YouVersion Logo
Search Icon

ಪ.ಗೀ. 5

5
ನಲ್ಲ
1ಪ್ರಿಯಳೇ, ವಧುವೇ, ಇಗೋ ನಾ ಬಂದಿರುವೆ ನನ್ನ ತೋಟದೊಳಗೆ,
ನನ್ನ ರಕ್ತಬೋಳ ಸುಗಂಧದ್ರವ್ಯಗಳನ್ನು ಕೂಡಿಸಿರುವೆ,
ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ,
ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ.
ಮಿತ್ರರೇ, ತಿನ್ನಿರಿ.
ಪ್ರಿಯರೇ ಕುಡಿಯಿರಿ, ಬೇಕಾದಷ್ಟು ಪಾನಮಾಡಿರಿ.
ನಾಲ್ಕನೆಯ ಗೀತೆ - ನಲ್ಲೆ
2ನಾನು ನಿದ್ರೆಗೊಂಡಿದ್ದರೂ ನನ್ನ ಹೃದಯವು ಎಚ್ಚರಗೊಂಡಿತ್ತು.
ಇಗೋ, ಎನ್ನಿನಿಯನು ಕದ ತಟ್ಟಿ,
“ಪ್ರಿಯಳೇ, ಕಾಂತಳೇ, ಪಾರಿವಾಳವೇ, ನಿರ್ಮಲೆಯೇ, ಬಾಗಿಲು ತೆಗೆ!
ನನ್ನ ತಲೆಯ ಮೇಲೆಲ್ಲಾ ಇಬ್ಬನಿಯು ಬಿದ್ದಿದೆ,
ನನ್ನ ಕೂದಲು ರಾತ್ರಿ ಬೀಳುವ ಹನಿಗಳಿಂದ ತುಂಬಿದೆ” ಅಂದನು.
3“ನನ್ನ ಒಳಂಗಿಯನ್ನು ತೆಗೆದೆನಲ್ಲಾ, ಅದನ್ನು ಹೇಗೆ ಹಾಕಿಕೊಂಡೇನು?
ಪಾದಗಳನ್ನು ತೊಳೆದುಕೊಂಡೆನಲ್ಲಾ,
ಅವುಗಳನ್ನು ಹೇಗೆ ಕೊಳೆಮಾಡಿಕೊಳ್ಳಲಿ?” ಎಂದು ನಾನು ಅಂದುಕೊಂಡಾಗ,
4ನನ್ನ ಕಾಂತನು ಬಾಗಿಲ ರಂಧ್ರದಲ್ಲಿ ಕೈ ನೀಡಿದನು,
ಅವನಿಗಾಗಿ ನನ್ನ ಮನ ಮಿಡಿಯಿತು.
5ನಾನೆದ್ದು ನನ್ನ ನಲ್ಲನಿಗೆ ಬಾಗಿಲು ತೆರೆಯಲು
ಅಗುಳಿಯ ಮೇಲೆ ಕೈಯಿಟ್ಟೆನು,
ನನ್ನ ಕೈಗಳಿಂದ ರಕ್ತಬೋಳವು,
ನನ್ನ ಬೆರಳುಗಳಿಂದ ಅಚ್ಚರಕ್ತಬೋಳವು ತೊಟ್ಟಿಕ್ಕಿತು.
6ನನ್ನ ಇನಿಯನಿಗೆ ಕದ ತೆಗೆದೆನು,
ಅಷ್ಟರಲ್ಲಿ ಅವನು ಹಿಂದಿರುಗಿ ಹೋಗಿದ್ದನು.
ನನ್ನೆದೆಯ ಬಡಿತವೇ ನಿಂತಂತಾಯಿತು ಅವನ ದನಿಗೆ.
ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಅವನು, ಎಷ್ಟು ಕೂಗಿದರೂ ಉತ್ತರವಿಲ್ಲ.
7ಊರಲ್ಲಿ ಸುತ್ತುತ್ತಿರುವ ಕಾವಲುಗಾರರು ನನ್ನನ್ನು ಕಂಡುಹಿಡಿದು,
ಹೊಡೆದು ಗಾಯಪಡಿಸಿದರು,
ಪೌಳಿಯ ಕಾವಲುಗಾರರು ಮೇಲೊದಿಕೆಯನ್ನು ನನ್ನಿಂದ ಕಿತ್ತುಕೊಂಡರು.
8ಯೆರೂಸಲೇಮಿನ ಮಹಿಳೆಯರೇ, ನೀವು ನನ್ನ ಕಾಂತನನ್ನು ಕಂಡರೆ
ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆ ಎಂಬುವುದನ್ನು ಅವನಿಗೆ ತಿಳಿಸಬೇಕೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
ಸ್ತ್ರೀಯರು
9ಸ್ತ್ರೀರತ್ನವೇ, ಇತರರ ಕಾಂತರಿಗಿಂತ ನಿನ್ನ ಕಾಂತನ ವಿಶೇಷತೆಯೇನು?
ನಮ್ಮಿಂದ ನೀನು ಹೀಗೆ ಪ್ರಮಾಣಮಾಡಿಸುವುದಕ್ಕೆ ಇತರರ ಕಾಂತರಿಗಿಂತ ನಿನ್ನ ಕಾಂತನ ಅತಿಶಯವೇನು?
ನಲ್ಲೆ
10ನನ್ನ ನಲ್ಲನು ತೇಜೋಮಯವಾದ ಕೆಂಪು ಬಣ್ಣವುಳ್ಳವನು;
# 5:10 ಅವನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನು. ಅಥವಾ ನನ್ನ ನಲ್ಲನು ಬಿಳುಪು ಮತ್ತು ಕೆಂಪು ಬಣ್ಣವುಳ್ಳವನು. ಅವನಿಗೆ ಸಮಾನರು ಯಾರು ಇಲ್ಲ ಅವನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನು.
11ಅವನ ತಲೆಯು ಚೊಕ್ಕ ಬಂಗಾರದಂತಿದೆ,
ಗುಂಗುರು ಗುಂಗುರಾಗಿರುವ ಅವನ ಕೂದಲು ಕಾಗೆಯಂತೆ ಕಪ್ಪಾಗಿದೆ.
12ಅವನ ಕಣ್ಣುಗಳೋ ತುಂಬಿತುಳುಕುವ ತೊರೆಗಳ ಹತ್ತಿರ ತಂಗುವ,
ಕ್ಷೀರದಲ್ಲಿ ಸ್ನಾನಮಾಡುವ ಪಾರಿವಾಳಗಳಂತಿವೆ.
13ಅವನ ಕೆನ್ನೆಗಳು ಕರ್ಣಕುಂಡಲ ಗಿಡಗಳ ಪಾತಿಗಳಂತೆಯೂ
ಸುಗಂಧಸಸ್ಯಗಳು ಬೆಳೆಯುವ ದಿಬ್ಬಗಳಂತೆಯೂ ಇವೆ;
ಅಚ್ಚರಕ್ತಬೋಳವನ್ನು ಸುರಿಸುವ ಅವನ ತುಟಿಗಳು ಕೆಂದಾವರೆಗಳೇ.
14ಅವನ ಕೈಗಳು ಪೀತರತ್ನ ಖಚಿತವಾದ ಬಂಗಾರದ ಸಲಾಕಿಗಳೋಪಾದಿಯಲ್ಲಿವೆ,
ಅವನ ಮೈ ಇಂದ್ರನೀಲಮಯವಾದ ದಂತಫಲಕದ ಹಾಗಿದೆ.
15ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲಿಟ್ಟ ಚಂದ್ರಕಾಂತ ಸ್ತಂಭಗಳು;
ದೇವದಾರುಗಳಷ್ಟು ರಮಣೀಯವಾದ ಅವನ ಗಾಂಭೀರ್ಯವು ಲೆಬನೋನಿಗೆ ಸಮಾನ.
16ಅವನ ನುಡಿ ಮಧುರ,
ಅವನು ಸರ್ವಾಂಗ ಸುಂದರ.
ಯೆರೂಸಲೇಮಿನ ಸ್ತ್ರೀಯರುಗಳಿರಾ,
ಇವನೇ ಎನ್ನಿನಿಯನು; ಇವನೇ ನನ್ನ ಪ್ರಿಯನು.

Currently Selected:

ಪ.ಗೀ. 5: IRVKan

Highlight

Share

Copy

None

Want to have your highlights saved across all your devices? Sign up or sign in