ಜೆಕರ್ಯ 10
10
ಯೆಹೋವ ದೇವರು ಯೆಹೂದವನ್ನು ಕರುಣಿಸುವನು
1ಯೆಹೋವ ದೇವರಿಂದ ಹಿಂಗಾರು ಮಳೆಯ ಕಾಲದಲ್ಲಿ, ಮಳೆಯನ್ನು ಬೇಡಿಕೊಳ್ಳಿರಿ.
ಹೀಗೆ ಯೆಹೋವ ದೇವರು ಮಿಂಚುವ ಮೋಡಗಳನ್ನು ಮಾಡಿ,
ಅವರಿಗೆ ಸಮೃದ್ಧಿಯಾದ ಮಳೆಯನ್ನೂ,
ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವರು.
2ವಿಗ್ರಹಗಳು ವ್ಯರ್ಥವಾಗಿ ಮಾತನಾಡುವವು.
ಶಕುನಗಾರರು ಸುಳ್ಳು ದರ್ಶನವನ್ನು ಕಾಣುವರು.
ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ.
ವ್ಯರ್ಥವಾಗಿ ಆದರಿಸುತ್ತಾರೆ,
ಆದ್ದರಿಂದ ಕುರಿಗಳಂತೆ ಚದರಿದ್ದಾರೆ,
ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.
3“ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯುತ್ತಿದೆ.
ನಾಯಕರನ್ನು ದಂಡಿಸುವೆನು.
ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ತಮ್ಮ ಮಂದೆಯಾಗಿರುವ
ಯೆಹೂದನ ಮನೆತನದವರನ್ನು ಪರಿಪಾಲಿಸಿ,
ಅವರನ್ನು ಯುದ್ಧದಲ್ಲಿ ತಮ್ಮ ಘನವಾದ ಕುದುರೆಯ ಹಾಗೆ ಮಾಡಿದ್ದಾರೆ.
4ಆ ಕುಲದಿಂದಲೇ ಮೂಲೆಗಲ್ಲೂ,
ಗುಡಾರದ ಮೊಳೆಯೂ,
ಯುದ್ಧದ ಬಿಲ್ಲೂ,
ಸಕಲ ಅಧಿಕಾರಿಗಳೂ ಕೂಡಿಕೊಂಡು ಹೊರಬರುವರು.
5ಅವರು ಯುದ್ಧದಲ್ಲಿ
ಶತ್ರುವನ್ನು ಕೆಸರಿನ ಬೀದಿಗಳಲ್ಲಿ ತುಳಿಯುವ ಶೂರರ ಹಾಗಿರುವರು.
ಯೆಹೋವ ದೇವರು ಅವರ ಸಂಗಡ ಇರುವುದರಿಂದ ಯುದ್ಧಮಾಡುವರು.
ಕುದುರೆಗಳ ಮೇಲೆ ಸವಾರಿ ಮಾಡುವ ಶತ್ರುವನ್ನು ನಾಚಿಕೆ ಪಡಿಸುವರು.
6“ನಾನು ಯೆಹೂದ ವಂಶವನ್ನು ಬಲಪಡಿಸಿ, ಯೋಸೇಫ ಗೋತ್ರವನ್ನು ರಕ್ಷಿಸುವೆನು.
ಅವರನ್ನು ಕನಿಕರಿಸುವುದರಿಂದ
ಅವರನ್ನು ತಿರುಗಿ ಬರಮಾಡುವೆನು.
ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಇರುವರು.
ಏಕೆಂದರೆ ನಾನೇ ಅವರ ದೇವರಾದ ಯೆಹೋವ ದೇವರಾಗಿದ್ದು,
ಅವರಿಗೆ ಉತ್ತರಕೊಡುವೆನು.
7ಎಫ್ರಾಯೀಮಿನವರು ಶೂರರಂತೆ ಇರುವರು.
ಅವರ ಹೃದಯವು ದ್ರಾಕ್ಷಾರಸ ಕುಡಿದವರಂತೆ ಸಂತೋಷಪಡುವುದು.
ಅವರ ಮಕ್ಕಳು ಇದನ್ನು ಕಂಡು ಸಂತೋಷಿಸುವರು.
ಅವರ ಹೃದಯವು ಯೆಹೋವ ದೇವರಲ್ಲಿ ಆನಂದಿಸುವುದು.
8ನಾನು ಅವರಿಗೆ ಸಿಳ್ಳುಹಾಕಿ,
ಅವರನ್ನು ಕೂಡಿಸುವೆನು.
ನಿಶ್ಚಯವಾಗಿ ಅವರನ್ನು ವಿಮೋಚಿಸಿದ್ದೇನೆ.
ಅವರು ಹಿಂದಿನಂತೆ ಮುಂದೆಯೂ ಸಮೃದ್ಧಿಯಾಗಿರುವರು.
9ನಾನು ಅವರನ್ನು ಜನಗಳಲ್ಲಿ ಚದುರಿಸಿದರೂ
ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡಿಕೊಳ್ಳುವರು.
ತಮ್ಮ ಮಕ್ಕಳ ಸಂಗಡ ಬದುಕಿ
ಮತ್ತೆ ತಿರುಗಿಕೊಳ್ಳುವರು.
10ಈಜಿಪ್ಟ್ ದೇಶದೊಳಗಿಂದ ಸಹ ಅವರನ್ನು ತಿರುಗಿ ತರುವೆನು.
ಅಸ್ಸೀರಿಯದೊಳಗಿಂದ ಅವರನ್ನು ಕೂಡಿಸುವೆನು.
ಗಿಲ್ಯಾದಿನ ಮತ್ತು ಲೆಬನೋನಿನ ದೇಶಕ್ಕೆ ಅವರನ್ನು ತರುವೆನು.
ಅವರಿಗೆ ಸ್ಥಳ ಸಾಲದೆ ಇರುವುದು.
11ಅವರು ಕಷ್ಟವೆಂಬ ಕಡಲನ್ನು ದಾಟುವರು.
ಸಮುದ್ರದಲ್ಲಿ ತೆರೆಗಳನ್ನು ಬಡಿಯುವರು.
ನೈಲ್ ನದಿಯ ಅಗಾಧಗಳೆಲ್ಲಾ ಒಣಗುವುವು.
ಅಸ್ಸೀರಿಯದ ಗರ್ವವು ತಗ್ಗಿಹೋಗುವುದು.
ಈಜಿಪ್ಟಿನ ರಾಜದಂಡವು ಗತಿಸುವುದು.
12ಯೆಹೋವ ದೇವರಲ್ಲಿ ನಾನು ಅವರನ್ನು ಬಲಪಡಿಸುವೆನು.
ದೇವರ ಹೆಸರಿನಲ್ಲಿ ಅವರು ಸುರಕ್ಷಿತರಾಗಿ ಬಾಳುವರು,”
ಎಂದು ಯೆಹೋವ ದೇವರು ಹೇಳುತ್ತಾರೆ.
Currently Selected:
ಜೆಕರ್ಯ 10: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.