ಲೂಕ 24
24
ಯೇಸುವಿನ ಪುನರುತ್ಥಾನವು
(ಮತ್ತಾ. 28.1-8; ಮಾರ್ಕ. 16.1-18; ಯೋಹಾ. 20.1-23; 1 ಕೊರಿಂಥ. 15.5)
1ಆ ಸ್ತ್ರೀಯರು ಸಬ್ಬತ್‍ದಿನದಲ್ಲಿ ಧರ್ಮನಿಯಮದ ಪ್ರಕಾರ ವಿಶ್ರವಿುಸಿಕೊಂಡು ವಾರದ ಮೊದಲನೆಯ ದಿವಸದಲ್ಲಿ ಇನ್ನೂ ಮೊಬ್ಬಿರುವಾಗ ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಬಂದರು. 2ಸಮಾಧಿಗೆ ಮುಚ್ಚಿದ್ದ ಕಲ್ಲು ಅಲ್ಲಿಂದ ಉರುಳಿಸಲ್ಪಟ್ಟಿರುವದನ್ನು ಕಂಡು 3ಒಳಕ್ಕೆ ಹೋಗಿ ನೋಡುವಲ್ಲಿ ಯೇಸು ಸ್ವಾವಿುಯ ದೇಹವು ಕಾಣಲಿಲ್ಲ. 4ಈ ವಿಷಯದಲ್ಲಿ ಅವರಿಗೆ ಗಲಿಬಿಲಿ ಉಂಟಾದಾಗ ಹೊಳೆಯುವ ಉಡುಪನ್ನು ಧರಿಸಿದ್ದ ಇಬ್ಬರು ಪುರುಷರು ಅಕಸ್ಮಾತ್ತಾಗಿ ಅವರ ಬಳಿಯಲ್ಲಿ ನಿಂತುಕೊಂಡರು. 5ಆ ಸ್ತ್ರೀಯರು ಭಯ ಹಿಡಿದವರಾಗಿ ತಮ್ಮ ಮುಖಗಳನ್ನು ನೆಲದ ಕಡೆಗೆ ಬೊಗ್ಗಿಸಿಕೊಂಡಿರುವಾಗ ಆ ಪುರುಷರು ಅವರಿಗೆ - ಸತ್ತವರೊಳಗೆ ಬದುಕಿರುವವನನ್ನು ಹುಡುಕುವದೇನು? ಆತನು ಇಲ್ಲಿ ಇಲ್ಲ, ಎದ್ದಿದ್ದಾನೆ. 6-7ಆತನು ಇನ್ನೂ ಗಲಿಲಾಯದಲ್ಲಿದ್ದಾಗ - ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು ಶಿಲುಬೆಗೆ ಹಾಕಲ್ಪಟ್ಟು ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ ಎಂದು ಹೇಳಿದರು. 8ಸ್ತ್ರೀಯರು ಆತನ ಮಾತುಗಳನ್ನು ನೆನಪಿಗೆ ತಂದುಕೊಂಡು 9ಸಮಾಧಿಯ ಬಳಿಯಿಂದ ಹಿಂತಿರುಗಿ ಹೋಗಿ ಆ ಸಂಗತಿಗಳನ್ನೆಲ್ಲಾ ಹನ್ನೊಂದು ಮಂದಿ ಶಿಷ್ಯರಿಗೂ ಉಳಿದವರೆಲ್ಲರಿಗೂ ತಿಳಿಸಿದರು. 10ಆ ಸ್ತ್ರೀಯರು ಯಾರಂದರೆ ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಇವರೇ. ಇವರ ಜೊತೆಯಲ್ಲಿದ್ದ ಬೇರೆ ಸ್ತ್ರೀಯರು ಸಹ ಅಪೊಸ್ತಲರಿಗೆ ಆ ಸಂಗತಿಗಳನ್ನು ಹೇಳಿದರು. 11ಅವರು ನಂಬಲಿಲ್ಲ; ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು. 12[ಆದರೆ ಪೇತ್ರನು ಎದ್ದು ಸಮಾಧಿಗೆ ಓಡಿಹೋಗಿ ಬೊಗ್ಗಿನೋಡಿ ನಾರುಬಟ್ಟೆಗಳನ್ನು ಮಾತ್ರ ಕಂಡು ನಡೆದ ಸಂಗತಿಗಳಿಗೆ ತನ್ನಲ್ಲಿ ಆಶ್ಚರ್ಯಪಡುತ್ತಾ ಹೊರಟುಹೋದನು].#24.12 ಈ ಅಧ್ಯಾಯದಲ್ಲಿ ಆವರಣ ಚಿಹ್ನೆಗಳೊಳಗೆ ಇರುವ ಮಾತುಗಳು ಕೆಲವು ಪ್ರಾಚೀನ ಪ್ರತಿಗಳಲ್ಲಿ ಸಿಕ್ಕುವದಿಲ್ಲ.
13ಅದೇ ದಿನದಲ್ಲಿ ಶಿಷ್ಯರಲ್ಲಿ ಇಬ್ಬರು ಯೆರೂಸಲೇವಿುಗೆ ಆರುವರೆ ಮೈಲು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಾ 14ಸಂಭವಿಸಿದ ಈ ಎಲ್ಲಾ ಕಾರ್ಯಗಳ ವಿಷಯವಾಗಿ ಸಂಭಾಷಣೆ ಮಾಡುತ್ತಿದ್ದರು. 15ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಹೋದನು. 16ಆದರೆ ಅವರು ಆತನ ಗುರುತನ್ನು ಹಿಡಿಯಲಿಲ್ಲ; ಅವರ ಕಣ್ಣು ಕಟ್ಟಿದ ಹಾಗಾಯಿತು. 17ಆತನು ಅವರನ್ನು - ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತಾಡಿಕೊಳ್ಳುವ ಈ ಸಂಗತಿಗಳೇನು ಎಂದು ಕೇಳಲು ಅವರು ದುಃಖದ ಮುಖವುಳ್ಳವರಾಗಿ ನಿಂತರು. 18ಅವರಲ್ಲಿ ಕ್ಲೆಯೊಫನೆಂಬವನು ಆತನನ್ನು ಯೆರೂಸಲೇವಿುಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿವಸಗಳಲ್ಲಿ ಅದರೊಳಗೆ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ ಎಂದು ಕೇಳಲು 19ಆತನು ಅವರನ್ನು - ಯಾವ ಸಂಗತಿಗಳು ಎಂದು ಕೇಳಿದನು. ಅದಕ್ಕೆ ಅವರು - ನಜರೇತಿನವನಾದ ಯೇಸುವಿನ ಸಂಗತಿಗಳೇ; ಆತನು ದೇವರ ಮುಂದೆ ಮತ್ತು ಮನುಷ್ಯರ ಮುಂದೆ ಕೃತ್ಯದಲ್ಲಿಯೂ ಮಾತಿನಲ್ಲಿಯೂ ಸಮರ್ಥನಾದ ಪ್ರವಾದಿಯಾಗಿದ್ದನು. 20ಆತನನ್ನು ಮಹಾಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು. 21ನಾವಾದರೋ ಇಸ್ರಾಯೇಲ್ ಜನರನ್ನು ಬಿಡಿಸತಕ್ಕವನು ಆತನೇ ಎಂದು ನಿರೀಕ್ಷಿಸಿಕೊಂಡಿದ್ದೆವು. ಇದು ಮಾತ್ರವಲ್ಲದೆ ಆ ಕಾರ್ಯಗಳು ನಡೆದು ಈ ಹೊತ್ತು ಮೂರನೆಯ ದಿನ; 22ಆದರೂ ನಮ್ಮಲ್ಲಿ ಕೆಲವು ಮಂದಿ ಸ್ತ್ರೀಯರು ಬೆಳಗಾಗುವಾಗ ಸಮಾಧಿಯ ಬಳಿಯಲ್ಲಿ ಇದ್ದು 23ಆತನ ದೇಹವನ್ನು ಕಾಣದೆ ಅಲ್ಲಿಂದ ಬಂದು ತಮಗೆ ದೇವದೂತರ ದರ್ಶನವಾಯಿತೆಂತಲೂ ಆತನು ಬದುಕುತ್ತಾನೆಂದು ಅವರು ಹೇಳಿದರೆಂತಲೂ ತಿಳಿಸಿ ನಮಗೆ ಅತ್ಯಾಶ್ಚರ್ಯವನ್ನುಂಟುಮಾಡಿದರು. 24ನಮ್ಮ ಸಂಗಡ ಇದ್ದವರಲ್ಲಿ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದ ಪ್ರಕಾರವೇ ಕಂಡರು; ಆತನನ್ನು ಮಾತ್ರ ಕಾಣಲಿಲ್ಲ ಎಂದು ಹೇಳಿದರು. 25ಆತನು ಅವರಿಗೆ - ಎಲಾ, ಬುದ್ಧಿಯಿಲ್ಲದವರೇ, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯರೇ, 26ಕ್ರಿಸ್ತನು ಇಂಥ ಶ್ರಮಗಳನ್ನು ಅನುಭವಿಸಿ ತನ್ನ ಮಹಾಪದವಿಗೆ ಸೇರುವದು ಅಗತ್ಯವಾಗಿತ್ತಲ್ಲವೇ ಎಂದು ಹೇಳಿ 27ಮೋಶೆಯ ಮತ್ತು ಎಲ್ಲಾ ಪ್ರವಾದಿಗಳ ಗ್ರಂಥಗಳು ಮೊದಲುಗೊಂಡು ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳನ್ನು ಅವರಿಗೆ ವಿವರಿಸಿದನು. 28ಅವರು ಹೋಗುತ್ತಿರುವ ಹಳ್ಳಿಯ ಸಮೀಪಕ್ಕೆ ಬಂದಾಗ ಆತನು ಇನ್ನೂ ಮುಂದಕ್ಕೆ ಹೋಗುವವನಂತೆ ಕಾಣಿಸಿದನು. 29ಆದರೆ ಅವರು - ನಮ್ಮ ಸಂಗಡ ಇರು, ಸಂಜೆಯಾಯಿತು, ಹೊತ್ತು ಇಳಿಯುತ್ತಾ ಬಂತು ಎಂದು ಆತನಿಗೆ ಹೇಳಿ ಬಲವಂತಮಾಡಲು ಆತನು ಅವರ ಕೂಡ ಇರುವದಕ್ಕೆ ಊರೊಳಕ್ಕೆ ಹೋದನು. 30ಆತನು ಅವರ ಸಂಗಡ ಊಟಕ್ಕೆ ಕೂತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಅವರಿಗೆ ಕೊಡುತ್ತಿರಲಾಗಿ ಅವರ ಕಣ್ಣುಗಳು ತೆರೆದವು. 31ಅವರು ಆತನ ಗುರುತನ್ನು ಹಿಡಿದರು; ಆತನು ಅವರ ಕಣ್ಣಿಗೆ ಮಾಯವಾದನು. 32ಆಗ ಅವರು ಒಬ್ಬರಿಗೊಬ್ಬರು - ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿ ಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ ಎಂದು ಹೇಳಿಕೊಂಡು 33ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇವಿುಗೆ ಹಿಂತಿರುಗಿಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡ ಇದ್ದವರೂ ಒಟ್ಟಾಗಿ ಕೂಡಿಕೊಂಡಿದ್ದು - 34ಸ್ವಾವಿು ಎದ್ದದ್ದು ನಿಜ, ಆತನು ಸೀಮೋನನಿಗೆ ಕಾಣಿಸಿಕೊಂಡನು ಎಂದು ಹೇಳುತ್ತಿದ್ದರು. 35ಇದನ್ನು ಕಂಡು ಅವರು ದಾರಿಯಲ್ಲಿ ನಡೆದ ಸಂಗತಿಯನ್ನೂ ರೊಟ್ಟಿ ಮುರಿಯುವದರಲ್ಲಿ ತಾವು ಆತನ ಗುರುತು ಹಿಡಿದೆವೆಂಬದನ್ನೂ ವಿವರಿಸಿದರು.
36ಅವರು ಈ ಸಂಗತಿಯನ್ನು ಕುರಿತು ಮಾತಾಡುತ್ತಿರುವಾಗ ಆತನೇ ಅವರ ನಡುವೆ ನಿಂತು [- ನಿಮಗೆ ಮನಶ್ಶಾಂತಿಯಾಗಲಿ#24.36 ಅಥವಾ, ಶುಭವಾಗಲಿ. ಎಂದು ಅವರಿಗೆ ಹೇಳಿದನು]. 37ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದನ್ನು ಭೂತವೆಂದು ಭಾವಿಸಿದರು. 38ಆತನು ಅವರಿಗೆ - ಯಾಕೆ ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯದಲ್ಲಿ ಅನುಮಾನಗಳು ಹುಟ್ಟುವದೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ, ನಾನೇ ಅಲ್ಲವೇ. 39ನನ್ನನ್ನು ಮುಟ್ಟಿನೋಡಿರಿ, ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು; ಅವು ಭೂತಕ್ಕಿಲ್ಲ ಎಂದು ಹೇಳಿದನು. 40[ಇದನ್ನು ಹೇಳಿದ ಮೇಲೆ ಆತನು ತನ್ನ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದನು]. 41ಆದರೆ ಅವರು ಸಂತೋಷದ ದೆಸೆಯಿಂದ ಇನ್ನೂ ನಂಬದೆ ಆಶ್ಚರ್ಯಪಡುತ್ತಿರಲಾಗಿ ಆತನು - ತಿನ್ನತಕ್ಕ ಪದಾರ್ಥವೇನಾದರೂ ಇಲ್ಲಿ ನಿಮಗುಂಟೋ ಎಂದು ಅವರನ್ನು ಕೇಳಲು 42ಅವರು ಸುಟ್ಟ ಮೀನಿನ ಒಂದು ತುಂಡನ್ನು ಆತನಿಗೆ ಕೊಟ್ಟರು. 43ಆತನು ತಕ್ಕೊಂಡು ಅವರ ಮುಂದೆ ತಿಂದನು.
44ತರುವಾಯ ಆತನು - ನಾನು ಇನ್ನೂ ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ ಅಂದನು. 45ಆಮೇಲೆ ಅವರು ಶಾಸ್ತ್ರವಚನಗಳನ್ನು ತಿಳುಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದು 46ಅವರಿಗೆ - ಕ್ರಿಸ್ತನು ಶ್ರಮೆಪಟ್ಟು ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದುಬರುವನೆಂತಲೂ 47ಪಾಪಪರಿಹಾರಕ್ಕೋಸ್ಕರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರೂಸಲೇಮು ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡುವದೆಂತಲೂ ಬರೆದದೆ. 48ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ. 49ಇಗೋ ನನ್ನ ತಂದೆಯು ವಾಗ್ದಾನಮಾಡಿದ್ದನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಹೊದಿಸುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರ್ರಿ ಎಂದು ಹೇಳಿದನು.
ಯೇಸುವಿನ ಪರಲೋಕಾರೋಹಣವು
(ಮಾರ್ಕ. 16.19,20; ಅ. ಕೃ. 1.4-14)
50ಮತ್ತು ಆತನು ಅವರನ್ನು ಬೇಥಾನ್ಯದ ತನಕ ಕರಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು. 51ಆಶೀರ್ವದಿಸುತ್ತಿರುವಾಗ ಆತನು ಅವರನ್ನು ಬಿಟ್ಟು [ಪರಲೋಕಕ್ಕೆ ಒಯ್ಯಲ್ಪಟ್ಟನು]. 52ಅವರು [ಆತನನ್ನು ಆರಾಧಿಸಿ] ಬಹುಸಂತೋಷದಿಂದ 53ಯೆರೂಸಲೇವಿುಗೆ ಹಿಂತಿರುಗಿ ಹೋಗಿ ಯಾವಾಗಲೂ ದೇವಾಲಯದಲ್ಲಿ ದೇವರನ್ನು ಕೊಂಡಾಡುತ್ತಿದ್ದರು.
دیاریکراوەکانی ئێستا:
ಲೂಕ 24: KANJV-BSI
بەرچاوکردن
هاوبەشی بکە
لەبەرگرتنەوە
دەتەوێت هایلایتەکانت بپارێزرێت لەناو ئامێرەکانتدا> ? داخڵ ببە
Kannada J.V. Bible © The Bible Society of India, 2016.
Used by permission. All rights reserved worldwide.