YouVersion Logo
Search Icon

ಮತ್ತಾಯ 8

8
ಯೇಸು ಕುಷ್ಠರೋಗಿಯನ್ನು ಸ್ವಸ್ಥಮಾಡಿದ್ದು
1ಯೇಸು ಪರ್ವತವನ್ನು ಇಳಿದು ಬಂದಾಗ, ಜನರು ದೊಡ್ಡ ಸಮೂಹವಾಗಿ ಅವರನ್ನು ಹಿಂಬಾಲಿಸಿದರು. 2ಅಲ್ಲಿಗೆ ಕುಷ್ಠರೋಗಿಯಾಗಿದ್ದ ಒಬ್ಬನು ಬಂದು, ಯೇಸುವಿನ ಮುಂದೆ ಮೊಣಕಾಲೂರಿ, “ಕರ್ತನೇ, ನೀವು ಮನಸ್ಸು ಮಾಡಿದರೆ, ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದನು.
3ಆಗ ಯೇಸು ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸಿದೆ, ನೀನು ಶುದ್ಧನಾಗು,” ಎಂದರು. ತಕ್ಷಣವೇ ಅವನ ಕುಷ್ಠವು ಹೋಗಿ ಅವನು ಶುದ್ಧನಾದನು. 4ಆಗ ಯೇಸು ಅವನಿಗೆ, “ನೋಡು ಇದನ್ನು ನೀನು ಯಾರಿಗೂ ಹೇಳಬೇಡ, ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಜನರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು#8:4 ಯಾಜಕ 14:1‑7 ಅರ್ಪಿಸು,” ಎಂದು ಹೇಳಿದರು.
ಯೇಸು ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು
5ಯೇಸು ಕಪೆರ್ನೌಮಿಗೆ ಪ್ರವೇಶಿಸಿದಾಗ, ಒಬ್ಬ ಶತಾಧಿಪತಿಯು ಅವರ ಬಳಿಗೆ ಬಂದು, 6“ಸ್ವಾಮೀ, ನನ್ನ ಸೇವಕನು ಪಾರ್ಶ್ವವಾಯು ರೋಗದಿಂದ ಘೋರವಾಗಿ ನರಳುತ್ತಾ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾನೆ,” ಎಂದು ಹೇಳಿಕೊಂಡನು.
7ಯೇಸು ಅವನಿಗೆ, “ನಾನು ಬಂದು ಅವನನ್ನು ಸ್ವಸ್ಥಮಾಡುತ್ತೇನೆ,” ಎಂದರು.
8ಅದಕ್ಕೆ ಶತಾಧಿಪತಿಯು, “ಸ್ವಾಮೀ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ. ಆದರೆ, ನೀವು ಒಂದು ಮಾತು ಮಾತ್ರ ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು. 9ಏಕೆಂದರೆ ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು’ ಎಂದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ, ‘ಬಾ’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿದನು.
10ಯೇಸು ಇದನ್ನು ಕೇಳಿ, ಆಶ್ಚರ್ಯಪಟ್ಟು ತಮ್ಮ ಹಿಂದೆ ಬರುತ್ತಿದ್ದವರಿಗೆ, “ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ. 11ಅನೇಕರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು, ಪರಲೋಕ ರಾಜ್ಯದಲ್ಲಿ ಅಬ್ರಹಾಮ್, ಇಸಾಕ್, ಯಾಕೋಬರೊಂದಿಗೆ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು. 12ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ದಬ್ಬಲಾಗುವರು, ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಎಂದು ನಿಮಗೆ ಹೇಳುತ್ತೇನೆ,” ಎಂದರು.
13ಅನಂತರ ಯೇಸು ಆ ಶತಾಧಿಪತಿಗೆ, “ಹೋಗು, ನೀನು ನಂಬಿದಂತೆಯೇ ನಿನಗಾಗಲಿ,” ಎಂದು ಹೇಳಿದರು. ಅವನ ಸೇವಕನು ಅದೇ ಗಳಿಗೆಯಲ್ಲಿ ಸ್ವಸ್ಥನಾದನು.
ಯೇಸು ಅನೇಕರನ್ನು ಗುಣಪಡಿಸಿದ್ದು
14ತರುವಾಯ ಯೇಸು ಪೇತ್ರನ ಮನೆಗೆ ಬಂದು, ಅವನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು. 15ಯೇಸು ಆಕೆಯ ಕೈಯನ್ನು ಮುಟ್ಟಿದಾಗ ಜ್ವರವು ಆಕೆಯನ್ನು ಬಿಟ್ಟುಹೋಯಿತು. ಆಕೆಯು ಎದ್ದು ಅವರನ್ನು ಉಪಚರಿಸಿದಳು.
16ಸಂಜೆಯಾದಾಗ, ದೆವ್ವಹಿಡಿದ ಅನೇಕರನ್ನು ಜನರು ಯೇಸುವಿನ ಬಳಿಗೆ ಕರೆತಂದರು. ಯೇಸು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ, ಎಲ್ಲಾ ರೋಗಪೀಡಿತರನ್ನೂ ಸ್ವಸ್ಥಪಡಿಸಿದರು. 17ಹೀಗೆ,
“ಅವರು ತಾವೇ ನಮ್ಮ ಬಲಹೀನತೆಗಳನ್ನು ತೆಗೆದುಕೊಂಡು,
ನಮ್ಮ ರೋಗಗಳನ್ನು ಹೊತ್ತುಕೊಂಡರು,”#8:17 ಯೆಶಾಯ 53:4
ಎಂದು ಯೆಶಾಯ ಪ್ರವಾದಿಯು ಹೇಳಿದ್ದು ನೆರವೇರಿತು.
ಯೇಸುವನ್ನು ಹಿಂಬಾಲಿಸುವ ಕ್ರಯ
18ಯೇಸು ತಮ್ಮ ಸುತ್ತಲಿದ್ದ ಜನರ ದೊಡ್ಡ ಸಮೂಹವನ್ನು ಕಂಡು, ಆಚೆದಡಕ್ಕೆ ಹೋಗಲು ಅಪ್ಪಣೆಕೊಟ್ಟರು. 19ಆಗ ಒಬ್ಬ ನಿಯಮ ಬೋಧಕ ಬಂದು ಯೇಸುವಿಗೆ, “ಬೋಧಕರೇ, ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು,” ಎಂದನು.
20ಅದಕ್ಕೆ ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ, ಆದರೆ ಮನುಷ್ಯಪುತ್ರನಾದ#8:20 ಮನುಷ್ಯಪುತ್ರನು ಎಂಬುದು ಯೇಸುವನ್ನು ಸೂಚಿಸುತ್ತದೆ. ಯೇಸು ಈ ರೀತಿಯಾಗಿ ತಮ್ಮ ಬಗ್ಗೆ ಮಾತನಾಡುತ್ತಿದ್ದರು. ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು.
21ಮತ್ತೊಬ್ಬ ಶಿಷ್ಯನು ಅವರಿಗೆ, “ಕರ್ತದೇವರೇ, ಮೊದಲು ನಾನು ಹೋಗಿ ನನ್ನ ತಂದೆಯ ಶವಸಂಸ್ಕಾರ ಮಾಡಿಬರಲು ಅನುಮತಿಕೊಡಿರಿ,” ಎಂದನು.
22ಆದರೆ ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ,” ಎಂದು ಹೇಳಿದರು.
ಯೇಸು ಬಿರುಗಾಳಿಯನ್ನು ನಿಲ್ಲಿಸಿದ್ದು
23ಯೇಸುವು ದೋಣಿಯನ್ನು ಹತ್ತಲು, ಶಿಷ್ಯರು ಸಹ ಅವರ ಸಂಗಡ ಹೋದರು. 24ಇದ್ದಕ್ಕಿದ್ದ ಹಾಗೆ, ಸರೋವರದಲ್ಲಿ ದೊಡ್ಡ ಬಿರುಗಾಳಿ ಎದ್ದ ಕಾರಣ ದೋಣಿಯು ಅಲೆಗಳಿಂದ ಮುಚ್ಚುತ್ತಿತ್ತು. ಆದರೆ ಯೇಸು ನಿದ್ರಿಸುತ್ತಿದ್ದರು. 25ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಕರ್ತನೇ, ಕಾಪಾಡು! ನಾವು ಮುಳುಗುತ್ತಿದ್ದೇವೆ!” ಎಂದರು.
26ಆಗ ಯೇಸು ಅವರಿಗೆ, “ಅಲ್ಪವಿಶ್ವಾಸವುಳ್ಳವರೇ, ನೀವು ಏಕೆ ಭಯಪಡುತ್ತೀರಿ?” ಎಂದು ಹೇಳಿ, ಎದ್ದು ಬಿರುಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ಎಲ್ಲವೂ ಪ್ರಶಾಂತವಾಯಿತು.
27ಆದರೆ ಶಿಷ್ಯರು ಆಶ್ಚರ್ಯದಿಂದ, “ಇವರು ಎಂಥಾ ಮನುಷ್ಯನಾಗಿರಬಹುದು? ಗಾಳಿಯೂ ಸರೋವರವೂ ಸಹ ಇವರ ಮಾತುಗಳನ್ನು ಕೇಳುತ್ತವಲ್ಲಾ!” ಎಂದರು.
ಯೇಸು ಇಬ್ಬರಲ್ಲಿದ್ದ ಅನೇಕ ದೆವ್ವಗಳನ್ನು ಬಿಡಿಸಿದ್ದು
28ಯೇಸು ಆಚೆಯ ಕಡೆಯಲ್ಲಿದ್ದ ಗದರೇನರ#8:28 ಕೆಲವು ಹಸ್ತಪ್ರತಿಗಳಲ್ಲಿ ಗದರೇನ ಇಲ್ಲವೆ ಗೆರಸೇನ ಎಂದಿವೆ. ಪ್ರಾಂತಕ್ಕೆ ಬಂದಾಗ, ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಬಂದು ಯೇಸುವಿಗೆ ಎದುರಾದರು. ಅವರು ಬಹು ಕ್ರೂರಿಗಳಾಗಿದ್ದುದರಿಂದ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ. 29ಆಗ ಅವರು, “ದೇವಪುತ್ರನೇ, ನಮ್ಮ ಗೊಡವೆ ನಿಮಗೆ ಏಕೆ? ಸಮಯಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಇಲ್ಲಿಗೆ ಬಂದೆಯಾ?” ಎಂದು ಕೂಗಿ ಹೇಳಿದರು.
30ಆಗ ಅವರಿಂದ ಸ್ವಲ್ಪ ದೂರದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 31“ನೀನು ನಮ್ಮನ್ನು ಹೊರಗೆ ಹಾಕುವುದಾದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ,” ಎಂದು ದೆವ್ವಗಳು ಯೇಸುವನ್ನು ಬೇಡಿಕೊಂಡವು.
32ಯೇಸು ಅವುಗಳಿಗೆ, “ಹೋಗಿರಿ,” ಎಂದರು. ಆಗ ಅವು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆಗ ಆ ಹಿಂಡೆಲ್ಲಾ ಕಡಿದಾದ ಬದಿಯಿಂದ ಓಡಿಹೋಗಿ ಸರೋವರದೊಳಗೆ ಬಿದ್ದು ಸತ್ತು ಹೋದವು. 33ಆ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ, ಪಟ್ಟಣದೊಳಕ್ಕೆ ಹೋಗಿ ದೆವ್ವ ಹಿಡಿದಿದ್ದವರಿಗೆ ಸಂಭವಿಸಿದ್ದನ್ನು ವರದಿಮಾಡಿದರು. 34ಆಗ ಪಟ್ಟಣದವರೆಲ್ಲರೂ ಯೇಸುವನ್ನು ಕಾಣುವುದಕ್ಕೆ ಹೊರಗೆ ಬಂದರು. ಅವರು ಯೇಸುವನ್ನು ಕಂಡು, ತಮ್ಮ ಪ್ರಾಂತವನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.

Currently Selected:

ಮತ್ತಾಯ 8: KSB

Highlight

Share

Copy

None

Want to have your highlights saved across all your devices? Sign up or sign in