ಆದಿಕಾಂಡ 48
48
ಮನಸ್ಸೆ ಮತ್ತು ಎಫ್ರಾಯೀಮ್
1ಕೆಲವು ಕಾಲದ ನಂತರ ಯೋಸೇಫನಿಗೆ, “ನಿನ್ನ ತಂದೆ ಅಸ್ವಸ್ಥನಾಗಿದ್ದಾನೆ,” ಎಂಬ ಸುದ್ದಿ ಬಂದಿತು. ಆಗ ಅವನು ತನ್ನ ಇಬ್ಬರು ಪುತ್ರರಾದ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಕರೆದುಕೊಂಡು ತಂದೆಯ ಬಳಿಗೆ ಬಂದನು. 2ಯಾಕೋಬನಿಗೆ, “ನಿನ್ನ ಮಗ ಯೋಸೇಫನು ಬಂದಿದ್ದಾನೆ,” ಎಂದು ತಿಳಿಸಿದಾಗ, ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡನು.
3ಆಗ ಯಾಕೋಬನು ಯೋಸೇಫನಿಗೆ, “ಸರ್ವಶಕ್ತ ದೇವರು ಕಾನಾನ್ ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು, ನನ್ನನ್ನು ಆಶೀರ್ವದಿಸಿದರು. 4ದೇವರು ನನಗೆ, ‘ನಿನ್ನನ್ನು ಅಭಿವೃದ್ಧಿಪಡಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು. ಅನೇಕ ಜನಾಂಗಗಳು ನಿನ್ನಿಂದುಟಾಗುವಂತೆ ಮಾಡುವೆನು, ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಶಾಶ್ವತವಾದ ಸ್ವತ್ತನ್ನಾಗಿ ಕೊಡುತ್ತೇನೆ,’ ಎಂದು ಹೇಳಿದರು.
5“ಈಗ ನಾನು ನಿನ್ನ ಬಳಿಗೆ ಈಜಿಪ್ಟಿಗೆ ಬರುವ ಮೊದಲು ಈಜಿಪ್ಟಿನಲ್ಲಿ ನಿನಗೆ ಹುಟ್ಟಿದ ಇಬ್ಬರು ಪುತ್ರರಾದ ಎಫ್ರಾಯೀಮ್ ಮನಸ್ಸೆಯರು ನನ್ನವರಾಗಿರಬೇಕು. ಅವರು ರೂಬೇನ್ ಮತ್ತು ಸಿಮೆಯೋನರಂತೆ ನನ್ನವರಾಗಿರಬೇಕು. 6ಆದರೆ ಅವರ ತರುವಾಯ ನಿನ್ನಿಂದ ಹುಟ್ಟುವ ಸಂತಾನವು ನಿನ್ನದಾಗಿರಲಿ. ಅವರು ತಮ್ಮ ಸಹೋದರರ ಸೊತ್ತಿಗೆ ಬಾಧ್ಯತೆಯನ್ನು ಪಡೆದು ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ. 7ನಾನು ಪದ್ದನ್ ಅರಾಮಿನಿಂದ ಬಂದಾಗ, ಕಾನಾನ್ ದೇಶದಲ್ಲಿ ಎಫ್ರಾತಿನಿಂದ ಸ್ವಲ್ಪ ದೂರವಾಗಿರುವಾಗ, ರಾಹೇಲಳು ಸತ್ತುಹೋದಳು. ಅಲ್ಲಿ ಅಂದರೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಯನ್ನು ಸಮಾಧಿಮಾಡಿದೆನು,” ಎಂದನು.
8ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ಕಂಡು, “ಇವರು ಯಾರು?” ಎಂದನು.
9ಅದಕ್ಕೆ ಯೋಸೇಫನು ತನ್ನ ತಂದೆಗೆ, “ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಪುತ್ರರು,” ಎಂದನು.
ಆಗ ಇಸ್ರಾಯೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ,” ಎಂದನು.
10ಇಸ್ರಾಯೇಲನು ಮುದುಕನಾಗಿದ್ದದ್ದರಿಂದ, ಅವನ ಕಣ್ಣುಗಳು ಕಾಣದಷ್ಟು ಮಬ್ಬಾಗಿದ್ದವು. ಯೋಸೇಫನು ಅವರನ್ನು ಅವನ ಸಮೀಪಕ್ಕೆ ತಂದಾಗ, ಅವನು ಅವರನ್ನು ಮುದ್ದಿಟ್ಟು, ಅಪ್ಪಿಕೊಂಡನು.
11ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಾಣುವೆನೆಂದು ನಾನು ನೆನಸಿರಲಿಲ್ಲ. ಆದರೆ ನಿನ್ನ ಸಂತಾನವನ್ನು ಸಹ ದೇವರು ನನಗೆ ಕಾಣುವಂತೆ ಅನುಗ್ರಹಿಸಿದ್ದಾನೆ,” ಎಂದನು.
12ಆಗ ಯೋಸೇಫನು ಅವರನ್ನು ಮೊಣಕಾಲುಗಳ ಬಳಿಯಿಂದ ಬರಮಾಡಿ ತಂದೆಗೆ ಅಡ್ಡಬಿದ್ದನು. 13ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯೀಮನನ್ನೂ, ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ, ಅವರಿಬ್ಬರನ್ನೂ ತನ್ನ ತಂದೆಯ ಬಳಿಗೆ ತಂದನು. 14ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯೀಮನ ತಲೆಯ ಮೇಲೆಯೂ, ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ, ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು.
15ಆಗ ಅವನು ಯೋಸೇಫನನ್ನು ಹೀಗೆ ಆಶೀರ್ವದಿಸಿದನು,
“ನನ್ನ ತಂದೆ
ಅಬ್ರಹಾಮನೂ ಇಸಾಕನೂ ಯಾವ ದೇವರ ಮುಂದೆ ನಡೆದುಕೊಂಡರೋ,
ಆ ದೇವರೇ ನಾನು ಹುಟ್ಟಿದಂದಿನಿಂದ ಇಂದಿನವರೆಗೆ
ನನಗೆ ಕುರುಬ ಆಗಿದ್ದ ದೇವರು.
16ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ಆ ದೇವರ ದೂತ,
ಈ ಹುಡುಗರನ್ನು ಆಶೀರ್ವದಿಸಲಿ.
ನನ್ನ ಹೆಸರಿನಿಂದಲೂ,
ನನ್ನ ಪಿತೃಗಳಾದ ಅಬ್ರಹಾಮ, ಇಸಾಕರ ಹೆಸರಿನಿಂದಲೂ
ಅವರು ಮುಂದುವರೆಯಲಿ.
ಭೂಮಿಯ ಮೇಲೆ ಸಮೂಹವಾಗಿ ಹೆಚ್ಚಲಿ.”
17ತನ್ನ ತಂದೆಯು ಎಫ್ರಾಯೀಮನ ತಲೆಯ ಮೇಲೆ ಬಲಗೈಯನ್ನು ಇಟ್ಟದ್ದನ್ನು ಯೋಸೇಫನು ಕಂಡಾಗ, ಅದು ಅವನಿಗೆ ಇಷ್ಟವಾಗಿರಲಿಲ್ಲ. ಆದ್ದರಿಂದ ಅವನು ತನ್ನ ತಂದೆಯ ಕೈಯನ್ನು ಹಿಡಿದು, ಎಫ್ರಾಯೀಮನ ತಲೆಯ ಮೇಲಿಂದ ತೆಗೆದು, ಮನಸ್ಸೆಯ ತಲೆಯ ಮೇಲೆ ಇಡುವುದರಲ್ಲಿದ್ದನು. 18ಯೋಸೇಫನು ತನ್ನ ತಂದೆಗೆ, “ಅಪ್ಪಾ, ಹಾಗಲ್ಲ, ಇವನೇ ಜೇಷ್ಠಪುತ್ರನು. ಇವನ ತಲೆಯ ಮೇಲೆ ಬಲಗೈ ಇಡು,” ಎಂದನು.
19ಅದಕ್ಕೆ ಅವನ ತಂದೆಯು ಒಪ್ಪದೆ, “ನನಗೆ ಗೊತ್ತು. ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವುದಲ್ಲದೆ ಅವನು ದೊಡ್ಡವನಾಗುವನು. ಆದರೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತತಿಯು ಜನಾಂಗಗಳ ಸಮೂಹವಾಗುವುದು,” ಎಂದನು. 20ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವದಿಸಿ, ಹೀಗೆಂದನು:
“ನಿಮ್ಮ ಹೆಸರಿನಲ್ಲಿ ಇಸ್ರಾಯೇಲರು ಈ ಆಶೀರ್ವಾದವನ್ನು ಹೇಳುವರು:
‘ಎಫ್ರಾಯೀಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲಿ.’ ”
ಹೀಗೆ ಹೇಳುತ್ತಾ ಯಾಕೋಬನು ಎಫ್ರಾಯೀಮನಿಗೆ ಮನಸ್ಸೆಗಿಂತಲೂ ಉನ್ನತಸ್ಥಾನವನ್ನು ಕೊಟ್ಟನು.
21ಆಗ ಇಸ್ರಾಯೇಲನು ಯೋಸೇಫನಿಗೆ, “ನಾನು ಸಾಯುತ್ತೇನೆ, ಆದರೆ ದೇವರು ನಿಮ್ಮ ಸಂಗಡವಿದ್ದು, ನಿಮ್ಮನ್ನು ನಿಮ್ಮ ಪಿತೃಗಳ ದೇಶಕ್ಕೆ ಮತ್ತೆ ಸೇರಿಸುವರು. 22ಇದಲ್ಲದೆ ನಾನು ನನ್ನ ಖಡ್ಗದಿಂದಲೂ ಬಿಲ್ಲಿನಿಂದಲೂ ಅಮೋರಿಯರ ಕೈಯಿಂದ ತೆಗೆದುಕೊಂಡ ಒಂದು ಹೊಲವನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ,” ಎಂದನು.
Currently Selected:
ಆದಿಕಾಂಡ 48: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.