YouVersion Logo
Search Icon

ಪ.ಗೀ. 4

4
ಸರ್ವಾಂಗಸುಂದರಿಯಾದ ವಧು - ನಲ್ಲ
1ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ!
ಆಹಾ, ನೀನು ಎಷ್ಟು ಸುಂದರಿ!
ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು,
ನಿನ್ನ ಕೂದಲು ಗಿಲ್ಯಾದ್ ಬೆಟ್ಟದಿಂದ ಇಳಿದು ಹೋಗುವ ಆಡಿನ ಮಂದೆ.
2ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪಿನಂತಿವೆ ನಿನ್ನ ಹಲ್ಲುಗಳು,
ಯಾವುದೂ ಒಂಟಿಯಾಗಿರದೆ ಎಲ್ಲವೂ ಒಟ್ಟಾಗಿ ಜೋಡಿಯಾಗಿವೆ.
3ನಿನ್ನ ತುಟಿಗಳು ಕೆಂಪು ದಾರದಂತಿವೆ.
ನಿನ್ನ ಬಾಯಿ ರಮ್ಯ.
ಮುಸುಕಿನೊಳಗಿನ ನಿನ್ನ ಕೆನ್ನೆಯು ಹೋಳು ಮಾಡಿದ ದಾಳಿಂಬೆಯ ತಿರುಳಿನಂತಿದೆ.
4ನಿನ್ನ ಕೊರಳು ದಾವೀದನು ಕಟ್ಟಿಸಿದ ನುಣುಪಾದ ಗೋಪುರದಂತಿದೆ,
ನಿನ್ನ ಕತ್ತಿನ ಹಾರ ಸಾವಿರ ಶೂರರ ಗುರಾಣಿಗಳನ್ನು ನೇತುಹಾಕಿರುವ ದಾವೀದನ ಬುರುಜಿನ ಹಾಗಿದೆ.
5ನಿನ್ನ ಎರಡು ಸ್ತನಗಳು ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ
ಅವಳಿ ಜಿಂಕೆಮರಿಗಳಂತಿವೆ.
6ಕತ್ತಲು ಕಳೆಯುವ ತನಕ, ಹೊತ್ತು ಮೂಡುವವರೆಗೆ
ರಕ್ತಬೋಳದ ಬೆಟ್ಟಕ್ಕೂ, ಧೂಪದ ಗುಡ್ಡಕ್ಕೂ ತೆರಳಿ ಸಂಚರಿಸುವೆ ನಾನು.
7ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ,
ನಿನ್ನಲ್ಲಿ ಯಾವ ಕೊರತೆಯೂ ಇಲ್ಲ.
8ಬಾ ವಧುವೇ, ಎನ್ನೊಂದಿಗೆ ಲೆಬನೋನಿನಿಂದ.
ಬಾ ನನ್ನೊಂದಿಗೆ, ಲೆಬನೋನಿನಿಂದ,
ಇಳಿದು ಬಾ ಅಮಾನದ ತುದಿಯಿಂದ,
ಶೆನೀರ್ ಮತ್ತು ಹೆರ್ಮೋನ್ ಶಿಖರಗಳಿಂದ.
ಹೊರಟು ಬಾ, ಸಿಂಹಗಳ ಗುಹೆಗಳಿಂದ
ಚಿರತೆಗಳ ಗುಡ್ಡಗಳಿಂದ.
9ಪ್ರಿಯಳೇ, ವಧುವೇ, ನನ್ನ ಹೃದಯವನ್ನು ಅಪಹರಿಸಿರುವೆ ನಿನ್ನ ಒಂದು ಕುಡಿನೋಟದಿಂದ;
ನನ್ನ ಹೃದಯವನ್ನು ವಶಮಾಡಿಕೊಂಡಿರುವೆ ನಿನ್ನ ಕಂಠಹಾರದ ಒಂದು ರತ್ನದಿಂದ.
10ಪ್ರಿಯಳೇ, ವಧುವೇ, ನಿನ್ನ ಪ್ರೀತಿ ಅದೆಷ್ಟೋ ರಮ್ಯ!
ನಿನ್ನ ಪ್ರೇಮ ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ!
ನಿನ್ನ ತೈಲದ ಪರಿಮಳ ಸಕಲಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ!
11ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ;
ಜೇನೂ ಮತ್ತು ಹಾಲೂ ನಿನ್ನ ನಾಲಿಗೆಯ ಅಡಿಯಲ್ಲಿವೆ,
ನಿನ್ನ ಉಡುಪುಗಳು ಲೆಬನೋನಿನ ಸುಗಂಧ ಸೂಸುತ್ತಿದೆ.
12ನನ್ನ ಪ್ರಿಯಳು, ನನ್ನ ಮದಲಗಿತ್ತಿಯು, ಸುಭದ್ರವಾದ ಉದ್ಯಾನ,
ಬೇಲಿಯೊಳಗೆ ಮುಚ್ಚಿ ಮುದ್ರಿಸಿದ ಚಿಲುಮೆ.
13ನಿನ್ನ ಉದ್ಯಾನದಲ್ಲಿವೆ ದಾಳಿಂಬೆಯಂತಹ ಉತ್ತಮ ವೃಕ್ಷಗಳು,
ಜಟಮಾಂಸಿ ಮತ್ತು ಗೋರಂಟೆಗಳು,
14ಜಟಮಾಂಸಿ, ಕುಂಕುಮ, ಬಜೆ, ಲವಂಗಚಕ್ಕೆ, ಸಮಸ್ತ ವಿಧವಾದ ಸಾಂಬ್ರಾಣಿ ಗಿಡಗಳು,
ರಕ್ತಬೋಳ, ಅಗುರು, ಸಕಲ ಮುಖ್ಯ ಸುಗಂಧದ್ರವ್ಯ ಇವುಗಳೇ ಚಿಗುರುತ್ತವೆ.
15ಉದ್ಯಾನಗಳಿಗೆ ಹಾದು ಹೋಗುವ ಬುಗ್ಗೆ, ಉಕ್ಕುತ್ತಿರುವ ಬಾವಿ,
ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ.
ನಲ್ಲೆ
16ಉತ್ತರದ ಗಾಳಿಯೇ ಏಳು, ದಕ್ಷಿಣದ ಗಾಳಿಯೇ ಬೀಸು!
ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು.
ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ.

Currently Selected:

ಪ.ಗೀ. 4: IRVKan

Highlight

Share

Copy

None

Want to have your highlights saved across all your devices? Sign up or sign in