ವಿಮೋಚನಕಾಂಡ 2
2
ಮೋಶೆಯ ಬಾಲ್ಯ
1ಲೇವಿ ಕುಟುಂಬದ ಒಬ್ಬನು ಲೇವಿ ಕುಟುಂಬಕ್ಕೆ ಸೇರಿದ ಸ್ತ್ರೀಯೊಬ್ಬಳನ್ನು ಮದುವೆಯಾದನು. 2ಆ ಸ್ತ್ರೀಯು ಗರ್ಭಿಣಿಯಾಗಿ ಗಂಡುಮಗುವಿಗೆ ಜನ್ಮವಿತ್ತಳು. ಮಗುವು ಸುಂದರವಾಗಿತ್ತು. ಆಕೆ ಮೂರು ತಿಂಗಳವರೆಗೆ ಆ ಮಗುವನ್ನು ಬಚ್ಚಿಟ್ಟಳು. 3ಇನ್ನೂ ಹೆಚ್ಚು ಕಾಲ ಬಚ್ಚಿಡಲಾಗದೆ ಆಕೆ ಒಂದು ಬುಟ್ಟಿಯನ್ನು ಮಾಡಿ ಅದಕ್ಕೆ ರಾಳವನ್ನು ಹಚ್ಚಿದಳು. ಆಕೆ ಮಗುವನ್ನು ಬುಟ್ಟಿಯಲ್ಲಿಟ್ಟು ಆ ಬುಟ್ಟಿಯನ್ನು ನೀರಿನಲ್ಲಿ ಎತ್ತರವಾಗಿ ಬೆಳೆದ ಹುಲ್ಲಿನಲ್ಲಿ ಇಟ್ಟಳು. 4ಮಗುವಿಗೆ ಏನಾಗುವುದೋ ಎಂದು ನೋಡಲು ಮಗುವಿನ ಅಕ್ಕ ಅಲ್ಲಿದ್ದುಕೊಂಡು ಕಾಯುತ್ತಿದ್ದಳು.
5ಅದೇ ಸಮಯದಲ್ಲಿ ಫರೋಹನ ಮಗಳು ಸ್ನಾನ ಮಾಡುವುದಕ್ಕೆ ನದಿಗೆ ಹೋದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಎತ್ತರವಾದ ಹುಲ್ಲಿನ ಮೇಲಿದ್ದ ಬುಟ್ಟಿಯನ್ನು ನೋಡಿ ತನ್ನ ಸೇವಕಿಯರಲ್ಲಿ ಒಬ್ಬಳಿಗೆ, “ಹೋಗಿ ಅದನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು. 6ರಾಜನ ಮಗಳು ಬುಟ್ಟಿಯನ್ನು ತೆಗೆದು ನೋಡಿದಾಗ ಅಳುತ್ತಿದ್ದ ಗಂಡುಮಗುವನ್ನು ಕಂಡಳು. ಆಕೆಗೆ ಅದರ ಮೇಲೆ ಮರುಕವಾಯಿತು. ಆಕೆ, “ಇದು ಇಬ್ರಿಯರ ಮಗು” ಎಂದು ಹೇಳಿದಳು.
7ಮಗುವಿನ ಅಕ್ಕ ಆಕೆಯ ಬಳಿಗೆ ಬಂದು, “ಮಗುವಿಗೆ ಹಾಲು ಕುಡಿಸಲು ಒಬ್ಬ ಇಬ್ರಿಯ ಸ್ತ್ರೀಯನ್ನು ಕರೆದುಕೊಂಡು ಬರಲೇ?” ಎಂದು ಕೇಳಿದಳು.
8ಅರಸನ ಮಗಳು, “ಹೋಗಿ, ಕರೆದುಕೊಂಡು ಬಾ” ಅಂದಳು.
ಆದ್ದರಿಂದ ಆ ಹುಡುಗಿ ಹೋಗಿ ಮಗುವಿನ ಸ್ವಂತ ತಾಯಿಯನ್ನು ಕರೆದುಕೊಂಡು ಬಂದಳು.
9ರಾಜನ ಮಗಳು ತಾಯಿಗೆ, “ಈ ಮಗುವಿಗೆ ಹಾಲು ಕುಡಿಸಿ ನೋಡಿಕೊ, ನಾನು ನಿನಗೆ ಸಂಬಳ ಕೊಡುವೆನು” ಎಂದು ಹೇಳಿದಳು.
ಆದ್ದರಿಂದ ಆ ಸ್ತ್ರೀ ತನ್ನ ಮಗುವನ್ನು ತೆಗೆದುಕೊಂಡು ಸಾಕಿದಳು. 10ಮಗುವು ಬೆಳೆಯಿತು. ಸ್ವಲ್ಪಕಾಲದ ನಂತರ ಆ ಸ್ತ್ರೀಯು ಬಾಲಕನನ್ನು ರಾಜನ ಮಗಳ ಬಳಿಗೆ ಕರೆದುಕೊಂಡು ಬಂದಳು. ರಾಜನ ಮಗಳು ಆ ಬಾಲಕನನ್ನು ತನ್ನ ಸ್ವಂತ ಮಗನೆಂದು ಸ್ವೀಕರಿಸಿದಳು. ಆ ಬಾಲಕನನ್ನು ನೀರಿನೊಳಗಿಂದ ಎಳೆದೆನೆಂದು ಆ ಬಾಲಕನಿಗೆ “ಮೋಶೆ” ಎಂದು ಹೆಸರಿಟ್ಟಳು.
ಮೋಶೆ ತನ್ನ ಜನರಿಗೆ ಸಹಾಯ ಮಾಡಿದ್ದು
11ಮೋಶೆಯು ಬೆಳೆದು ದೊಡ್ಡವನಾದನು. ತನ್ನ ಜನರಾದ ಇಬ್ರಿಯರು ಬಲವಂತಕ್ಕೊಳಗಾಗಿ ಪ್ರಯಾಸಕರವಾದ ಬಿಟ್ಟೀಕೆಲಸಗಳನ್ನು ಮಾಡುವುದನ್ನು ನೋಡಿದನು. ಒಂದು ದಿನ ಈಜಿಪ್ಟಿನವನೊಬ್ಬನು ಇಬ್ರಿಯನೊಬ್ಬನನ್ನು ಹೊಡೆಯುವುದನ್ನು ಕಂಡ 12ಮೋಶೆಯು ಸುತ್ತಲೂ ನೋಡಿ ಯಾರೂ ಗಮನಿಸುತ್ತಿಲ್ಲವೆಂದು ತಿಳಿದುಕೊಂಡು ಈಜಿಪ್ಟಿನವನನ್ನು ಕೊಂದು ಮರಳಿನಲ್ಲಿ ಮುಚ್ಚಿಟ್ಟನು.
13ಮರುದಿನ, ಇಬ್ಬರು ಇಬ್ರಿಯರು ಜಗಳವಾಡುತ್ತಿರುವುದನ್ನು ಕಂಡ ಮೋಶೆಯು ಅವರಲ್ಲಿ ತಪ್ಪು ಮಾಡಿದವನಿಗೆ, “ನಿನ್ನ ನೆರೆಯವನಿಗೆ ಯಾಕೆ ಹೊಡೆಯುತ್ತಿರುವೆ?” ಎಂದು ಕೇಳಿದನು.
14ಅದಕ್ಕೆ ಆ ಮನುಷ್ಯನು, “ನಿನ್ನನ್ನು ನಮ್ಮ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿದವರು ಯಾರು? ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿರುವಿಯೋ?” ಎಂದು ಉತ್ತರಿಸಿದನು.
ಆಗ ಮೋಶೆಗೆ ಭಯವಾಯಿತು. ಮೋಶೆಯು ತನ್ನೊಳಗೆ, “ನಾನು ಮಾಡಿದ್ದು ಪ್ರತಿಯೊಬ್ಬರಿಗೂ ತಿಳಿದಿದೆ” ಅಂದುಕೊಂಡನು.
15ಮೋಶೆಯು ಮಾಡಿದ್ದು ಫರೋಹನಿಗೂ ತಿಳಿಯಿತು. ಆದ್ದರಿಂದ ಮೋಶೆಯನ್ನು ಕೊಲ್ಲಿಸಲು ಅವನು ತೀರ್ಮಾನಿಸಿದನು. ಆದರೆ ಮೋಶೆ ಫರೋಹನ ಬಳಿಯಿಂದ ಮಿದ್ಯಾನ್ ದೇಶಕ್ಕೆ ಓಡಿಹೋದನು.
ಮಿದ್ಯಾನಿನಲ್ಲಿ ಮೋಶೆ
16ಮೋಶೆಯು ಮಿದ್ಯಾನ್ಯರ ಒಂದು ಬಾವಿಯ ಬಳಿ ಕುಳಿತುಕೊಂಡಿದ್ದನು. ಮಿದ್ಯಾನ್ಯರ ಒಬ್ಬ ಪುರೋಹಿತನಿಗೆ ಏಳು ಮಂದಿ ಹೆಣ್ಣುಮಕ್ಕಳಿದ್ದರು. ಆ ಹುಡುಗಿಯರು ಬಂದು ತಮ್ಮ ತಂದೆಯ ಕುರಿಗಳಿಗೆ ನೀರನ್ನು ಕುಡಿಸಲು ಬಾವಿಯಿಂದ ನೀರು ಸೇದಿ ತೊಟ್ಟಿಗಳಲ್ಲಿ ಹಾಕುತ್ತಿದ್ದರು. 17ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವು ಕುರುಬರು ನೀರು ಸೇದಲು ಅವರಿಗೆ ಅಡ್ಡಿಮಾಡಿದ್ದರಿಂದ ಮೋಶೆಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರು ಕುಡಿಸಿದನು.
18ಬಳಿಕ ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಮರಳಿಹೋದರು. ಅವರ ತಂದೆ, “ಈ ದಿನ ನೀವು ಬಹುಬೇಗನೆ ಮನೆಗೆ ಬಂದಿದ್ದೀರಲ್ಲಾ!” ಎಂದು ಕೇಳಿದನು.
19ಆ ಹುಡುಗಿಯರು, “ಕುರುಬರು ನಮಗೆ ಅಡ್ಡಿ ಮಾಡಿದಾಗ ಈಜಿಪ್ಟಿನವನೊಬ್ಬನು ನಮ್ಮ ನೆರವಿಗೆ ಬಂದು ನಮಗೂ ನಮ್ಮ ಕುರಿಗಳಿಗೂ ನೀರು ಸೇದಿ ಕೊಟ್ಟನು” ಎಂದು ಉತ್ತರಿಸಿದರು.
20ಅದಕ್ಕೆ ರೆಗೂವೇಲನು ತನ್ನ ಹೆಣ್ಣುಮಕ್ಕಳಿಗೆ, “ಆ ಮನುಷ್ಯನು ಎಲ್ಲಿದ್ದಾನೆ? ಅವನನ್ನು ನೀವು ಯಾಕೆ ಬಿಟ್ಟುಬಂದಿರಿ? ಅವನನ್ನು ಕರೆಯಿರಿ; ಅವನು ನಮ್ಮೊಂದಿಗೆ ಊಟಮಾಡಲಿ” ಎಂದು ಹೇಳಿದನು.
21ಮೋಶೆಯು ರೆಗೂವೇಲನೊಂದಿಗೆ ವಾಸಮಾಡಲು ಇಷ್ಟಪಟ್ಟನು; ರೆಗೂವೇಲನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆ ಮಾಡಿಸಿದನು. 22ಚಿಪ್ಪೋರಳು ಗಂಡುಮಗುವಿಗೆ ಜನ್ಮವಿತ್ತಳು. ಮೋಶೆಯು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದ ಕಾರಣ ಆ ಮಗುವಿಗೆ “ಗೇರ್ಷೋಮ್” ಎಂದು ಹೆಸರಿಟ್ಟನು.
ಇಸ್ರೇಲರಿಗೆ ಸಹಾಯ ಮಾಡಲು ದೇವರ ನಿರ್ಧಾರ
23ಸ್ವಲ್ಪಕಾಲದ ಬಳಿಕ ಈಜಿಪ್ಟಿನ ರಾಜನೂ ಸತ್ತುಹೋದನು. ಇಸ್ರೇಲರು ತಾವು ಮಾಡಬೇಕಾದ ಪ್ರಯಾಸಕರವಾದ ಬಿಟ್ಟೀಕೆಲಸದಿಂದ ನಿಟ್ಟುಸಿರುಬಿಡುತ್ತಾ ಗೋಳಾಡುತ್ತಾ ಇದ್ದರು. ಅವರ ಗೋಳು ದೇವರಿಗೆ ಮುಟ್ಟಿತು. 24ದೇವರು ಅವರ ನರಳಾಟವನ್ನು ಕೇಳಿ ತಾನು ಅಬ್ರಹಾಮನೊಂದಿಗೂ ಇಸಾಕನೊಂದಿಗೂ ಯಾಕೋಬನೊಂದಿಗೂ ಮಾಡಿದ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಂಡನು. 25ದೇವರು ಇಸ್ರೇಲರ ಸಂಕಟಗಳನ್ನು ನೋಡಿ ಅವರಿಗೆ ಸಹಾಯಮಾಡಲು ನಿಶ್ಚಯಿಸಿಕೊಂಡನು.
Currently Selected:
ವಿಮೋಚನಕಾಂಡ 2: KERV
Highlight
Share
Copy
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International