YouVersion Logo
Search Icon

ನ್ಯಾಯ 8

8
ಎಫ್ರಾಯೀಮ್ಯರು ಗಿದ್ಯೋನನೊಡನೆ ಕಲಹಮಾಡಿದ್ದು
1ಅನಂತರ ಎಫ್ರಾಯೀಮ್ಯರು ಗಿದ್ಯೋನನಿಗೆ, “ನೀನು ಹೀಗೆ ಯಾಕೆ ಮಾಡಿದಿ? ಮಿದ್ಯಾನ್ಯರೊಡನೆ ಯುದ್ಧಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರಕೋಪದಿಂದ ಜಗಳವಾಡಿದರು. 2ಆಗ ಅವನು ಅವರಿಗೆ, “ನೀವು ಮಾಡಿದ ಕಾರ್ಯಕ್ಕೆ ಸಮಾನವಾಗುವಂತದ್ದು ನಾನೇನು ಮಾಡಿದೆ? ಅಬೀಯೆಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ, ಎಫ್ರಾಯೀಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ? 3ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ನಾಯಕರಾದ ಓರೇಬ್ ಜೇಬರನ್ನು ಒಪ್ಪಿಸಿ ಕೊಟ್ಟಿದ್ದಾನಲ್ಲಾ! ಇದಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದ್ದೇನೆ?” ಎಂದನು. ಈ ಮಾತುಗಳನ್ನು ಕೇಳಿದಾಗ ಅವರ ಸಿಟ್ಟಿಳಿಯಿತು.
ಗಿದ್ಯೋನನು ಜೆಬಹ, ಚಲ್ಮುನ್ನರನ್ನು ಕೊಂದದ್ದು
4ಗಿದ್ಯೋನನು ಅವನ ಸಂಗಡ ಇದ್ದ ಮುನ್ನೂರು ಜನರು ಬಹಳ ದಣಿದವರಾಗಿದ್ದರೂ, ಹಿಂದಟ್ಟುತ್ತಾ ಯೊರ್ದನನ್ನು ದಾಟಿ ಸುಖೋತಿಗೆ ಬಂದರು. 5ಗಿದ್ಯೋನನು ಸುಖೋತಿನವರಿಗೆ, “ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ, ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ, ಚಲ್ಮುನ್ನರನ್ನು ಹಿಂದಟ್ಟುತ್ತಾ ಇದ್ದೇನೆ” ಅಂದನು. 6ಆದರೆ ಸುಖೋತಿನ ಮುಖಂಡರು ಅವನಿಗೆ, “ನಾವು ನಿನ್ನ ಸೈನಿಕರಿಗೆ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ನೀನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ?” ಎಂದು ಉತ್ತರಕೊಟ್ಟರು. 7ಆಗ ಗಿದ್ಯೋನನು ಅವರಿಗೆ, “ಒಳ್ಳೇದು, ಯೆಹೋವನು ಜೆಬಹ, ಚಲ್ಮುನ್ನರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಕಾಡಿನಲ್ಲಿರುವ ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸುವೆನು” ಎಂದು ಹೇಳಿದನು. 8ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನವರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ಉತ್ತರಕೊಟ್ಟರು. 9ಗಿದ್ಯೋನನು ಅವರಿಗೆ, “ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ #8:9 ಸಾಮಾನ್ಯವಾಗಿ ಇಸ್ರಾಯೇಲಿನಲ್ಲಿ ಬುರುಜನ್ನು ಪಟ್ಟಣದ ಪೌಳಿಗೋಡೆಗಳ ಮೇಲೆ ಕಟ್ಟುತ್ತಿದ್ದರು.ಬುರುಜನ್ನು ಕೆಡವಿಬಿಡುವೆನು” ಅಂದನು.
10ಜೆಬಹ, ಚಲ್ಮುನ್ನರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಮೂಡಣದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಭಟರು ಹತರಾಗಿ ಉಳಿದವರು ಇಷ್ಟೇ ಮಂದಿ. 11ಗಿದ್ಯೋನನು ಕಾಡುಗೊಲ್ಲರ ಪ್ರದೇಶಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳುಕೊಂಡಿದ್ದ ಆ ಪಾಳೆಯದ ಮೇಲೆ ಬಿದ್ದನು. 12ಜೆಬಹನೂ ಮತ್ತು ಚಲ್ಮುನ್ನನೂ ಓಡಿಹೋಗಲಾಗಿ, ಅವರನ್ನು ಹಿಂದಟ್ಟಿ ಹಿಡಿದು, ಅವರ ಸೈನ್ಯವನ್ನು ಚದರಿಸಿಬಿಟ್ಟನು.
13ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದು, 14ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು, ಆ ಊರಿನ ಮುಖಂಡರೂ, ಹಿರಿಯರೂ ಯಾರಾರೆಂದು ವಿಚಾರಿಸಲು ಅವನು ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರೆದುಕೊಟ್ಟನು. 15ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ, “ನಾವು ದಣಿದಿರುವ ನಿನ್ನ ಸೈನಿಕರಿಗೋಸ್ಕರ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ಕೈಕಟ್ಟಿ ಸ್ವಾಧೀನಮಾಡಿಕೊಂಡಿದ್ದೀಯೋ? ಎಂದು ನನ್ನನ್ನು ನಿಂದಿಸಿದಿರಲ್ಲಾ; 16ನೋಡಿರಿ, ಅವರು ಇಲ್ಲಿರುತ್ತಾರೆ” ಎಂದು ಹೇಳಿ ಊರಿನ ಹಿರಿಯರನ್ನೂ, ಮುಖಂಡರನ್ನೂ, ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿಕಲಿಸಿದನು. 17ಮತ್ತು ಪೆನೂವೇಲಿನ ಬುರುಜನ್ನು ಕೆಡವಿಬಿಟ್ಟು ಆ ಊರಿನ ಜನರನ್ನು ಸಂಹರಿಸಿದನು.
18ಅವನು ಜೆಬಹ, ಚಲ್ಮುನ್ನರನ್ನು, “ನೀವು ತಾಬೋರದಲ್ಲಿ ಕೊಂದುಹಾಕಿದ ಮನುಷ್ಯರು ಹೇಗಿದ್ದರು?” ಎಂದು ಕೇಳಲಾಗಿ ಅವರು ಅವನಿಗೆ, “ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜಪುತ್ರರಂತಿದ್ದರು” ಎಂದು ಉತ್ತರಕೊಟ್ಟರು. 19ಆಗ ಅವನು, “ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಯೆಹೋವನಾಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿ 20ತನ್ನ ಹಿರೀ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು” ಅಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ. 21ಆಗ ಜೆಬಹನೂ ಮತ್ತು ಚಲ್ಮುನ್ನನೂ ಗಿದ್ಯೋನನಿಗೆ, “ನೀನೇ ಎದ್ದು ಬಂದು ನಮ್ಮನ್ನು ಕೊಂದುಹಾಕು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದಲ್ಲಾ” ಅನ್ನಲು ಅವನೆದ್ದು ಜೆಬಹ, ಚಲ್ಮುನ್ನರನ್ನು ಕೊಂದುಹಾಕಿ, ಅವರ ಒಂಟೆಗಳ ಕೊರಳಿನಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
ಗಿದ್ಯೋನನ ಏಫೋದ್
22ತರುವಾಯ ಇಸ್ರಾಯೇಲ್ಯರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದ್ದೀಯಲ್ಲಾ; ನೀನೂ, ನಿನ್ನ ಮಗನೂ, ಮೊಮ್ಮಗನೂ ವಂಶಪಾರಂಪರ್ಯವಾಗಿ ನಮ್ಮ ಮೇಲೆ ಅರಸರಾಗಿರಬೇಕು” ಎಂದರು. 23ಅವನು ಅವರಿಗೆ, “ನಾನಾಗಲಿ, ನನ್ನ ಮಗನಾಗಲಿ ನಿಮ್ಮನ್ನು ಆಳುವುದಿಲ್ಲ; ಯೆಹೋವನೇ ನಿಮ್ಮ ಅರಸನಾಗಿರುವನು. 24ಆದರೆ ನಿಮಗೆ ಒಂದು ಬಿನ್ನಹ ಮಾಡುತ್ತೇನೆ; ಪ್ರತಿಯೊಬ್ಬನು ತಾನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಲಿ” ಅಂದನು. ಮಿದ್ಯಾನ್ಯರು ಇಷ್ಮಾಯೇಲ್ಯರಾಗಿದ್ದರಿಂದ ಅವರ ಬಳಿಯಲ್ಲಿ ಬಂಗಾರದ ಓಲೆಗಳು ಇದ್ದವು. 25ಗಿದ್ಯೋನನ ಬಿನ್ನಹಕ್ಕೆ ಇಸ್ರಾಯೇಲ್ಯರು, “ನಾವು ಸಂತೋಷದಿಂದ ಕೊಡುವೆವು” ಎಂದು ಹೇಳಿ, ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಓಲೆಗಳನ್ನು ಇಟ್ಟುಬಿಟ್ಟರು. 26ಗಿದ್ಯೋನನಿಗೆ ಮೊದಲೇ ದೊರಕಿದ್ದ ಅರ್ಧಚಂದ್ರಾಕಾರದ ಆಭರಣ, ಕುಂಡಲ, ಮಿದ್ಯಾನ್ ರಾಜರು ಹೊದ್ದುಕೊಂಡಿದ್ದ ರಕ್ತಾಂಬರ, ಅವರ ಒಂಟೆಗಳ ಕಂಠಮಾಲೆ, ಇವುಗಳ ಹೊರತಾಗಿ ಅವನು ಇಸ್ರಾಯೇಲ್ಯರಿಂದ ಕೇಳಿ ತೆಗೆದುಕೊಂಡ ಓಲೆಗಳ ಬಂಗಾರವೇ ಸಾವಿರದ ಏಳುನೂರು ತೊಲೆ ತೂಕವಾಗಿತ್ತು. 27ಈ ಬಂಗಾರದಿಂದ ಗಿದ್ಯೋನನು ಒಂದು #8:27 ವಿಮೋ 20 ಅಧ್ಯಾಯವನ್ನು ನೋಡಿರಿ.ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಆದ್ದರಿಂದ ಇಸ್ರಾಯೇಲರೆಲ್ಲರೂ ಅದನ್ನು ಪೂಜಿಸುತ್ತಿದ್ದುದರಿಂದ ದೈವದ್ರೋಹಿಗಳಾದರು; ಅದು ಗಿದ್ಯೋನನಿಗೂ ಅವನ ಮನೆಯವರಿಗೂ ಉರುಲಾಯಿತು. 28ಮಿದ್ಯಾನ್ಯರು ಇಸ್ರಾಯೇಲ್ಯರ ಮುಂದೆ ಬಹಳವಾಗಿ ತಗ್ಗಿಸಲ್ಪಟ್ಟರು; ಅವರು ಪುನಃ ತಲೆಯೆತ್ತಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಲ್ವತ್ತು ವರ್ಷಗಳ ಕಾಲ ದೇಶದಲ್ಲಿ ಸಮಾಧಾನವಿತ್ತು.
ಗಿದ್ಯೋನನ ಮರಣ
29ಯೋವಾಷನ ಮಗ #8:29 ಗಿದ್ಯೋನನ ಮತ್ತೊಂದು ಹೆಸರು.ಯೆರುಬ್ಬಾಳನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು. 30ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು. 31ಅವನಿಗೆ ಶೆಕೆಮಿನಲ್ಲಿದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗನು ಹುಟ್ಟಲು, ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು. 32ಯೋವಾಷನ ಮಗನಾದ ಗಿದ್ಯೋನನು ದಿನತುಂಬಿದ ಮುದುಕನಾಗಿ ಮರಣ ಹೊಂದಲು, ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿಯು ಅವನ ತಂದೆಯಾದ ಯೋವಾಷನದಾಗಿತ್ತು. 33ಗಿದ್ಯೋನನು ಸತ್ತನಂತರ ಇಸ್ರಾಯೇಲರು ದೈವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್‌ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು. 34ಸುತ್ತಣ ಎಲ್ಲಾ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಯೆಹೋವನನ್ನು ಮರೆತುಬಿಟ್ಟರು. 35ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ಅವರು ನೆನಸಲಿಲ್ಲ; ಅವನ ಮನೆಯವರಿಗೆ ದಯೆತೋರಿಸಲಿಲ್ಲ.

Currently Selected:

ನ್ಯಾಯ 8: IRVKan

Highlight

Share

Copy

None

Want to have your highlights saved across all your devices? Sign up or sign in

Video for ನ್ಯಾಯ 8