ಯೆರೆ 3
3
ಇಸ್ರಾಯೇಲಿನ ವಿಶ್ವಾಸಘಾತ
1ಯೆಹೋವನು ಹೀಗೆನ್ನುತ್ತಾನೆ, “ಗಂಡನು ತ್ಯಜಿಸಿದವಳು ಅವನಿಂದ ಹೊರಟು ಮತ್ತೊಬ್ಬನ ಹೆಂಡತಿಯಾದ ಮೇಲೆ, ಅವಳನ್ನು ಮೊದಲ ಗಂಡನು ತಿರುಗಿ ಸೇರಿಸಿಕೊಂಡಾನೇ? ಸೇರಿಸಿಕೊಂಡರೆ ಆ ದೇಶವು ಕೇವಲ ಅಪವಿತ್ರವಾಗಿ ಹೋಗುವುದಲ್ಲವೇ?
ಹೀಗಿರಲು ಬಹುಮಂದಿಯೊಡನೆ ವ್ಯಭಿಚಾರ ಮಾಡಿದ ನೀನು ನನ್ನ ಬಳಿಗೆ ಹಿಂದಿರುಗಿ ಬರುತ್ತಿಯಾ?
2ಕಣ್ಣೆತ್ತಿ ಬೋಳು ಗುಡ್ಡಗಳನ್ನು ನೋಡು, ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ?
ಅರಬಿಯನು ಅಡವಿಯಲ್ಲಿ ಹೊಂಚುಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚು ಹಾಕುತ್ತಾ ಕುಳಿತಿದ್ದಿ;
ನಿನ್ನ ವ್ಯಭಿಚಾರದಿಂದಲೂ, ನಿನ್ನ ಕೆಟ್ಟತನದಿಂದಲೂ ದೇಶವನ್ನು ಅಪವಿತ್ರಮಾಡಿದ್ದಿ.
3ಆದಕಾರಣ ಹದಮಳೆಗೆ ಅಡ್ಡಿಯಾಯಿತು, ಹಿಂಗಾರೂ ಆಗಲಿಲ್ಲ; ಆದರೂ ನೀನು ವ್ಯಭಿಚಾರಿಯಾಗಿ ನಾಚಿಕೆಗೆಟ್ಟಿದ್ದಿ.
4ಈಗ ನನ್ನನ್ನು, ‘ನನ್ನ ತಂದೆ, ನನ್ನ ಯೌವನದ ಆಪ್ತನು’ ಎಂದು ಕರೆಯುತ್ತೀಯಲ್ಲಾ.
5‘ಆತನು ನಿತ್ಯ ಕೋಪಮಾಡುವವನೋ? ಕೊನೆಯ ತನಕ ಕೋಪವನ್ನು ಇಟ್ಟುಕೊಳ್ಳುವನೋ?’ ಎಂದು ಅಂದುಕೊಳ್ಳುತ್ತಿದ್ದಿ. ಇಗೋ, ನೀನು ಹೀಗೆ ಮಾತನಾಡಿದರೇನು? ಅನೇಕ ದುಷ್ಕೃತ್ಯಗಳನ್ನು ನಡೆಸಿ ಕೃತಾರ್ಥಳಾಗಿರುವೆ.” ಎಂಬುದೇ.
ಭ್ರಷ್ಟಳಾದ ಇಸ್ರಾಯೇಲಿನ ಪಾಪಕ್ಕಿಂತ ದ್ರೋಹಿಯಾದ ಯೆಹೂದದ ಪಾಪವು ಹೆಚ್ಚು
6ಅರಸನಾದ ಯೋಷೀಯನ ಕಾಲದಲ್ಲಿ ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ಮಾಡಿದ್ದನ್ನು ನೋಡಿದೆಯಾ? ಅವಳು ಎತ್ತರವಾದ ಎಲ್ಲಾ ಗುಡ್ಡಗಳನ್ನು ಹತ್ತಿ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೆ ಹೋಗಿ ವ್ಯಭಿಚಾರಿಯಾಗಿ ನಡೆದಳಷ್ಟೆ. 7ಅವಳು ಇವುಗಳನ್ನೆಲ್ಲಾ ನಡೆಸಿದ ಮೇಲೆ ನನ್ನ ಬಳಿಗೆ ಪುನಃ ಬಂದಾಳು ಅಂದುಕೊಂಡೆನು. ಆದರೆ ಬರಲಿಲ್ಲ. ಆಗ ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ಇದನ್ನು ನೋಡಿದಳು. 8ಭ್ರಷ್ಟಳಾದ ಇಸ್ರಾಯೇಲ್ ನನಗೆ ವಿಮುಖಳಾಗಿ ವ್ಯಭಿಚಾರ ಮಾಡಿದ ಕಾರಣದಿಂದಲೇ ನಾನು ಅವಳನ್ನು ನಿರಾಕರಿಸಿ, ತ್ಯಾಗಪತ್ರ ಕೊಟ್ಟದ್ದನ್ನು ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನೋಡಿಯೂ, ಅಂಜದೆಯೂ ತಾನೂ ಹೋಗಿ ವ್ಯಭಿಚಾರವನ್ನು ನಡೆಸಿದಳು. 9ಕಲ್ಲು ಮರಗಳನ್ನು ಪೂಜಿಸಿ ವ್ಯಭಿಚಾರ ಮಾಡುವುದು ಲಘುವೆಂದು ಭಾವಿಸಿಕೊಂಡ ಆಕೆ ತನ್ನ ವ್ಯಭಿಚಾರದಿಂದ ದೇಶವನ್ನು ಅಪವಿತ್ರಪಡಿಸಿದಳು. 10ಇಸ್ರಾಯೇಲಿಗೆ ಇಷ್ಟು ದಂಡನೆಯಾದರೂ ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನನ್ನ ಕಡೆಗೆ ಪೂರ್ಣಮನದಿಂದಲ್ಲ, ಕಪಟದಿಂದಲೇ ನನ್ನ ಕಡೆ ತಿರುಗಿಕೊಂಡಿದ್ದಾಳೆ” ಎಂಬುದೇ ಯೆಹೋವನಾದ ನನ್ನ ನುಡಿ.
11ಮತ್ತು ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ. 12ನೀನು ಹೋಗಿ ಉತ್ತರದಿಕ್ಕಿಗೆ ಈ ಮಾತುಗಳನ್ನು ಸಾರು, ‘ಯೆಹೋವನು ಹೀಗೆನ್ನುತ್ತಾನೆ, ಭ್ರಷ್ಟಳಾದ ಇಸ್ರಾಯೇಲೇ, ಹಿಂದಿರುಗು, ನಾನು ಕೋಪದ ಮುಖದಿಂದ ನಿನ್ನನ್ನು ನೋಡೆನು, ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ. 13ಇದೊಂದನ್ನು ಮಾಡು, ನೀನು ನೋಡಿದ ಕಡೆಯೆಲ್ಲಾ ತಿರುಗುತ್ತಾ, ಸೊಂಪಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಅನ್ಯರನ್ನು ಸೇರಿ, ನನ್ನ ಮಾತನ್ನು ಕೇಳದೆ, ನಿನ್ನ ದೇವರಾದ ಯೆಹೋವನೆಂಬ ನನಗೆ ದ್ರೋಹ ಮಾಡಿದ್ದಿ ಎಂಬುವುದನ್ನು ಒಪ್ಪಿಕೋ’ ಇದೇ ಯೆಹೋವನ ನುಡಿ.
14ಭ್ರಷ್ಟರಾದ ಮಕ್ಕಳೇ, ತಿರುಗಿಕೊಳ್ಳಿರಿ, ನಾನು ನಿಮಗೆ ಪತಿ. ಒಂದು ಪಟ್ಟಣಕ್ಕೆ ಒಬ್ಬನಂತೆಯೂ, ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರೆತರುವೆನು.
15ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು; ಅವರು ನಿಮ್ಮನ್ನು ಜ್ಞಾನ ಮತ್ತು ವಿವೇಕಗಳಿಂದ ಪೋಷಿಸುವರು.
16ನೀವು ದೇಶದಲ್ಲಿ ಹೆಚ್ಚಿ ಅಭಿವೃದ್ಧಿಗೆ ಬಂದ ಕಾಲದಲ್ಲಿ, ‘ಯೆಹೋವನ ನಿಬಂಧನ ಮಂಜೂಷ’ ಇದರ ಪ್ರಸ್ತಾವವಿರದು. ಅದು ಜ್ಞಾಪಕಕ್ಕೆ ಬಾರದು, ಯಾರೂ ಸ್ಮರಿಸರು, ಅದು ಇಲ್ಲವಲ್ಲಾ ಎಂದು ದುಃಖಿಸರು, ಹೊಸದಾಗಿ ಕಲ್ಪಿಸಿಕೊಳ್ಳರು” ಇದು ಯೆಹೋವನ ನುಡಿ.
17ಆ ಕಾಲದಲ್ಲಿ ಯೆರೂಸಲೇಮನ್ನು ಯೆಹೋವನ ಸಿಂಹಾಸನವೆಂದು ಕರೆಯುವರು; ಯೆಹೋವನ ನಾಮಮಹತ್ವದ ಸ್ಥಾನವಾದ ಯೆರೂಸಲೇಮಿಗೆ ಸಕಲ ಜನಾಂಗಗಳವರು ನೆರೆದು ಬರುವರು; ಅವರು ಇನ್ನು ಮೇಲೆ ತಮ್ಮ ದುಷ್ಟ ಹೃದಯದ ಹಟದಂತೆ ನಡೆಯರು.
18ಆ ಕಾಲದಲ್ಲಿ ಯೆಹೂದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ನಡೆಯುವುದು. ಎರಡೂ ಸೇರಿ ನಾನು ನಿಮ್ಮ ಪೂರ್ವಿಕರಿಗೆ ಬಾಧ್ಯವಾಗಿ ದಯಪಾಲಿಸಿದ ದೇಶಕ್ಕೆ ಉತ್ತರ ಸೀಮೆಯನ್ನು#3:18 ಉತ್ತರ ಸೀಮೆಯನ್ನು ಇಲ್ಲಿ ಉತ್ತರದ ಸೀಮೆಯು ಅಶ್ಶೂರ್ಯ ಮತ್ತು ಬಾಬೆಲ್ ಅನ್ನು ಒಳಗೊಂಡಿದೆ. ಇಸ್ರಾಯೇಲರನ್ನು ಮತ್ತು ಯೆಹೂದ್ಯರನ್ನು ಸೆರೆವಾಸಿಗಳಾಗಿ ಈ ಸೀಮೆಗಳಿಗೆ ತೆಗೆದುಕೊಂಡು ಹೋಗಲಾಯಿತು. ಬಿಟ್ಟು ಬರುವವು.
ಪಶ್ಚಾತ್ತಾಪ ಪಡುವ ತನ್ನ ಜನರನ್ನು ಯೆಹೋವನು ಸ್ವೀಕರಿಸುವನು
19“ಇಸ್ರಾಯೇಲೇ, ನಾನು ಎಷ್ಟೋ ಸಂತೋಷದಿಂದ ಗಂಡು ಮಕ್ಕಳೊಳಗೆ ನಿನ್ನನ್ನೂ ಆರಿಸಿಕೊಂಡು, ನಿನಗೆ ಮನೋಹರವಾದ ದೇಶವನ್ನು ಅಂದರೆ ಸಮಸ್ತ ಜನಾಂಗಗಳ ಬಾಧ್ಯತೆಗಳಲ್ಲಿ ರಮಣೀಯವಾದದ್ದನ್ನು ಕೊಡುವೆನು; ನೀನು ನನ್ನ ಅನುಸರಣೆಯನ್ನು ಬಿಟ್ಟು ಓರೆಯಾಗದೆ ನನ್ನನ್ನು ‘ತಂದೆ’ ಎನ್ನುವಿ ಅಂದುಕೊಂಡೆನು.
20ಆದರೆ ಇಸ್ರಾಯೇಲ್ ವಂಶದವರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹವನ್ನು ಮಾಡಿದ್ದೀರಿ” ಎಂದು ಯೆಹೋವನು ನುಡಿಯುತ್ತಾನೆ.
21ಆಹಾ, ಬೋಳುಗುಡ್ಡಗಳಲ್ಲಿ ಒಂದು ಶಬ್ದ! ತಾವು ಡೊಂಕು ದಾರಿಯನ್ನು ಹಿಡಿದು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟಿದ್ದೇವೆಂದು ಇಸ್ರಾಯೇಲರು ಕಣ್ಣೀರು ಸುರಿಸಿ ದೇವರ ಕೃಪೆಯನ್ನು ಬೇಡುತ್ತಿದ್ದಾರಲ್ಲಾ.
22“ಭ್ರಷ್ಟರಾದ ಮಕ್ಕಳೇ, ಹಿಂದಿರುಗಿರಿ, ನಿಮ್ಮ ಭ್ರಷ್ಟತ್ವವನ್ನು ಪರಿಹರಿಸುವೆನು” ಎಂದು ಯೆಹೋವನು ನುಡಿಯುತ್ತಾನೆ.
ಅದಕ್ಕೆ ಜನರು, “ಇಗೋ, ನಿನ್ನ ಬಳಿಗೆ ಬಂದೆವು, ನೀನು ಯೆಹೋವನು, ನಮ್ಮ ದೇವರು.
23ನಿಶ್ಚಯವಾಗಿ ಗುಡ್ಡಗಳಿಂದಲೂ ಬೆಟ್ಟಗಳ ಜಾತ್ರೆಯ ಗದ್ದಲದಿಂದಲೂ ಮೋಸವಾಯಿತು; ನಿಜನಿಜವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವನಲ್ಲಿ ನೆಲೆಗೊಂಡಿದೆ.
24ನಮ್ಮ ಪೂರ್ವಿಕರು ದುಡಿದದ್ದನ್ನೂ, ಅವರ ದನ ಮತ್ತು ಕುರಿಗಳನ್ನೂ
ಅವರ ಗಂಡು, ಹೆಣ್ಣು ಮಕ್ಕಳನ್ನೂ ಬಾಳ್ ದೇವತೆಯು ನಮ್ಮ ಬಾಲ್ಯಾರಭ್ಯ ನುಂಗುತ್ತಾ ಬಂದಿದೆ.
25ನಾವೇ ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ, ನಮ್ಮ ನಾಚಿಕೆಯು ನಮ್ಮನ್ನು ಮುಚ್ಚಿಬಿಡಲಿ.
ನಾವು ಮತ್ತು ನಮ್ಮ ಪೂರ್ವಿಕರೂ ಬಾಲ್ಯದಿಂದ ಇಂದಿನವರೆಗೂ ನಮ್ಮ ದೇವರಾದ ಯೆಹೋವನಿಗೆ ಪಾಪಮಾಡುತ್ತಾ ಬಂದಿದ್ದೇವಷ್ಟೆ. ನಮ್ಮ ದೇವರಾದ ಯೆಹೋವನ ಮಾತನ್ನು ನಾವು ಕೇಳಲೇ ಇಲ್ಲ” ಎಂದು ಮೊರೆಯಿಡುತ್ತಾರೆ.
Currently Selected:
ಯೆರೆ 3: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.