ಆದಿಕಾಂಡ 40
40
ಯೋಸೇಫನು ಎರಡು ಕನಸುಗಳ ಅರ್ಥವನ್ನು ತಿಳಿಸಿದ್ದು
1ತರುವಾಯ ಫರೋಹನ ಇಬ್ಬರು ಸೇವಕರು ಫರೋಹನಿಗೆ ಯಾವುದೋ ತಪ್ಪುಮಾಡಿದರು. ಈ ಇಬ್ಬರು ಸೇವಕರುಗಳಲ್ಲಿ ಒಬ್ಬನು ಭಕ್ಷ್ಯಗಾರ ಮತ್ತೊಬ್ಬನು ಪಾನದಾಯಕ. 2ಫರೋಹನು ತನ್ನ ಭಕ್ಷ್ಯಗಾರನ ಮೇಲೆಯೂ ಪಾನದಾಯಕನ ಮೇಲೆಯೂ ಕೋಪಗೊಂಡನು. 3ಆದ್ದರಿಂದ ಅವರನ್ನು ಯೋಸೇಫನಿದ್ದ ಸೆರೆಮನೆಗೆ ಹಾಕಿಸಿದನು. ಪೋಟೀಫರನು ಫರೋಹನ ಕಾವಲುಗಾರ ಅಧಿಕಾರಿಯಾಗಿದ್ದು ಈ ಸೆರೆಮನೆಯ ಜವಾಬ್ದಾರಿಯನ್ನು ಹೊಂದಿದ್ದನು. 4ಸೆರೆಮನೆಯ ಮುಖ್ಯಾಧಿಕಾರಿಯು ಈ ಇಬ್ಬರು ಕೈದಿಗಳನ್ನು ಯೋಸೇಫನ ವಶಕ್ಕೆ ಒಪ್ಪಿಸಿದನು. ಸ್ವಲ್ಪಕಾಲದವರೆಗೆ ಆ ಇಬ್ಬರು ಸೆರೆಮನೆಯೊಳಗೆ ಇದ್ದರು. 5ಒಂದು ರಾತ್ರಿ ಆ ಇಬ್ಬರು ಕೈದಿಗಳಿಗೆ ಅಂದರೆ ಭಕ್ಷ್ಯಗಾರನಿಗೂ ಪಾನದಾಯಕನಿಗೂ ಒಂದೊಂದು ಕನಸು ಬಿತ್ತು. ಮತ್ತು ಅವರಿಬ್ಬರ ಕನಸುಗಳು ತಮ್ಮದೇ ಆದ ಅರ್ಥವನ್ನು ಹೊಂದಿದ್ದವು. 6ಮರುದಿನ ಮುಂಜಾನೆ ಯೋಸೇಫನು ಅವರ ಬಳಿಗೆ ಹೋದನು. ಅವರಿಬ್ಬರು ಚಿಂತೆಯಿಂದ ಇರುವುದನ್ನು ಯೋಸೇಫನು ಕಂಡು, 7“ಈ ದಿನ ನೀವು ತುಂಬ ಚಿಂತೆಯಿಂದ ಇರುವಂತೆ ಕಾಣುತ್ತಿದೆ, ಕಾರಣವೇನು?” ಎಂದು ಕೇಳಿದನು.
8ಆ ಇಬ್ಬರು, “ನಾವು ಕಳೆದ ರಾತ್ರಿ ಕನಸನ್ನು ಕಂಡೆವು; ಆದರೆ ನಾವು ಕಂಡ ಕನಸು ನಮಗೆ ಅರ್ಥವಾಗುತ್ತಿಲ್ಲ. ನಮಗೆ ಕನಸುಗಳ ಅರ್ಥವನ್ನು ತಿಳಿಸುವವರಾಗಲಿ ವಿವರಿಸುವವರಾಗಲಿ ಯಾರೂ ಇಲ್ಲ” ಎಂದು ಹೇಳಿದರು.
ಯೋಸೇಫನು ಅವರಿಗೆ, “ದೇವರೊಬ್ಬನು ಮಾತ್ರ ಕನಸುಗಳನ್ನು ಅರ್ಥಮಾಡಿಕೊಳ್ಳಬಲ್ಲನು ಮತ್ತು ಕನಸುಗಳ ಅರ್ಥವನ್ನು ಹೇಳಬಲ್ಲನು. ಆದ್ದರಿಂದ ದಯಮಾಡಿ ನಿಮ್ಮ ಕನಸುಗಳನ್ನು ನನಗೆ ತಿಳಿಸಿರಿ” ಎಂದು ಹೇಳಿದನು.
ದ್ರಾಕ್ಷಾರಸ ಕೊಡುವವನ ಕನಸು
9ಆಗ ಪಾನದಾಯಕನು ಯೋಸೇಫನಿಗೆ, “ನಾನು ಕನಸಿನಲ್ಲಿ ದ್ರಾಕ್ಷಾಲತೆಯನ್ನು ಕಂಡೆನು. 10ಆ ದ್ರಾಕ್ಷಾಲತೆಯ ಮೇಲೆ ಮೂರು ಕವಲುಗಳಿದ್ದವು. ಆ ಕವಲುಗಳು ಚಿಗುರುತ್ತಲೇ ಹೂವುಗಳನ್ನು ಬಿಟ್ಟವು; ಆ ಹೂವುಗಳು ಹಣ್ಣುಗಳಾದವು. 11ನಾನು ಫರೋಹನ ಲೋಟವನ್ನು ಹಿಡಿದುಕೊಂಡಿದ್ದರಿಂದ ದ್ರಾಕ್ಷಿಹಣ್ಣುಗಳನ್ನು ತೆಗೆದುಕೊಂಡು ಲೋಟದೊಳಗೆ ರಸಹಿಂಡಿ ಲೋಟವನ್ನು ಫರೋಹನಿಗೆ ಕೊಟ್ಟೆನು” ಎಂದು ಹೇಳಿದನು.
12ಅದಕ್ಕೆ ಯೋಸೇಫನು, “ನಾನು ಕನಸಿನ ಅರ್ಥವನ್ನು ನಿನಗೆ ತಿಳಿಸುವೆನು. ಆ ಮೂರು ಕವಲುಗಳು ಎಂದರೆ ಮೂರು ದಿನಗಳು. 13ಮೂರುದಿನಗಳೊಳಗಾಗಿ ಫರೋಹನು ನಿನ್ನನ್ನು ಕ್ಷಮಿಸಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವನು. ನೀನು ಮೊದಲಿನಂತೆ ಅವನಿಗೆ ಪಾನದಾಯಕನಾಗಿರುವೆ. 14ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಸಿಕೊಂಡು ನನ್ನ ವಿಷಯವಾಗಿ ಫರೋಹನಿಗೆ ತಿಳಿಸಿ ನನಗೆ ಸೆರೆಮನೆಯಿಂದ ಬಿಡುಗಡೆಯಾಗುವಂತೆ ಮಾಡು. 15ಇಬ್ರಿಯರ ದೇಶದವನಾದ ನನ್ನನ್ನು ಕೆಲವರು ಅಪಹರಿಸಿಕೊಂಡು ಬಂದರು. ಆದರೆ ಇಲ್ಲಿಯೂ ನಾನು ಯಾವ ತಪ್ಪನ್ನೂ ಮಾಡಲಿಲ್ಲ. ಆದ್ದರಿಂದ ನಾನು ಸೆರೆಮನೆಯಲ್ಲಿರಬಾರದು” ಎಂದು ಹೇಳಿದನು.
ಭಕ್ಷ್ಯಗಾರನ ಕನಸು
16ಪಾನದಾಯಕನ ಕನಸಿನ ಅರ್ಥವು ಒಳ್ಳೆಯದಾಗಿರುವುದನ್ನು ಕಂಡ ಭಕ್ಷ್ಯಗಾರನು ಯೋಸೇಫನಿಗೆ, “ನನಗೂ ಒಂದು ಕನಸಾಯಿತು. ನನ್ನ ಕನಸಿನಲ್ಲಿ ನನ್ನ ತಲೆಯ ಮೇಲೆ ಮೂರು ಬುಟ್ಟಿಗಳಿದ್ದವು. 17ಅವುಗಳಲ್ಲಿ ರಾಜನಿಗೋಸ್ಕರವಾಗಿ ಎಲ್ಲಾ ಬಗೆಯ ಭಕ್ಷ್ಯಗಳಿದ್ದವು. ಆದರೆ ಪಕ್ಷಿಗಳು ಆ ಆಹಾರವನ್ನು ತಿನ್ನುತ್ತಿದ್ದವು” ಎಂದು ಹೇಳಿದನು.
18ಯೋಸೇಫನು, “ಕನಸಿನ ಅರ್ಥವನ್ನು ನಾನು ನಿನಗೆ ತಿಳಿಸುತ್ತೇನೆ. ಮೂರು ಬುಟ್ಟಿಗಳ ಅರ್ಥ ಮೂರು ದಿನಗಳು. 19ಮೂರುದಿನಗಳೊಳಗಾಗಿ ರಾಜನು ನಿನ್ನನ್ನು ಸೆರೆಮನೆಯಿಂದ ಬಿಡಿಸಿ ನಿನ್ನ ಶಿರಚ್ಛೇದನ ಮಾಡಿಸುವನು; ನಿನ್ನ ದೇಹವನ್ನು ಕಂಬಕ್ಕೆ ನೇತುಹಾಕಿಸುವನು; ಪಕ್ಷಿಗಳು ನಿನ್ನ ದೇಹವನ್ನು ತಿಂದುಬಿಡುತ್ತವೆ” ಎಂದು ಹೇಳಿದನು.
ಯೋಸೇಫನನ್ನು ಮರೆತನು
20ಮೂರನೆಯ ದಿನ ಬಂದಿತು. ಅದು ಫರೋಹನ ಜನ್ಮದಿನವಾಗಿತ್ತು. ಫರೋಹನು ತನ್ನ ಎಲ್ಲಾ ಸೇವಕರಿಗೆ ಔತಣಕೂಟವನ್ನು ಏರ್ಪಡಿಸಿದನು. ಔತಣಕೂಟದಲ್ಲಿ ಫರೋಹನು ಭಕ್ಷ್ಯಗಾರನನ್ನೂ ಮತ್ತು ಪಾನದಾಯಕನನ್ನೂ ಸೆರೆಮನೆಯಿಂದ ಬಿಡುಗಡೆ ಮಾಡಿದನು. 21ಫರೋಹನು ಪಾನದಾಯಕನನ್ನು ಮತ್ತೆ ಅದೇ ಕೆಲಸಕ್ಕೆ ನೇಮಿಸಿದನು; ಅವನು ಪಾನಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು. 22ಆದರೆ ಫರೋಹನು ಭಕ್ಷ್ಯಗಾರನನ್ನು ಕೊಲ್ಲಿಸಿದನು. ಯೋಸೇಫನು ಹೇಳಿದಂತೆಯೇ ಪ್ರತಿಯೊಂದು ನಡೆಯಿತು. 23ಆದರೆ ಪಾನದಾಯಕನು ಯೋಸೇಫನಿಗೆ ಸಹಾಯ ಮಾಡಬೇಕೆಂಬುದನ್ನು ಮರೆತುಬಿಟ್ಟು ಯೋಸೇಫನ ಬಗ್ಗೆ ಫರೋಹನಿಗೆ ಏನೂ ತಿಳಿಸಲಿಲ್ಲ.
Currently Selected:
ಆದಿಕಾಂಡ 40: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International