ಯೋವೇ 3
3
ಯೆಹೋವನು ಜನಾಂಗಳಿಗೆ ನೀಡುವ ತೀರ್ಪು
1ಇಗೋ ಆ ದಿನಗಳಲ್ಲಿಯೂ ಆ ಸಮಯದಲ್ಲಿಯೂ,
ನಾನು ಯೆಹೂದದ ಮತ್ತು ಯೆರೂಸಲೇಮಿನ ಸಂಪತ್ತನ್ನು ಪುನಃಸ್ಥಾಪಿಸುವಾಗ,
2ನಾನು ಸಕಲ ಜನಾಂಗಗಳನ್ನು ಕೂಡಿಸುವೆನು,
ಮತ್ತು ಯೆಹೋಷಾಫಾಟನ ನ್ಯಾಯತೀರ್ಪಿನ ತಗ್ಗಿಗೆ ಬರಮಾಡುವೆನು.
ಅಲ್ಲಿ ನನ್ನ ಜನರಿಗೆ ನ್ಯಾಯತೀರ್ಪನ್ನು ಕೊಡುವೆನು.
ಏಕೆಂದರೆ ನನ್ನ ಜನರು ನನ್ನ ಬಾಧ್ಯತೆಯೂ ಆಗಿರುವ
ಇಸ್ರಾಯೇಲಿನ ವಿಷಯ ಅವರೊಂದಿಗೆ ವ್ಯಾಜ್ಯ ಮಾಡುವೆನು.
ಅವರು ನನ್ನ ಜನರನ್ನು ದೇಶದೇಶಗಳಿಗೆ ಚದುರಿಸಿ ನನ್ನ ದೇಶವನ್ನು ಹಂಚಿಕೊಂಡರು.
3ಹೌದು ನನ್ನ ಜನರಿಗಾಗಿ ಚೀಟುಹಾಕಿ,
ವೇಶ್ಯ ವೃತ್ತಿಗೆ ತಮ್ಮ ಗಂಡು ಮಕ್ಕಳನ್ನು ಮಾರಾಟ ಮಾಡಿ,
ಬಾಲಕಿಯರನ್ನು ಕುಡಿಯುವ
ದ್ರಾಕ್ಷಾರಸಕ್ಕೆ ಬದಲು ಮಾಡಿದ್ದಾರೆ.
4ತೂರ್, ಚೀದೋನ್, ಫಿಲಿಷ್ಟಿಯರ ಎಲ್ಲಾ ಪ್ರಾಂತ್ಯಗಳೇ,
ನನ್ನ ವಿರುದ್ಧ ನಿಮಗೆ ಕೋಪವೇಕೆ?
ನನಗೆ ಪ್ರತಿಕಾರ ಮಾಡುವಿರೋ?
ನೀವು ನನಗೆ ಪ್ರತಿಕಾರ ಮಾಡಿದರೆ,
ನೀವು ಮಾಡುವ ಕೇಡನ್ನು ತ್ವರೆಯಾಗಿ ನಿಮ್ಮ ತಲೆಗೆ ಬರುವಂತೆ ಮಾಡುವೆನು.
5ನನ್ನ ಬೆಳ್ಳಿ ಬಂಗಾರಗಳನ್ನು ದೋಚಿಕೊಂಡು,
ನನ್ನ ಅಮೂಲ್ಯವಾದ ವಸ್ತ್ರಗಳನ್ನು ನಿಮ್ಮ ದೇವಾಲಯಗಳಿಗೆ ಕೊಂಡೊಯ್ದಿದ್ದೀರಿ.
6ಯೆಹೂದದ ಮತ್ತು ಯೆರೂಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿದ್ದೀರಿ.
ಅವರನ್ನು ಸ್ವಂತ ನಾಡಿನಿಂದ ದೂರಮಾಡಿದ್ದೀರಿ.
7ಹೀಗಿರಲು ಇಗೋ, ನೀವು ಅವರನ್ನು ಮಾರಿದ ಸ್ಥಳದೊಳಗಿಂದ ಹೊರಟು ಬರುವಂತೆ ನಾನು ಅವರನ್ನು ಹುರಿದುಂಬಿಸಿ,
ನೀವು ಮಾಡಿದ ಕೇಡನ್ನು ನಿಮ್ಮ ತಲೆಗೇ ತರುವೆನು.
8ನಿಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು,
ಯೆಹೂದ್ಯರಿಗೆ ಮಾರುವೆನು.
ಅವರು ಆ ಮಕ್ಕಳನ್ನು ದೂರದ ಜನಾಂಗವಾದ,
ಶೆಬದವರಿಗೆ ಮಾರಿಬಿಡುವರು.
ಯೆಹೋವನೇ ಇದನ್ನು ನುಡಿದಿದ್ದಾನೆ.
ಜನಾಂಗಗಳ ಅಪಜಯ
9ಎಲ್ಲಾ ಜನರಿಗೆ ಹೀಗೆ ಪ್ರಕಟಿಸಿರಿ:
ಜನಾಂಗಗಳೇ ಯುದ್ಧಸನ್ನದ್ಧರಾಗಿರಿ,
ಶೂರರನ್ನು ಎಚ್ಚರಪಡಿಸಿರಿ,
ಶೂರರು ಒಟ್ಟುಗೂಡಲಿ,
ಶೂರರೆಲ್ಲರೂ ಯುದ್ಧಕ್ಕೆ ಹೊರಡಲಿ.
10ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ,
ಕತ್ತಿಗಳನ್ನಾಗಿ ಮಾಡಿರಿ.
ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ.
ಬಲಹೀನನು, “ನಾನು ಶೂರನು” ಎಂದು ಹೇಳಲಿ.
11ಸುತ್ತಮುತ್ತಲಿನ ಜನಾಂಗಗಳೇ,
ತ್ವರೆಯಾಗಿ ಕೂಡಿಬನ್ನಿರಿ,
ನೀವೆಲ್ಲರೂ ಒಟ್ಟಾಗಿ ಕೂಡಿಬನ್ನಿರಿ.
ಯೆಹೋವನೇ,
ನಿನ್ನ ಶೂರರನ್ನು ರಣರಂಗಕ್ಕೆ ಇಳಿಸು.
12ಜನಾಂಗಗಳು ಎಚ್ಚೆತ್ತುಕೊಂಡು,
ಯೆಹೋಷಾಫಾಟನ ನ್ಯಾಯತೀರ್ಪಿನ ತಗ್ಗಿಗೆ ಬರಲಿ.
ಅಲ್ಲಿ ನಾನು ಸುತ್ತಣ ಜನಾಂಗಗಳಿಗೆಲ್ಲಾ,
ನ್ಯಾಯತೀರಿಸಲು ಆಸೀನನಾಗುವೆನು.
13ಯೆಹೋವನ ಸೈನ್ಯದವರೇ, ಕುಡುಗೋಲನ್ನು ಹಾಕಿರಿ,
ಫಲವು ಪಕ್ವವಾಗಿದೆ.
ಬನ್ನಿರಿ, ದ್ರಾಕ್ಷಿಯನ್ನು ತುಳಿಯಿರಿ,
ದ್ರಾಕ್ಷಿಯ ಅಲೆಯು ತುಂಬಿದೆ.
ತೊಟ್ಟಿಗಳು ತುಂಬಿ ತುಳುಕುತ್ತಿವೆ.
ಜನಾಂಗಗಳ ದುಷ್ಟತನವು ವಿಪರೀತವಾಗಿದೆ.
14ಆಹಾ ತೀರ್ಪಿನ ತಗ್ಗಿನಲ್ಲಿ ಗುಂಪುಗುಂಪುಗಳಾಗಿ ಜನರಿದ್ದಾರೆ.
ಏಕೆಂದರೆ ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿದೆ.
15ಸೂರ್ಯ ಮತ್ತು ಚಂದ್ರರು ಮಂಕಾಗುತ್ತಾರೆ,
ನಕ್ಷತ್ರಗಳು ಕಾಂತಿಗುಂದುತ್ತವೆ.
16ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ,
ಯೆರೂಸಲೇಮಿನಿಂದ ಧ್ವನಿಗೈಯುತ್ತಾನೆ.
ಭೂಮಿ ಹಾಗು ಆಕಾಶಗಳು ನಡುಗುತ್ತವೆ,
ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ,
ಮತ್ತು ಇಸ್ರಾಯೇಲರಿಗೆ ರಕ್ಷಣದುರ್ಗವೂ ಆಗಿರುವನು.
ದೇವಜನರ ಸೌಭಾಗ್ಯ
17ನಿಮ್ಮ ದೇವರಾದ ಯೆಹೋವನು ನಾನೇ ಎಂದು ನಿಮಗೆ ಮನದಟ್ಟಾಗುವುದು.
ಆಗ ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ನೆಲೆಸುವುದರಿಂದ,
ಯೆರೂಸಲೇಮ್ ಪವಿತ್ರವಾಗಿರುವುದು.
ಅನ್ಯರು ಇನ್ನು ಅದರಲ್ಲಿ ಹಾದುಹೋಗುವುದಿಲ್ಲ.
18ಆ ದಿನದಲ್ಲಿ,
ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವುದು,
ಗುಡ್ಡಗಳಿಂದ ಹಾಲು ಹರಿಯುವುದು,
ಯೆಹೂದದ ಹಳ್ಳಗಳಲ್ಲೆಲ್ಲಾ ನೀರು ತುಂಬಿರುವುದು,
ಯೆಹೋವನ ಆಲಯದೊಳಗೆ ಬುಗ್ಗೆಯು ಉಕ್ಕಿ ಬಂದು,
ಶಿಟ್ಟೀಮಿನ ಹಳ್ಳವನ್ನು ತಂಪುಮಾಡುವುದು.
19ಐಗುಪ್ತ್ಯವು ಹಾಳಾಗುವುದು,
ಎದೋಮ್, ಹಾಳಾದ ಬೆಂಗಾಡಾಗುವುದು,
ಏಕೆಂದರೆ ಅವರು ಯೆಹೂದ್ಯರನ್ನು ಹಿಂಸಿಸಿ,
ಅವರ ದೇಶದಲ್ಲಿ ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ.
20ಆದರೆ ಯೆಹೂದವು ಸದಾ ಜನಭರಿತವಾಗಿರುವುದು,
ಯೆರೂಸಲೇಮ್ ತಲತಲಾಂತರಕ್ಕೂ ನಿವಾಸಸ್ಥಾನವಾಗಿರುವುದು.
21ನಾನು ಶಿಕ್ಷಿಸದೆ ಇದ್ದ ಅವರ ರಕ್ತಾಪರಾಧವನ್ನು ಶಿಕ್ಷಿಸದೇ ಬಿಡುವುದಿಲ್ಲ.#3:21 ನಾನು ಶಿಕ್ಷಿಸದೆ ಇದ್ದ ಅವರ ರಕ್ತಾಪರಾಧವನ್ನು ಶಿಕ್ಷಿಸದೇ ಬಿಡುವುದಿಲ್ಲ. ಅಥವಾ ನಾನು ಕ್ಷಮಿಸದೆ ಇದ್ದ ಅವರ ರಕ್ತಾಪರಾಧವನ್ನು ಕ್ಷಮಿಸುವೆನು.
ಯೆಹೋವನು ಚೀಯೋನಿನಲ್ಲಿ ವಾಸವಾಗಿರುತ್ತಾನೆ.
Currently Selected:
ಯೋವೇ 3: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.