೂ ಕೊಲೆಗಾರನಾಗಿದ್ದು ಸತ್ಯಕ್ಕೆ ವಿರೋಧವಾಗಿದ್ದನು. ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸ್ವಭಾವಾನುಸಾರವಾಗಿ ಸುಳ್ಳಾಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.
45“ನಾನು ಸತ್ಯವನ್ನು ಹೇಳುತ್ತೇನೆ. ಆದರೆ ನೀವು ನನ್ನನ್ನು ನಂಬುವುದಿಲ್ಲ. 46ನನ್ನಲ್ಲಿ ಪಾಪವನ್ನು ತೋರಿಸಿಕೊಡುವವನು ನಿಮ್ಮಲ್ಲಿ ಯಾವನಾದರೂ ಇರುವನೇ? ನಾನು ಸತ್ಯವನ್ನು ಹೇಳಿದರೂ ನೀವೇಕೆ ನಂಬುವುದಿಲ್ಲ? 47ದೇವರಿಂದ ಹುಟ್ಟಿದವನು ದೇವರು ಹೇಳುವ ಮಾತುಗಳನ್ನು ಸ್ವೀಕರಿಸಿಕೊಳ್ಳುವನು. ಆದರೆ ನೀವು ದೇವರಿಂದ ಹುಟ್ಟಿಲ್ಲದ ಕಾರಣ ಆತನ ಮಾತುಗಳನ್ನು ಸ್ವೀಕರಿಸಿಕೊಳ್ಳುವುದಿಲ್ಲ” ಎಂದನು.
ತನ್ನ ಮತ್ತು ಅಬ್ರಹಾಮನ ಬಗ್ಗೆ ಯೇಸುವಿನ ಹೇಳಿಕೆ
48ಯೆಹೂದ್ಯರು, “ನಾವು ನಿನ್ನನ್ನು ಸಮಾರ್ಯದವನೆಂದು ಹೇಳುತ್ತೇವೆ! ನಿನ್ನೊಳಗೆ ದೆವ್ವವು ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ” ಎಂದು ಉತ್ತರಕೊಟ್ಟರು.
49ಯೇಸು, “ನನ್ನೊಳಗೆ ದೆವ್ವವಿಲ್ಲ. ನನ್ನ ತಂದೆಗೆ ನಾನು ಗೌರವ ಕೊಡುತ್ತೇನೆ, ಆದರೆ ನೀವು ನನಗೆ ಗೌರವ ಕೊಡುವುದಿಲ್ಲ. 50ನನಗಾಗಿ ಗೌರವವನ್ನು ಪಡೆದುಕೊಳ್ಳಲು ನಾನು ಪ್ರಯತ್ನಿಸುತ್ತಿಲ್ಲ. ನನಗೆ ಗೌರವ ದೊರೆಯಬೇಕೆಂದು ಬಯಸುವ ಒಬ್ಬಾತನಿದ್ದಾನೆ. ಆತನೇ ನ್ಯಾಯಾಧಿಪತಿ. 51ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ವಾಕ್ಯಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ” ಎಂದು ಉತ್ತರಕೊಟ್ಟನು.
52ಯೆಹೂದ್ಯರು ಆತನಿಗೆ, “ನಿನ್ನೊಳಗೆ ದೆವ್ವವಿದೆ ಎಂದು ಈಗ ನಮಗೆ ತಿಳಿಯಿತು! ಅಬ್ರಹಾಮನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಆದರೆ ‘ನನ್ನ ಉಪದೇಶಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ’ ಎಂದು ನೀನು ಹೇಳುತ್ತಿರುವೆ. 53ನಮ್ಮತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೆಂದು ಭಾವಿಸಿಕೊಂಡಿರುವೆಯಾ? ಅಬ್ರಹಾಮನು ಸತ್ತುಹೋದನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಹೀಗಿರಲು, ನೀನು ನಿನ್ನನ್ನು ಯಾರೆಂದು ಭಾವಿಸಿಕೊಂಡಿರುವೆ?” ಎಂದು ಕೇಳಿದರು.
54ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ, ಆ ಮಹಿಮೆಗೆ ಯಾವ ಬೆಲೆಯೂ ಇಲ್ಲ. ನನ್ನ ತಂದೆಯೇ ನನ್ನನ್ನು ಮಹಿಮೆಪಡಿಸುವನು. ನೀವು ಆತನನ್ನೇ ನಿಮ್ಮ ದೇವರೆಂದು ಹೇಳಿಕೊಳ್ಳುತ್ತೀರಿ. 55ಆದರೆ ನೀವು ಆತನನ್ನು ನಿಜವಾಗಿಯೂ ತಿಳಿದಿಲ್ಲ. ನಾನು ಆತನನ್ನು ಬಲ್ಲೆನು. ನಾನು ಆತನನ್ನು ತಿಳಿದಿಲ್ಲವೆಂದು ಹೇಳಿದರೆ ನಿಮ್ಮಂತೆ ನಾನು ಸಹ ಸುಳ್ಳುಗಾರನಾಗುತ್ತೇನೆ. ನಾನು ಆತನನ್ನು ಬಲ್ಲೆನು. ನಾನು ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ. 56ನಾನು ಬರುವ ದಿನವನ್ನು ತಾನು ನೋಡುವುದಾಗಿ ನಿಮ್ಮ ತಂದೆಯಾದ ಅಬ್ರಹಾಮನು ಬಹು ಸಂತೋಷಪಟ್ಟನು. ಅವನು ಆ ದಿನವನ್ನು ಕಂಡು ಬಹು ಸಂತೋಷಗೊಂಡನು” ಎಂದು ಉತ್ತರಕೊಟ್ಟನು.
57ಯೆಹೂದ್ಯರು ಯೇಸುವಿಗೆ, “ಏನು? ನೀನು ಅಬ್ರಹಾಮನನ್ನು ನೋಡಿರುವಿಯೋ? ನಿನಗೆ ಐವತ್ತು ವರ್ಷವೂ ಆಗಿಲ್ಲ!” ಎಂದು ಹೇಳಿದರು.
58ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಅಬ್ರಹಾಮನು ಹುಟ್ಟುವುದಕ್ಕಿಂತ ಮೊದಲಿಂದಲೂ ನಾನು ಇದ್ದೇನೆ!” ಎಂದು ಉತ್ತರಿಸಿದನು. 59ಇದನ್ನು ಕೇಳಿದ ಕೂಡಲೇ ಜನರು ಆತನತ್ತ ಬೀರಲು ಕಲ್ಲುಗಳನ್ನು ತೆಗೆದುಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು.
Dewis Presennol:
ಯೋಹಾನನ ಸುವಾರ್ತೆ 8: KERV
Uwcholeuo
Rhanna
Copi
Eisiau i'th uchafbwyntiau gael eu cadw ar draws dy holl ddyfeisiau? Cofrestra neu mewngofnoda
Kannada Holy Bible: Easy-to-Read Version
All rights reserved.
© 1997 Bible League International