ನ್ಯಾಯ 7
7
ಗಿದ್ಯೋನನು ಮಿದ್ಯಾನ್ಯರನ್ನು ಸೋಲಿಸಿದ್ದು
1ಆನಂತರ ಯೆರುಬ್ಬಾಳನೆನಿಸಿಕೊಳ್ಳುವ ಗಿದ್ಯೋನನೂ, ಅವನ ಸಂಗಡ ಇದ್ದ ಜನರೂ ಬೆಳಿಗ್ಗೆ ಎದ್ದು ಹೊರಟು ಹೋಗಿ ಹರೋದಿನ ಬುಗ್ಗೆಯ ಬಳಿಯಲ್ಲಿ ಬಿಡಾರ ಹಾಕಿಕೊಂಡರು. ಇವರ ಉತ್ತರದಿಕ್ಕಿನಲ್ಲಿ ಮೋರೆಗುಡ್ಡದ ಹಿಂದಿನ ತಗ್ಗಿನಲ್ಲಿ ಮಿದ್ಯಾನ್ಯರ ದಂಡಿಳಿದಿತ್ತು.
2ಆಗ ಯೆಹೋವನು ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಹೆಚ್ಚಾಗಿದ್ದಾರೆ; ಇವರ ಕೈಗೆ ಮಿದ್ಯಾನ್ಯರನ್ನು ಒಪ್ಪಿಸುವುದು ನನಗೆ ಸರಿಯಾಗಿ ಕಾಣುವುದಿಲ್ಲ. ಒಪ್ಪಿಸಿಕೊಟ್ಟರೆ ಸ್ವಹಸ್ತದಿಂದಲೇ ನಮಗೆ ರಕ್ಷಣೆಯುಂಟಾಯಿತೆಂದು ಹೆಚ್ಚಳಪಟ್ಟು ನನ್ನನ್ನು ಅಲಕ್ಷ್ಯಮಾಡಾರು. 3ಆದುದರಿಂದ ಎಲ್ಲಾ ಜನರಿಗೆ ಕೇಳಿಸುವಂತೆ, ‘ಧೈರ್ಯವಿಲ್ಲದವರೂ, ಅಂಜುವವರೂ ಈ ಗಿಲ್ಯಾದ್ ಪರ್ವತವನ್ನು ಬಿಟ್ಟು ಮನೆಗೆ ಹೋಗಲಿ ಎಂದು ಪ್ರಕಟಿಸು’” ಅಂದನು. ಹಾಗೆ ಮಾಡಲು ಇಪ್ಪತ್ತೆರಡು ಸಾವಿರ ಮಂದಿ ಹಿಂದಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.
4ಯೆಹೋವನು ತಿರುಗಿ ಗಿದ್ಯೋನನಿಗೆ, “ನಿನ್ನ ಬಳಿಯಲ್ಲಿರುವ ಜನರು ಇನ್ನೂ ಹೆಚ್ಚಾಗಿದ್ದಾರೆ; ನೀನು ಅವರನ್ನು ಹಳ್ಳಕ್ಕೆ ಕರೆದುಕೊಂಡು ಹೋಗು; ನಾನು, ಅಲ್ಲಿ ಈ ಜನರ ಸಂಖ್ಯೆಯನ್ನು ಕಡಿಮೆಮಾಡಿ ನಿನಗೆ ಕೊಡುವೆನು. ಯಾರು ನಿನ್ನ ಸಂಗಡ ಹೋಗಬಹುದೆಂದು ಹೇಳುವೆನೋ ಅವರು ಮಾತ್ರ ಹೋಗಲಿ; ಯಾರಿಗೆ ಹೋಗಬಾರದೆಂದು ಹೇಳುವೆನೋ ಅವರು ಹೋಗದಿರಲಿ” ಅಂದನು. 5ಗಿದ್ಯೋನನು ಜನರನ್ನು ಹಳ್ಳಕ್ಕೆ ಕರೆದುಕೊಂಡು ಬಂದಾಗ ಯೆಹೋವನು ಅವನಿಗೆ, “ನಾಯಿಯಂತೆ ನೀರನ್ನು ನಾಲಿಗೆಯಿಂದ ನೆಕ್ಕುವವರನ್ನೂ, ಮೊಣಕಾಲೂರಿ ಕುಡಿಯುವವರನ್ನೂ ಬೇರೆ ಬೇರೆಯಾಗಿ ನಿಲ್ಲಿಸು” ಎಂದು ಹೇಳಿದನು. 6ಕೈಯಿಂದ ನೀರನ್ನು ಬಾಯಿಗೆ ತೆಗೆದುಕೊಂಡು ನೆಕ್ಕಿಕುಡಿದವರ ಸಂಖ್ಯೆ ಮುನ್ನೂರು. ಇತರ ಜನರು ಮೊಣಕಾಲೂರಿ ಕುಡಿದವರು. 7ಆಗ ಯೆಹೋವನು ಗಿದ್ಯೋನನಿಗೆ, “ನೀರನ್ನು ನೆಕ್ಕಿಕುಡಿದ ಆ ಮುನ್ನೂರು ಜನರಿಂದಲೇ ನಿಮಗೆ ಜಯವನ್ನುಂಟುಮಾಡಿ ಮಿದ್ಯಾನ್ಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ” ಎಂದು ಆಜ್ಞಾಪಿಸಿದನು. 8ಗಿದ್ಯೋನನು ಆ ಮುನ್ನೂರು ಜನರನ್ನು ಇಟ್ಟುಕೊಂಡು ಉಳಿದ ಇಸ್ರಾಯೇಲ್ಯರನ್ನು ಅವರವರ ಗುಡಾರಗಳಿಗೆ ಕಳುಹಿಸಿದನು. ಕಳುಹಿಸುವಾಗ ಅವರ ಹತ್ತಿರ ಇದ್ದ ಆಹಾರವನ್ನೂ, ಕೊಂಬುಗಳನ್ನೂ ತನ್ನ ಜನರಿಗೋಸ್ಕರ ತೆಗೆದುಕೊಂಡನು. ಮಿದ್ಯಾನ್ಯರ ದಂಡು ಕೆಳಗೆ ತಗ್ಗಿನಲ್ಲಿ ಇಳಿದುಕೊಂಡಿತ್ತು.
9ಅದೇ ದಿನದ ರಾತ್ರಿಯಲ್ಲಿ ಯೆಹೋವನು ಅವನಿಗೆ, “ನೀನು ಎದ್ದು ಹೋಗಿ, ಶತ್ರುಗಳ ಪಾಳೆಯದ ಮೇಲೆ ಬೀಳು. ಅದನ್ನು ನಿನಗೆ ಒಪ್ಪಿಸಿಕೊಡುತ್ತೇನೆ. 10ಆದರೆ ನೀನು ಅವರ ಮೇಲೆ ಬೀಳುವುದಕ್ಕೆ ಹೆದರುತ್ತೀಯಾದರೆ ಮೊದಲು ನಿನ್ನ ಸೇವಕನಾದ ಪುರನ ಸಂಗಡ ಅಲ್ಲಿಗೆ ಹೋಗಿ ಅವರು ಮಾತನಾಡಿಕೊಳ್ಳುವುದನ್ನು ಲಾಲಿಸು; 11ಆಗ ಅವರ ಮೇಲೆ ಬೀಳುವುದಕ್ಕೆ ನಿನಗೆ ಧೈರ್ಯಬರುವುದು” ಅಂದನು. ಗಿದ್ಯೋನನು ಅದರಂತೆಯೇ ತನ್ನ ಸೇವಕನಾದ ಪುರನ ಸಂಗಡ ಶತ್ರುಸೈನಿಕರ ಪಾಳೆಯದ ಕಡೇ ಭಾಗಕ್ಕೆ ಹೋದನು. 12ಮಿದ್ಯಾನ್ಯರೂ, ಅಮಾಲೇಕ್ಯರೂ, ಮೂಡಣ ದೇಶದವರೂ ಮಿಡತೆಗಳಂತೆ ಗುಂಪಾಗಿ ತಗ್ಗಿನಲ್ಲಿ ಇಳಿದುಕೊಂಡಿದ್ದರು. ಅವರ ಒಂಟೆಗಳು ಸಮುದ್ರತೀರದ ಮರಳಿನಂತೆ ಅಸಂಖ್ಯವಾಗಿದ್ದವು. 13ಗಿದ್ಯೋನನು ಬಂದಾಗ ಅವರಲ್ಲೊಬ್ಬನು ತನ್ನ ಜೊತೆಗಾರನಿಗೆ ಒಂದು ಕನಸನ್ನು ತಿಳಿಸುತ್ತಿದ್ದನು. ಅವನು, “ಇಗೋ, ನಾನು ಒಂದು ಕನಸು ಕಂಡೆನು; ಅದರಲ್ಲಿ ಒಂದು ಜವೆಗೋದಿಯ ರೊಟ್ಟಿಯು ಉರುಳುತ್ತಾ ಮಿದ್ಯಾನ್ಯರ ಪಾಳೆಯದೊಳಗೆ ಬಂದು, ಒಂದು ಡೇರೆಗೆ ತಗಲಿ, ಅದನ್ನು ಬುಡಮೇಲು ಮಾಡಿ ಬೀಳಿಸಿಬಿಟ್ಟಿತು” ಎಂದು ಹೇಳಿದನು 14ಆಗ ಅವನ ಜೊತೆಗಾರನು, “ಇದು ಇಸ್ರಾಯೇಲನಾದ ಯೋವಾಷನ ಮಗ ಗಿದ್ಯೋನನ ಕತ್ತಿಯೇ ಹೊರತು ಮತ್ತೊಂದಲ್ಲ; ದೇವರು ಮಿದ್ಯಾನ್ಯರನ್ನೂ ಅವರ ಪಾಳೆಯಗಳನ್ನೂ ಅವನ ಕೈಗೆ ಒಪ್ಪಿಸಿಕೊಟ್ಟಿದ್ದಾನೆ” ಅಂದನು.
15ಗಿದ್ಯೋನನು ಆ ಕನಸನ್ನೂ, ಅದರ ಅರ್ಥವನ್ನೂ ಕೇಳಿದಾಗ ಯೆಹೋವನಿಗೆ ಅಡ್ಡಬಿದ್ದು, ಇಸ್ರಾಯೇಲರ ಪಾಳೆಯಕ್ಕೆ ಹಿಂದಿರುಗಿ ಬಂದು ಅವರಿಗೆ, “ಏಳಿರಿ, ಯೆಹೋವನು ಮಿದ್ಯಾನ್ಯರ ಪಾಳೆಯವನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ” ಅಂದನು. 16ಮತ್ತು ಅವನು ಆ ಮುನ್ನೂರು ಮಂದಿಯನ್ನು ಮೂರು ಗುಂಪು ಮಾಡಿ ಪ್ರತಿಯೊಬ್ಬನ ಕೈಯಲ್ಲಿ ಕೊಂಬನ್ನೂ, ಉರಿಯುವ ಪಂಜು ಇರುವ ಬರಿಕೊಡವನ್ನೂ ಕೊಟ್ಟು ಅವರಿಗೆ, 17“ನನ್ನನ್ನೇ ನೋಡುತ್ತಾ ನಾನು ಮಾಡುವ ಹಾಗೆ ಮಾಡಿರಿ. ನಾನು ಪಾಳೆಯದ ಅಂಚಿಗೆ ಬಂದಾಗ ಹೇಗೆ ಮಾಡುತ್ತೇನೋ ಹಾಗೆ ನೀವೂ ಮಾಡಬೇಕು. 18ನಾನೂ ನನ್ನ ಸಂಗಡ ಇದ್ದವರೂ ಕೊಂಬುಗಳನ್ನು ಊದಲು ನೀವೂ ಪಾಳೆಯದ ಸುತ್ತಲೂ ಕೊಂಬನ್ನು ಊದಿ, ‘ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ ಎಂದು ಕೂಗಿರಿ’” ಎಂದು ಹೇಳಿದನು.
19ರಾತ್ರಿಯ ಎರಡನೆಯ ಜಾವದಲ್ಲಿ ಕಾವಲುಗಾರರು ಬದಲಾದ ಕೂಡಲೆ ಗಿದ್ಯೋನನೂ ಅವನ ಸಂಗಡ ಇದ್ದ ನೂರು ಮಂದಿಯೂ (ಶತ್ರುಗಳ) ಪಾಳೆಯದ ಅಂಚಿಗೆ ಬಂದು, ಕೊಂಬುಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದುಬಿಟ್ಟರು. 20ಕೂಡಲೆ ಮೂರು ಗುಂಪಿನವರೂ ಕೊಂಬುಗಳನ್ನು ಊದಿ, ಕೊಡಗಳನ್ನು ಒಡೆದುಬಿಟ್ಟು, ಎಡಗೈಯಲ್ಲಿ ಪಂಜುಗಳನ್ನೂ ಬಲಗೈಯಲ್ಲಿ ಊದುವ ಕೊಂಬುಗಳನ್ನೂ ಹಿಡಿದು, “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ ಆಗಿದೆ” ಎಂದು ಕೂಗಿ 21ಪಾಳೆಯದ ಸುತ್ತಲೂ ತಮ್ಮ ತಮ್ಮ ಸ್ಥಳದಲ್ಲಿ ನಿಂತರು. ಪಾಳೆಯದವರಾದರೋ ಕೂಗುತ್ತಾ ಓಡಿಹೋದರು. 22ಆ ಮುನ್ನೂರು ಮಂದಿಯು ಕೊಂಬುಗಳನ್ನು ಊದುತ್ತಿರುವಾಗ ಪಾಳೆಯದವರು ಒಬ್ಬರನ್ನೊಬ್ಬರು ಹತಮಾಡಿಕೊಳ್ಳುವಂತೆ ಯೆಹೋವನು ಮಾಡಿದನು. ಪಾಳೆಯದವರು ಚೆರೇರದ ದಾರಿಯಲ್ಲಿರುವ ಬೇತ್‍ಷಿಟ್ಟದ ವರೆಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾ ಪ್ರಾಂತ್ಯದ ವರೆಗೂ ಓಡಿಹೋದರು. 23ಇಸ್ರಾಯೇಲ್ಯರಾದ ನಫ್ತಾಲಿ, ಆಶೇರ್ ಕುಲಗಳವರೂ, ಮನಸ್ಸೆ ಕುಲದ ಎಲ್ಲಾ ಜನರೂ ಕೂಡಿ ಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು. 24ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಪರ್ವತಪ್ರದೇಶಗಳಿಗೆ ದೂತರನ್ನು ಕಳುಹಿಸಿ ಅಲ್ಲಿನವರಿಗೆ, “ನೀವು ಮಿದ್ಯಾನ್ಯರಿಗೆ ವಿರೋಧವಾಗಿ ಹೊರಟು ಬೇತ್‌ಬಾರದವರೆಗಿರುವ ಪ್ರವಾಹಗಳನ್ನೂ ಯೊರ್ದನ್ ಹೊಳೆಯನ್ನೂ ವಶಪಡಿಸಿಕೊಳ್ಳಿರಿ” ಎಂದು ಹೇಳಿಕಳುಹಿಸಿದನು. ಆಗ ಎಫ್ರಾಯೀಮ್ಯರೆಲ್ಲರೂ ಒಟ್ಟಾಗಿ ಬೇತ್‌ಬಾರದವರೆಗಿರುವ ಪ್ರವಾಹಗಳಿಗೂ ಬಂದು ಅವುಗಳ ಹಾಯಗಡಗಳನ್ನೆಲ್ಲಾ ಮತ್ತು ಯೊರ್ದನ್ ಹೊಳೆಯನ್ನೂ ಹಿಡಿದರು. 25ಇದಲ್ಲದೆ ಅವರು ಮಿದ್ಯಾನ್ಯರ ನಾಯಕರಾದ ಓರೇಬ್, ಜೇಬ್ ಎಂಬುವರನ್ನು ಹಿಡಿದು ಓರೇಬನನ್ನು, ಓರೇಬನ ಬಂಡೆಯ ಮೇಲೆಯೂ, ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯಲ್ಲಿಯೂ ಕೊಂದು ಅವರ ತಲೆಗಳನ್ನು ತೆಗೆದುಕೊಂಡು ಮಿದ್ಯಾನ್ಯರನ್ನು ಹಿಂದಟ್ಟುತ್ತಾ ಯೊರ್ದನಿನ ಆಚೆಗೆ ಹೋಗಿ ಅಲ್ಲಿದ್ದ ಗಿದ್ಯೋನನಿಗೆ ಅವುಗಳನ್ನು ಒಪ್ಪಿಸಿದರು.
Currently Selected:
ನ್ಯಾಯ 7: IRVKan
Highlight
Share
Copy
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.