YouVersion Logo
Search Icon

ಮತ್ತಾ 4

4
ಸೈತಾನನು ಯೇಸುವನ್ನು ಶೋಧಿಸಿದ್ದು
ಮಾರ್ಕ 1:12,13; ಲೂಕ 4:1-13
1ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು. 2ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.
3ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು, 4ಯೇಸು, #4:4 ಧರ್ಮೋ 8:3 “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು.
5ಆಗ ಸೈತಾನನು ಯೇಸುವನ್ನು #4:5 ಯೆರುಸಲೇಮ್ ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ 6ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; #4:6 ಕೀರ್ತ 91:11,12‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು. 7ಅದಕ್ಕೆ ಯೇಸು, #4:7 ಧರ್ಮೋ 6:16“ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು. 8ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ, 9ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು. 10ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ #4:10 ಧರ್ಮೋ 6:13; 10:16ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
11ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.
ಯೇಸು ಗಲಿಲಾಯ ಸೀಮೆಯಲ್ಲಿ ಸುವಾರ್ತೆಯನ್ನು ಸಾರುವುದಕ್ಕೆ ಪ್ರಾರಂಭಮಾಡಿದ್ದು
ಮಾರ್ಕ 1:14,15; ಲೂಕ 4:14,15
12ಯೋಹಾನನು ಸೆರೆಯಾದನು ಎಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟು ಹೋದನು. 13ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್‌ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು. 14ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು#4:14 ಯೆಶಾ 9:1-2; ಆ ಮಾತು ಏನೆಂದರೆ, 15#4:15 ಯೆಶಾ 9:1,2“ಜೆಬುಲೋನ್ ಸೀಮೆ ಮತ್ತು ನಫ್ತಾಲಿ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ, 16ಹೀಗೆ ಕತ್ತಲಲ್ಲಿ ವಾಸಿಸಿದ ಈ ಸೀಮೆಯ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣದ ಛಾಯೆ ನೆರೆದ ಪ್ರದೇಶಗಳಲ್ಲಿ ವಾಸಿಸುವವರಿಗೆ ಬೆಳಕು ಉದಯವಾಯಿತು” ಎಂಬುದು. 17ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು.
ಯೇಸು ಪ್ರಥಮ ಶಿಷ್ಯರನ್ನು ಮಾಡಿಕೊಂಡಿದ್ದು
ಮಾರ್ಕ 1:16-20; ಲೂಕ 5:2-11; ಯೋಹಾ 1:40-42
18ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದು ಹೋಗುವಾಗ ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ಸಹೋದರನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುವುದನ್ನು ಕಂಡನು; ಅವರು ಬೆಸ್ತರಾಗಿದ್ದರು. 19ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ, 20ತಕ್ಷಣ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು. 21ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು. 22ಕೂಡಲೆ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
ಯೇಸು ಸುವಾರ್ತೆಯನ್ನು ಸಾರಿ ಅಸ್ವಸ್ಥರನ್ನು ಗುಣಪಡಿಸಿ ಹೆಸರುವಾಸಿಯಾದದ್ದು
ಮಾರ್ಕ 1:39; ಲೂಕ 4:15-44; 6:17-19
23ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. 24ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು. 25ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇ ಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು.

Currently Selected:

ಮತ್ತಾ 4: IRVKan

Highlight

Share

Copy

None

Want to have your highlights saved across all your devices? Sign up or sign in