YouVersion Logo
Search Icon

ಮಾರ್ಕ 1

1
ಸ್ನಾನಿಕ ಯೋಹಾನನು ಮಾರ್ಗವನ್ನು ಸಿದ್ಧಪಡಿಸಿದ್ದು
1ದೇವಪುತ್ರರಾದ#1:1 ಕೆಲವು ಹಸ್ತಪ್ರತಿಗಳಲ್ಲಿ ದೇವಪುತ್ರ ಎಂಬ ಪದವಿಲ್ಲ. ಯೇಸುಕ್ರಿಸ್ತರ#1:1 ಕ್ರಿಸ್ತ ಎಂಬ ಗ್ರೀಕ್ ಪದಕ್ಕೆ ಮೆಸ್ಸೀಯ ಎಂಬ ಹೀಬ್ರೂ ಪದಕ್ಕೆ ಅಭಿಷಿಕ್ತರು ಎಂದರ್ಥ ಸುವಾರ್ತೆಯ ಆರಂಭ. 2ಪ್ರವಾದಿ ಯೆಶಾಯನ ಗ್ರಂಥದಲ್ಲಿ:
“ಇಗೋ, ನಿನ್ನ ಮುಂದೆ ನಾನು ನನ್ನ ದೂತನನ್ನು ಕಳುಹಿಸುತ್ತೇನೆ,
ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”#1:2 ಮಲಾಕಿ 3:1
3“ ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ,
ಅವರ ದಾರಿಗಳನ್ನು ಸರಾಗಮಾಡಿರಿ,’
ಎಂದು ಅರಣ್ಯದಲ್ಲಿ ಕೂಗುವವನ ಸ್ವರವದೆ.”#1:3 ಯೆಶಾಯ 40:3
4ಎಂದು ಬರೆದಿಟ್ಟ ಪ್ರಕಾರ, ಸ್ನಾನಿಕನಾದ ಯೋಹಾನನು ಅರಣ್ಯದಲ್ಲಿ ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು, ಸಾರುತ್ತಾ ಬಂದನು. 5ಯೂದಾಯ ಪ್ರಾಂತದ ಎಲ್ಲಾ ಹಳ್ಳಿಗಳಿಂದ ಮತ್ತು ಯೆರೂಸಲೇಮ್ ನಗರದಿಂದ ಎಲ್ಲಾ ಜನರು ಅವನ ಬಳಿಗೆ ಬರುತ್ತಿದ್ದರು. ಅವರು ತಮ್ಮ ಪಾಪಗಳನ್ನು ಅರಿಕೆಮಾಡುತ್ತಾ, ಅವನಿಂದ ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. 6ಯೋಹಾನನು ಒಂಟೆಯ ಕೂದಲಿನ ಉಡುಪನ್ನು ಧರಿಸಿ,#1:6 2 ಅರಸು 1:8 ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು. 7ಅವನು, “ನನಗಿಂತ ಶಕ್ತರೊಬ್ಬರು ನನ್ನ ನಂತರ ಬರುತ್ತಾರೆ, ಅವರ ಪಾದರಕ್ಷೆಗಳ ಪಟ್ಟಿಗಳನ್ನು ದಾಸನಂತೆ ಬಾಗಿ ಬಿಚ್ಚುವುದಕ್ಕೂ ನಾನು ಅರ್ಹನಲ್ಲ. 8ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಅವರು ನಿಮಗೆ ಪವಿತ್ರಾತ್ಮರಲ್ಲಿಯೇ ದೀಕ್ಷಾಸ್ನಾನ ಮಾಡಿಸುವರು,” ಎಂದು ಘೋಷಿಸುತ್ತಿದ್ದನು.
ಯೇಸುವಿನ ದೀಕ್ಷಾಸ್ನಾನ ಮತ್ತು ಅವರ ಶೋಧನೆ
9ಹೀಗಿರುವಲ್ಲಿ, ಒಂದು ದಿನ ಯೇಸು ಗಲಿಲಾಯ ಪ್ರಾಂತದ ನಜರೇತ್ ಎಂಬ ಪಟ್ಟಣದಿಂದ ಬಂದು, ಯೊರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು. 10ಯೇಸು ನೀರಿನಿಂದ ಮೇಲಕ್ಕೆ ಬಂದ ಕೂಡಲೇ, ಆಕಾಶವು ತೆರೆದು, ಪವಿತ್ರಾತ್ಮರು ಪಾರಿವಾಳದಂತೆ ತಮ್ಮ ಮೇಲೆ ಇಳಿದು ಬರುವುದನ್ನು ಕಂಡರು. 11ಆಗ, “ನೀನು ನನ್ನ ಪ್ರಿಯ ಪುತ್ರನು, ನಿನ್ನನ್ನು ಅಪಾರವಾಗಿ ಮೆಚ್ಚಿದ್ದೇನೆ,” ಎಂಬ ಧ್ವನಿಯು ಪರಲೋಕದಿಂದ ಕೇಳಿಬಂತು.
12ಕೂಡಲೇ ಪವಿತ್ರಾತ್ಮ ದೇವರು ಯೇಸುವನ್ನು ಅರಣ್ಯಕ್ಕೆ ನಡೆಸಿದರು. 13ಯೇಸು ಅಲ್ಲಿ ನಲವತ್ತು ದಿನಗಳು, ಸೈತಾನನಿಂದ ಶೋಧನೆಗೆ#1:13 ಗ್ರೀಕ್ ಭಾಷೆಯಲ್ಲಿ ಶೋಧನೆಗೆ ಪರೀಕ್ಷೆ ಎಂದರ್ಥ ಒಳಗಾದರು. ಕಾಡುಮೃಗಗಳೊಡನೆ ಅರಣ್ಯದಲ್ಲಿ ಇದ್ದು, ದೇವದೂತರಿಂದ ಉಪಚಾರ ಪಡೆದರು.
ಯೇಸು ಸುವಾರ್ತೆಯನ್ನು ಸಾರಿದ್ದು
14ಯೋಹಾನನು ಬಂಧಿತನಾಗಿ ಸೆರೆಯಾದ ತರುವಾಯ, ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಸಾರಿದರು: 15“ಕಾಲವು ಪರಿಪೂರ್ಣವಾಗಿದೆ, ದೇವರ ರಾಜ್ಯವು ಸಮೀಪಿಸಿದೆ, ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ,” ಎಂದು ಹೇಳಿದರು.
ಯೇಸು ಪ್ರಥಮ ಶಿಷ್ಯರನ್ನು ಕರೆದದ್ದು
16ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಸೀಮೋನನು ಮತ್ತು ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು. 17ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,”#1:17 ಅಂದರೆ ನಿಮ್ಮನ್ನು ಮನುಷ್ಯರನ್ನೇ ಹಿಡಿಯುವ ಬೆಸ್ತರನ್ನಾಗಿ ಮಾಡುವೆನು ಎಂದು ಹೇಳಿದರು. 18ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
19ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನು ಕಂಡರು. ಅವರು ತಮ್ಮ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. 20ಕೂಡಲೇ ಯೇಸು ಅವರನ್ನು ಕರೆಯಲು, ಅವರು ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಯೇಸು ದುರಾತ್ಮವನ್ನು ಓಡಿಸಿದ್ದು
21ಅವರು ಕಪೆರ್ನೌಮಿಗೆ ಹೋದರು, ಕೂಡಲೇ ಸಬ್ಬತ್#1:21 ಸಬ್ಬತ್ ಇದು ವಾರದ ಏಳನೆಯ ದಿನ, ಈ ದಿನವನ್ನು ಯೆಹೂದ್ಯರು ಪವಿತ್ರ ದಿನ ಎನ್ನುತ್ತಿದ್ದರು. ಈ ದಿನದಲ್ಲಿ ಅವರು ಆರಾಧನೆ ಮತ್ತು ವಿಶ್ರಾಂತಿ ಮಾಡುತ್ತಿದ್ದರು. ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು. 22ಯೇಸುವಿನ ಬೋಧನೆಯನ್ನು ಕೇಳಿ ಜನರು ಆಶ್ಚರ್ಯಪಟ್ಟರು. ಏಕೆಂದರೆ ಯೇಸು ನಿಯಮ ಬೋಧಕರಂತೆ ಬೋಧಿಸದೆ, ಅಧಿಕಾರವಿದ್ದವರಂತೆ ಬೋಧಿಸುತ್ತಿದ್ದರು. 23ಆ ಸಮಯದಲ್ಲಿ ಸಭಾಮಂದಿರದೊಳಗೆ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು. 24ಅವನು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀವು ನಮ್ಮನ್ನು ನಾಶಮಾಡುವುದಕ್ಕಾಗಿ ಬಂದಿರುವೆಯೋ? ನೀವು ಯಾರೆಂದು ನಾನು ಬಲ್ಲೆನು. ನೀವು ದೇವರಿಂದ ಬಂದ ಪರಿಶುದ್ಧರು,” ಎಂದು ಕೂಗಿ ಹೇಳಿದನು.
25ಆಗ ಯೇಸು, “ಸುಮ್ಮನಿರು, ಅವನೊಳಗಿಂದ ಹೊರಗೆ ಬಾ,” ಎಂದು ಗದರಿಸಿದರು. 26ಅಶುದ್ಧಾತ್ಮವು ಅವನನ್ನು ಉಗ್ರವಾಗಿ ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂತು.
27ಜನರೆಲ್ಲರು ಇದನ್ನು ಕಂಡು ವಿಸ್ಮಯಗೊಂಡು, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ಅಶುದ್ಧಾತ್ಮಗಳಿಗೆ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 28ಕೂಡಲೇ ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿನ ಪ್ರಾಂತದಲ್ಲೆಲ್ಲಾ ಹಬ್ಬಿತು.
ಯೇಸು ಅನೇಕರನ್ನು ಗುಣಪಡಿಸಿದ್ದು
29ಅವರು ಸಭಾಮಂದಿರವನ್ನು ಬಿಟ್ಟ ಕೂಡಲೇ, ಯಾಕೋಬ ಯೋಹಾನರೊಡನೆ ಸೀಮೋನ ಅಂದ್ರೆಯರ ಮನೆಗೆ ಹೋದರು. 30ಅಲ್ಲಿ ಸೀಮೋನನ ಅತ್ತೆಯು ಜ್ವರದಿಂದ ಮಲಗಿದ್ದಳು. ಕೂಡಲೇ ಅವರು ಆಕೆಯ ವಿಷಯವಾಗಿ ಯೇಸುವಿಗೆ ತಿಳಿಸಿದರು. 31ಯೇಸು ಆಕೆಯ ಬಳಿಗೆ ಬಂದು, ಕೈಹಿಡಿದು ಎಬ್ಬಿಸಿದರು. ಜ್ವರವು ಆಕೆಯನ್ನು ಬಿಟ್ಟುಹೋಯಿತು ಮತ್ತು ಆಕೆಯು ಅವರಿಗೆ ಉಪಚರಿಸಿದಳು.
32ಆ ಸಂಜೆ ಸೂರ್ಯಾಸ್ತವಾದ ಮೇಲೆ ಜನರು ಅಸ್ವಸ್ಥರಾದವರನ್ನು ಮತ್ತು ದೆವ್ವಪೀಡಿತರನ್ನು ಯೇಸುವಿನ ಬಳಿಗೆ ಕರೆತಂದರು. 33ಇಡೀ ಊರಿನವರು ಕೂಡಿ ಆ ಮನೆಯ ಬಾಗಿಲಿನ ಬಳಿ ಬಂದರು. 34ಯೇಸು ವಿವಿಧ ರೋಗಗಳಿಗೆ ಒಳಗಾದ ಅನೇಕರನ್ನು ಸ್ವಸ್ಥಪಡಿಸಿ, ಅನೇಕ ದೆವ್ವಗಳನ್ನು ಓಡಿಸಿದರು. ಆದರೆ ತಾನು ಯಾರೆಂದು ಆ ದೆವ್ವಗಳಿಗೆ ತಿಳಿದಿದ್ದರಿಂದ ಯೇಸು ಅವುಗಳಿಗೆ ಮಾತನಾಡಲು ಅನುಮತಿಸಲಿಲ್ಲ.
ಯೇಸು ಏಕಾಂತದಲ್ಲಿ ಪ್ರಾರ್ಥಿಸಿದ್ದು
35ಬೆಳಗಾಗುವ ಮೊದಲೇ, ಇನ್ನೂ ಕತ್ತಲಿರುವಾಗ, ಯೇಸು ಎದ್ದು ಏಕಾಂತ ಸ್ಥಳಕ್ಕೆ ಹೊರಟುಹೋಗಿ, ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. 36ಆಗ ಸೀಮೋನನು ಮತ್ತು ಅವನ ಸಂಗಡಿಗರು ಯೇಸುವನ್ನು ಹುಡುಕಿಕೊಂಡು ಹೋದರು. 37ಯೇಸುವನ್ನು ಕಂಡ ಮೇಲೆ, “ಎಲ್ಲರೂ ನಿಮ್ಮನ್ನು ಎದುರು ನೋಡುತ್ತಿದ್ದಾರೆ,” ಎಂದು ಹೇಳಿದರು.
38ಯೇಸು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ. ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು. ನಾನು ಬಂದಿರುವುದು ಇದಕ್ಕಾಗಿಯೇ,” ಎಂದು ಹೇಳಿದರು. 39ಆದ್ದರಿಂದ ಯೇಸು ಗಲಿಲಾಯ ಪ್ರಾಂತವನ್ನೆಲ್ಲಾ ಸಂಚರಿಸಿ, ಅವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೆವ್ವಗಳನ್ನು ಓಡಿಸುತ್ತಾ ಇದ್ದರು.
ಕುಷ್ಠರೋಗಿ ಗುಣಹೊಂದಿದ್ದು
40ಕುಷ್ಠರೋಗಿಯಾಗಿದ್ದ ಒಬ್ಬನು ಯೇಸುವಿನ ಬಳಿಗೆ ಬಂದು, ಮೊಣಕಾಲೂರಿ, “ನಿಮಗೆ ಮನಸ್ಸಿದ್ದರೆ, ನೀವು ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದು ಅವರನ್ನು ಬೇಡಿಕೊಂಡನು.
41ಯೇಸು ಕನಿಕರಪಟ್ಟು, ತಮ್ಮ ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸಿದೆ, ನೀನು ಶುದ್ಧನಾಗು,” ಎಂದರು. 42ತಕ್ಷಣವೇ ಕುಷ್ಠರೋಗವು ಹೋಗಿ ಅವನು ಶುದ್ಧನಾದನು.
43-44ಯೇಸು ಅವನಿಗೆ, “ನೋಡು, ಇದನ್ನು ಯಾರಿಗೂ ಹೇಳಬೇಡ. ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ, ಮೋಶೆಯು ಆಜ್ಞಾಪಿಸಿದ್ದನ್ನು ಶುದ್ಧತ್ವಕ್ಕಾಗಿ ಸಮರ್ಪಿಸು ಇದು ಅವರಿಗೆ ಸಾಕ್ಷಿಯಾಗಿರಲಿ,” ಎಂದು ಅವನಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿ, ಕೂಡಲೇ ಅವನನ್ನು ಕಳುಹಿಸಿಬಿಟ್ಟರು. 45ಆದರೆ ಅವನು ಹೋಗಿ ಈ ವಿಷಯವನ್ನು ಎಲ್ಲಾ ಕಡೆಗಳಲ್ಲಿ ಹಬ್ಬಿಸಿದನು. ಇದರ ಪರಿಣಾಮವಾಗಿ ಯೇಸು ಯಾವ ಊರೊಳಗೂ ಬಹಿರಂಗವಾಗಿ ಪ್ರವೇಶಿಸಲಾಗದೆ, ನಿರ್ಜನ ಪ್ರದೇಶಗಳಲ್ಲಿರುತ್ತಿದ್ದರು. ಆದರೂ ಜನರು ಎಲ್ಲಾ ಕಡೆಗಳಿಂದ ಯೇಸುವಿನ ಬಳಿಗೆ ಬರುತ್ತಿದ್ದರು.

Currently Selected:

ಮಾರ್ಕ 1: KSB

Highlight

Share

Copy

None

Want to have your highlights saved across all your devices? Sign up or sign in