ಆದಿಕಾಂಡ 23
23
ಸಾರಳ ಮರಣ
1ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು. 2ಅವಳು ಕಾನಾನ್ ದೇಶದ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಮರಣಹೊಂದಿದಳು. ಅಬ್ರಹಾಮನು ಅವಳಿಗೋಸ್ಕರ ಅಲ್ಲಿ ಬಹಳವಾಗಿ ಅತ್ತನು. 3ಬಳಿಕ ಆಕೆಯ ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಹೋಗಿ, 4ಅವರಿಗೆ, “ನಾನು ಈ ನಾಡಿನವನಲ್ಲ. ನಾನು ಇಲ್ಲಿ ಕೇವಲ ಪ್ರವಾಸಿಗನಷ್ಟೇ. ಆದ್ದರಿಂದ ನನ್ನ ಹೆಂಡತಿಯನ್ನು ಸಮಾಧಿಮಾಡಲು ನನಗೆ ಸ್ವಲ್ಪ ಸ್ಥಳ ಬೇಕು” ಎಂದು ಹೇಳಿದನು.
5ಹಿತ್ತಿಯರು ಅಬ್ರಹಾಮನಿಗೆ, 6“ಸ್ವಾಮೀ, ನೀನು ನಮ್ಮ ಮಹಾನಾಯಕರುಗಳಲ್ಲಿ ಒಬ್ಬನು. ತೀರಿಕೊಂಡ ನಿನ್ನ ಹೆಂಡತಿಯ ಸಮಾಧಿಗಾಗಿ ನಮ್ಮಲ್ಲಿರುವ ಸ್ಮಶಾನಗಳಲ್ಲಿ ಅತ್ಯುತ್ತಮವಾದ ಸ್ಥಳವನ್ನು ನೀನು ತೆಗೆದುಕೊಳ್ಳಬಹುದು. ನಿನ್ನ ಹೆಂಡತಿಯನ್ನು ಸಮಾಧಿಮಾಡಲು ನಮ್ಮಲ್ಲಿ ಯಾರೂ ಅಡ್ಡಿ ಮಾಡುವುದಿಲ್ಲ” ಎಂದು ಉತ್ತರಕೊಟ್ಟರು.
7ಅಬ್ರಹಾಮನು ಎದ್ದುನಿಂತು ಅವರಿಗೆ ನಮಸ್ಕರಿಸಿ, 8ಅವರಿಗೆ, “ತೀರಿಹೋದ ನನ್ನ ಹೆಂಡತಿಯನ್ನು ಸಮಾಧಿಮಾಡಲು ನೀವು ನಿಜವಾಗಿಯೂ ಸಹಾಯ ಮಾಡಬೇಕೆಂದಿದ್ದರೆ, ಚೋಹರನ ಮಗನಾದ ಎಫ್ರೋನನ ಸಂಗಡ ನನಗೋಸ್ಕರ ಮಾತಾಡಿರಿ. 9ಮಕ್ಪೇಲದ ಗವಿಯನ್ನು ಕೊಂಡುಕೊಳ್ಳಲು ನನಗೆ ಇಷ್ಟವಿದೆ. ಅದು ಎಫ್ರೋನನದು. ಅದು ಅವನ ಜಮೀನಿನ ಅಂಚಿನಲ್ಲಿದೆ. ಅದಕ್ಕಾಗುವ ಬೆಲೆಯನ್ನು ನಾನು ಪೂರ್ತಿ ಕೊಡುತ್ತೇನೆ. ನಾನು ಅದನ್ನು ಸಮಾಧಿಯ ಸ್ಥಳಕ್ಕಾಗಿ ಕೊಂಡುಕೊಂಡಿರುವೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಗಳಾಗಿರಬೇಕು” ಎಂದು ಹೇಳಿದನು.
10ಎಫೋನನು ಪಟ್ಟಣದ ಬಾಗಿಲ ಬಳಿಯಲ್ಲಿ ಹಿತ್ತಿಯರೊಂದಿಗೆ ಕುಳಿತುಕೊಂಡಿದ್ದನು. ಕೂಡಲೇ ಅವನು ಅಬ್ರಹಾಮನಿಗೆ, 11“ಸ್ವಾಮೀ ನಾನು ಆ ಸ್ಥಳವನ್ನೂ ಆ ಗವಿಯನ್ನೂ ನನ್ನ ಜನರ ಎದುರಿನಲ್ಲಿಯೇ ನಿನಗೆ ಕೊಡುವೆನು. ನಿನ್ನ ಹೆಂಡತಿಯನ್ನು ಅಲ್ಲಿ ಸಮಾಧಿಮಾಡು” ಎಂದು ಹೇಳಿದನು.
12ಆಗ ಅಬ್ರಹಾಮನು ಹಿತ್ತಿಯರಿಗೆ ತಲೆಬಾಗಿ ನಮಸ್ಕರಿಸಿದನು. 13ಅಬ್ರಹಾಮನು ಜನರೆಲ್ಲರ ಎದುರಿನಲ್ಲಿ ಎಫ್ರೋನನಿಗೆ, “ಆ ಸ್ಥಳಕ್ಕಾಗುವ ಪೂರ್ತಿ ಬೆಲೆಯನ್ನು ನಾನು ನಿನಗೆ ಕೊಡುತ್ತೇನೆ; ನೀನು ಹಣವನ್ನು ತೆಗೆದುಕೊಳ್ಳುವುದಾದರೆ, ನನ್ನ ಹೆಂಡತಿಯನ್ನು ಅಲ್ಲಿ ಸಮಾಧಿಮಾಡುವೆನು” ಎಂದು ಹೇಳಿದನು.
14ಎಫ್ರೋನನು ಅಬ್ರಹಾಮನಿಗೆ, 15“ಸ್ವಾಮೀ, ನನ್ನ ಮಾತನ್ನು ಕೇಳು. ಆ ಸ್ಥಳದ ಬೆಲೆ ನಾನೂರು ಬೆಳ್ಳಿ ರೂಪಾಯಿಗಳಷ್ಟೇ. ಆದರೆ ನಿನಗಾಗಲಿ, ನನಗಾಗಲಿ ಆ ನಾನೂರು ರೂಪಾಯಿ ಹೆಚ್ಚೇನೂ ಅಲ್ಲ. ಸ್ಥಳವನ್ನು ತೆಗೆದುಕೊಂಡು ನಿನ್ನ ಹೆಂಡತಿಯನ್ನು ಸಮಾಧಿಮಾಡು” ಎಂದು ಉತ್ತರಕೊಟ್ಟನು.
16ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿದನು. ಅಬ್ರಹಾಮನು ಆ ಸ್ಥಳಕ್ಕಾಗಿ ನಾನೂರು ಬೆಳ್ಳಿ ರೂಪಾಯಿಗಳನ್ನು ಹಿತ್ತಿಯರ ಎದುರಿನಲ್ಲಿ ಹೇಳಿದ ಎಫ್ರೋನನಿಗೆ ಎಣಿಸಿಕೊಟ್ಟನು.
17-18ಈ ಜಮೀನು ಮಮ್ರೆಗೆ ಪೂರ್ವದಲ್ಲಿರುವ ಮಕ್ಪೇಲದಲ್ಲಿತ್ತು. ಅಬ್ರಹಾಮನು ಆ ಜಮೀನಿಗೂ ಅದರಲ್ಲಿದ್ದ ಗವಿಗೂ ಜಮೀನಿನಲ್ಲಿದ್ದ ಎಲ್ಲಾ ಮರಗಳಿಗೂ ಒಡೆಯನಾದನು. ಎಫ್ರೋನನಿಗೂ ಅಬ್ರಹಾಮನಿಗೂ ಆದ ಒಪ್ಪಂದಕ್ಕೆ ನಗರದವರೆಲ್ಲರು ಸಾಕ್ಷಿಗಳಾದರು. 19ಬಳಿಕ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳನ್ನು ಮಮ್ರೆಗೆ ಸಮೀಪದಲ್ಲಿದ್ದ ಜಮೀನಿನ ಗವಿಯಲ್ಲಿ ಸಮಾಧಿಮಾಡಿದನು. (ಅದು ಕಾನಾನ್ ದೇಶದ ಹೆಬ್ರೋನ್). 20ಅಬ್ರಹಾಮನು ಆ ಜಮೀನನ್ನು ಮತ್ತು ಅದರಲ್ಲಿದ್ದ ಗವಿಯನ್ನು ಹಿತ್ತಿಯರಿಂದ ಕೊಂಡುಕೊಂಡನು. ಅದು ಅವನ ಆಸ್ತಿಯಾಯಿತು. ಅವನು ಅದನ್ನು ಸಮಾಧಿ ಸ್ಥಳವನ್ನಾಗಿ ಉಪಯೋಗಿಸಿದನು.
Currently Selected:
ಆದಿಕಾಂಡ 23: KERV
Highlight
Share
Copy
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International