ಆಮೋ 1
1
1ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಇಸ್ರಾಯೇಲಿನ ಅರಸನೂ, ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಭೂಕಂಪಕ್ಕೆ ಎರಡು ವರ್ಷಗಳ ಮೊದಲೇ ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನಿಗೆ ಇಸ್ರಾಯೇಲಿನ ವಿಷಯವಾಗಿ ಕೇಳಿಬಂದ ದೈವೋಕ್ತಿಗಳು.
ಯೆಹೋವನ ಗರ್ಜನೆ
2ಆಮೋಸನು ಹೀಗೆ ಪ್ರಕಟಿಸಿದನು,
“ಯೆಹೋವನು ಚೀಯೋನಿನಿಂದ ಗರ್ಜಿಸಿ,
ಯೆರೂಸಲೇಮಿನಿಂದ ಧ್ವನಿಗೈಯುವನು.
ಆಗ ಕುರುಬರ ಹುಲ್ಲುಗಾವಲುಗಳು ಬಾಡಿಹೋಗುವವು.
ಕರ್ಮೆಲ್ ಬೆಟ್ಟದ ತುದಿಯು ಒಣಗಿಹೋಗುವವು.”
ದಮಸ್ಕದ ಪಾಪಕ್ಕೆ ದಂಡನೆ
3ಯೆಹೋವನು ಇಂತೆನ್ನುತ್ತಾನೆ,
“ದಮಸ್ಕವು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅದು ಗಿಲ್ಯಾದನ್ನು ಕಬ್ಬಿಣದ ಹಂತಿ ಕುಂಟೆಗಳಿಂದ ಒಕ್ಕಿ ನುಗ್ಗುಮಾಡಿತಷ್ಟೆ.
4ನಾನು ಹಜಾಯೇಲನ ವಂಶದ ಮೇಲೆ ಬೆಂಕಿಯನ್ನು ಸುರಿಸುವೆನು.
ಅದು ಬೆನ್ಹದದನ ಅರಮನೆಯನ್ನು ನುಂಗಿಬಿಡುವುದು.
5ನಾನು ದಮಸ್ಕದ ಹೆಬ್ಬಾಗಿಲುಗಳನ್ನು ಮುರಿಯುವೆನು
ಮತ್ತು ಆವೆನ್ ತಗ್ಗಿನೊಳಗಿನಿಂದ ನಿವಾಸಿಗಳನ್ನು#1:5 ನಿವಾಸಿಗಳನ್ನು ಅಥವಾ ಸಿಂಹಾಸನರೂಢನಾಗಿರುವವನನ್ನು. ಮತ್ತು
ಬೇತ್ ಎದೆನ್ ಪಟ್ಟಣದ ಆಡಳಿತಾಧಿಕಾರಿಯನ್ನು ನಿರ್ಮೂಲಮಾಡುವೆನು;
ಅರಾಮ್ಯರು ಕೀರ್ ಪಟ್ಟಣಕ್ಕೆ ಸೆರೆಯಾಗಿ ಹೋಗುವರು.”
ಇದು ಯೆಹೋವನ ನುಡಿ.
ಫಿಲಿಷ್ಟಿಯದ ಪಾಪಕ್ಕೆ ಆದ ದಂಡನೆ
6ಯೆಹೋವನು ಇಂತೆನ್ನುತ್ತಾನೆ,
“ಗಾಜವು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ,
ಏಕೆಂದರೆ ಅದು ಜನರನ್ನು ಗುಂಪುಗುಂಪಾಗಿ ಸೆರೆಹಿಡಿದು ಎದೋಮಿಗೆ ವಶಮಾಡಿಬಿಟ್ಟಿತು.
7ನಾನು ಗಾಜದ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು,
ಅದು ಅದರ ಅರಮನೆಗಳನ್ನು ನುಂಗಿಬಿಡುವುದು.
8ನಾನು ಅಷ್ದೋದಿನೊಳಗಿಂದ ಸಿಂಹಾಸನಾಸೀನನನ್ನೂ
ಮತ್ತು ಅಷ್ಕೆಲೋನಿನೊಳಗಿಂದ ರಾಜದಂಡ ದಾರಿಯನ್ನೂ ನಿರ್ಮೂಲಮಾಡುವೆನು.
ನಾನು ಎಕ್ರೋನಿನ ವಿರುದ್ಧವಾಗಿ ಕೈಯೆತ್ತುವೆನು,
ಉಳಿದ ಫಿಲಿಷ್ಟಿಯರೆಲ್ಲರೂ ನಾಶವಾಗಿ ಹೋಗುವರು.”
ಇದು ಕರ್ತನಾದ ಯೆಹೋವನ ನುಡಿ.
ತೂರಿನ ಪಾಪಕ್ಕೆ ಆದ ದಂಡನೆ
9ಯೆಹೋವನು ಇಂತೆನ್ನುತ್ತಾನೆ:
“ತೂರ್ ಪಟ್ಟಣವು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅದು ಒಡಹುಟ್ಟಿದವರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೇ,
ಜನರನ್ನು ಗುಂಪುಗುಂಪಾಗಿ ಎದೋಮಿಗೆ ವಶಮಾಡಿಬಿಟ್ಟಿತು.
10ನಾನು ತೂರಿನ ಕೋಟೆಯ ಮೇಲೆ ಬೆಂಕಿಯನ್ನು ಸುರಿಸುವೆನು,
ಮತ್ತು ಅದು ಅದರ ಅರಮನೆಗಳನ್ನು ನುಂಗಿಬಿಡುವುದು.”
ಎದೋಮಿನ ಪಾಪಕ್ಕೆ ಆದ ದಂಡನೆ
11ಯೆಹೋವನು ಇಂತೆನ್ನುತ್ತಾನೆ:
“ಎದೋಮ್ ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅವನು ಕತ್ತಿ ಹಿಡಿದು ತನ್ನ ಸಹೋದರರನ್ನು ಹಿಂದಟ್ಟಿದನು,
ಕರುಣೆಯನ್ನು ತೋರಿಸಲಿಲ್ಲ. ರೋಷವನ್ನು ಸಾಧಿಸಿದ್ದಾರೆ.
ಇದರಿಂದ ಅವನ ಕೋಪವು ಸದಾ ಹರಿಯುತ್ತಿತ್ತು,
ಆತನು ರೌದ್ರವನ್ನು ನಿರಂತರವಾಗಿ ಇಟ್ಟುಕೊಂಡನು.
12ನಾನು ತೇಮಾನಿನ ಮೇಲೆ ಬೆಂಕಿಯನ್ನು ಸುರಿಸುವೆನು,
ಮತ್ತು ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವುದು.”
ಅಮ್ಮೋನಿನ ಪಾಪಕ್ಕೆ ಆದ ದಂಡನೆ
13ಯೆಹೋವನು ಇಂತೆನ್ನುತ್ತಾನೆ,
“ಅಮ್ಮೋನ್ಯರು ಬಹಳ ದ್ರೋಹಗಳನ್ನು ಮಾಡಿದ್ದರಿಂದ,
ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ.
ಏಕೆಂದರೆ ಅವರು ತಮ್ಮ ದೇಶವನ್ನು ವಿಸ್ತರಿಸಬೇಕೆಂದು
ಗಿಲ್ಯಾದಿನ ಗರ್ಭಿಣಿಯರ ಹೊಟ್ಟೆಯನ್ನು ಸೀಳಿಬಿಟ್ಟರು.
14ನಾನು ರಬ್ಬದ ಕೋಟೆಯನ್ನು ಬೆಂಕಿಯಿಂದ ಉರಿಸುವೆನು,
ಅದು ಅದರ ಅರಮನೆಗಳನ್ನು ನುಂಗಿಬಿಡುವುದು;
ಆ ಯುದ್ಧದ ದಿನದಲ್ಲಿ ಆರ್ಭಟವಾಗುವುದು,
ಆ ಸುಂಟರಗಾಳಿಯಂತ ದಿನದಲ್ಲಿ ಪ್ರಚಂಡ ಕಾದಾಟವೂ ಉಂಟಾಗುವುದು.
15ಅವರ ಅರಸನೂ ಮತ್ತು ಅವನ ರಾಜ್ಯಾಧಿಕಾರಗಳೂ ಒಟ್ಟಿಗೆ ಸೆರೆಯಾಗಿ ಹೋಗುವರು.”
ಇದು ಯೆಹೋವನ ನುಡಿ.
Currently Selected:
ಆಮೋ 1: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Free Reading Plans and Devotionals related to ಆಮೋ 1

Book of Amos

Old Testament – Minor Prophets

Reading the Bible in Historical Sequence Part 6
