YouVersion Logo
Search Icon

ಜೆಕರ್ಯ 11

11
ದೇವರು ಅನ್ಯ ದೇಶಗಳವರನ್ನು ಶಿಕ್ಷಿಸುವನು
1ಲೆಬನೋನೇ, ನೀನು ನಿನ್ನ ದ್ವಾರಗಳನ್ನು ತೆರೆ.
ಆಗ ಬೆಂಕಿಯು ಒಳಬಂದು ನಿನ್ನ ದೇವದಾರು ಮರಗಳನ್ನೆಲ್ಲಾ ಸುಟ್ಟು ಹಾಕುವದು.
2ದೇವದಾರು ಮರಗಳು ಬೀಳುವಾಗ ಓಕ್ ಮರಗಳು ರೋದಿಸುವವು.
ಆ ಬಲವಾದ ಮರಗಳನ್ನು ತೆಗೆದುಕೊಂಡು ಹೋಗಲಾಗುವುದು.
ಅಡವಿಯು ಕಡಿದುಹಾಕಲ್ಪಟ್ಟಿದ್ದಕ್ಕಾಗಿ
ಬಾಷಾನಿನ ಶ್ರೇಷ್ಠ ವೃಕ್ಷಗಳು ದುಃಖಿಸುವವು.
3ರೋದಿಸುವ ಕುರುಬರ ಕಡೆಗೆ ಕಿವಿಗೊಡಿರಿ.
ಅವರ ನಾಯಕರುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.
ಪ್ರಾಯದ ಸಿಂಹಗಳ ಗರ್ಜನೆಗೆ ಕಿವಿಗೊಡಿರಿ.
ಯೋರ್ದನ್ ಹೊಳೆಯ ಬದಿಯಲ್ಲಿದ್ದ ದಟ್ಟವಾದ ಪೊದರುಗಳೆಲ್ಲಾ ತೆಗೆದುಕೊಂಡು ಹೋಗಲಾಗಿದೆ.
4ನನ್ನ ದೇವರಾದ ಯೆಹೋವನು ಹೇಳುವುದೇನೆಂದರೆ, “ಕೊಲ್ಲುವದಕ್ಕೋಸ್ಕರವಾಗಿ ಬೆಳೆಸಿದ ಕುರಿಗಳನ್ನು ಪರಾಮರಿಸು. 5ಅವರ ನಾಯಕರುಗಳು ವರ್ತಕರಂತೆಯೂ ಧಣಿಗಳಂತೆಯೂ ಇರುವರು. ಧಣಿಗಳು ಕುರಿಗಳನ್ನು ಕೊಂದರೂ ಶಿಕ್ಷಿಸಲ್ಪಡುವುದಿಲ್ಲ. ವರ್ತಕರು ಕುರಿಗಳನ್ನು ಮಾರಿ, ‘ನಾನೀಗ ಧನಿಕನಾಗಿದ್ದೇನೆ. ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಅನ್ನುವರು. ಕುರುಬರು ತಮ್ಮ ಕುರಿಗಳಿಗಾಗಿ ಚಿಂತಿಸುವುದಿಲ್ಲ. 6ಈ ದೇಶದಲ್ಲಿ ವಾಸಿಸುವ ಜನರ ಬಗ್ಗೆ ನಾನು ದುಃಖಿಸುವುದಿಲ್ಲ.” ಇದು ಯೆಹೋವನ ನುಡಿ. “ನೋಡಿರಿ, ಪ್ರತಿಯೊಬ್ಬನೂ ತನ್ನ ಅರಸನಿಂದಲೂ ನೆರೆಯವರಿಂದಲೂ ಹಾಳುಮಾಡಲ್ಪಡುವಂತೆ ನಾನು ಮಾಡುವೆನು. ಅವರ ದೇಶವನ್ನು ಹಾಳುಮಾಡುವಂತೆ ಅವರನ್ನು ಬಿಡುವೆನು. ಅವರನ್ನು ನಿಲ್ಲಿಸುವುದಿಲ್ಲ.”
7ಕೊಲ್ಲುವದಕ್ಕಾಗಿ ಬೆಳೆಸುವ ಕುರಿಗಳನ್ನು ನಾನು ಪರಾಮರಿಸಿದೆನು. ನನಗೆ ಎರಡು ಕೋಲುಗಳು ದೊರೆತವು. ಒಂದು ಕೋಲನ್ನು ದಯೆ ಎಂದೂ ಇನ್ನೊಂದನ್ನು ಒಗ್ಗಟ್ಟು ಎಂಬ ಹೆಸರಿನಿಂದಲೂ ಕರೆದೆನು. ಆ ಬಳಿಕ ಕುರಿಗಳನ್ನು ಪರಾಮರಿಸ ತೊಡಗಿದೆನು. 8ಒಂದೇ ತಿಂಗಳೊಳಗೆ ಮೂರು ಮಂದಿ ಕುರುಬರನ್ನು ನಾನು ಕೆಲಸದಿಂದ ಬಿಡಿಸಿದೆನು. ನಾನು ಕುರಿಗಳ ಮೇಲೆ ಸಿಟ್ಟುಗೊಳ್ಳಲಾರಂಭಿಸಿದೆನು. ಅವು ನನ್ನನ್ನು ಹಗೆ ಮಾಡಲಾರಂಭಿಸಿದವು. 9ಆಗ ನಾನು, “ಸರಿ, ನಾನು ನಿಮ್ಮನ್ನು ಇನ್ನು ನೋಡಿಕೊಳ್ಳುವದಿಲ್ಲ. ಹೋಗಿಬಿಡುತ್ತೇನೆ” ಅಂದೆನು. ಸಾಯಲು ಮನಸ್ಸುಳ್ಳವುಗಳನ್ನು ಸಾಯಲುಬಿಟ್ಟೆನು. ನಾಶವಾಗಲು ಮನಸ್ಸುಳ್ಳವುಗಳನ್ನು ನಾಶವಾಗಲು ಬಿಟ್ಟೆನು. ಅಳಿಯದೆ ಉಳಿದವುಗಳು ಪರಸ್ಪರ ನಾಶಮಾಡಿಕೊಳ್ಳುವವು. 10ಆಗ ನಾನು ದಯೆ ಹೆಸರಿನ ಕೋಲನ್ನು ತೆಗೆದುಕೊಂಡು ತುಂಡುಮಾಡಿದೆನು. ಯೆಹೋವನು ಎಲ್ಲಾ ಜನರೊಂದಿಗೆ ಮಾಡಿದ ಒಡಂಬಡಿಕೆಯು ಮುರಿಯಿತು ಎಂಬುದಾಗಿ ಅವರಿಗೆ ತೋರಿಸಿದೆನು. 11ಹೀಗೆ ಆ ದಿವಸ ಒಡಂಬಡಿಕೆಗೆ ಅಂತ್ಯವಾಯಿತು. ನನ್ನನ್ನೇ ನೋಡುತ್ತಿದ್ದ ಆ ಬಡ ಕುರಿಗಳಿಗೆ ಈ ಸಂದೇಶವು ಯೆಹೋವನಿಂದಲೇ ನನಗೆ ಬಂದಿದೆ ಎಂಬುದು ತಿಳಿದಿತ್ತು.
12ಆಗ ನಾನು ಹೀಗೆಂದೆನು, “ನನಗೆ ಸಂಬಳ ಕೊಡಲು ನಿಮಗೆ ಇಷ್ಟವಿದ್ದರೆ ಕೊಡಿರಿ, ಇಷ್ಟವಿಲ್ಲದಿದ್ದರೆ ಬೇಡ.” ಆಗ ಅವರು ನನಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು. 13ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ನನ್ನ ಬೆಲೆ ಅಷ್ಟೇ ಎಂದು ಅವರು ನೆನಸುತ್ತಾರೆ. ಆ ಹಣವನ್ನು ತೆಗೆದು ಆಲಯದ ಖಜಾನೆಗೆ ಸುರಿ.” ನಾನು ಆ ಮೂವತ್ತು ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಆಲಯದ ಖಜಾನೆಗೆ ಸುರಿದೆನು. 14ಆಮೇಲೆ ನಾನು “ಒಗ್ಗಟ್ಟು” ಎಂಬ ಹೆಸರಿನ ಕೋಲನ್ನು ಎರಡು ತುಂಡಾಗಿ ಮುರಿದೆನು. ಇಸ್ರೇಲ್ ಮತ್ತು ಯೆಹೂದ ರಾಜ್ಯಗಳ ಒಗ್ಗಟ್ಟು ಮುರಿಯಿತು ಎಂದು ತೋರಿಸುವದಕ್ಕಾಗಿ ನಾನು ಹಾಗೆ ಮಾಡಿದೆನು.
15ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ಒಬ್ಬ ಮೂರ್ಖ ಕುರುಬನು ಉಪಯೋಗಿಸುವ ವಸ್ತುಗಳನ್ನು ತೆಗೆದುಕೊಂಡು ಬಾ. 16ನಾನು ಈ ದೇಶಕ್ಕೆ ಒಬ್ಬ ಹೊಸ ಕುರುಬನನ್ನು ನೇಮಕ ಮಾಡುವೆನೆಂದು ಆ ರೀತಿಯಾಗಿ ತೋರಿಸುವೆನು. ಆದರೆ ಈ ಮನುಷ್ಯನಿಗೆ ನಾಶಮಾಗುತ್ತಿರುವ ಕುರಿಗಳನ್ನು ಪರಾಮರಿಸಲು ಸಾಧ್ಯವಾಗುವುದಿಲ್ಲ. ಗಾಯಗೊಂಡ ಕುರಿಗಳನ್ನು ಗುಣಮಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಸಾಯದೆ ಉಳಿದ ಕುರಿಗಳಿಗೆ ಆಹಾರ ಕೊಡಲು ಅವನಿಂದ ಸಾಧ್ಯವಾಗುವುದಿಲ್ಲ. ಪುಷ್ಟಿಕರವಾದ ಕುರಿಗಳನ್ನು ಪೂರ್ತಿಯಾಗಿ ತಿಂದುಹಾಕಲಾಗುವದು. ಅದರ ಗೊರಸುಗಳು ಮಾತ್ರವೇ ಉಳಿಯುವದು.”
17ಕೆಲಸಕ್ಕೆ ಬಾರದ ಕುರುಬನೇ,
ನೀನು ನನ್ನ ಕುರಿಗಳನ್ನು ತೊರೆದುಬಿಟ್ಟೆ.
ಅವನನ್ನು ಶಿಕ್ಷಿಸಿರಿ!
ಖಡ್ಗದಿಂದ ಅವನ ಬಲಗೈಯನ್ನು ಕತ್ತರಿಸಿಹಾಕಿರಿ, ಮತ್ತು ಬಲಗಣ್ಣನ್ನು ಕಿತ್ತುಹಾಕಿರಿ.
ಆಗ ಅವನ ಬಲಗೈ ಅಪ್ರಯೋಜಕವಾಗುವದು,
ಬಲಗಣ್ಣು ದೃಷ್ಟಿಹೀನವಾಗುವದು.

Currently Selected:

ಜೆಕರ್ಯ 11: KERV

Highlight

Share

Copy

None

Want to have your highlights saved across all your devices? Sign up or sign in

Video for ಜೆಕರ್ಯ 11