YouVersion Logo
Search Icon

ಮಲಾಕಿ 2

2
ಯಾಜಕರಿಗೆ ಎಚ್ಚರಿಕೆ
1“ಈಗ ಯಾಜಕರೇ, ಈ ಎಚ್ಚರಿಕೆ ನಿಮಗಾಗಿ ಇದೆ. 2ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ,” ನೀವು ಕಿವಿಗೊಡದೆ ನನ್ನ ಹೆಸರಿಗೆ ಮಹಿಮೆಯನ್ನು ಸಲ್ಲಿಸಲು ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳದೆ ಹೋದರೆ, “ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು. ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು. ಹೌದು, ಅವುಗಳನ್ನು ಆಗಲೇ ಶಪಿಸಿದ್ದಾಯಿತು, ಏಕೆಂದರೆ ನೀವು ನನ್ನನ್ನು ಘನಪಡಿಸಲು ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಲಿಲ್ಲ.
3“ಇಗೋ, ನಾನು ನಿಮ್ಮ ಸಂತತಿಯನ್ನು ಗದರಿಸುವೆನು. ನಿಮ್ಮ ಮುಖಗಳ ಮೇಲೆ, ನಿಮ್ಮ ಹಬ್ಬ ಬಲಿಗಳ ಸಗಣಿ ಬಳಿಯುವೆನು. ಅದರೊಂದಿಗೆ ನೀವು ಒಯ್ಯಲಾಗುವಿರಿ. 4ನಾನು ಲೇವಿಯೊಂದಿಗೆ ಮಾಡಿಕೊಂಡ ಒಡಂಬಡಿಕೆಯು ಮುಂದುವರಿಯುತ್ತದೆ. ಈ ಎಚ್ಚರಿಕೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳಿದುಕೊಳ್ಳಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 5“ನಮ್ಮ ಒಡಂಬಡಿಕೆಯು ಜೀವದ ಹಾಗೂ ಶಾಂತಿಯ ಒಡಂಬಡಿಕೆಯಾಗಿತ್ತು. ಅವುಗಳನ್ನು ನಾನೇ ಅವನಿಗೆ ಕೊಟ್ಟೆನು. ಅವನು ನನಗೆ ಭಯಪಟ್ಟು, ನನ್ನ ಹೆಸರನ್ನು ಘನಪಡಿಸಿದನು. 6ಸತ್ಯ ಬೋಧನೆಯು ಅವನ ಬಾಯಲ್ಲಿ ಇತ್ತು. ಸುಳ್ಳು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ, ನ್ಯಾಯದಿಂದಲೂ ನನ್ನ ಸಂಗಡ ನಡೆದುಕೊಂಡು, ಅನೇಕರನ್ನು ಪಾಪದ ಕಡೆಯಿಂದ ತಿರುಗಿಸಿದನು.
7“ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡ ತಕ್ಕದ್ದು. ದೈವ ಬೋಧನೆಯನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು, ಏಕೆಂದರೆ ಅವನು ಸೇನಾಧೀಶ್ವರ ಯೆಹೋವ ದೇವರ ದೂತನು. 8ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ. ನಿಮ್ಮ ಉಪದೇಶದಿಂದ ಅನೇಕರನ್ನು ಎಡವುವಂತೆ ಮಾಡಿದ್ದೀರಿ. ಲೇವಿಯರೊಂದಿಗಿನ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 9“ಆದ್ದರಿಂದ ನೀವು ನನ್ನ ಮಾರ್ಗಗಳನ್ನು ಕೈಗೊಳ್ಳದೆ, ನನ್ನ ನಿಯಮವನ್ನು ಬೋಧಿಸುವಾಗ ಮುಖದಾಕ್ಷಿಣ್ಯ ಮಾಡಿದ ಪ್ರಕಾರವೇ, ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆಯಾದವರನ್ನಾಗಿಯೂ, ನೀಚರನ್ನಾಗಿಯೂ ಮಾಡುವೆನು.”
ವಿಚ್ಛೇದನದ ಮೂಲಕ ಒಡಂಬಡಿಕೆಯನ್ನು ಮುರಿಯುವುದು
10ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬರೇ ದೇವರು ಸೃಷ್ಟಿಸಿದರಲ್ಲವೋ? ಏಕೆ ಪ್ರತಿಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಾಗಿ ನಡೆದು, ನಮ್ಮ ತಂದೆಗಳ ಒಡಂಬಡಿಕೆಯನ್ನು ಮುರಿಯುವುದೇಕೆ?
11ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ. ಇಸ್ರಾಯೇಲಿನಲ್ಲಿಯೂ, ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ, ಏಕೆಂದರೆ ಯೆಹೂದವು ಯೆಹೋವ ದೇವರು ಪ್ರೀತಿಮಾಡಿದ ಪರಿಶುದ್ಧ ಆಲಯವನ್ನು ಅಪವಿತ್ರ ಮಾಡಿ, ಅನ್ಯದೇವತೆಗಳನ್ನು ಆರಾಧಿಸುವ ಮಹಿಳೆಯರನ್ನು ಮದುವೆ ಮಾಡಿಕೊಂಡಿದೆ. 12ಇದನ್ನು ಮಾಡುವ ಮನುಷ್ಯನನ್ನು ಅವನು ಯಾರೇ ಆಗಲಿ, ಅವನು ಯೆಹೋವ ದೇವರಿಗೆ ಕಾಣಿಕೆ ಅರ್ಪಿಸಲು ತಂದರೂ ಸಹ, ಯಾಕೋಬನ ಗುಡಾರಗಳೊಳಗಿಂದ ಸೇನಾಧೀಶ್ವರ ಯೆಹೋವ ದೇವರು ತೆಗೆದು ಹಾಕಲಿ.
13ನೀವು ಇನ್ನೊಂದನ್ನು ಮಾಡಿದ್ದೀರಿ. ಯೆಹೋವ ದೇವರ ಬಲಿಪೀಠಗಳನ್ನು ಕಣ್ಣೀರಿನಿಂದ ತುಂಬಿಸಿದ್ದೀರಿ. ಆದ್ದರಿಂದ ಆತನು ಕಾಣಿಕೆಯನ್ನು ಇನ್ನು ಮೇಲೆ ಲಕ್ಷಿಸದೆ, ಅದನ್ನು ನಿಮ್ಮ ಕೈಯಿಂದ ಮೆಚ್ಚಿಕೆಯಾಗಿ ಅಂಗೀಕರಿಸುವುದಿಲ್ಲವಾದ್ದರಿಂದ ನೀವು ಅಳುತ್ತೀರಿ, ಗೋಳಾಡುತ್ತೀರಿ. 14ಆದರೂ ಯೆಹೋವ ದೇವರು ನಿನಗೂ, ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿದ್ದರು. ಆದರೂ ನಿನ್ನ ಜೊತೆಯವಳೂ, ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದವಳಿಗೆ ನೀನು ಅಪನಂಬಿಗಸ್ತನಾಗಿದ್ದೀ.
15ನಿನ್ನನ್ನು ಸೃಷ್ಟಿಸಿದವನು ಒಬ್ಬನೇ ಅಲ್ಲವೇ? ನೀವು ದೇಹ ಮತ್ತು ಆತ್ಮದಲ್ಲಿ ಅವರಿಗೆ ಸೇರಿದವರು. ಮತ್ತು ಒಬ್ಬರೇ ದೇವರಾಗಿರುವ ದೇವರು ಏನು ಹುಡುಕುತ್ತಾರೆ? ದೈವಿಕ ಸಂತಾನ. ಆದ್ದರಿಂದ ನೀವು ಜಾಗರೂಕರಾಗಿರಿ ಮತ್ತು ನಿಮ್ಮ ಯೌವನದ ಹೆಂಡತಿಗೆ ವಿಶ್ವಾಸದ್ರೋಹ ಮಾಡಬೇಡಿ.
16“ವಿವಾಹ ವಿಚ್ಛೇದನವನ್ನು ನಾನು ಹಗೆಮಾಡುತ್ತೇನೆ,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುತ್ತಾನೆ. “ತನ್ನ ಹೆಂಡತಿಗೆ ನಂಬಿಕೆದ್ರೋಹ ಬಗೆದು, ದೌರ್ಜನ್ಯ ತೋರುವವನನ್ನು ನಾನು ಹಗೆಮಾಡುತ್ತೇನೆ,” ಎಂದು ಸರ್ವಶಕ್ತರಾದ ದೇವರು ಹೇಳುತ್ತಾರೆ.
ಆದ್ದರಿಂದ ನೀವು ವಂಚನೆಯುಳ್ಳವರಾಗಿ ನಡೆಯದ ಹಾಗೆ ನಿಮ್ಮ ಆತ್ಮದಲ್ಲಿ ಎಚ್ಚರಿಕೆಯಾಗಿರಿ.
ಅನ್ಯಾಯ ಮಾಡುವ ಮೂಲಕ ಒಡಂಬಡಿಕೆಯನ್ನು ಮುರಿಯುವುದು
17“ನಿಮ್ಮ ಮಾತುಗಳಿಂದ ಯೆಹೋವ ದೇವರಿಗೆ ಬೇಸರ ಮಾಡಿದ್ದೀರಿ.
“ಆದರೂ, ನಾವು ಯಾವುದರಲ್ಲಿ ಆತನಿಗೆ ಬೇಸರ ಮಾಡಿದ್ದೇವೆ?” ಎಂದು ಕೇಳುತ್ತೀರಿ.
“ಕೆಟ್ಟದ್ದನ್ನು ಮಾಡುವವರೆಲ್ಲರು, ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆ ಎಂದೂ, ನ್ಯಾಯದ ದೇವರು ಎಲ್ಲಿ? ಎಂದೂ ನೀವು ಹೇಳುವುದರಿಂದಲೇ.”

Currently Selected:

ಮಲಾಕಿ 2: KSB

Highlight

Share

Copy

None

Want to have your highlights saved across all your devices? Sign up or sign in

Video for ಮಲಾಕಿ 2