ಮೀಕ 5
5
1ಬಲಶಾಲಿಯಾದ ನಗರಿಯೇ, ನಿನ್ನ ಸೈನಿಕರನ್ನು ಕೂಡಿಸು.
ಅವರು ನಮ್ಮ ಮೇಲೆ ದಾಳಿಮಾಡಲು ಸುತ್ತುವರಿದಿದ್ದಾರೆ.
ಇಸ್ರೇಲಿನ ನ್ಯಾಯಾಧೀಶನ ಕೆನ್ನೆಯ ಮೇಲೆ
ಕೋಲಿನಿಂದ ಹೊಡೆಯುವರು.
ಬೆತ್ಲೆಹೇಮಿನಲ್ಲಿ ಮೆಸ್ಸೀಯನು ಜನಿಸುವನು
2ಎಫ್ರಾತದ ಬೆತ್ಲೆಹೇಮೇ,
ನೀನು ಯೆಹೂದದ ಪ್ರಾಂತ್ಯದಲ್ಲಿ ಅತಿ ಚಿಕ್ಕ ಊರು ಆಗಿರುವೆ.
ನಿನ್ನಲ್ಲಿರುವ ಕುಟುಂಬಗಳು ಸ್ವಲ್ಪ ಮಾತ್ರವೇ.
ಆದರೆ ಇಸ್ರೇಲನ್ನು ಆಳುವವನು ನನಗೋಸ್ಕರವಾಗಿ ನಿನ್ನಿಂದ ಹೊರಡುವನು.
ಆತನ ಪ್ರಾರಂಭವು ಅನಾದಿ ಕಾಲದಿಂದಲೇ ಆಗಿದೆ.
3ಸ್ತ್ರೀಯು ತನ್ನ ಮಗನನ್ನು ಹೆರುವ ತನಕ
ಯೆಹೋವನು ತನ್ನ ಜನರನ್ನು ತೊರೆದುಬಿಡುವನು.
ಅನಂತರ ಉಳಿದ ಅವನ ಸಹೋದರರು
ಇಸ್ರೇಲ್ ಜನರ ಬಳಿಗೆ ತಿರುಗಿ ಬರುವರು.
4ಆಗ ಇಸ್ರೇಲರನ್ನು ಆಳುವಾತನು ಯೆಹೋವನ ಶಕ್ತಿಯಲ್ಲಿಯೂ
ತನ್ನ ದೇವರಾದ ಯೆಹೋವನ ಹೆಸರಿನಲ್ಲಿಯೂ ನಿಂತು ತನ್ನ ಮಂದೆಗೆ ಆಹಾರವನ್ನೀಯುವನು.
ಆತನ ಮಹತ್ತು ಭೂಮಿಯ ಕಟ್ಟಕಡೆಗೆ ಪ್ರಸರಿಸುವದರಿಂದ
ಅವರು ಸಮಾಧಾನದಿಂದ ವಾಸಿಸುವರು.
5ಆಗ ಶಾಂತಿ ನೆಲೆಸುವದು.
ಹೌದು, ಅಶ್ಶೂರದ ಸೈನ್ಯವು ನಮ್ಮ ದೇಶಕ್ಕೆ ಬಂದು
ನಮ್ಮ ಮಹಾ ಕಟ್ಟಡಗಳನ್ನು ತುಳಿದುಹಾಕುವರು.
ಆದರೆ ಇಸ್ರೇಲನ್ನು ಆಳುವಾತನು ಏಳು ಕುರುಬರನ್ನೂ
ಎಂಟು ನಾಯಕರನ್ನೂ ಆರಿಸುವನು.
6ಅವರು ತಮ್ಮ ಖಡ್ಗಗಳನ್ನು ಉಪಯೋಗಿಸಿ ಅಶ್ಶೂರದವರನ್ನು ಆಳುವರು.
ಅವರು ನಿಮ್ರೋದನ ದೇಶವನ್ನು ಆಳುವರು.
ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಆ ಜನರನ್ನು ಆಳುವರು.
ಆದರೆ ಇಸ್ರೇಲಿನ ರಾಜನು ಅಶ್ಶೂರದವರಿಂದ ನಮ್ಮನ್ನು ರಕ್ಷಿಸುವನು.
ಅವರು ನಮ್ಮ ದೇಶದೊಳಕ್ಕೆ ಬಂದು ನಮ್ಮ ಪ್ರದೇಶವನ್ನು ತುಳಿದು ಹಾಳುಮಾಡುವಾಗ ನಾವು ರಕ್ಷಿಸಲ್ಪಡುವೆವು.
7ಆದರೆ ಜನಾಂಗಗಳಲ್ಲಿ ಚದರಿರುವ ಇಸ್ರೇಲಿನ ಅಳಿದುಳಿದವರು
ಯೆಹೋವನಿಂದ ಹೊರಡುವ ಮಂಜಿನಂತಿರುವರು.
ಅದು ಯಾರನ್ನೂ ಕಾಯುವದಿಲ್ಲ.
ಅವರು ಹುಲ್ಲಿನ ಮೇಲೆ ಬಿದ್ದಿರುವ ಮಳೆಯಂತಿರುವರು.
ಆ ಮಳೆಯು ಯಾರನ್ನೂ ಕಾಯುವದಿಲ್ಲ.
8ಆದರೆ ಜನಾಂಗಗಳಲ್ಲಿ ಚದರಿರುವ
ಯಾಕೋಬನ ವಂಶದ ಅಳಿದುಳಿದವರು,
ಕಾಡಿನಲ್ಲಿರುವ ಪ್ರಾಣಿಗಳಲ್ಲಿ ಸಿಂಹವು ಹೇಗೆ ಇರುವದೋ, ಹಾಗೆಯೇ ಇರುವರು.
ಕುರಿಗಳ ಹಿಂಡಿನ ಮಧ್ಯೆಯಿರುವ ಪ್ರಾಯದ ಸಿಂಹದಂತಿರುವರು.
ಅದು ತನಗೆ
ಇಷ್ಟ ಬಂದಂತೆ ತಿರುಗಾಡುವದು.
ಅದು ಒಂದು ಪ್ರಾಣಿಯನ್ನು ಹಿಡಿದರೆ
ಅದನ್ನು ಬಿಡಿಸಲು ಯಾರಿಂದಲೂ ಸಾಧ್ಯವಿಲ್ಲ.
ಜನಶೇಷವು ಅದರಂತಿರುವದು.
9ನೀನು ನಿನ್ನ ವೈರಿಗಳ ಮೇಲೆ ಕೈ ಎತ್ತಿ
ಅವರನ್ನು ನಾಶಮಾಡುವೆ.
ಜನರು ಯೆಹೋವನನ್ನು ಅವಲಂಬಿಸುವರು
10ಯೆಹೋವನು ಹೇಳುವುದೇನೆಂದರೆ,
“ಆ ಸಮಯದಲ್ಲಿ ನಿನ್ನ ಕುದುರೆಗಳನ್ನು ನಾನು ತೆಗೆದುಬಿಡುವೆನು.
ನಿನ್ನ ರಥಗಳನ್ನು ನಾಶಮಾಡುವೆನು.
11ನಿನ್ನ ದೇಶದಲ್ಲಿರುವ ಪಟ್ಟಣಗಳನ್ನು ಹಾಳುಮಾಡುವೆನು.
ನಿನ್ನ ಕೋಟೆಗಳನ್ನೆಲ್ಲಾ ನಾಶಮಾಡುವೆನು.
12ನೀನು ಮಾಟಮಂತ್ರಗಳನ್ನು ಇನ್ನು ಮುಂದೆ ಮಾಡದಿರುವೆ.
ಭವಿಷ್ಯ ಮತ್ತು ಕಣಿ ಹೇಳುವ ಜನರು ಇನ್ನು ಮುಂದೆ ನಿನ್ನಲ್ಲಿ ಇರುವುದಿಲ್ಲ.
13ನಿನ್ನ ವಿಗ್ರಹಗಳನ್ನೂ ಕಲ್ಲುಕಂಬಗಳನ್ನೂ ಒಡೆದು ನಾಶಮಾಡುವೆನು.
ನಿನ್ನ ಕೈಗಳು ಮಾಡಿದ ವಸ್ತುಗಳನ್ನು ನೀನು ಪೂಜಿಸುವುದಿಲ್ಲ.
14ನಾನು ನಿನ್ನ ಅಶೇರ ಸ್ತಂಭಗಳನ್ನೂ
ಸುಳ್ಳು ದೇವರುಗಳನ್ನೂ ನಾಶಮಾಡುವೆನು.
15ಕೆಲವು ಜನಾಂಗಗಳು ನನ್ನ ಮಾತಿಗೆ ಕಿವಿಗೊಡುವುದಿಲ್ಲ.
ಆಗ ನಾನು ನನ್ನ ಕೋಪವನ್ನು ಪ್ರದರ್ಶಿಸಿ ಮುಯ್ಯಿತೀರಿಸುವೆನು.”
Currently Selected:
ಮೀಕ 5: KERV
Highlight
Share
Copy

Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International