ವಿಮೋಚನಕಾಂಡ 1
1
ಇಸ್ರಾಯೇಲರಿಗಾದ ಹಿಂಸೆ
1ಯಾಕೋಬನೊಂದಿಗೆ ಈಜಿಪ್ಟಿಗೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲನ ಮಕ್ಕಳ ಹೆಸರುಗಳು:
2ರೂಬೇನ್, ಸಿಮೆಯೋನ್, ಲೇವಿ ಮತ್ತು ಯೆಹೂದ,
3ಇಸ್ಸಾಕಾರ್ ಜೆಬುಲೂನ್ ಮತ್ತು ಬೆನ್ಯಾಮೀನ್,
4ದಾನ್, ನಫ್ತಾಲಿ,
ಗಾದ್ ಮತ್ತು ಆಶೇರ್.
5ಯಾಕೋಬನ ವಂಶಜರು ಒಟ್ಟು ಎಪ್ಪತ್ತು ಮಂದಿ ಆದರೆ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.
6ಹಲವು ವರ್ಷಗಳ ಬಳಿಕ ಯೋಸೇಫನೂ ಅವನ ಸಹೋದರರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು. 7ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಡಿಕೊಂಡು ಬಲಗೊಂಡರು, ಅದರಿಂದ ಆ ದೇಶವು ಅವರಿಂದ ತುಂಬಿತು.
8ತರುವಾಯ ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು. 9ಅವನು ತನ್ನ ಜನರಿಗೆ, “ಇಸ್ರಾಯೇಲರು ನಮಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಹೆಚ್ಚು ಬಲವುಳ್ಳವರಾಗಿದ್ದಾರೆ. 10ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು, ನಮಗೆ ವಿರೋಧವಾಗಿ ಯುದ್ಧಮಾಡಿ, ದೇಶವನ್ನು ಬಿಟ್ಟು ಹೋಗಬಹುದು ಆದ್ದರಿಂದ ಅವರು ವೃದ್ಧಿಯಾಗದಂತೆ ಅವರೊಂದಿಗೆ ಬುದ್ಧಿವಂತಿಕೆಯಿಂದ ನಾವು ವರ್ತಿಸೋಣ,” ಎಂದನು.
11ಆಗ ಅವರನ್ನು ಬಿಟ್ಟೀ ಕೆಲಸಗಳಿಂದ ಶ್ರಮಪಡಿಸುವುದಕ್ಕಾಗಿ, ಬಿಟ್ಟೀ ಕೆಲಸಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ಮತ್ತು ರಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು. 12ಆದರೆ ಈಜಿಪ್ಟನವರು ಅವರನ್ನು ಎಷ್ಟು ಶ್ರಮಪಡಿಸಿದರೋ, ಅಷ್ಟು ಅಧಿಕವಾಗಿ ಅವರು ಹೆಚ್ಚಿ ಹರಡಿಕೊಂಡದ್ದರಿಂದ ಈಜಿಪ್ಟಿನವರು ಇಸ್ರಾಯೇಲರ ಬಗ್ಗೆ ಹೆದರಿದವರಾದರು. 13ಆದ್ದರಿಂದ ಈಜಿಪ್ಟಿನವರು ಇಸ್ರಾಯೇಲರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾ ಸೇವೆ ಮಾಡಿಸಿಕೊಂಡರು. 14ಮಣ್ಣು ಅಗೆಯುವ, ಇಟ್ಟಿಗೆಯನ್ನು ಮಾಡುವ ಮತ್ತು ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಈಜಿಪ್ಟಿನವರು ಅವರಿಂದ ಮಾಡಿಸಿದ ಎಲ್ಲಾ ಕೆಲಸವು ಕಠೋರವಾಗಿತ್ತು.
15ಈಜಿಪ್ಟಿನ ಅರಸನು ಶಿಪ್ರಾ ಮತ್ತು ಪೂಗಾ ಎಂದು ಹೆಸರಿದ್ದ ಹಿಬ್ರಿಯ ಸೂಲಗಿತ್ತಿಯರ ಸಂಗಡ ಮಾತನಾಡಿ, 16ಅವರಿಗೆ, “ನೀವು ಹಿಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವುದಕ್ಕೆ ಹೆರಿಗೆಯ ಸಮಯದಲ್ಲಿ ಅವರನ್ನು ಪರಾಂಬರಿಸುವಾಗ, ಗಂಡು ಮಗುವಾದರೆ ಅದನ್ನು ಕೊಂದುಹಾಕಿರಿ, ಹೆಣ್ಣಾದರೆ ಬದುಕಲಿ,” ಎಂದು ಹೇಳಿದ್ದನು. 17ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಈಜಿಪ್ಟಿನ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು. 18ಆಗ ಈಜಿಪ್ಟಿನ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ಏಕೆ ಗಂಡು ಮಕ್ಕಳನ್ನು ಬದುಕಿಸಿದ್ದೀರಿ? ಇಂಥ ಕೆಲಸವನ್ನು ಏಕೆ ಮಾಡಿದಿರಿ?” ಎಂದನು.
19ಸೂಲಗಿತ್ತಿಯರು ಫರೋಹನಿಗೆ, “ಹಿಬ್ರಿಯರ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯರು ಅವರ ಹತ್ತಿರ ಬರುವುದಕ್ಕೆ ಮುಂಚೆಯೇ ಹೆರುತ್ತಾರೆ,” ಎಂದರು.
20ಆದ್ದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದರು. ಇದಲ್ಲದೆ ಇಸ್ರಾಯೇಲರು ಸಂಖ್ಯೆಯಲ್ಲೂ ಹೆಚ್ಚಾಗಿ ಬಹು ಬಲಗೊಂಡರು. 21ಸೂಲಗಿತ್ತಿಯರು ದೇವರಿಗೆ ಭಯಪಟ್ಟದ್ದರಿಂದ, ದೇವರು ಅವರ ಕುಟುಂಬಕ್ಕೆ ಅಭಿವೃದ್ಧಿಯನ್ನು ಉಂಟುಮಾಡಿದರು.
22ಆದರೆ ಫರೋಹನು ತನ್ನ ಎಲ್ಲಾ ಜನರಿಗೆ, “ಹುಟ್ಟುವ ಹಿಬ್ರಿಯರ ಗಂಡು ಮಕ್ಕಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಮಕ್ಕಳನ್ನೆಲ್ಲಾ ಬದುಕಿಸಬೇಕು,” ಎಂದು ಅಪ್ಪಣೆಕೊಟ್ಟನು.
Currently Selected:
ವಿಮೋಚನಕಾಂಡ 1: KSB
Highlight
Share
Copy

Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.