YouVersion Logo
Search Icon

ಆದಿಕಾಂಡ 44

44
ಚೀಲದಲ್ಲಿ ಬೆಳ್ಳಿಪಾತ್ರೆ
1ಯೋಸೇಫನು ತನ್ನ ಮನೆಯ ಉಗ್ರಾಣಿಕನಿಗೆ, “ಈ ಮನುಷ್ಯರ ಚೀಲಗಳಲ್ಲಿ ಹೊರುವುದಕ್ಕಾಗುವಷ್ಟು ಧಾನ್ಯವನ್ನು ತುಂಬಿಸಿ, ಪ್ರತಿಯೊಬ್ಬನ ಹಣವನ್ನು ಅವನವನ ಚೀಲದ ಬಾಯಲ್ಲಿ ಇಡು. 2ನನ್ನ ಬೆಳ್ಳಿಯ ಪಾತ್ರೆಯನ್ನು ಚಿಕ್ಕವನ ಚೀಲದ ಬಾಯಲ್ಲಿ ಅವನ ಧಾನ್ಯ ಹಾಗೂ ಹಣದ ಸಂಗಡ ಇಡು,” ಎಂದು ಆಜ್ಞಾಪಿಸಿದನು. ಯೋಸೇಫನು ಹೇಳಿದಂತೆಯೇ ಅವನು ಮಾಡಿದನು.
3ಸೂರ್ಯೋದಯವಾದಾಗ ಆ ಮನುಷ್ಯರನ್ನು ತಮ್ಮ ಕತ್ತೆಗಳ ಸಹಿತವಾಗಿ ಕಳುಹಿಸಲಾಯಿತು. 4ಅವರು ಪಟ್ಟಣವನ್ನು ಬಿಟ್ಟು ದೂರ ಹೋಗುವುದಕ್ಕಿಂತ ಮುಂಚೆ ಯೋಸೇಫನು ಮನೆಯ ಗೃಹನಿರ್ವಾಹಕನಿಗೆ, “ಆ ಮನುಷ್ಯರ ಹಿಂದೆ ಹೋಗು. ಅವರು ಸಿಕ್ಕಿದಾಗ, ‘ಏಕೆ ನೀವು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಿದಿರಿ? 5ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ,’ ಎಂದು ಅವರಿಗೆ ಹೇಳು,” ಎಂದನು.
6ಅವನು ಅವರನ್ನು ಸಂಧಿಸಿ ಈ ಮಾತುಗಳನ್ನು ಅವರಿಗೆ ಹೇಳಿದನು. 7ಆಗ ಅವರು ಅವನಿಗೆ, “ನಮ್ಮ ಒಡೆಯನು ಏಕೆ ಇಂಥ ಮಾತುಗಳನ್ನಾಡುತ್ತಾನೆ? ನಿನ್ನ ದಾಸರು ಹೀಗೆ ಮಾಡುವವರಲ್ಲ. 8ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಿಮಗೆ ಕೊಡುವುದಕ್ಕೆ ಕಾನಾನ್ ದೇಶದಿಂದ ತಂದೆವು. ಹೀಗಿರಲು ನಿನ್ನ ಯಜಮಾನನ ಮನೆಯೊಳಗಿಂದ ಬೆಳ್ಳಿಬಂಗಾರವನ್ನು ಹೇಗೆ ಕದ್ದುಕೊಂಡೇವು? 9ಅದು ನಿನ್ನ ದಾಸರಲ್ಲಿ ಯಾರ ಹತ್ತಿರ ಸಿಕ್ಕುವುದೋ ಅವನು ಸಾಯಲಿ ಮತ್ತು ನಾವು ಸಹ ನಮ್ಮ ಒಡೆಯನಿಗೆ ದಾಸರಾಗುವೆವು,” ಎಂದರು.
10ಆಗ ಅವನು, “ಈಗ ನಿಮ್ಮ ಮಾತಿನಂತೆಯೇ ಆಗಲಿ. ಯಾರ ಬಳಿಯಲ್ಲಿ ಅದು ಸಿಕ್ಕುತ್ತದೋ, ಅವನು ನನಗೆ ದಾಸನಾಗಿರಲಿ, ಆದರೆ ನೀವು ನಿರಪರಾಧಿಗಳಾಗಿರುವಿರಿ,” ಎಂದನು.
11ಅದಕ್ಕೆ ಅವರು ತ್ವರೆಪಟ್ಟು, ತಮ್ಮ ತಮ್ಮ ಚೀಲಗಳನ್ನು ನೆಲಕ್ಕೆ ಇಳಿಸಿ ಅವುಗಳನ್ನು ಬಿಚ್ಚಿದರು. 12ಅವರು ಹಿರಿಯನನ್ನು ಮೊದಲುಗೊಂಡು ಕಿರಿಯವನವರೆಗೆ ಶೋಧಿಸಲಾಗಿ, ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು. 13ಆಗ ಅವರು ತಮ್ಮ ವಸ್ತ್ರಗಳನ್ನು ಹರಿದುಕೊಂಡು, ತಮ್ಮ ತಮ್ಮ ಕತ್ತೆಗಳ ಮೇಲೆ ಚೀಲಗಳನ್ನು ಹೇರಿಕೊಂಡು ಪಟ್ಟಣಕ್ಕೆ ಮರಳಿ ಬಂದರು.
14ಯೆಹೂದನೂ ಅವನ ಸಹೋದರರೂ ಯೋಸೇಫನು ಇನ್ನೂ ಮನೆಯಲ್ಲಿದ್ದಾಗಲೇ, ಅವನ ಮನೆಗೆ ಬಂದು ಮುಂದೆ ಅಡ್ಡಬಿದ್ದರು. 15ಆಗ ಯೋಸೇಫನು ಅವರಿಗೆ, “ನೀವು ಮಾಡಿದ ಈ ಕೆಲಸವೇನು? ನನ್ನಂಥ ಮನುಷ್ಯನು ದೈವೋಕ್ತಿಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ?” ಎಂದನು.
16ಯೆಹೂದನು, “ನಾವು ನಮ್ಮ ಒಡೆಯನಿಗೆ ಏನು ಹೇಳೋಣ? ಏನು ಮಾತನಾಡೋಣ? ಹೇಗೆ ನಮ್ಮನ್ನು ನಾವು ನೀತಿವಂತರಾಗಿ ಮಾಡಿಕೊಳ್ಳೋಣ? ನಿನ್ನ ದಾಸರ ಪಾಪವನ್ನು ದೇವರು ಹೊರಪಡಿಸಿದ್ದಾರೆ. ನಾವೂ ಪಾತ್ರೆಯು ಯಾರ ಕೈಯಲ್ಲಿ ಸಿಕ್ಕಿತೋ ಅವನೂ ನನ್ನ ಒಡೆಯನಿಗೆ ದಾಸರಾಗಿದ್ದೇವೆ,” ಎಂದನು.
17ಆಗ ಯೋಸೇಫನು, “ಹಾಗೆ ಎಂದಿಗೂ ಆಗಬಾರದು. ಯಾರ ಬಳಿಯಲ್ಲಿ ಆ ಪಾತ್ರೆಯು ಸಿಕ್ಕಿತೋ, ಅವನು ನನಗೆ ದಾಸನಾಗಿರಲಿ. ಆದರೆ ನೀವು ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ,” ಎಂದನು.
18ಯೆಹೂದನು ಅವನ ಸಮೀಪಕ್ಕೆ ಬಂದು, “ನನ್ನ ಒಡೆಯನೇ, ನನ್ನ ಒಡೆಯನ ಕಿವಿಗಳಲ್ಲಿ ಒಂದು ಮಾತು ಹೇಳುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಗಬೇಕು. ನಿನ್ನ ದಾಸನ ಮೇಲೆ ನಿನ್ನ ಕೋಪವು ಉರಿಯದೆ ಇರಲಿ. ಏಕೆಂದರೆ ನೀನು ಫರೋಹನಿಗೆ ಸಮಾನನು. 19ನನ್ನ ಒಡೆಯನೇ, ‘ನಿಮಗೆ ತಂದೆಯೂ ಸಹೋದರರೂ ಇದ್ದಾರೋ,’ ಎಂದು ತನ್ನ ದಾಸರನ್ನು ಕೇಳಲು, 20ನಾವು ನಮ್ಮ ಒಡೆಯನಿಗೆ, ‘ನಮಗೆ ಮುದುಕನಾದ ತಂದೆಯೂ ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಚಿಕ್ಕ ಮಗನೂ ಇದ್ದಾನೆ, ಅವನ ಸಹೋದರನು ಸತ್ತುಹೋಗಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿಸುತ್ತಾನೆ,’ ಎಂದು ಹೇಳಿದೆವು.
21“ಅದಕ್ಕೆ ನೀನು ನಿನ್ನ ದಾಸರಿಗೆ, ‘ನಾನು ಅವನನ್ನು ನೋಡುವ ಹಾಗೆ, ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,’ ಎಂದು ಹೇಳಿದೆಯಲ್ಲಾ. 22ನಾವು ನಮ್ಮ ಒಡೆಯನಿಗೆ, ‘ಆ ಹುಡುಗನು ನಮ್ಮ ತಂದೆಯನ್ನು ಬಿಡಕೂಡದು. ಅವನು ತಂದೆಯನ್ನು ಬಿಟ್ಟರೆ, ಅವನು ಸಾಯುವನು,’ ಎಂದು ಹೇಳಿದೆವು. 23ಆಗ ನೀವು ನಿನ್ನ ದಾಸರಿಗೆ, ‘ನಿಮ್ಮ ಚಿಕ್ಕ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ, ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು,’ ಎಂದು ಹೇಳಿದೆ. 24ಹೀಗಿರಲಾಗಿ ನಾವು ನಿನ್ನ ದಾಸನಾದ ನಮ್ಮ ತಂದೆಯ ಬಳಿಗೆ ಹೋದಾಗ, ನನ್ನ ಒಡೆಯನ ಮಾತುಗಳನ್ನು ಅವನಿಗೆ ತಿಳಿಸಿದೆವು.
25“ನಮ್ಮ ತಂದೆಯು, ‘ನೀವು ತಿರುಗಿ ಹೋಗಿ, ನಮಗೆ ಸ್ವಲ್ಪ ಆಹಾರವನ್ನು ಕೊಂಡುಕೊಳ್ಳಿರಿ,’ ಎಂದನು. 26ಆಗ ನಾವು, ‘ಹೋಗುವುದಕ್ಕಾಗದು, ನಮ್ಮ ಚಿಕ್ಕ ತಮ್ಮನು ನಮ್ಮೊಂದಿಗೆ ಇದ್ದರೆ ಮಾತ್ರ ನಾವು ಹೋಗುತ್ತೇವೆ. ಏಕೆಂದರೆ ನಮ್ಮ ಚಿಕ್ಕ ತಮ್ಮನು ನಮ್ಮ ಸಂಗಡ ಇದ್ದರೆ ಮಾತ್ರ, ಆ ಮನುಷ್ಯನ ಮುಖವನ್ನು ನಾವು ನೋಡುವುದಕ್ಕಾಗುವುದು,’ ಎಂದು ಹೇಳಿದೆವು.
27“ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು, ‘ನನ್ನ ಹೆಂಡತಿಯು ನನಗೆ ಇಬ್ಬರು ಪುತ್ರರನ್ನು ಹೆತ್ತಳೆಂಬುದು ನಿಮಗೆ ತಿಳಿದಿದೆ. 28ಒಬ್ಬನು ನನ್ನ ಬಳಿಯಿಂದ ಹೋಗಿ ಬಿಟ್ಟನು. “ಅವನು ನಿಶ್ಚಯವಾಗಿ ಕಾಡುಮೃಗದಿಂದ ಸೀಳಿ ಸತ್ತಿರಬೇಕು,” ಎಂದು ಹೇಳಿದಿರಿ. ಅವನನ್ನು ನಾನು ಈ ದಿನದವರೆಗೂ ನೋಡಲಿಲ್ಲ. 29ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಅವನಿಗೂ ಕೇಡು ಬಂದರೆ, ನನ್ನ ಮುದಿ ತಲೆಯು ದುಃಖದಿಂದ ಸಮಾಧಿಗೆ ಇಳಿಯುವಂತೆ ಮಾಡುವಿರಿ,’ ಎಂದು ಹೇಳಿದನು.
30“ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದಲ್ಲಿ ನೆಟ್ಟಿದ್ದರಿಂದ, 31ಹುಡುಗನು ನಮ್ಮ ಸಂಗಡ ಇಲ್ಲದಿರುವುದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯುವಂತೆ ಮಾಡುವರು. 32ಏಕೆಂದರೆ ನಿನ್ನ ದಾಸನಾದ ನಾನು, ಆ ಹುಡುಗನಿಗೋಸ್ಕರ ನನ್ನ ತಂದೆಯ ಬಳಿಯಲ್ಲಿ ಹೊಣೆಯಾಗಿ, ‘ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ಎಂದೆಂದಿಗೂ ನನ್ನ ತಂದೆಗೆ ದೋಷಿಯಾಗಿರುವೆನು,’ ಎಂದು ಹೇಳಿಕೊಂಡಿದ್ದೇನೆ.
33“ಹಾಗಿದ್ದಲ್ಲಿ ಆ ಹುಡುಗನ ಬದಲಾಗಿ ನಿನ್ನ ದಾಸನಾದ ನಾನು ನನ್ನ ಒಡೆಯನಿಗೆ ದಾಸನಾಗಿರುವೆನು. ಹುಡುಗನು ನನ್ನ ಸಹೋದರರ ಸಂಗಡ ಹೋಗಿಬಿಡಲಿ. 34ಹುಡುಗನು ನನ್ನ ಬಳಿಯಲ್ಲಿರದೆ, ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡಬೇಕಾದೀತು,” ಎಂದನು.

Highlight

Share

Copy

None

Want to have your highlights saved across all your devices? Sign up or sign in