YouVersion Logo
Search Icon

ಆದಿಕಾಂಡ 27

27
ಯಾಕೋಬನು ಇಸಾಕನಿಗೆ ಮಾಡಿದ ಮೋಸ
1ಇಸಾಕನು ಮುದುಕನಾದಾಗ ಅವನಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಒಂದು ದಿನ ಅವನು ತನ್ನ ಹಿರಿಮಗನಾದ ಏಸಾವನನ್ನು ತನ್ನ ಬಳಿಗೆ ಕರೆದು ಅವನಿಗೆ, “ಮಗನೇ” ಅಂದನು.
ಏಸಾವನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.
2ಇಸಾಕನು ಅವನಿಗೆ, “ನನಗೆ ವಯಸ್ಸಾಯಿತು. ನಾನು ಬಹುಬೇಗನೆ ಸಾಯಬಹುದು. 3ಆದ್ದರಿಂದ ನಿನ್ನ ಬಿಲ್ಲುಬಾಣಗಳನ್ನು ತೆಗೆದುಕೊಂಡು ಬೇಟೆಗೆ ಹೋಗು. ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು 4ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. 5ಆದ್ದರಿಂದ ಏಸಾವನು ಬೇಟೆಗಾಗಿ ಹೋದನು.
ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಈ ವಿಷಯಗಳನ್ನೆಲ್ಲ ರೆಬೆಕ್ಕಳು ಕೇಳಿಸಿಕೊಂಡಳು. 6ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ಕೇಳು, ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನೊಡನೆ ಮಾತಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ. 7ನಿನ್ನ ತಂದೆ ಅವನಿಗೆ, ‘ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು’ ಎಂದು ಹೇಳಿದನು. 8ಆದ್ದರಿಂದ ಮಗನೇ, ನನ್ನ ಮಾತನ್ನು ಕೇಳು ಮತ್ತು ನಾನು ಹೇಳಿದ್ದನ್ನು ಮಾಡು. 9ನಮ್ಮ ಆಡುಗಳ ಬಳಿಗೆ ಹೋಗಿ ಎರಡು ಆಡುಮರಿಗಳನ್ನು ತೆಗೆದುಕೊಂಡು ಬಾ. ನಿಮ್ಮ ತಂದೆಗೆ ಇಷ್ಟವಾದ ಅಡಿಗೆಯನ್ನು ನಾನು ಅವುಗಳ ಮಾಂಸದಿಂದ ಸಿದ್ಧಪಡಿಸುವೆ. 10ನೀನು ಆ ಅಡಿಗೆಯನ್ನು ನಿನ್ನ ತಂದೆಗೆ ತೆಗೆದುಕೊಂಡು ಹೋಗು. ಆಗ ಅವನು ತಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವನು” ಅಂದಳು.
11ಅದಕ್ಕೆ ಯಾಕೋಬನು ತನ್ನ ತಾಯಿಯಾದ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನಿಗೆ ಮೈತುಂಬ ರೋಮಗಳಿವೆ, ಆದರೆ ನನಗೆ ರೋಮಗಳಿಲ್ಲ. 12ನನ್ನ ತಂದೆ ನನ್ನನ್ನು ಮುಟ್ಟಿದರೆ, ನಾನು ಏಸಾವನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ನನ್ನನ್ನು ಆಶೀರ್ವದಿಸುವುದಿಲ್ಲ. ನಾನು ಅವನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದರಿಂದ ಅವನು ನನ್ನನ್ನು ಶಪಿಸುವನು” ಎಂದು ಹೇಳಿದನು.
13ಅದಕ್ಕೆ ರೆಬೆಕ್ಕಳು ಅವನಿಗೆ, “ಅವನು ನಿನಗೆ ಶಾಪಕೊಟ್ಟರೆ, ಆ ಶಾಪವು ನನಗಾಗಲಿ. ನಾನು ಹೇಳಿದಂತೆ ಮಾಡು. ನನಗೋಸ್ಕರ ಆಡುಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು.
14ಆದ್ದರಿಂದ ಯಾಕೋಬನು ಹೋಗಿ ಎರಡು ಆಡುಗಳನ್ನು ತೆಗೆದುಕೊಂಡು ಬಂದನು. ಇಸಾಕನಿಗೆ ಇಷ್ಟವಾದ ರುಚಿಕರವಾದ ಪದಾರ್ಥಗಳನ್ನು ಆಕೆ ಅವುಗಳ ಮಾಂಸದಿಂದ ತಯಾರಿಸಿದಳು. 15ಅನಂತರ ರೆಬೆಕ್ಕಳು ತನ್ನ ಹಿರಿಯ ಮಗನಾದ ಏಸಾವನಿಗೆ ಇಷ್ಟವಾದ ಉಡುಪನ್ನು ತೆಗೆದುಕೊಂಡಳು. ರೆಬೆಕ್ಕಳು ಆ ಉಡುಪನ್ನು ತನ್ನ ಕಿರಿಮಗನಾದ ಯಾಕೋಬನಿಗೆ ತೊಡಿಸಿದಳು. 16ಆಡುಗಳ ಚರ್ಮವನ್ನು ಯಾಕೋಬನ ಕೈಗಳಿಗೂ ಕೊರಳಿಗೂ ಸುತ್ತಿದಳು. 17ಅನಂತರ ಆಕೆ ತಾನು ಸಿದ್ಧಪಡಿಸಿದ್ದ ಅಡಿಗೆಯನ್ನು ಯಾಕೋಬನಿಗೆ ಕೊಟ್ಟಳು.
18ಯಾಕೋಬನು ತನ್ನ ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು.
ಅವನ ತಂದೆ, “ಏನು ಮಗನೇ, ನೀನು ಯಾರು?” ಎಂದು ಕೇಳಿದನು.
19ಯಾಕೋಬನು ತನ್ನ ತಂದೆಗೆ, “ನಾನು ಏಸಾವ, ನಿನ್ನ ಮೊದಲನೆ ಮಗ. ನೀನು ಹೇಳಿದಂತೆ ನಾನು ಮಾಡಿಕೊಂಡು ಬಂದಿದ್ದೇನೆ. ನಾನು ನಿನಗೋಸ್ಕರ ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಕುಳಿತುಕೊಂಡು ತಿನ್ನು. ಅನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.
20ಆದರೆ ಇಸಾಕನು ತನ್ನ ಮಗನಿಗೆ, “ನೀನು ಇಷ್ಟು ಬೇಗನೆ ಬೇಟೆಯಾಡಿಕೊಂಡು ಬಂದೆಯಾ?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ನಾನು ಬಹುಬೇಗನೆ ಪ್ರಾಣಿಗಳನ್ನು ಕಂಡುಕೊಳ್ಳುವಂತೆ ನಿನ್ನ ದೇವರಾದ ಯೆಹೋವನು ಸಹಾಯ ಮಾಡಿದನು” ಎಂದು ಉತ್ತರಿಸಿದನು.
21ಬಳಿಕ ಇಸಾಕನು ಯಾಕೋಬನಿಗೆ, “ನನ್ನ ಬಳಿಗೆ ಬಾ, ನನ್ನ ಮಗನನ್ನು ನಾನು ಮುಟ್ಟಿ ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಮುಟ್ಟಿದರೆ, ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಲ್ಲೆ” ಎಂದು ಹೇಳಿದನು.
22ಆದ್ದರಿಂದ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೋದನು. ಇಸಾಕನು ಅವನನ್ನು ಮುಟ್ಟಿ, “ನಿನ್ನ ಸ್ವರ ಯಾಕೋಬನ ಸ್ವರವಿದ್ದಂತಿದೆ. ಆದರೆ ನಿನ್ನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿವೆ” ಅಂದನು. 23ಅವನು ಯಾಕೋಬನೆಂಬುದು ಇಸಾಕನಿಗೆ ತಿಳಿಯಲಿಲ್ಲ. ಯಾಕೆಂದರೆ ಅವನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿದ್ದವು. ಆದ್ದರಿಂದ ಇಸಾಕನು ಯಾಕೋಬನನ್ನು ಆಶೀರ್ವದಿಸಿದನು.
24ಇಸಾಕನು ಅವನಿಗೆ, “ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ಹೌದು, ನಾನೇ” ಎಂದು ಉತ್ತರಕೊಟ್ಟನು.
ಯಾಕೋಬನಿಗೆ ಆಶೀರ್ವಾದ
25ಆಗ ಇಸಾಕನು, “ಊಟವನ್ನು ತೆಗೆದುಕೊಂಡು ಬಾ. ನಾನು ಊಟಮಾಡಿ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಅಂತೆಯೇ ಯಾಕೋಬನು ಊಟವನ್ನು ತಂದು ಕೊಟ್ಟಾಗ ಊಟಮಾಡಿದನು; ದ್ರಾಕ್ಷಾರಸವನ್ನು ಕುಡಿದನು.
26ಬಳಿಕ ಇಸಾಕನು ಅವನಿಗೆ, “ಮಗನೇ, ನನ್ನ ಬಳಿಗೆ ಬಂದು ನನಗೆ ಮುದ್ದಿಡು” ಅಂದನು. 27ಅದರಂತೆಯೇ ಯಾಕೋಬನು ತಂದೆಯ ಬಳಿಗೆ ಹೋಗಿ ಅವನಿಗೆ ಮುದ್ದಿಟ್ಟನು. ಇಸಾಕನು ಅವನ ಉಡುಪಿನ ವಾಸನೆಯನ್ನು ನೋಡಿ ಅವನನ್ನು ಹೀಗೆ ಆಶೀರ್ವದಿಸಿದನು:
“ನನ್ನ ಮಗನ ಸುವಾಸನೆಯು
ಯೆಹೋವನು ಆಶೀರ್ವದಿಸಿದ ಪ್ರದೇಶಗಳಂತಿದೆ.
28ಯೆಹೋವನು ನಿನಗೆ ಬೇಕಾದಷ್ಟು ಮಳೆಯನ್ನು ಕೊಡಲಿ;
ನಿನಗೆ ಸಾರವುಳ್ಳ ಭೂಮಿಯೂ ಮಹಾಸುಗ್ಗಿಗಳೂ ಮತ್ತು ದ್ರಾಕ್ಷಾರಸವೂ ದೊರೆಯಲಿ.
29ಎಲ್ಲಾ ಜನರು ನಿನ್ನ ಸೇವೆಮಾಡಲಿ;
ಜನಾಂಗಗಳು ನಿನಗೆ ತಲೆಬಾಗಲಿ.
ನೀನು ನಿನ್ನ ಸಹೋದರರ ಮೇಲೆ ಆಡಳಿತ ಮಾಡುವೆ.
ನಿನ್ನ ತಾಯಿಯ ಗಂಡುಮಕ್ಕಳು ನಿನಗೆ ತಲೆಬಾಗಿ ವಿಧೇಯರಾಗುವರು.
ನಿನ್ನನ್ನು ಶಪಿಸುವ ಪ್ರತಿಯೊಬ್ಬನು ಶಾಪಗ್ರಸ್ಥನಾಗುವನು.
ನಿನ್ನನ್ನು ಆಶೀರ್ವದಿಸುವ ಪ್ರತಿಯೊಬ್ಬನು ಆಶೀರ್ವದಿಸಲ್ಪಡುವನು.”
ಏಸಾವನ “ಆಶೀರ್ವಾದ”
30ಇಸಾಕನು ಯಾಕೋಬನನ್ನು ಆಶೀರ್ವದಿಸಿದ ಬಳಿಕ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಯಿಂದ ಹೊರಟುಹೋಗುವಷ್ಟರಲ್ಲಿ ಏಸಾವನು ಬೇಟೆಯಿಂದ ಬಂದನು. 31ಏಸಾವನು ಸಹ ತನ್ನ ತಂದೆಗೆ ಇಷ್ಟವಾದ ರೀತಿಯಲ್ಲಿ ವಿಶೇಷವಾದ ಆಹಾರವನ್ನು ಸಿದ್ಧಪಡಿಸಿ ತನ್ನ ತಂದೆಯ ಬಳಿಗೆ ತೆಗೆದುಕೊಂಡು ಬಂದನು. ಅವನು ತನ್ನ ತಂದೆಗೆ, “ಅಪ್ಪಾ ಎದ್ದೇಳು, ನಿನಗೋಸ್ಕರ ನಿನ್ನ ಮಗನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ತಿನ್ನು, ನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.
32ಇಸಾಕನು ಅವನಿಗೆ, “ನೀನು ಯಾರು?” ಎಂದು ಕೇಳಿದನು.
ಅವನು, “ನಾನು ನಿನ್ನ ಹಿರಿಯಮಗನಾದ ಏಸಾವ” ಎಂದು ಹೇಳಿದನು.
33ಆಗ ಇಸಾಕನು ತುಂಬ ವ್ಯಸನಗೊಂಡು ಗಡಗಡನೆ ನಡುಗುತ್ತಾ ಅವನಿಗೆ, “ನೀನು ಬರುವುದಕ್ಕಿಂತ ಮೊದಲೇ ಅಡಿಗೆಯನ್ನು ಸಿದ್ಧಪಡಿಸಿ ನನಗೆ ತಂದುಕೊಟ್ಟವನು ಯಾರು? ನಾನು ಅದನ್ನೆಲ್ಲ ತಿಂದು ಅವನನ್ನು ಆಶೀರ್ವದಿಸಿದೆನು. ಈಗ ನನ್ನ ಆಶೀರ್ವಾದವನ್ನು ಹಿಂತೆಗೆದುಕೊಳ್ಳಲಾಗದು” ಎಂದು ಹೇಳಿದನು.
34ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ತುಂಬ ಕೋಪಗೊಂಡನು; ವ್ಯಥೆಪಟ್ಟನು; ಗೋಳಾಡಿದನು. ಅವನು ತನ್ನ ತಂದೆಗೆ, “ಹಾಗಾದರೆ, ನನ್ನನ್ನೂ ಆಶೀರ್ವದಿಸಪ್ಪಾ” ಎಂದು ಹೇಳಿದನು.
35ಇಸಾಕನು, “ನಿನ್ನ ತಮ್ಮನು ನನ್ನನ್ನು ಮೋಸಗೊಳಿಸಿದನು; ಅವನು ಬಂದು ನಿನ್ನ ಆಶೀರ್ವಾದವನ್ನು ತೆಗೆದುಕೊಂಡನು” ಎಂದು ಹೇಳಿದನು.
36ಏಸಾವನು, “ಅವನ ಹೆಸರು ಯಾಕೋಬ (ಮೋಸಗಾರ). ಅದೇ ಅವನಿಗೆ ಸರಿಯಾದ ಹೆಸರು. ಅವನು ಎರಡು ಸಲ ನನಗೆ ಮೋಸಮಾಡಿದನು. ನನ್ನ ಚೊಚ್ಚಲತನದ ಹಕ್ಕನ್ನು ತೆಗೆದುಕೊಂಡನು. ಈಗ ನನ್ನ ಆಶೀರ್ವಾದವನ್ನೂ ತೆಗೆದುಕೊಂಡನು” ಎಂದು ಹೇಳಿದನು. ನಂತರ ಏಸಾವನು, “ನನಗೋಸ್ಕರ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.
37ಇಸಾಕನು, “ಇಲ್ಲ, ತುಂಬ ತಡವಾಯಿತು. ನಿನ್ನ ಮೇಲೆ ಆಡಳಿತ ಮಾಡುವ ಅಧಿಕಾರವನ್ನು ನಾನು ಯಾಕೋಬನಿಗೆ ಕೊಟ್ಟಿದ್ದೇನೆ. ಅವನ ಸಹೋದರರೆಲ್ಲ ಅವನಿಗೆ ಸೇವಕರಾಗಿರುವರು ಎಂದು ನಾನು ಹೇಳಿದ್ದೇನೆ. ಅವನಿಗೆ ಬೇಕಾದಷ್ಟು ದವಸಧಾನ್ಯಗಳೂ ದ್ರಾಕ್ಷಾರಸವೂ ದೊರೆಯುವಂತೆ ಆಶೀರ್ವಾದ ಮಾಡಿದ್ದೇನೆ. ನಿನಗೆ ಕೊಡಲು ನನ್ನಲ್ಲಿ ಏನೂ ಉಳಿದಿಲ್ಲ ಮಗನೇ” ಎಂದು ಹೇಳಿದನು.
38ಆದರೆ ಏಸಾವನು ತನ್ನ ತಂದೆಯನ್ನು ಮತ್ತೆ ಬೇಡತೊಡಗಿದನು. “ಅಪ್ಪಾ ನನಗಾಗಿ ಒಂದಾದರೂ ಆಶೀರ್ವಾದವಿಲ್ಲವೇ? ಅಪ್ಪಾ, ನನ್ನನ್ನು ಸಹ ಆಶೀರ್ವದಿಸು” ಎಂದು ಏಸಾವನು ಅಳಲಾರಂಭಿಸಿದನು.
39ಆಗ ಇಸಾಕನು ಅವನಿಗೆ ಹೀಗೆ ಹೇಳಿದನು:
“ನೀನು ಒಳ್ಳೆಯ ಪ್ರದೇಶದಲ್ಲಿ ಜೀವಿಸುವುದಿಲ್ಲ.
ನಿನಗೆ ಬೇಕಾದಷ್ಟು ಇಬ್ಬನಿ ಇರುವುದಿಲ್ಲ.
40ನೀನು ಕತ್ತಿಯಿಂದಲೇ ಜೀವಿಸುವೆ.
ನೀನು ನಿನ್ನ ತಮ್ಮನ ಸೇವಕನಾಗಿರುವೆ.
ಆದರೆ ನೀನು ಬಿಡುಗಡೆಯಾಗಲು ಹೋರಾಡಿ
ಅವನ ಹಿಡಿತದಿಂದ ಪಾರಾಗುವೆ.”
41ಅಂದಿನಿಂದ ಏಸಾವನು ಯಾಕೋಬನನ್ನು ದ್ವೇಷಿಸಿದನು. ಏಸಾವನು ತನ್ನೊಳಗೆ, “ನನ್ನ ತಂದೆ ಬಹುಬೇಗನೆ ಸತ್ತುಹೋಗುವನು. ಆಗ ನಾನು ಅವನಿಗಾಗಿ ದುಃಖಿಸಿ ಆ ಬಳಿಕ ಯಾಕೋಬನನ್ನು ಕೊಲ್ಲುವೆನು” ಅಂದುಕೊಂಡನು.
42ಏಸಾವನು ಯಾಕೋಬನನ್ನು ಕೊಲ್ಲಬೇಕೆಂದಿರುವುದು ರೆಬೆಕ್ಕಳಿಗೆ ತಿಳಿಯಿತು. ಆಕೆ ಯಾಕೋಬನನ್ನು ಕರೆಸಿ ಅವನಿಗೆ, “ಕೇಳು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ. 43ಆದ್ದರಿಂದ ಮಗನೇ, ನಾನು ಹೇಳಿದಂತೆ ಮಾಡು. ನನ್ನ ಅಣ್ಣನಾದ ಲಾಬಾನನು ಹಾರಾನಿನಲ್ಲಿ ವಾಸವಾಗಿದ್ದಾನೆ. ಅವನ ಬಳಿಗೆ ಹೋಗಿ ಅಡಗಿಕೊ. 44ನಿನ್ನ ಅಣ್ಣನ ಕೋಪ ತಣ್ಣಗಾಗುವವರೆಗೆ ನೀನು ಸ್ವಲ್ಪ ಕಾಲ ಅವನೊಂದಿಗಿರು. 45ಸ್ವಲ್ಪ ಸಮಯದ ನಂತರ, ನೀನು ಮಾಡಿದ್ದನ್ನು ನಿನ್ನ ಅಣ್ಣನು ಮರೆತುಬಿಡುವನು. ಆಗ ನಿನ್ನನ್ನು ಅಲ್ಲಿಂದ ಕರೆದುಕೊಂಡು ಬರಲು ನಾನು ಒಬ್ಬ ಸೇವಕನನ್ನು ಅಲ್ಲಿಗೆ ಕಳುಹಿಸಿಕೊಡುವೆನು. ಒಂದೇ ದಿನದಲ್ಲಿ, ನನ್ನ ಇಬ್ಬರು ಗಂಡುಮಕ್ಕಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.
46ನಂತರ ರೆಬೆಕ್ಕಳು ಇಸಾಕನಿಗೆ, “ನಿನ್ನ ಮಗನಾದ ಏಸಾವನು ಹಿತ್ತಿಯರ ಸ್ತ್ರೀಯರನ್ನು ಮದುವೆ ಮಾಡಿಕೊಂಡಿದ್ದಾನೆ. ಆ ಸ್ತ್ರೀಯರಿಂದ ನನಗೆ ಸಾಕಾಗಿ ಹೋಗಿದೆ; ಯಾಕೆಂದರೆ ಅವರು ನಮ್ಮ ಜನರಲ್ಲ. ಯಾಕೋಬನು ಸಹ ಇಂಥ ಸ್ತ್ರೀಯರಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡರೆ ನಾನು ಸಾಯುವುದೇ ಮೇಲು” ಎಂದು ಹೇಳಿದಳು.

Highlight

Share

Copy

None

Want to have your highlights saved across all your devices? Sign up or sign in