ಮಾರ್ಕ 5
5
ದೆವ್ವ ಪೀಡಿತನನ್ನು ಗುಣಪಡಿಸಿದ್ದು
1ಅವರೆಲ್ಲರು ಸರೋವರದ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತವನ್ನು ಸೇರಿದರು. 2ಯೇಸು ದೋಣಿಯಿಂದ ಇಳಿದುಬರುವಾಗ, ಅಶುದ್ಧಾತ್ಮವುಳ್ಳ ಒಬ್ಬನು ಸಮಾಧಿಯ ಗುಹೆಯೊಳಗಿಂದ ಹೊರಬಂದು ಅವರನ್ನು ಸಂಧಿಸಿದನು. 3ಅವನು ಸಮಾಧಿಯ ಗುಹೆಗಳ ನಡುವೆ ವಾಸಿಸುತ್ತಿದ್ದನು ಮತ್ತು ಯಾರಿಗೂ ಅವನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. ಸರಪಣಿಯಿಂದಲೂ ಅವನನ್ನು ಕಟ್ಟಿ ಹಾಕಲು ಆಗುತ್ತಿರಲಿಲ್ಲ. 4ಅನೇಕ ಸಾರಿ ಅವನ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದ್ದರೂ ಅವನು ಅವುಗಳನ್ನು ಕಿತ್ತೆಸೆದು, ಬೇಡಿಗಳನ್ನು ತುಂಡುತುಂಡು ಮಾಡುತ್ತಿದ್ದನು. ಅವನನ್ನು ಹತೋಟಿಯಲ್ಲಿಡುವಷ್ಟು ಬಲ ಯಾರಿಗೂ ಇರಲಿಲ್ಲ. 5ಅವನು ಹಗಲಿರುಳು ಸಮಾಧಿಯ ಗುಹೆಗಳಲ್ಲಿಯೂ ಗುಡ್ಡಗಳಲ್ಲಿಯೂ ಇರುವವನಾಗಿ ಅರಚುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಚಚ್ಚಿಕೊಳ್ಳುತ್ತಿದ್ದನು.
6ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು, ಅವರ ಮುಂದೆ ಮೊಣಕಾಲೂರಿ, 7ಮಹಾಶಬ್ದದಿಂದ ಆರ್ಭಟಿಸಿ, “ಯೇಸುವೇ, ಮಹೋನ್ನತ ದೇವಪುತ್ರನೇ, ನನ್ನ ಗೊಡವೆ ನಿಮಗೆ ಏಕೆ? ದೇವರಾಣೆ, ನನ್ನನ್ನು ಪೀಡಿಸಬೇಡಿರಿ!” ಎಂದು ಅರಚಿದನು. 8ಏಕೆಂದರೆ ಯೇಸು ಅವನಿಗೆ, “ಅಶುದ್ಧಾತ್ಮವೇ ಅವನನ್ನು ಬಿಟ್ಟು ಹೊರಗೆ ಬಾ!” ಎಂದು ಹೇಳಿದ್ದರು.
9ಅನಂತರ, ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದಾಗ,
“ನನ್ನ ಹೆಸರು ಸೇನೆ,#5:9 ಸೇನೆ ಗ್ರೀಕ್ ಭಾಷೆಯಲ್ಲಿ ಲೀಜನ್ ಅಂದರೆ ಸುಮಾರು 4000 ದಿಂದ 6000 ಸೈನ್ಯದ ಸಮೂಹ. ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದು ಹೇಳಿದನು. 10ಅವುಗಳನ್ನು ಆ ಪ್ರಾಂತದಿಂದ ಹೊರಗಟ್ಟಬಾರದೆಂದು ಅವನು ಯೇಸುವನ್ನು ಬಹಳವಾಗಿ ಬೇಡಿಕೊಂಡನು.
11ಹತ್ತಿರದಲ್ಲಿದ್ದ ಗುಡ್ಡದ ಸಮೀಪದಲ್ಲಿ ಹಂದಿಗಳ ಒಂದು ದೊಡ್ಡ ಹಿಂಡು ಮೇಯುತ್ತಿತ್ತು. 12“ನಾವು ಆ ಹಂದಿಗಳ ಹಿಂಡಿನೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಅವುಗಳೊಳಗೆ ಕಳುಹಿಸಿಕೊಡಿ,” ಎಂದು ದೆವ್ವಗಳು ಯೇಸುವನ್ನು ಬೇಡಿಕೊಂಡವು. 13ಯೇಸು ಅವುಗಳಿಗೆ ಅಪ್ಪಣೆಕೊಡಲು, ಆ ಅಶುದ್ಧಾತ್ಮಗಳು ಅವನಿಂದ ಹೊರಗೆ ಬಂದು ಹಂದಿಗಳೊಳಗೆ ಸೇರಿದವು. ಸುಮಾರು ಎರಡು ಸಾವಿರ ಹಂದಿಗಳಿದ್ದ ಆ ಹಿಂಡು ಓಡಿ ಕಡಿದಾದ ಬದಿಯಿಂದ ಸರೋವರದೊಳಗೆ ಬಿದ್ದು ಮುಳುಗಿ ಸತ್ತು ಹೋದವು.
14ಆ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ನಡೆದ ಸಂಗತಿಯನ್ನು ತಿಳಿಸಿದರು ಮತ್ತು ನಡೆದದ್ದನ್ನು ಕಾಣಲು ಜನರು ಬಂದರು. 15ಅವರು ಯೇಸುವಿನ ಬಳಿಗೆ ಬಂದಾಗ, ದೆವ್ವಗಳ ಸೇನೆಯಿಂದ ಪೀಡಿತನಾಗಿದ್ದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ ಕುಳಿತಿರುವುದನ್ನು ಕಂಡು ಭಯಪಟ್ಟರು. 16ನಡೆದದ್ದನ್ನು ಕಂಡವರು, ದೆವ್ವಪೀಡಿತನಾಗಿದ್ದವನಿಗೆ ಏನಾಯಿತೆಂಬುದನ್ನು ಮತ್ತು ಹಂದಿಗಳಿಗಾದ ಗತಿಯನ್ನು ಜನರಿಗೆ ತಿಳಿಸಿದರು. 17ಆಗ ಅವರು ಯೇಸುವಿಗೆ, ತಮ್ಮ ಪ್ರಾಂತವನ್ನು ಬಿಟ್ಟು ಹೊರಟುಹೋಗಬೇಕೆಂದು ಕೇಳಿಕೊಂಡರು.
18ಯೇಸು ದೋಣಿಯನ್ನು ಹತ್ತುತ್ತಿದ್ದಾಗ, ದೆವ್ವಪೀಡಿತನಾಗಿದ್ದವನು ತನ್ನನ್ನು ಅವರ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದು ಬೇಡಿಕೊಂಡನು. 19ಯೇಸು ಅದಕ್ಕೊಪ್ಪದೆ ಅವನಿಗೆ, “ನೀನು ಮನೆಗೆ ಹೋಗಿ ನಿನ್ನ ಜನರಿಗೆ ಕರ್ತದೇವರು ನಿನಗೆ ಮಾಡಿರುವ ಮಹಾಕಾರ್ಯಗಳನ್ನು ಮತ್ತು ನಿನ್ನನ್ನು ಹೇಗೆ ಕರುಣಿಸಿದ್ದಾರೆ ಎಂಬುದನ್ನು ತಿಳಿಸು,” ಎಂದರು. 20ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ದೆಕಪೊಲಿಯಲ್ಲಿ#5:20 ಅಂದರೆ, ಹತ್ತು ಪಟ್ಟಣಗಳು ಸಾರಲಾರಂಭಿಸಿದನು ಮತ್ತು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
ಯಾಯೀರನ ಸತ್ತ ಮಗಳು ಮತ್ತು ರಕ್ತಸ್ರಾವ ರೋಗಿಯಾದ ಸ್ತ್ರೀ
21ಯೇಸು ಪುನಃ ದೋಣಿಯಲ್ಲಿ ಆಚೆಯ ದಡವನ್ನು ಮುಟ್ಟಿದಾಗ, ಜನರು ದೊಡ್ಡ ಗುಂಪಾಗಿ ಅವರ ಸುತ್ತಲೂ ಸೇರಿ ಬಂದರು. 22ಯೇಸು ಸರೋವರದ ದಡದಲ್ಲಿದ್ದಾಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನು ಅಲ್ಲಿಗೆ ಬಂದು ಯೇಸುವನ್ನು ಕಂಡು ಅವರ ಪಾದಕ್ಕೆ ಬಿದ್ದು, 23“ನನ್ನ ಚಿಕ್ಕ ಮಗಳು ಸಾಯುತ್ತಿದ್ದಾಳೆ. ಅವಳು ಗುಣಹೊಂದಿ ಬದುಕುವಂತೆ ದಯಮಾಡಿ ಬಂದು ಅವಳ ಮೇಲೆ ನಿಮ್ಮ ಕೈಗಳನ್ನಿಡಬೇಕು,” ಎಂದು ಬಹಳವಾಗಿ ಬೇಡಿಕೊಂಡನು. 24ಆಗ ಯೇಸು ಅವನೊಂದಿಗೆ ಹೋದರು.
ಜನರು ದೊಡ್ಡ ಗುಂಪಾಗಿ ಯೇಸುವನ್ನು ನೂಕುತ್ತಾ ಹಿಂಬಾಲಿಸಿದರು. 25ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು. 26ಆಕೆ ಅನೇಕ ವೈದ್ಯರ ಚಿಕಿತ್ಸೆಯಿಂದ ಬಹು ಶ್ರಮಪಟ್ಟು, ತನಗಿದ್ದದ್ದೆಲ್ಲವನ್ನು ಖರ್ಚು ಮಾಡಿದ್ದರೂ ಸ್ವಲ್ಪವೂ ಪ್ರಯೋಜನವಾಗದೆ ಆ ರೋಗವು ಇನ್ನೂ ಹೆಚ್ಚಾಗುತ್ತಾ ಬಂತು. 27ಆಕೆ ಯೇಸುವಿನ ವಿಷಯವಾಗಿ ಕೇಳಿ, ಜನರ ಗುಂಪಿನಲ್ಲಿ ಅವರ ಹಿಂದೆ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು. 28ಏಕೆಂದರೆ, “ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು,” ಎಂದುಕೊಂಡಿದ್ದಳು. 29ಕೂಡಲೇ ಆಕೆಯ ರಕ್ತಸ್ರಾವವು ನಿಂತಿತು ಮತ್ತು ರೋಗಬಾಧೆಯಿಂದ ತಾನು ಗುಣಹೊಂದಿದಳೆಂದು ಆಕೆಗೆ ತಿಳಿಯಿತು.
30ಕೂಡಲೇ ಗುಣಪಡಿಸುವ ಶಕ್ತಿಯು ತನ್ನಿಂದ ಹೊರಟಿತೆಂದು ಯೇಸು ತಿಳಿದು, ಜನರ ನಡುವೆ ಸುತ್ತಲೂ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದರು.
31ಯೇಸುವಿನ ಶಿಷ್ಯರು ಅವರಿಗೆ, “ಇಷ್ಟು ದೊಡ್ಡ ಗುಂಪು ನಿಮ್ಮ ಸುತ್ತಲೂ ನೂಕುತ್ತಿರುವುದನ್ನು ನೀವೇ ಕಾಣುತ್ತಿರುವಲ್ಲಿ, ‘ನನ್ನನ್ನು ಮುಟ್ಟಿದವರು ಯಾರು,’ ಎಂದು ಕೇಳುತ್ತೀರಲ್ಲಾ?” ಎಂದರು.
32ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರು ಎಂದು ಕಾಣಲು ಸುತ್ತಲೂ ನೋಡಲಾರಂಭಿಸಿದರು. 33ಆಗ ಆ ಸ್ತ್ರೀ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಭಯದಿಂದ ನಡುಗುತ್ತಾ ನಡೆದ ಎಲ್ಲಾ ನಿಜಸಂಗತಿಯನ್ನು ತಿಳಿಸಿದಳು. 34ಯೇಸು ಆ ಸ್ತ್ರೀಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು, ನಿನ್ನ ಬಾಧೆಯಿಂದ ನೀನು ಮುಕ್ತಳಾಗಿರುವೆ,” ಎಂದು ಹೇಳಿದರು.
35ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಕೆಲವರು ಬಂದು, “ನಿನ್ನ ಮಗಳು ತೀರಿಹೋದಳು. ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದರು.
36ಆದರೆ ಯೇಸು ಅವರು ಹೇಳಿದ ಮಾತನ್ನು ಲಕ್ಷ್ಯಮಾಡದೆ, ಆ ಸಭಾಮಂದಿರದ ಅಧಿಕಾರಿಗೆ, “ಭಯಪಡಬೇಡ ನಂಬಿಕೆ ಮಾತ್ರ ಇರಲಿ,” ಎಂದರು.
37ಯೇಸು ತಮ್ಮ ಸಂಗಡ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನು ಹೊರತು ಬೇರೆ ಯಾರನ್ನೂ ಬರುವುದಕ್ಕೆ ಅನುಮತಿಸಲಿಲ್ಲ. 38ಅವರು ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ, ಯೇಸು ಜನರು ಬಹಳವಾಗಿ ಗೋಳಾಡುವುದನ್ನೂ ಪ್ರಲಾಪಿಸುವುದನ್ನೂ ಕಂಡರು. 39ಯೇಸು ಮನೆಯೊಳಗೆ ಹೋಗಿ, “ನೀವು ಗೋಳಾಡಿ ಅಳುವುದೇಕೆ? ಮಗು ಸತ್ತಿಲ್ಲ, ಅವಳು ನಿದ್ದೆ ಮಾಡುತ್ತಿದ್ದಾಳೆ,” ಎಂದರು. 40ಆದರೆ ಅವರು ಯೇಸುವನ್ನು ಪರಿಹಾಸ್ಯ ಮಾಡಿದರು.
ಯೇಸು ಅವರನ್ನೆಲ್ಲಾ ಹೊರಗೆ ಹಾಕಿ, ಆ ಹುಡುಗಿಯ ತಂದೆತಾಯಿ ಮತ್ತು ತನ್ನೊಂದಿಗಿದ್ದ ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಹುಡುಗಿಯನ್ನಿಟ್ಟಿದ್ದ ಕೋಣೆಗೆ ಹೋದರು. 41ಯೇಸು ಆಕೆಯ ಕೈಹಿಡಿದು, “ತಲಿಥಾ ಕೂಮ್!” ಎಂದರು. ಅರಮೀಯ ಭಾಷೆಯಲ್ಲಿ ಇದರ ಅರ್ಥ, “ಚಿಕ್ಕ ಹುಡುಗಿಯೇ! ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂಬುದು. 42ಕೂಡಲೇ ಆ ಹುಡುಗಿ ಎದ್ದು ನಡೆದಾಡಿದಳು. ಆಕೆಗೆ ಹನ್ನೆರಡು ವಯಸ್ಸಾಗಿತ್ತು. ಎಲ್ಲರೂ ಬಹಳ ಆಶ್ಚರ್ಯಪಟ್ಟರು. 43ಯೇಸು ಅವರಿಗೆ ನಡೆದದ್ದನ್ನು ಯಾರಿಗೂ ತಿಳಿಸಬಾರದು ಎಂದು ಬಹು ಖಂಡಿತವಾಗಿ ಹೇಳಿ ಹುಡುಗಿಗೆ ತಿನ್ನಲು ಏನಾದರೂ ಕೊಡಬೇಕೆಂದು ಹೇಳಿದರು.
Currently Selected:
ಮಾರ್ಕ 5: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.