ಅರಣ್ಯಕಾಂಡ 13
13
ಕಾನಾನಿಗೆ ಗೂಢಚಾರರು
1ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, 2“ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಜನರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು,” ಎಂದರು.
3ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಪಾರಾನ್ ಮರುಭೂಮಿಯಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾಯೇಲರ ಮುಖ್ಯಸ್ಥರಾಗಿದ್ದರು.
4ಅವರ ಹೆಸರುಗಳು ಯಾವುವೆಂದರೆ:
ರೂಬೇನನ ಗೋತ್ರದ ಜಕ್ಕೂರನ ಮಗ ಶಮ್ಮೂವ,
5ಸಿಮೆಯೋನ್ ಗೋತ್ರದ ಹೋರಿಯನ ಮಗ ಶಾಫಾಟನು,
6ಯೆಹೂದ ಗೋತ್ರದ ಯೆಫುನ್ನೆಯ ಮಗ ಕಾಲೇಬನು,
7ಇಸ್ಸಾಕಾರ್ ಗೋತ್ರದ ಯೋಸೇಫನ ಮಗ ಇಗಾಲ್,
8ಎಫ್ರಾಯೀಮ್ ಗೋತ್ರದ ನೂನನ ಮಗ ಹೋಶೇಯ,
9ಬೆನ್ಯಾಮೀನ್ ಗೋತ್ರದ ರಾಫೂವನ ಮಗ ಪಲ್ಟೀ,
10ಜೆಬುಲೂನ್ ಗೋತ್ರದ ಸೋದೀಯ ಮಗ ಗದ್ದೀಯೇಲ್,
11ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗ ಗದ್ದೀ,
12ದಾನನ ಗೋತ್ರದ ಗೆಮಲ್ಲೀಯನ ಮಗ ಅಮ್ಮಿಯೇಲ್,
13ಆಶೇರ್ ಗೋತ್ರದ ಮೀಕಾಯೇಲನ ಮಗ ಸೆತೂರ್,
14ನಫ್ತಾಲಿ ಗೋತ್ರದ ವಾಪೆಸೀಯನ ಮಗ ನಹಬೀ.
15ಗಾದನ ಗೋತ್ರದ ಮಾಕೀಯನ ಮಗ ಗೆಯೂಯೇಲ್.
16ದೇಶವನ್ನು ಸಂಚರಿಸಿ ನೋಡುವುದಕ್ಕಾಗಿ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ಯೆಹೋಶುವ ಎಂದು ಹೆಸರಿಟ್ಟನು.
17ಮೋಶೆ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ನೆಗೆವ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ, 18ಆ ದೇಶವು ಎಂಥಾದ್ದೋ? ಅದರಲ್ಲಿ ವಾಸಿಸುವ ಜನರು ಬಲವುಳ್ಳವರೋ, ಬಲಹೀನರೋ? ಸ್ವಲ್ಪ ಜನರೋ, ಬಹಳ ಜನರೋ? ಎಂದೂ, 19ಅವರು ವಾಸಿಸುವ ದೇಶವು ಎಂಥಾದ್ದೋ? ಅದು ಒಳ್ಳೆಯದಾಗಿದೆಯೋ, ಕೆಟ್ಟದ್ದಾಗಿದೆಯೋ? ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ? ಅವರು ವಾಸಿಸುವುದು ಡೇರೆಗಳಲ್ಲಿಯೋ, ಬಲವಾದ ಕೋಟೆಗಳಲ್ಲಿಯೋ? ಎಂದೂ, 20ಆ ಭೂಮಿಯು ಎಂಥಾದ್ದೋ? ಸಾರವಾದದ್ದೋ? ನಿಸ್ಸಾರವಾದದ್ದೋ? ಮರಗಳುಳ್ಳದ್ದೋ? ಇಲ್ಲದಿರುವುದೋ? ಎಂದು ನೋಡಿರಿ. ನೀವು ಧೈರ್ಯವುಳ್ಳವರಾಗಿದ್ದು, ಆ ಭೂಮಿಯ ಫಲವನ್ನು ತರಬೇಕು,” ಎಂದನು. ಆ ಕಾಲವು ಪ್ರಥಮ ದ್ರಾಕ್ಷಿ ಹಣ್ಣುಗಳ ಕಾಲವಾಗಿತ್ತು.
21ಆಗ ಅವರು ಏರಿಹೋಗಿ ಚಿನ್ ಎಂಬ ಮರುಭೂಮಿಯಿಂದ ಹಮಾತಿನ ಕಡೆಯಲ್ಲಿರುವ ರೆಹೋಬಿನವರೆಗೂ ದೇಶವನ್ನು ಸಂಚರಿಸಿ ನೋಡಿದರು. 22ಅವರು ನೆಗೆವನ್ನು ದಾಟಿ ಹೆಬ್ರೋನಿನವರೆಗೆ ಬಂದರು. ಅಲ್ಲಿ ಅನಾಕನ ಮಕ್ಕಳಾದ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತರಾದ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳು ಮೊದಲು ನಿರ್ಮಿಸಲಾಗಿತ್ತು. 23ಅವರು ಎಷ್ಕೋಲ್ ಹಳ್ಳದವರೆಗೂ ಬಂದು, ಅಲ್ಲಿ ದ್ರಾಕ್ಷಿ ಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು, ಅದನ್ನು ಅಡ್ಡ ಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು. ಇದಲ್ಲದೆ ದಾಳಿಂಬೆ, ಅಂಜೂರ ಹಣ್ಣುಗಳನ್ನು ತೆಗೆದುಕೊಂಡು ಹೋದರು. 24ಇಸ್ರಾಯೇಲರು ಅಲ್ಲಿ ದ್ರಾಕ್ಷಿ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಹಳ್ಳವೆಂದು ಹೆಸರಿಟ್ಟರು. 25ಅವರು ದೇಶವನ್ನು ಸಂಚರಿಸಿ ನೋಡಿ, ನಲವತ್ತು ದಿವಸಗಳಾದ ಮೇಲೆ ತಿರುಗಿ ಬಂದರು.
ಕಾನಾನ್ ದೇಶದ ಕುರಿತು ವರದಿ
26ಅವರು ಹೋಗಿ ಮೋಶೆ ಆರೋನರ ಬಳಿಗೂ, ಇಸ್ರಾಯೇಲರ ಸಮಸ್ತ ಸಭೆಯ ಬಳಿಗೂ ಪಾರಾನ್ ಮರುಭೂಮಿಯಲ್ಲಿರುವ ಕಾದೇಶಿಗೂ ಬಂದು, ಅವರಿಗೂ, ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ, ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು. 27ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ. ಅದರ ಫಲವು ಇವೇ. 28ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು. ಪಟ್ಟಣಗಳು ಭದ್ರವಾಗಿಯೂ, ಬಹಳ ದೊಡ್ಡದಾಗಿಯೂ ಇವೆ. ಅನಾಕನ ಮಕ್ಕಳನ್ನು ನಾವು ಅಲ್ಲಿ ಕಂಡೆವು. 29ಅಮಾಲೇಕ್ಯರು ದೇಶದ ನೆಗೆವನಲ್ಲಿ ವಾಸವಾಗಿದ್ದಾರೆ. ಹಿತ್ತಿಯರೂ ಯೆಬೂಸಿಯರೂ ಅಮೋರಿಯರೂ ಪರ್ವತಗಳಲ್ಲಿಯೂ; ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸವಾಗಿದ್ದಾರೆ,” ಎಂದರು.
30ನಂತರ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ, “ನಾವು ತಕ್ಷಣವೇ ಏರಿಹೋಗಿ ಅದನ್ನು ಸ್ವಾಧೀನ ಮಾಡಿಕೊಳ್ಳೋಣ. ಏಕೆಂದರೆ ಅದನ್ನು ಜಯಿಸಲು ನಾವು ನಿಜವಾಗಿಯೂ ಶಕ್ತರಾಗಿದ್ದೇವೆ,” ಎಂದನು.
31ಆದರೆ ಅವನ ಸಂಗಡ ಹೋದ ಜನರು, “ಆ ಜನರ ಬಳಿಗೆ ಹೋಗುವುದಕ್ಕೆ ನಮ್ಮಿಂದಾಗುವುದಿಲ್ಲ, ಅವರು ನಮಗಿಂತ ಬಲಿಷ್ಠರಾಗಿದ್ದಾರೆ,” ಎಂದರು. 32ಅವರು ಸಂಚರಿಸಿ ನೋಡಿದಂಥ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿ ಬಂದ ದೇಶವು ತನ್ನಲ್ಲಿ ವಾಸವಾಗಿರುವವರನ್ನೇ ತಿಂದುಬಿಡುವ ದೇಶವಾಗಿದೆ. ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾ ಶರೀರದ ಮನುಷ್ಯರು. 33ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ#13:33 ನೆಫೀಲಿಯ ಎಂದರೆ ಅನಾಕ್ ವಂಶ ವಂಶದವರಾದ ಮಹಾಶರೀರವುಳ್ಳ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳ ಹಾಗೆ ಇದ್ದೆವು. ಅವರ ದೃಷ್ಟಿಗೂ ನಾವು ಹಾಗೆಯೇ ಕಾಣಿಸಿದೆವು,” ಎಂದರು.
Currently Selected:
ಅರಣ್ಯಕಾಂಡ 13: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Free Reading Plans and Devotionals related to ಅರಣ್ಯಕಾಂಡ 13

Consecration for Men: 5 Days of Prayer and Fasting

Valleys: Find Courageous Conviction in Life’s Lows

Fluent: Part 4
