ಹಬಕ್ಕೂಕ 1
1
ಯೆಹೋವನಿಗೆ ಹಬಕ್ಕೂಕನ ದೂರು
1ಪ್ರವಾದಿಯಾದ ಹಬಕ್ಕೂಕನಿಗೆ ಕೊಡಲ್ಪಟ್ಟ ಸಂದೇಶ.
2ಯೆಹೋವನೇ, ನಾನು ನಿನ್ನಿಂದ ಸಹಾಯವನ್ನು ಕೇಳುತ್ತಲೇ ಇದ್ದೇನೆ. ನನ್ನ ಮೊರೆಯನ್ನು ಯಾವಾಗ ಕೇಳುವೆ? ನಾನು ಹಿಂಸೆಯ ವಿಷಯವಾಗಿ ನಿನ್ನನ್ನು ಕೂಗಿದರೂ ನೀನು ಏನೂ ಮಾಡಲಿಲ್ಲ. 3ಜನರು ವಸ್ತುಗಳನ್ನು ಕದ್ದುಕೊಂಡು ಇತರರನ್ನು ಗಾಯಗೊಳಿಸುತ್ತಿದ್ದಾರೆ. ಜನರು ಜಗಳ ಮಾಡುತ್ತಾ ಕಾದಾಡುತ್ತಿದ್ದಾರೆ. ಇಂಥಾ ಭಯಂಕರ ಸಂಗತಿಗಳನ್ನು ನೋಡುವಂತೆ ಯಾಕೆ ಮಾಡುವೆ. 4ಕಾನೂನು ಬಲಹೀನವಾಗಿದೆ. ಅದು ಸರಿಯಾದ ನ್ಯಾಯಕೊಡುವದಿಲ್ಲ. ದುಷ್ಚರು ಶಿಷ್ಟರ ಮೇಲೆ ವ್ಯಾಜ್ಯವಾಡಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಕಾನೂನು ನ್ಯಾಯವಾಗಿಯೇ ಇಲ್ಲ. ನ್ಯಾಯಕ್ಕೆ ಜಯವಿಲ್ಲ.
ಹಬಕ್ಕೂಕನಿಗೆ ದೇವರ ಉತ್ತರ
5ಯೆಹೋವನು ಉತ್ತರಿಸುತ್ತಾ, “ಇತರ ದೇಶಗಳನ್ನು ನೋಡು, ಅವರನ್ನು ಗಮನಿಸು. ನೀನು ಆಶ್ಚರ್ಯಪಡುವೆ. ನೀನು ನಿನ್ನ ಜೀವಮಾನದಲ್ಲಿಯೇ ಅಚ್ಚರಿಪಡುವಂಥ ವಿಷಯವನ್ನು ನಾನು ನಡಿಸುತ್ತೇನೆ. ನೀನು ಅದನ್ನು ನೋಡಿ ನಂಬುವೆ. ನಿನಗೆ ಅದರ ವಿಷಯವಾಗಿ ತಿಳಿಸಲ್ಪಟ್ಟರೂ ನೀನು ನಂಬುವದಿಲ್ಲ. 6ನಾನು ಬಾಬಿಲೋನಿನವರನ್ನು ಬಲಾಢ್ಯ ಜನಾಂಗವಾಗಿ ಮಾಡುವೆನು. ಅವರು ಬಲಶಾಲಿಗಳೂ ನಿರ್ದಯಿಗಳೂ ಆಗಿದ್ದಾರೆ. ಅವರು ಲೋಕದಲ್ಲೆಲ್ಲಾ ಸಂಚರಿಸುವರು. ತಮ್ಮದಲ್ಲದ ಮನೆಗಳನ್ನು ಮತ್ತು ನಗರಗಳನ್ನು ತಮ್ಮ ವಶಮಾಡಿಕೊಳ್ಳುವರು. 7ಬಾಬಿಲೋನಿನ ಜನರು ಇತರರಲ್ಲಿ ಭಯ ಹುಟ್ಟಿಸುವರು. ಅವರು ತಮ್ಮ ಇಷ್ಟಬಂದ ಹಾಗೆ ಮಾಡುವರು; ಇಷ್ಟಬಂದ ಕಡೆಗೆ ಹೋಗುವರು. 8ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿವೆ; ಸೂರ್ಯಸ್ತಮಾನ ಕಾಲದಲ್ಲಿ ತೋಳಗಳಿಗಿಂತ ಭಯಂಕರವಾಗಿವೆ. ಅವರ ರಾಹುತರು ಬಹುದೂರ ದೇಶದಿಂದ ಬಂದರು. ಹಸಿದ ಗಿಡುಗ ಹೇಗೆ ಆಕಾಶದಿಂದ ನೆಲದ ಮೇಲಿರುವ ಆಹಾರದ ಮೇಲೆ ಬೀಳುತ್ತದೋ ಅದೇ ರೀತಿಯಲ್ಲಿ ಅವರ ರಾಹುತರು ವೈರಿಗಳ ಮೇಲೆ ಬೀಳುವರು. 9ಅವರು ಬಯಸುವುದು ಯುದ್ಧವೊಂದನ್ನೇ. ಅವರ ಸೈನ್ಯವು ಮರುಭೂಮಿಯ ಮೇಲೆ ಬೀಸುವ ಗಾಳಿಯ ತರಹ ವೇಗವಾಗಿ ಸಂಚರಿಸುವದು. ಮತ್ತು ಬಾಬಿಲೋನಿನ ಸೈನಿಕರು ಮರಳಿನಷ್ಟು ಅಸಂಖ್ಯಾತ ಜನರನ್ನು ಸೆರೆಹಿಡಿಯುತ್ತಾರೆ.
10“ಇತರ ಜನಾಂಗದ ಅರಸರನ್ನು ಬಾಬಿಲೋನಿನ ಸೈನಿಕರು ಗೇಲಿ ಮಾಡುತ್ತಾರೆ. ಪರದೇಶದ ಅರಸರು ಅವರಿಗೆ ಹಾಸ್ಯಾಸ್ಪದವಾಗಿರುತ್ತಾರೆ. ಕೋಟೆಕೊತ್ತಲುಗಳಿರುವ ನಗರವನ್ನು ನೋಡಿ ಅವರು ನಗಾಡುವರು. ಆ ಸೈನಿಕರು ಕೋಟೆಯ ಗೋಡೆಯ ತನಕ ಮಣ್ಣಿನದಿಬ್ಬವನ್ನೇರಿಸಿ, ಸುಲಭವಾಗಿ ಪಟ್ಟಣಗಳನ್ನು ವಶಮಾಡಿಕೊಳ್ಳುವರು. 11ಆ ಬಳಿಕ ಅವರು ಗಾಳಿಯಂತೆ ಅಲ್ಲಿಂದ ಬೇರೆ ಸ್ಥಳಗಳ ಮೇಲೆ ದಾಳಿಮಾಡಲು ಹೊರಟುಹೋಗುವರು. ಬಾಬಿಲೋನಿನವರು ಆರಾಧಿಸುವ ಒಂದೇ ವಿಷಯ ಯಾವದೆಂದರೆ ಅವರ ಸ್ವಂತ ಶಕ್ತಿಯನ್ನೇ.”
ಹಬಕ್ಕೂಕನ ಎರಡನೇ ದೂರು
12ಆಗ ಹಬಕ್ಕೂಕನು ಹೇಳಿದ್ದೇನೆಂದರೆ,
ಯೆಹೋವನೇ, ನೀನು ನಿತ್ಯಕಾಲಕ್ಕೂ ಜೀವಿಸುವ ದೇವರು.
ನೀನು ಎಂದಿಗೂ ಸಾಯದ ನನ್ನ ಪರಿಶುದ್ಧ ದೇವರು.
ನೀನು ಯೋಚಿಸುವದನ್ನು ನೆರವೇರಿಸಲು ಬಾಬಿಲೋನಿನವರನ್ನು ಸೃಷ್ಟಿಸಿರುವೆ.
ನಮ್ಮ ಬಂಡೆಯಾದ ನೀನು ಯೆಹೂದದ ಜನರನ್ನು ಶಿಕ್ಷಿಸುವುದಕ್ಕಾಗಿಯೇ ಅವರನ್ನು ಸೃಷ್ಟಿಸಿರುವೆ.
13ಕೆಡುಕನ್ನು ದೃಷ್ಟಿಸಲಾರದಷ್ಟು ನಿನ್ನ ಕಣ್ಣುಗಳು ಶುದ್ಧವಾಗಿವೆ.
ಜನರು ಮಾಡುವ ದುಷ್ಕೃತ್ಯಗಳನ್ನು ನೀನು ನೋಡಲಾರೆ.
ಹೀಗಿರಲು ಆ ಕೆಡುಕರು ಜಯಗಳಿಸುವದನ್ನು ನೀನು ಹೇಗೆ ವೀಕ್ಷಿಸಬಲ್ಲೆ?
ದುಷ್ಟರು ಒಳ್ಳೆಯವರನ್ನು ಸೋಲಿಸಿದಾಗ ನೀನು ನಿನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಾರದೇಕೆ?
ಒಳ್ಳೆಯ ಜನರನ್ನು ಕೆಟ್ಟ ಜನರು ಸೋಲಿಸುವುದನ್ನು ನೀನು ಹೇಗೆ ನೋಡುವೆ?
14ಸಮುದ್ರದಲ್ಲಿರುವ ಮೀನುಗಳಂತೆ ನೀನು ಜನರನ್ನು ಸೃಷ್ಟಿಸಿರುವೆ.
ಅವರು ಒಬ್ಬ ನಾಯಕನಿಂದ ಸಮುದ್ರಪ್ರಾಣಿಗಳಂತಿದ್ದಾರೆ,
15ಅವೆಲ್ಲವನ್ನು ಗಾಳ, ಬಲೆಗಳಿಂದ ವೈರಿಯು ಹಿಡಿಯುತ್ತಾನೆ.
ಬಲೆಯಲ್ಲಿ ಅವುಗಳನ್ನು ವೈರಿಯು ಹಿಡಿದು ಎಳೆಯುವನು.
ತಾನು ಹಿಡಿದನೆಂದು ವೈರಿಯು ಹರ್ಷಿಸುವನು.
16ಅವನ ಬಲೆಗಳು ಅವನು ಧನಿಕನಂತೆ ಜೀವಿಸಲು ಸಹಾಯ ಮಾಡುವವು.
ಅವನು ಒಳ್ಳೆಯ ಆಹಾರವನ್ನು ಉಣ್ಣುವನು.
ಅದಕ್ಕೆ ವೈರಿಯು ತನ್ನ ಬಲೆಯನ್ನು ಆರಾಧಿಸುವನು.
ಅವನು ಯಜ್ಞವನ್ನರ್ಪಿಸಿ ಧೂಪ ಹಾಕುವನು.
ಬಲೆಯನ್ನು ಗೌರವಿಸುವನು.
17ಅವನು ತನ್ನ ಬಲೆಯಿಂದ ಐಶ್ವರ್ಯವನ್ನು ಹೊಂದುತ್ತಾ ಮುಂದರಿಯುವನೋ?
ನಿರ್ದಯೆಯಿಂದ ಜನರನ್ನು ನಾಶಮಾಡುತ್ತಲೇ ಇರುವನೋ?
Currently Selected:
ಹಬಕ್ಕೂಕ 1: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International