ಯೆರೆ 4
4
1ಯೆಹೋವನು, “ಇಸ್ರಾಯೇಲೇ, ನೀನು ತಿರುಗಿಕೊಂಡರೆ ನನ್ನ ಬಳಿಗೇ ಬರುವಿ;
ನನ್ನ ಕಣ್ಣೆದುರಿನಿಂದ ನಿನ್ನ ಅಸಹ್ಯವಸ್ತುಗಳನ್ನು ತೆಗೆದುಬಿಟ್ಟರೆ, ನೀನು ಇನ್ನು ದಿಕ್ಕು ದೆಸೆಗಳಿಲ್ಲದೆ ನರಳುವುದಿಲ್ಲ.
2‘ಯೆಹೋವನ ಜೀವದಾಣೆ’ ಎಂದು ಸತ್ಯ, ನ್ಯಾಯ ಮತ್ತು ಧರ್ಮಾನುಸಾರವಾಗಿ ನೀನು ಪ್ರಮಾಣ ಮಾಡಿದರೆ,
ಜನಾಂಗಗಳು ಆತನಿಂದ ತಮ್ಮನ್ನು ಆಶೀರ್ವದಿಸಿಕೊಂಡು ಆತನಲ್ಲಿ ಹೆಚ್ಚಳಪಡುವರು” ಎಂದು ಹೇಳುತ್ತಾನೆ.
ಯೆಹೂದಕ್ಕೆ ಉತ್ತರ ದಿಕ್ಕಿನಿಂದ ಬರುವ ಕ್ರೂರ ದಂಡನೆ
3ಯೆಹೋವನು ಯೆಹೂದದವರಿಗೂ ಮತ್ತು ಯೆರೂಸಲೇಮಿನವರಿಗೂ, “ಪಾಳು ಬಿದ್ದಿರುವ ನಿಮ್ಮ ಭೂಮಿಯನ್ನು ಉತ್ತು ಹದಮಾಡಿ, ಮುಳ್ಳುಗಳಲ್ಲಿ ಬಿತ್ತಬೇಡಿರಿ. 4ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿ, ಯೆಹೋವನಿಗಾಗಿ ಸುನ್ನತಿ ಮಾಡಿಕೊಳ್ಳಿರಿ. ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು, ಯಾರೂ ಆರಿಸಲಾಗದಷ್ಟು ರಭಸವಾಗಿ ಧಗಧಗಿಸುವುದು” ಎಂದು ಹೇಳುತ್ತಾನೆ.
5ಯೆಹೂದದಲ್ಲಿ ಸಾರಿರಿ, ಯೆರೂಸಲೇಮಿನೊಳಗೆ ಪ್ರಕಟಿಸುತ್ತಾ, “ದೇಶದಲ್ಲೆಲ್ಲಾ ಕೊಂಬೂದಿರಿ, ಕೂಡಿಬನ್ನಿರಿ ಕೋಟೆಕೊತ್ತಲಗಳ ಊರುಗಳನ್ನು ಸೇರೋಣ ಎಂದು ಕೂಗಿರಿ. 6ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ, ತಡಮಾಡದೆ ವಲಸೆಹೋಗಿರಿ; ನಾನು ಉತ್ತರ ದಿಕ್ಕಿನಿಂದ ವಿಪತ್ತನ್ನು ಮತ್ತು ಘೋರನಾಶವನ್ನು ಬರಮಾಡುವೆನು. 7ಜನಾಂಗದ ನಾಶಕ್ಕೆ ಒಂದು ಸಿಂಹವು ತನ್ನ ಪೊದೆಯೊಳಗಿಂದ ಎದ್ದು, ಹೊರಟಿದೆ, ಅದರ ಸ್ಥಳದಿಂದ ತೆರಳಿದೆ. ಅದು ನಿನ್ನ ದೇಶವನ್ನು ಹಾಳುಮಾಡುವುದು, ನಿನ್ನ ಪಟ್ಟಣಗಳು ಪಾಳುಬಿದ್ದು ನಿರ್ಜನ ಪ್ರದೇಶಗಳಾಗುವುವು. 8ಇದರ ನಿಮಿತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ಪ್ರಲಾಪಿಸಿರಿ, ಗೋಳಾಡಿರಿ; ಯೆಹೋವನ ರೋಷಾಗ್ನಿಯು ನಮ್ಮನ್ನು ಬಿಟ್ಟಿಲ್ಲವಲ್ಲಾ. 9ಆ ಕಾಲದಲ್ಲಿ ಅರಸನ ಎದೆಯು ಕುಂದುವುದು, ಅಧಿಪತಿಗಳ ಹೃದಯವು ಕುಗ್ಗುವುದು, ಯಾಜಕರು ಸ್ತಬ್ಧರಾಗುವರು, ಪ್ರವಾದಿಗಳು ಬೆರಗಾಗುವರು” ಎಂದು ಯೆಹೋವನು ನುಡಿಯುತ್ತಾನೆ.
10ಆಗ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನೀನು ಈ ಜನರಿಗೂ ಮತ್ತು ಯೆರೂಸಲೇಮಿಗೂ, ‘ನಿಮಗೆ ಸಮಾಧಾನವಾಗುವುದು’ ಎಂದು ಹೇಳಿ ನಿಶ್ಚಯವಾಗಿ ಇವರನ್ನು ಬಹಳ ಮೋಸಗೊಳಿಸಿದ್ದಿ; ಖಡ್ಗವು ಪ್ರಾಣದ ಮಟ್ಟಿಗೂ ಇಳಿಯುತ್ತದಲ್ಲಾ” ಅಂದೆನು. 11ಈ ಕಾಲದಲ್ಲಿ ಈ ಜನರಿಗೂ ಯೆರೂಸಲೇಮಿಗೂ ಈ ಮಾತಾಗುವುದು, “ಬಿಸಿಗಾಳಿಯು ಅರಣ್ಯದ ಬೋಳುಗುಡ್ಡಗಳಿಂದ ನನ್ನ ಪ್ರಜೆಯೆಂಬ ಯುವತಿಯ ಮೇಲೆ ಬೀಸುತ್ತದೆ; ಅದು ತೂರುವುದಕ್ಕೂ, ಶೋಧಿಸುವುದಕ್ಕೂ ಆಗದು. 12ಇಂಥಾ ಕೆಲಸಗಳಿಗೆ ಅನುಕೂಲಿಸದಂತೆ ನನ್ನ ಅಪ್ಪಣೆಯ ಮೇರೆಗೆ ಬಿರುಸಾಗಿ ಹೊಡೆಯುತ್ತದೆ; ಈಗ ನನ್ನ ಜನರಿಗೆ ನ್ಯಾಯದಂಡನೆಗಳನ್ನು ವಿಧಿಸುವೆನು” ಎಂಬುದೇ.
13ಇಗೋ, ಆ ಶತ್ರುವು ಮೇಘಗಳೋಪಾದಿಯಲ್ಲಿ ಬರುತ್ತಾನೆ, ಅವರ ರಥಗಳು ಬಿರುಗಾಳಿಯಂತಿವೆ, ಅವನ ಅಶ್ವಗಳು ಹದ್ದುಗಳಿಗಿಂತ ವೇಗವಾಗಿವೆ! ನಮ್ಮ ಗತಿಯನ್ನು ಏನು ಹೇಳೋಣ, ಹಾಳಾದೆವಲ್ಲಾ. 14ಯೆರೂಸಲೇಮೇ, ನಿನಗೆ ರಕ್ಷಣೆಯಾಗುವಂತೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ. ದುರಾಲೋಚನೆಗಳು ನಿನ್ನಲ್ಲಿ ಇನ್ನೆಷ್ಟರವರೆಗೆ ತಂಗಿರುವವು? 15ಆಹಾ, ದಾನ್ ನಗರದಿಂದ ಪ್ರಕಟಣೆಯ ಧ್ವನಿಯು ಕೇಳಿಬರುತ್ತದೆ, ಎಫ್ರಾಯೀಮಿನ ಬೆಟ್ಟದಲ್ಲಿಯೂ ಕೇಡನ್ನು ಸಾರುತ್ತದೆ. 16ಇಗೋ, ಜನಾಂಗಗಳಿಗೆ ಅರುಹಿರಿ, “ಮುತ್ತುವವರು ದೂರದೇಶದಿಂದ ಯೆರೂಸಲೇಮಿಗೆ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರುದ್ಧವಾಗಿ ದನಿ ಎತ್ತುತ್ತಾರೆ” ಎಂದು ಪ್ರಚುರಪಡಿಸಿರಿ. 17ಆ ನಗರವು ನನಗೆ ತಿರುಗಿಬಿದ್ದ ಕಾರಣ ಅದನ್ನು ಹೊಲಕಾಯುವವರಂತೆ ಸುತ್ತಿಕೊಂಡಿದ್ದಾರೆ ಎಂದು ಯೆಹೋವನು ನುಡಿಯುತ್ತಾನೆ. 18ನಿನ್ನ ನಡತೆಯೂ ನಿನ್ನ ಕೃತ್ಯಗಳೂ ಈ ಕಷ್ಟವನ್ನು ನಿನಗೆ ಒದಗಿಸಿವೆ, ಇದು ನಿನ್ನ ದುರ್ನೀತಿಯ ಫಲ, ಇದು ವಿಷವೇ; ಹೃದಯದವರೆಗೂ ಏರುತ್ತದೆ.
19ಹಾ, ನನ್ನ ಕರುಳು! ಕರುಳು! ಯಾತನೆಪಡುತ್ತದೆ; ಆಹಾ, ನನ್ನ ಗುಂಡಿಗೆಯ ಪಕ್ಕಗಳು! ನನ್ನ ಹೃದಯವು ನನ್ನೊಳಗೆ ತಳಮಳಗೊಂಡಿದೆ! ನಾನು ಬಾಯಿಮುಚ್ಚಿಕೊಂಡಿರಲಾರೆ; ನನ್ನ ಆತ್ಮವೇ, ನೀನು ತುತ್ತೂರಿಯ ಶಬ್ದವನ್ನೂ, ಯುದ್ಧದ ಘೋಷವನ್ನೂ ಕೇಳುತ್ತಿಯಲ್ಲಾ. 20ನಾಶದ ಮೇಲೆ ನಾಶವು, ಒಂದರ ಮೇಲೊಂದು ನಾಶದ ಸುದ್ದಿಬರುತ್ತಿದೆ; ದೇಶವೆಲ್ಲಾ ಹಾಳಾಯಿತು; ತಟ್ಟನೆ ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ಭಗ್ನವಾದವು. 21ನಾನು ಎಷ್ಟರವರೆಗೆ ಯುದ್ಧದ ಪತಾಕೆಗಳನ್ನು ನೋಡಲಿ, ಎಂದಿನ ತನಕ ತುತ್ತೂರಿಯ ಶಬ್ದವನ್ನು ಕೇಳಲಿ!
22ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು; ಮೂಢಸಂತತಿಯವರು, ಅವಿವೇಕಿಗಳು; ದುಷ್ಕಾರ್ಯದಲ್ಲಿ ನಿಪುಣರು, ಸತ್ಕಾರ್ಯವನ್ನು ಮಾಡಲು ಅರಿಯರು.
ಬರಲಿರುವ ವಿನಾಶದ ದೃಶ್ಯ
23ನಾನು ದಿವ್ಯಜ್ಞಾನದಿಂದ ನೋಡಿದೆನು, ಆಹಾ! ಭೂಲೋಕವು ಹಾಳುಪಾಳಾಗಿತ್ತು; ಆಕಾಶವನ್ನು ನೋಡಿದೆನು, ಅದರಲ್ಲಿ ಬೆಳಕೇ ಇರಲಿಲ್ಲ. 24ಪರ್ವತಗಳನ್ನು ನೋಡಿದೆನು, ಆಹಾ, ನಡುಗುತ್ತಿದ್ದವು, ಎಲ್ಲಾ ಗುಡ್ಡಗಳೂ ಅಲ್ಲಕಲ್ಲೋಲವಾಗಿದ್ದವು. 25ನಾನು ನೋಡಲಾಗಿ ಅಯ್ಯೋ, ಜನವೇ ಇರಲಿಲ್ಲ, ಆಕಾಶದ ಸಕಲ ಪಕ್ಷಿಗಳು ಹಾರಿಹೋಗಿದ್ದವು. 26ನಾನು ನೋಡಲಾಗಿ ಫಲವತ್ತಾದ ಭೂಮಿಯು ಕಾಡಾಗಿತ್ತು, ಅಯ್ಯೋ! ಅಲ್ಲಿನ ಊರುಗಳೆಲ್ಲಾ ರೋಷಾಗ್ನಿಯುಕ್ತನಾದ ಯೆಹೋವನ ಪ್ರತ್ಯಕ್ಷತೆಯಿಂದ ಬಿದ್ದುಹೋಗಿದ್ದವು. 27ಯೆಹೋವನು, “ದೇಶವೆಲ್ಲಾ ಬಟ್ಟಬರಿದಾಗುವುದು, ಆದರೆ ನಾನು ಸಂಪೂರ್ಣವಾಗಿ ಲಯಮಾಡೆನು. 28ಇದಕ್ಕಾಗಿ ಭೂಲೋಕವು ಪ್ರಲಾಪಿಸುವುದು, ಮೇಲೆ ಆಕಾಶವು ಕಪ್ಪಾಗುವುದು; ನಾನು ನುಡಿದಿದ್ದೇನೆ, ಪಶ್ಚಾತ್ತಾಪಪಡೆನು; ಇದರಿಂದ, ಹಿಂದೆಗೆಯನು” ಎಂದು ನುಡಿಯುತ್ತಾನೆ. 29ಪಟ್ಟಣದವರೆಲ್ಲರೂ ಸವಾರರ ಮತ್ತು ಬಿಲ್ಲುಗಾರರ ಆರ್ಭಟಕ್ಕೆ ಹೆದರಿ ಓಡುತ್ತಾರೆ; ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ, ಅತ್ತ ಬಂಡೆಗಳನ್ನು ಹತ್ತುತ್ತಾರೆ; ಪ್ರತಿಯೊಂದು ಪಟ್ಟಣವು ಯಾವ ನಿವಾಸಿಯೂ ಇಲ್ಲದೆ ನಿರ್ಜನವಾಗುತ್ತದೆ. 30ಎಲೈ, ನಗರವೇ, ನೀನು ಸೂರೆಯಾಗುವಾಗ ಏನು ಮಾಡುವಿ? ನೀನು ರಕ್ತಾಂಬರವನ್ನು ಹೊದ್ದು ಸುವರ್ಣಾಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡು, ನೀಲಾಂಜನ ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು, ನಿನ್ನನ್ನು ಶೃಂಗಾರಿಸಿಕೊಳ್ಳುವುದು ವ್ಯರ್ಥ. ನಿನ್ನೊಂದಿಗೆ ವ್ಯಭಿಚಾರ ಮಾಡಿದವರೇ ನಿನ್ನನ್ನು ಧಿಕ್ಕರಿಸಿ ನಿನ್ನ ಪ್ರಾಣವನ್ನೇ ಹುಡುಕುತ್ತಾರೆ. 31ಚೀಯೋನ್ ನಗರವು ಬೇನೆತಿನ್ನುವವಳಂತೆ, ಚೊಚ್ಚಲಹೆರಿಗೆಯ ವೇದನೆಯನ್ನು ಅನುಭವಿಸುವವಳ ಹಾಗೆ ಕೂಗಿಕೊಳ್ಳುವುದನ್ನು ನಾನು ಕೇಳಿದ್ದೇನೆ; ಏದುಸಿರುಬಿಡುತ್ತಾ ಕೈಚಾಚಿ, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ಕೊಲೆಗಾರರಿಂದ ನನ್ನ ಪ್ರಾಣವು ಬಳಲುತ್ತದೆ” ಎಂದು ಅರಚಿಕೊಳ್ಳುತ್ತಾಳೆ.
Currently Selected:
ಯೆರೆ 4: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.