YouVersion Logo
Search Icon

ಆದಿಕಾಂಡ 46

46
ಯಾಕೋಬನು ಈಜಿಪ್ಟಿಗೆ ಹೋದದ್ದು
1ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಬೇರ್ಷೆಬಕ್ಕೆ ಬಂದು, ತನ್ನ ತಂದೆ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿದನು.
2ದೇವರು ಇಸ್ರಾಯೇಲನಿಗೆ ರಾತ್ರಿಯ ದರ್ಶನದಲ್ಲಿ ಮಾತನಾಡಿ, “ಯಾಕೋಬನೇ, ಯಾಕೋಬನೇ,” ಎಂದರು.
ಅದಕ್ಕವನು, “ಇಗೋ, ಇದ್ದೇನೆ,” ಎಂದನು.
3ದೇವರು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗುವುದಕ್ಕೆ ಭಯಪಡಬೇಡ. ಏಕೆಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡ ಜನಾಂಗವಾಗಮಾಡುವೆನು. 4ನಾನೇ ನಿನ್ನ ಸಂಗಡ ಈಜಿಪ್ಟಿಗೆ ಹೋಗುವೆನು. ನಾನು ನಿಶ್ಚಯವಾಗಿ ನಿನ್ನನ್ನು ಕಾನಾನಿಗೆ ತಿರುಗಿ ಬರಮಾಡುವೆನು. ಯೋಸೇಫನು ನಿನ್ನ ಅಂತಿಮ ಕಾಲದಲ್ಲಿ ನೀನು ಕಣ್ಣುಮುಚ್ಚುವಾಗ ಇರುವನು,” ಎಂದನು.
5ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಆಗ ಇಸ್ರಾಯೇಲರು ತಮ್ಮ ತಂದೆ ಯಾಕೋಬನನ್ನೂ, ತಮ್ಮ ಮಕ್ಕಳನ್ನೂ, ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ರಥಗಳಲ್ಲಿ ಕೂರಿಸಿಕೊಂಡು ಹೋದರು. 6ಅವರು ತಮ್ಮ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತೆಗೆದುಕೊಂಡು ಈಜಿಪ್ಟಿಗೆ ಬಂದರು. ಯಾಕೋಬನು ತನ್ನ ಕುಟುಂಬ ಸಮೇತವಾಗಿ ಬಂದನು. 7ಅವನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮೊಕ್ಕಳನ್ನೂ, ಅಂತೂ ತನ್ನ ಇಡೀ ಕುಟುಂಬದವರೆಲ್ಲರನ್ನೂ ತನ್ನೊಂದಿಗೆ ಈಜಿಪ್ಟಿಗೆ ಕರೆದುಕೊಂಡು ಹೋದನು.
8ಈಜಿಪ್ಟಿಗೆ ಬಂದ ಇಸ್ರಾಯೇಲರ ಮಕ್ಕಳು ಎಂದರೆ, ಯಾಕೋಬನ ಹಾಗೂ ಅವನ ಸಂತತಿಯರ ಹೆಸರುಗಳು:
ಯಾಕೋಬನ ಚೊಚ್ಚಲ ಮಗ ರೂಬೇನನು.
9ರೂಬೇನನ ಪುತ್ರರು:
ಹನೋಕ್, ಪಲ್ಲೂ, ಹೆಚ್ರೋನ್ ಮತ್ತು ಕರ್ಮೀ ಎಂಬುವರು.
10ಸಿಮೆಯೋನನ ಮಕ್ಕಳು:
ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ ಎಂಬುವರು.
11ಲೇವಿಯ ಪುತ್ರರು:
ಗೇರ್ಷೋನ್, ಕೊಹಾತ್, ಮೆರಾರೀ ಎಂಬುವರು.
12ಯೆಹೂದನ ಮಕ್ಕಳು:
ಏರ್, ಓನಾನ್, ಶೇಲಹ, ಪೆರೆಚ್ ಮತ್ತು ಜೆರಹ. ಆದರೆ ಏರನೂ, ಓನಾನನೂ ಕಾನಾನ್ ದೇಶದಲ್ಲಿ ಸತ್ತರು.
ಪೆರೆಚನ ಮಕ್ಕಳು:
ಹೆಚ್ರೋನ್ ಮತ್ತು ಹಾಮೂಲ್ ಎಂಬುವರು.
13ಇಸ್ಸಾಕಾರನ ಮಕ್ಕಳು:
ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್ ಎಂಬುವರು.
14ಜೆಬುಲೂನನ ಮಕ್ಕಳು:
ಸೆರೆದ್, ಏಲೋನ್, ಯಹಲೇಲ್ ಎಂಬುವರು.
15ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ, ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಪುತ್ರಪುತ್ರಿಯರೆಲ್ಲಾ ಸೇರಿ ಒಟ್ಟು ಮೂವತ್ತು ಮೂರು ಮಂದಿ.
16ಗಾದನ ಮಕ್ಕಳು:
ಚಿಫ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ ಮತ್ತು ಅರೇಲೀ ಎಂಬುವರು.
17ಆಶೇರನ ಮಕ್ಕಳು:
ಇಮ್ನಾ, ಇಷ್ವಾ, ಇಷ್ವೀ, ಬೆರೀಯ ಮತ್ತು ಅವರ ಸಹೋದರಿಯಾದ ಸೆರಹ.
ಬೆರೀಗನ ಪುತ್ರರು:
ಹೆಬೆರ, ಮಲ್ಕೀಯೇಲ್ ಎಂಬುವರು.
18ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಈಕೆಯಿಂದ ಯಾಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಹದಿನಾರು ಮಂದಿ.
19ಯಾಕೋಬನ ಹೆಂಡತಿಯಾದ ರಾಹೇಲಳ ಪುತ್ರರು:
ಯೋಸೇಫ್, ಬೆನ್ಯಾಮೀನ್ ಎಂಬುವರು.
20ಯೋಸೇಫನಿಗೆ ಈಜಿಪ್ಟ್ ದೇಶದಲ್ಲಿ ಮಕ್ಕಳು ಹುಟ್ಟಿದರು. ಓನ್ ಪಟ್ಟಣದ#46:20 ಓನ್ ಅದು, ಸೂರ್ಯನ ಪಟ್ಟಣ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತ್ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಅವನಿಗೆ ಹೆತ್ತಳು.
21ಬೆನ್ಯಾಮೀನನ ಪುತ್ರರು:
ಬೆಳ, ಬೆಕೆರ್, ಅಷ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್ ಎಂಬುವರು.
22ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಪುತ್ರರು. ಎಲ್ಲರೂ ಕೂಡಿ ಹದಿನಾಲ್ಕು ಮಂದಿ.
23ದಾನನ ಮಗನು:
ಹುಶೀಮನು.
24ನಫ್ತಾಲಿಯ ಪುತ್ರರು:
ಯಹಚೇಲ, ಗೂನೀ, ಯೇಚೆರ್, ಶಿಲ್ಲೇಮ್ ಎಂಬುವರು.
25ಇವರು ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಪುತ್ರರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲರೂ ಕೂಡಿ ಏಳುಮಂದಿ.
26ಯಾಕೋಬನ ಪುತ್ರರ ಹೆಂಡತಿಯರಲ್ಲದೆ, ಯಾಕೋಬನ ಸಂಗಡ ಈಜಿಪ್ಟಿಗೆ ಹೋದವರು ಒಟ್ಟು ಅರವತ್ತಾರು ಮಂದಿ. 27ಅವರಲ್ಲದೆ ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಪುತ್ರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಈಜಿಪ್ಟಿಗೆ ಹೋದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
28ಇದಲ್ಲದೆ ಗೋಷೆನ್ ಪ್ರಾಂತಕ್ಕೆ ಮಾರ್ಗವನ್ನು ತೋರಿಸುವಂತೆ ಯಾಕೋಬನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ಪ್ರಾಂತಕ್ಕೆ ಬಂದು ಸೇರಿದರು. 29ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು, ತನ್ನ ತಂದೆ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋದನು. ಯೋಸೇಫನು ತನ್ನ ತಂದೆಯನ್ನು ಸಂಧಿಸಿ, ಅಪ್ಪಿಕೊಂಡು, ಬಹಳ ಹೊತ್ತಿನವರೆಗೆ ಅತ್ತನು.
30ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಂಡಿದ್ದರಿಂದ ಇನ್ನು ನಾನು ಮರಣ ಹೊಂದಲು ಸಿದ್ಧನಾಗಿದ್ದೇನೆ. ನೀನು ಇನ್ನೂ ಜೀವದಿಂದ ಇದ್ದೀಯೆ,” ಎಂದನು.
31ಯೋಸೇಫನು ತನ್ನ ಸಹೋದರರಿಗೂ, ತನ್ನ ತಂದೆಯ ಮನೆಯವರಿಗೂ, “ನಾನು ಹೋಗಿ ಫರೋಹನಿಗೆ, ಕಾನಾನ್ ದೇಶದಲ್ಲಿದ್ದ ನನ್ನ ಸಹೋದರರೂ, ನನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ. 32ಅವರು ಕುರಿಕಾಯುವವರು, ಅವರಿಗೆ ಪಶುಗಳು ಇವೆ. ತಮ್ಮ ಕುರಿದನಗಳನ್ನೂ, ತಮಗಿದ್ದದ್ದೆಲ್ಲವನ್ನೂ ತೆಗೆದುಕೊಂಡು ಬಂದಿದ್ದಾರೆ, ಎಂದು ಹೇಳುವೆನು. 33ಫರೋಹನು ನಿಮ್ಮನ್ನು ಕರೆಯಿಸಿ, ‘ನಿಮ್ಮ ಕೆಲಸವೇನು?’ ಎಂದು ಕೇಳುವನು. 34ನೀವು ಅವನಿಗೆ, ‘ಚಿಕ್ಕಂದಿನಿಂದ ಇಂದಿನವರೆಗೂ ನಿನ್ನ ದಾಸರಾದ ನಾವೂ ನಮ್ಮ ಪೂರ್ವಿಕರೂ ಪಶುಗಳನ್ನು ಕಾಯುವವರಾಗಿದ್ದೇವೆ,’ ಎಂದು ಹೇಳಬೇಕು. ಏಕೆಂದರೆ ಕುರಿ ಕಾಯುವವರೆಲ್ಲಾ ಈಜಿಪ್ಟಿನವರಿಗೆ ಅಸಹ್ಯವಾಗಿದ್ದರಿಂದ, ನೀವು ಗೋಷೆನ್ ಪ್ರಾಂತದಲ್ಲಿ ವಾಸವಾಗಿರುವಂತೆ ನೇಮಿಸುವನು,” ಎಂದನು.

Highlight

Share

Copy

None

Want to have your highlights saved across all your devices? Sign up or sign in