ಲೂಕನ ಸುವಾರ್ತೆ 22
22
ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಸಂಚು
(ಮತ್ತಾಯ 26:1-5,14-16; ಮಾರ್ಕ 14:1-2,10-11; ಯೋಹಾನ 11:45-53)
1ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು. 2ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು.
ಯೇಸುವಿನ ವಿರುದ್ಧ ಯೂದನು ಮಾಡಿದ ಸಂಚು
3ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು. 4ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು. 5ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು. 6ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು.
ಪಸ್ಕದ ಊಟಕ್ಕೆ ಸಿದ್ಧತೆ
(ಮತ್ತಾಯ 26:17-25; ಮಾರ್ಕ 14:12-21; ಯೋಹಾನ 13:21-30)
7ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು. 8ಯೇಸುವು ಪೇತ್ರ ಮತ್ತು ಯೋಹಾನರಿಗೆ, “ಹೋಗಿ, ಪಸ್ಕದ ಊಟವನ್ನು ನಮಗಾಗಿ ಸಿದ್ಧಮಾಡಿರಿ” ಎಂದು ಹೇಳಿದನು.
9ಪೇತ್ರ ಮತ್ತು ಯೋಹಾನರು, “ಊಟವನ್ನು ಎಲ್ಲಿ ಸಿದ್ಧಮಾಡಬೇಕು?” ಎಂದು ಯೇಸುವಿಗೆ ಕೇಳಿದರು.
10ಯೇಸು ಅವರಿಗೆ, “ಕೇಳಿರಿ! ನೀವು ಪಟ್ಟಣದೊಳಗೆ (ಜೆರುಸಲೇಮಿಗೆ) ಹೋದನಂತರ, ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನನ್ನು ನೋಡುವಿರಿ. ಅವನನ್ನೇ ಹಿಂಬಾಲಿಸಿರಿ. ಅವನು ಒಂದು ಮನೆಯೊಳಗೆ ಹೋಗುವನು. ನೀವು ಅವನೊಂದಿಗೆ ಹೋಗಿರಿ. 11ಆ ಮನೆಯ ಯಜಮಾನನಿಗೆ, ‘ಗುರುವು ತನ್ನ ಶಿಷ್ಯರೊಂದಿಗೆ ಯಾವ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂಬುದನ್ನು ದಯಮಾಡಿ ತೋರಿಸು’ ಎಂದು ಹೇಳಿರಿ. 12ಆಗ ಮನೆಯ ಯಜಮಾನನು ಮೇಲಂತಸ್ತಿನಲ್ಲಿ ಒಂದು ದೊಡ್ಡ ಕೋಣೆಯನ್ನು ತೋರಿಸುವನು. ಈ ಕೋಣೆಯು ನಿಮಗಾಗಿ ಸಿದ್ಧವಾಗಿರುವುದು. ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿರಿ” ಅಂದನು.
13ಆದ್ದರಿಂದ ಪೇತ್ರ ಮತ್ತು ಯೋಹಾನ ಹೊರಟರು. ಯೇಸು ಹೇಳಿದ ಹಾಗೆ ಪ್ರತಿಯೊಂದೂ ನಡೆಯಿತು. ಅವರು ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿದರು.
ಪ್ರಭುವಿನ ರಾತ್ರಿ ಭೋಜನ
(ಮತ್ತಾಯ 26:26-30; ಮಾರ್ಕ 14:22-26; 1 ಕೊರಿಂಥ. 11:23-25)
14ಪಸ್ಕದ ಊಟಮಾಡುವ ಸಮಯ ಬಂತು. ಯೇಸು ಮತ್ತು ಅಪೊಸ್ತಲರು ಮೇಜಿನ ಸುತ್ತಲೂ ಊಟಕ್ಕೆ ಕುಳಿತುಕೊಂಡರು. 15ಯೇಸು ಅವರಿಗೆ, “ನಾನು ಸಾಯುವ ಮೊದಲು ಈ ಪಸ್ಕದ ಊಟ ಮಾಡಲು ಬಹಳವಾಗಿ ಅಪೇಕ್ಷಿಸಿದ್ದೇನೆ. 16ಇದರ ನಿಜವಾದ ಅರ್ಥವು ದೇವರ ರಾಜ್ಯದಲ್ಲಿ ನೆರವೇರುವ ತನಕ, ನಾನೆಂದಿಗೂ ಇನ್ನೊಂದು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಅಂದನು.
17ಬಳಿಕ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಆತನು, “ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವನ್ನು ನೀವೆಲ್ಲರೂ ಹಂಚಿಕೊಳ್ಳಿರಿ. 18ದೇವರ ರಾಜ್ಯ ಬರುವ ತನಕ, ನಾನೆಂದಿಗೂ ತಿರುಗಿ ದ್ರಾಕ್ಷಾರಸ ಕುಡಿಯುವುದಿಲ್ಲ” ಅಂದನು.
19ಆಮೇಲೆ ಯೇಸು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ರೊಟ್ಟಿಗಾಗಿ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ಅಪೊಸ್ತಲರಿಗೆ ಕೊಟ್ಟನು. ಬಳಿಕ ಯೇಸು, “ನಾನು ನಿಮಗೋಸ್ಕರ ಕೊಡುತ್ತಿರುವ ನನ್ನ ದೇಹವಿದು. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಅಂದನು. 20ಅದೇ ರೀತಿಯಾಗಿ, ಊಟವಾದ ನಂತರ, ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಇದು ಸೂಚಿಸುತ್ತದೆ. ನಾನು ನಿಮಗಾಗಿ ಕೊಡುತ್ತಿರುವ ರಕ್ತದಿಂದ ಈ ಹೊಸ ಒಡಂಬಡಿಕೆ ಪ್ರಾರಂಭವಾಗುತ್ತದೆ” ಅಂದನು.
ಯೇಸುವಿಗೆ ಯಾರು ವಿರೋಧಿಗಳಾಗುವರು?
21ಯೇಸು, “ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. 22ಮನುಷ್ಯಕುಮಾರನು ದೇವರ ಯೋಜನೆಗನುಸಾರವಾಗಿ ಮರಣಹೊಂದುವನು. ಆದರೆ ಮನುಷ್ಯಕುಮಾರನನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಡುವ ವ್ಯಕ್ತಿಗೆ ಬಹಳ ಕೇಡಾಗುವುದು” ಎಂದು ಹೇಳಿದನು.
23ಆಗ ಅಪೊಸ್ತಲರು, “ನಮ್ಮಲ್ಲಿ ಯಾವನು ಇಂಥ ದುಷ್ಕೃತ್ಯ ಮಾಡುವನು?” ಎಂದು ಒಬ್ಬರನ್ನೊಬ್ಬರು ಕೇಳಿಕೊಂಡರು.
ಸೇವಕರಂತಿರಿ
24ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು. 25ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ. 26ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು. 27ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!
28“ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು. 29ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ. 30ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ!
(ಮತ್ತಾಯ 26:31-35; ಮಾರ್ಕ 14:27-31; ಯೋಹಾನ 13:36-38)
31“ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ) 32ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು.
33ಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು.
34ಅದಕ್ಕೆ ಯೇಸು, “ಪೇತ್ರನೇ, ನಾಳೆ ಬೆಳಿಗ್ಗೆ ಕೋಳಿ ಕೂಗುವ ಮೊದಲು ನನ್ನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವೆ!” ಅಂದನು.
ಕಷ್ಟವನ್ನು ಎದುರಿಸಲು ಸಿದ್ಧರಾಗಿರಿ
35ಬಳಿಕ ಯೇಸು ಅಪೊಸ್ತಲರಿಗೆ, “ಜನರಿಗೆ ಬೋಧಿಸುವುದಕ್ಕೆ ನಾನು ನಿಮ್ಮನ್ನು ಹಣವಿಲ್ಲದೆ, ಚೀಲವಿಲ್ಲದೆ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದೆನು. ಆದರೆ ನಿಮಗೆ ಏನಾದರೂ ಕೊರತೆ ಆಯಿತೇ?” ಎಂದು ಕೇಳಿದನು.
ಅಪೊಸ್ತಲರು, “ಇಲ್ಲ” ಅಂದರು.
36ಯೇಸು ಅವರಿಗೆ, “ಆದರೆ ಈಗ ನಿಮ್ಮಲ್ಲಿ ಹಣವಾಗಲಿ ಚೀಲವಾಗಲಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿರಿ. ನಿಮ್ಮಲ್ಲಿ ಖಡ್ಗವಿಲ್ಲದಿದ್ದರೆ, ನಿಮ್ಮ ಮೇಲಂಗಿಯನ್ನು ಮಾರಿ ಒಂದು ಖಡ್ಗವನ್ನು ಕೊಂಡುಕೊಳ್ಳಿರಿ.
37‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’#ಯೆಶಾಯ 53:12.
ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನನ್ನ ಬಗ್ಗೆ ಬರೆಯಲ್ಪಟ್ಟಿರುವ ಈ ಮಾತು ನೆರವೇರಬೇಕಾಗಿದೆ ಮತ್ತು ಈಗ ನೆರವೇರುತ್ತಿದೆ” ಎಂದು ಹೇಳಿದನು.
38ಶಿಷ್ಯರು, “ಪ್ರಭುವೇ, ಇಲ್ಲಿ ನೋಡು, ಎರಡು ಖಡ್ಗಗಳಿವೆ” ಎಂದು ಹೇಳಿದರು.
ಯೇಸು “ಅಷ್ಟು ಸಾಕು” ಅಂದನು.
ಅಪೊಸ್ತಲರ ಪ್ರಾರ್ಥನೆಯ ಅಗತ್ಯತೆ
(ಮತ್ತಾಯ 26:36-46; ಮಾರ್ಕ 14:32-42)
39ಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು. 40ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
41ಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ, 42“ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 43ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು. 44ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು. 45ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.) 46ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
ಯೇಸುವಿನ ಬಂಧನ
(ಮತ್ತಾಯ 26:47-56; ಮಾರ್ಕ 14:43-50; ಯೋಹಾನ 18:3-11)
47ಯೇಸು ಮಾತಾಡುತ್ತಿದ್ದಾಗ, ಜನರ ಒಂದು ಗುಂಪು ಅಲ್ಲಿಗೆ ಬಂದಿತು. ಹನ್ನೆರಡು ಅಪೊಸ್ತಲರಲ್ಲಿ ಒಬ್ಬನು ಆ ಗುಂಪಿಗೆ ಮುಂದಾಳಾಗಿದ್ದನು. ಅವನೇ ಯೂದನು. ಅವನು ಯೇಸುವಿಗೆ ಮುದ್ದಿಡುವಷ್ಟು ಹತ್ತಿರ ಬಂದನು.
48ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುವಿಯೋ?” ಎಂದು ಕೇಳಿದನು. 49ಯೇಸುವಿನ ಶಿಷ್ಯರು ಸಹ ಅಲ್ಲಿ ನಿಂತಿದ್ದರು. ಅಲ್ಲಿ ನಡೆಯುತ್ತಿದ್ದುದನ್ನು ಅವರು ನೋಡುತ್ತಿದ್ದರು. ಶಿಷ್ಯರು ಯೇಸುವಿಗೆ, “ಪ್ರಭುವೇ, ನಾವು ನಮ್ಮ ಖಡ್ಗಗಳನ್ನು ಉಪಯೋಗಿಸೋಣವೇ?” ಎಂದು ಕೇಳಿದರು. 50ಶಿಷ್ಯರಲ್ಲಿ ಒಬ್ಬನು ತನ್ನ ಖಡ್ಗವನ್ನು ಬೀಸಿ ಮಹಾಯಾಜಕನ ಆಳಿನ ಬಲಗಿವಿಯನ್ನು ಕತ್ತರಿಸಿದನು.
51ಯೇಸು ಅವನಿಗೆ, “ನಿಲ್ಲಿಸು” ಎಂದು ಹೇಳಿ, ಆ ಸೇವಕನ ಕಿವಿಯನ್ನು ಮುಟ್ಟಿ ಸ್ವಸ್ಥಗೊಳಿಸಿದನು.
52ಯೇಸುವನ್ನು ಬಂಧಿಸಲು ಅಲ್ಲಿಗೆ ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಮತ್ತು ಯೆಹೂದ್ಯ ಸಿಪಾಯಿಗಳು ಬಂದಿದ್ದರು. ಯೇಸು ಅವರಿಗೆ, “ಖಡ್ಗಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ಇಲ್ಲಿಗೆ ಬಂದದ್ದೇಕೆ? ನಾನು ಅಪರಾಧಿಯೆಂದು ನೀವು ಭಾವಿಸುತ್ತೀರೋ? 53ಪ್ರತಿದಿನ ನಿಮ್ಮ ಸಂಗಡ ದೇವಾಲಯದಲ್ಲಿದ್ದೆನು. ನೀವು ನನ್ನನ್ನು ಅಲ್ಲಿ ಏಕೆ ಬಂಧಿಸಲಿಲ್ಲ? ಆದರೆ ಇದು ನಿಮ್ಮ ಸಮಯ. ಇದು ಅಂಧಕಾರದ (ಪಾಪ) ದೊರೆತನ” ಎಂದು ಹೇಳಿದನು.
ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:57-58,69-75; ಮಾರ್ಕ 14:53-54,66-72; ಯೋಹಾನ 18:12-18,25-27)
54ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ. 55ಸೈನಿಕರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡರು. ಪೇತ್ರನೂ ಅವರ ಜೊತೆ ಕುಳಿತುಕೊಂಡನು. 56ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು.
57ಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು. 58ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು.
ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.
59ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.
60ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು.
ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು. 61ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು. 62ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು.
ಯೇಸುವಿಗೆ ಜನರು ಮಾಡಿದ ಅಪಹಾಸ್ಯ
(ಮತ್ತಾಯ 26:67-68; ಮಾರ್ಕ 14:65)
63-64ಕೆಲವು ಜನರು ಯೇಸುವನ್ನು ಹಿಡಿದುಕೊಂಡಿದ್ದರು. ಅವರು ಯೇಸುವಿನ ಮುಖಕ್ಕೆ ಮುಸುಕು ಹಾಕಿ, ಆತನನ್ನು ಹೊಡೆದು, “ನಿನ್ನನ್ನು ಹೊಡೆದವರ್ಯಾರು? ನಮಗೆ ಪ್ರವಾದನೆ ಹೇಳು” ಎಂದು ಗೇಲಿಮಾಡಿದರು. 65ಅವರು ಹಲವಾರು ವಿಧದಲ್ಲಿ ಆತನನ್ನು ದೂಷಿಸಿ ನಿಂದಿಸಿದರು.
ಯೆಹೂದ್ಯನಾಯಕರ ಮುಂದೆ ಯೇಸು
(ಮತ್ತಾಯ 26:59-66; ಮಾರ್ಕ 14:55-64; ಯೋಹಾನ 18:19-24)
66ಮರುದಿನ ಮುಂಜಾನೆ ಹಿರಿಯ ಜನನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಒಟ್ಟಾಗಿ ಸೇರಿಬಂದರು. ಅವರು ಯೇಸುವನ್ನು ನ್ಯಾಯಾಲಯಕ್ಕೆ ಕರೆದೊಯ್ದು, 67“ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಎಂದು ಹೇಳಿದರು.
ಯೇಸು ಅವರಿಗೆ, “ನಾನು ಕ್ರಿಸ್ತನೆಂದು ಹೇಳಿದರೂ ನೀವು ನನ್ನನ್ನು ನಂಬುವುದಿಲ್ಲ. 68ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರಕೊಡುವುದಿಲ್ಲ. 69ಆದರೆ ಇಂದಿನಿಂದ ಮನುಷ್ಯಕುಮಾರನು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು.
70ಅವರೆಲ್ಲರೂ, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ” ಎಂದನು.
71ಆಗ ಅವರು, “ಇನ್ನೇನು ಸಾಕ್ಷಿಬೇಕು? ಆತನು ಹೀಗೆ ಹೇಳುವುದನ್ನು ನಾವೇ ಕೇಳಿದೆವಲ್ಲಾ!” ಅಂದರು.
Currently Selected:
ಲೂಕನ ಸುವಾರ್ತೆ 22: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International