ಅರಣ್ಯಕಾಂಡ 9
9
ಪಸ್ಕಹಬ್ಬ
1ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ಎರಡನೆಯ ವರ್ಷದ ಮೊದಲನೆಯ ತಿಂಗಳಿನಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಯ ಸಂಗಡ ಮಾತನಾಡಿ ಹೀಗೆ ಹೇಳಿದರು: 2“ಇಸ್ರಾಯೇಲರು ಪಸ್ಕವನ್ನು ನೇಮಿಸಿದ ಸಮಯದಲ್ಲಿ ಆಚರಿಸಬೇಕು. 3ಈ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆಯಲ್ಲಿ ಅದನ್ನು ಆಚರಿಸಬೇಕು. ಅದರ ಆಜ್ಞಾವಿಧಿಗಳ ಪ್ರಕಾರವಾಗಿಯೂ, ಅದರ ಎಲ್ಲಾ ನಿಯಮಗಳ ಪ್ರಕಾರವಾಗಿಯೂ ಅದನ್ನು ಆಚರಿಸಿರಿ.”
4ಆಗ ಮೋಶೆಯು ಪಸ್ಕವನ್ನು ಆಚರಿಸುವುದಕ್ಕೆ ಇಸ್ರಾಯೇಲರ ಸಂಗಡ ಮಾತನಾಡಿದನು. 5ಅವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆ ಸೀನಾಯಿ ಮರುಭೂಮಿಯಲ್ಲಿ ಪಸ್ಕವನ್ನು ಆಚರಿಸಿದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ, ಇಸ್ರಾಯೇಲರು ಮಾಡಿದರು.
6ಆದರೆ ಕೆಲವು ಜನರು ಮನುಷ್ಯನ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿವಸದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ ಅದಕ್ಕೆ ಅದೇ ದಿನ ಅವರು ಮೋಶೆ ಮತ್ತು ಆರೋನರ ಬಳಿಗೆ ಬಂದು 7ಮೋಶೆಯ ಸಂಗಡ ಮಾತನಾಡಿ, “ನಾವು ಮನುಷ್ಯನ ಶವದ ಸೋಂಕಿನಿಂದ ಅಶುದ್ಧರಾಗಿದ್ದೇವೆ. ಆದ್ದರಿಂದ ನಾವು ಇಸ್ರಾಯೇಲರೊಡನೆ ನೇಮಕವಾದ ಸಮಯದಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಲು ನಮಗೆ ಏಕೆ ಅಡ್ಡಿಯಾಗಬೇಕು,” ಎಂದರು.
8ಮೋಶೆ ಅವರಿಗೆ, “ಸ್ವಲ್ಪ ಕಾಯಿರಿ, ಯೆಹೋವ ದೇವರು ನಿಮ್ಮ ವಿಷಯದಲ್ಲಿ ಏನು ಆಜ್ಞಾಪಿಸುತ್ತಾರೋ ನಾನು ಕೇಳುತ್ತೇನೆ,” ಎಂದನು.
9ಯೆಹೋವ ದೇವರು ಮೋಶೆ ಸಂಗಡ ಮಾತನಾಡಿ ಅವನಿಗೆ, 10ನೀನು ಇಸ್ರಾಯೇಲರಿಗೆ, “ನಿಮ್ಮಲ್ಲಿಯೂ, ನಿಮ್ಮ ಸಂತತಿಯಲ್ಲಿಯೂ ಯಾವನಾದರೂ ಶವದ ಸೋಂಕಿನಿಂದ ಅಶುದ್ಧನಾಗಿದ್ದರೂ, ಇಲ್ಲವೆ ದೂರ ಪ್ರಯಾಣದಲ್ಲಿದ್ದರೂ ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕು. 11ಆದರೆ ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆಯಲ್ಲಿ ಆಚರಿಸಲಿ. ಆ ಕುರಿಯನ್ನು ಹುಳಿಯಿಲ್ಲದ ರೊಟ್ಟಿಗಳ ಸಂಗಡ ಕಹಿಯಾದ ಸೊಪ್ಪುಗಳೊಂದಿಗೆ ಊಟಮಾಡಬೇಕು. 12ಅವರು ಅದರಿಂದ ಮರುದಿವಸಕ್ಕೆ ಏನನ್ನೂ ಉಳಿಸಬಾರದು. ಅದರಲ್ಲಿ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು, ಪಸ್ಕದ ಸಮಸ್ತ ಕಟ್ಟಳೆಗಳ ಪ್ರಕಾರವಾಗಿ ಅದನ್ನು ಆಚರಿಸಬೇಕು. 13ಆದರೆ ಒಬ್ಬ ಮನುಷ್ಯನೂ ಆಚಾರವಾಗಿ ಶುದ್ಧನಾದವನು, ಪ್ರಯಾಣ ಮಾಡದವನಾಗಿದ್ದು ಪಸ್ಕವನ್ನು ಆಚರಿಸಲು ತಪ್ಪಿದರೆ, ಅವನನ್ನು ಅವನ ಜನರೊಳಗಿಂದ ತೆಗೆದುಹಾಕಬೇಕು. ಅವನು ಯೆಹೋವ ದೇವರ ಅರ್ಪಣೆಯನ್ನು ಅದರ ಸಮಯದಲ್ಲಿ ತರದಿದ್ದ ಕಾರಣ ಆ ಮನುಷ್ಯನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
14“ಪರದೇಶಿಯಾದವನು ನಿಮ್ಮ ಸಂಗಡ ಇದ್ದು, ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಬಯಸಿದರೆ, ಅದರ ಆಜ್ಞಾವಿಧಿಗಳ ಪ್ರಕಾರವೇ ಆಚರಿಸಲಿ. ಸ್ಥಳೀಯ ಮೂಲದ ಇಸ್ರಾಯೇಲರಿಗೂ ಮತ್ತು ನಿಮ್ಮ ನಡುವೆ ವಾಸಿಸುವ ಪರದೇಶಸ್ತನಿಗೂ ಒಂದೇ ನಿಯಮ ಇರಬೇಕು,” ಎಂದು ಹೇಳಿದರು.
ಗುಡಾರದ ಮೇಲೆ ಅಗ್ನಿಮೇಘ
15ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರವನ್ನು ಮುಚ್ಚಿತು. ಸಂಜೆಯಿಂದ ಮುಂಜಾನೆಯವರೆಗೆ ಅದು ಬೆಂಕಿಯಂತೆ ಗುಡಾರದ ಮೇಲೆ ಇತ್ತು. 16ಈ ಪ್ರಕಾರ ಯಾವಾಗಲೂ, ಮೇಘವು ರಾತ್ರಿಯಲ್ಲಿ ಬೆಂಕಿಯಂತೆ ಅದನ್ನು ಮುಚ್ಚುತ್ತಿತ್ತು. 17ಆ ಮೇಘವು ಗುಡಾರದ ಮೇಲಿನಿಂದ ಹೋದಾಗ, ಇಸ್ರಾಯೇಲರು ಪ್ರಯಾಣ ಮಾಡುತ್ತಿದ್ದರು, ಮೇಘವು ನೆಲಸಿದ ಸ್ಥಳದಲ್ಲಿ ಇಸ್ರಾಯೇಲರು ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಿದ್ದರು. 18ಯೆಹೋವ ದೇವರ ಆಜ್ಞೆಯ ಪ್ರಕಾರ ಇಸ್ರಾಯೇಲರು ಪ್ರಯಾಣಮಾಡಿದರು. ಯೆಹೋವ ದೇವರ ಆಜ್ಞೆಯ ಪ್ರಕಾರ ಗುಡಾರಗಳನ್ನು ಹಾಕಿದರು. ಮೇಘವು ಗುಡಾರದ ಮೇಲೆ ನೆಲಸಿರುವ ಕಾಲವೆಲ್ಲಾ ಅವರು ತಮ್ಮ ಗುಡಾರಗಳಲ್ಲಿ ವಾಸಿಸಿದರು. 19ಮೇಘವು ದೇವದರ್ಶನದ ಗುಡಾರದ ಮೇಲೆ ಅನೇಕ ದಿವಸಗಳು ತಡಮಾಡಿದಾಗ, ಇಸ್ರಾಯೇಲರು ಯೆಹೋವ ದೇವರ ಅಪ್ಪಣೆಯನ್ನು ಅನುಸರಿಸಿ ಪ್ರಯಾಣ ಮಾಡದೆ ಇರುತ್ತಿದ್ದರು. 20ಇದಲ್ಲದೆ ಮೇಘವು ಗುಡಾರದ ಮೇಲೆ ಸ್ವಲ್ಪ ದಿವಸಗಳು ಇರುವಾಗ, ಅವರು ಯೆಹೋವ ದೇವರ ಆಜ್ಞೆಯ ಪ್ರಕಾರ ಇಳಿದುಕೊಳ್ಳುತ್ತಿದ್ದರು. ಯೆಹೋವ ದೇವರ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಿದ್ದರು. 21ಮೇಘವು ಸಂಜೆಯಿಂದ ಮುಂಜಾನೆಯವರೆಗೆ ಇದ್ದು, ಬೆಳಿಗ್ಗೆ ಮೇಲಕ್ಕೆ ಎದ್ದಾಗ, ಅವರು ಪ್ರಯಾಣ ಮಾಡುತ್ತಿದ್ದರು, ಹಗಲುರಾತ್ರಿ ಇದ್ದು ಮೇಘವು ಮೇಲಕ್ಕೇರಿದಾಗ ಅವರು ಪ್ರಯಾಣ ಮಾಡುತ್ತಿದ್ದರು. 22ಆ ಮೇಘವು ಎರಡು ದಿವಸಗಳಾದರೂ, ಒಂದು ತಿಂಗಳಾದರೂ, ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾಯೇಲರು ಪ್ರಯಾಣ ಮಾಡದೆ ಅಲ್ಲೇ ಇಳಿದುಕೊಳ್ಳುತ್ತಿದ್ದರು. ಅದು ಮೇಲೆ ಎದ್ದಾಗ ಮಾತ್ರ ಅವರು ಪ್ರಯಾಣ ಮಾಡುತ್ತಿದ್ದರು. 23ಯೆಹೋವ ದೇವರ ಆಜ್ಞೆಯ ಪ್ರಕಾರ ಅವರು ಇಳಿದುಕೊಳ್ಳುತ್ತಾ, ಯೆಹೋವ ದೇವರ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಯೆಹೋವ ದೇವರು ಆಜ್ಞಾಪಿಸಿದಂತೆ ಯೆಹೋವ ದೇವರ ಅಪ್ಪಣೆಯನ್ನು ಕೈಗೊಳ್ಳುತ್ತಿದ್ದರು.
Currently Selected:
ಅರಣ್ಯಕಾಂಡ 9: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.