ಯೆಶಾ 5
5
ಯೆಹೋವನ ದ್ರಾಕ್ಷಿಯ ತೋಟದ ಗೀತೆ
1ನನ್ನ ಪ್ರಿಯನಾದವನ ಬಗ್ಗೆ ಮತ್ತು ಅವನ ತೋಟವನ್ನೂ ಕುರಿತು
ಒಂದು ಗೀತೆಯನ್ನು ಹಾಡುವೆನು. ಕೇಳಿರಿ, ಫಲವತ್ತಾದ ಗುಡ್ಡದ ಮೇಲೆ ನನ್ನ ಅತಿಪ್ರಿಯನಿಗೆ ದ್ರಾಕ್ಷಿಯ ತೋಟವಿತ್ತು.
2ಅವನು ಅದನ್ನು ಅಗೆದು, ಕಲ್ಲುಗಳನ್ನು ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿಯ ಸಸಿಗಳನ್ನು ನೆಟ್ಟು,
ಮಧ್ಯದಲ್ಲಿ ಗೋಪುರವನ್ನು ಕಟ್ಟಿ, ದ್ರಾಕ್ಷಿಯ ತೊಟ್ಟಿಯನ್ನು ಕೊರೆಯಿಸಿ,
ತೋಟವು ಒಳ್ಳೆಯ ಸಿಹಿ ದ್ರಾಕ್ಷಿಯ ಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತು.
3ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಜನರೇ,
ಈಗ ನನಗೂ, ನನ್ನ ದ್ರಾಕ್ಷಿಯ ತೋಟಕ್ಕೂ ನ್ಯಾಯತೀರಿಸಿರಿ.
4ನನ್ನ ದ್ರಾಕ್ಷಿಯ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೂ ಹೆಚ್ಚಾಗಿ ಇನ್ನೇನು ಮಾಡಬೇಕಾಗಿತ್ತು?
ಅದು ಒಳ್ಳೆಯ ದ್ರಾಕ್ಷಿಯ ಫಲವನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಏಕೆ ಕೊಟ್ಟಿತು?
5ನನ್ನ ದ್ರಾಕ್ಷಿಯ ತೋಟವನ್ನು ಏನು ಮಾಡುವೆನು ಎಂದು ಈಗ ನಿಮಗೆ ತಿಳಿಸುತ್ತೇನೆ.
ಅದರ ಮುಳ್ಳು ಬೇಲಿಯನ್ನು ಕೀಳುವೆನು. ದನಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿ ಹಾಕುವೆನು. ಅದು ಜನರ ತುಳಿದಾಟಕ್ಕೆ ಈಡಾಗುವುದು.
6ಅದನ್ನು ಹಾಳುಮಾಡುವೆನು. ದ್ರಾಕ್ಷಿಯ ತೋಟವನ್ನು ಯಾರೂ ಕುಡಿ ಕತ್ತರಿಸಿ ಅಗೆಯುವುದಿಲ್ಲ. ಅದರಲ್ಲಿ ಮುಳ್ಳುಕಳೆ ಬೆಳೆಯುವುದು.
ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಅಪ್ಪಣೆ ಕೊಡುವೆನು.
7ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆಯೇ,
ಯೆಹೂದದ ಜನವೇ, ಆತನ ಇಷ್ಟದ ಗಿಡ.
ಆತನು ನ್ಯಾಯವನ್ನು ನಿರೀಕ್ಷಿಸಲು ನರಹತ್ಯೆ, ನೀತಿಯನ್ನು ನಿರೀಕ್ಷಿಸಿಲು ಗೋಳಾಟವೂ ಸಿಕ್ಕಿತ್ತು.
ಬರಲಿರುವ ಅಪತ್ತು
8ಅಯ್ಯೋ, ಮನೆಗೆ ಮನೆಯನ್ನೂ, ಹೊಲಕ್ಕೆ ಹೊಲವನ್ನೂ ಸೇರಿಸಿಕೊಳ್ಳುತ್ತಾ ಬಂದು,
ಇತರರಿಗೆ ಸ್ವಲ್ಪ ಸ್ಥಳವನ್ನೂ ಬಿಡದೆ ದೇಶದ ಮಧ್ಯದಲ್ಲಿ ತಾವೇ ತಾವಾಗಿ ವಾಸಿಸುವವರ ಗತಿಯನ್ನು ಏನು ಹೇಳಲಿ!
9ನನ್ನ ಕಿವಿಯಲ್ಲಿ ಸೇನಾಧೀಶ್ವರನಾದ ಯೆಹೋವನು ಹೇಳುವುದೇನೆಂದರೆ,
ಸೊಗಸಾದ ಅನೇಕ ದೊಡ್ಡ ಮನೆಗಳಲ್ಲಿ ಜನರು ವಾಸಮಾಡದೆ ಅವು ಖಂಡಿತವಾಗಿ ಹಾಳು ಬೀಳುವುವು.
10ಏಕೆಂದರೆ ಹತ್ತು ಎಕರೆ#5:10 ಎಕರೆ ಎಕರೆ ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರೂ ಪದದ ಅಕ್ಷರಶಃವಾದ ಅರ್ಥವು ಒಂದು ದಿನದಲ್ಲಿ ಒಂದು ಜೋಡಿ ಎತ್ತುಗಳು ಉಳುವಷ್ಟು ಪ್ರದೇಶವಾಗಿದೆ. ಇದು ಆಧುನಿಕ ಕಾಲದ ಎಕರೆಯ ಅಳತೆ ಅಲ್ಲ. ಭಾಗವಾಯಿತು. ಭೂಮಿಯು ನಾಲ್ಕು ಕೊಳಗದಷ್ಟೇ#5:10 ಕೊಳಗದಷ್ಟೇ ಬತ್ ಅಂದರೆ 22 ಲೀಟರ್. ದ್ರಾಕ್ಷಾರಸವನ್ನಿಯುವುದು. ಬಿತ್ತಿದ ಒಂದು ಖಂಡುಗ #5:10 ಖಂಡುಗ ಹೋಮೆರ್ 220 ಲೀಟರ್ ಏಫಾ 22 ಲೀಟರ್ಬೀಜದಿಂದ ಕಡಿಮೆ ದವಸವು ಬರುವುದು.
11ಅಯ್ಯೋ, ಮದ್ಯದ ಗೀಳಿನಿಂದಲೇ ಮುಂಜಾನೆ ಎದ್ದು,
ಸಂಜೆಯಾದ ಮೇಲೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲ ಕಳೆಯುವವರ ಗತಿಯನ್ನು ಏನೆಂದು ಹೇಳಲಿ!
12ಕಿನ್ನರಿ, ವೀಣೆ, ದಮ್ಮಡಿ, ಕೊಳಲು ದ್ರಾಕ್ಷಾರಸ ಇವುಗಳೇ ಅವರ ಔತಣಗಳ ಸೊಬಗು.
ಯೆಹೋವನ ಕೆಲಸವನ್ನೋ ಅವರು ಲಕ್ಷಿಸುವುದಿಲ್ಲ. ಆತನ ಕೈಕೆಲಸವನ್ನು ಆಲೋಚಿಸುವುದಿಲ್ಲ.
13ಆದಕಾರಣ ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋಗುವುದು ಖಂಡಿತ.
ಘನವಂತರು ಹಸಿಯುವರು ಮತ್ತು ಜನಸಮೂಹವು ಬಾಯಾರಿಕೆಯಿಂದ ಒಣಗುವುದು.
14ಹೀಗಿರುವುದರಿಂದ ಪಾತಾಳವು ಹೆಚ್ಚು ಆತುರದಿಂದ ಅಗಾಧವಾಗಿ ಬಾಯಿ ತೆರೆಯಲು,
ಅವರ ಮಹಿಮೆ, ಕೋಲಾಹಲ, ಗದ್ದಲ, ಉಲ್ಲಾಸ ಇವೆಲ್ಲವುಗಳು ಅದರೊಳಗೆ ಬಿದ್ದುಹೋಗುವವು.
15ಮನುಷ್ಯನು ಕುಗ್ಗಿಸಲ್ಪಡುವನು. ಅಹಂಭಾವದ ಕಣ್ಣುಗಳು ಕಂಗೆಡುವವು.
16ಸೇನಾಧೀಶ್ವರನಾದ ಯೆಹೋವನೋ ನ್ಯಾಯತೀರಿಸುವುದರಲ್ಲಿ ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು. ಪರಿಶುದ್ಧನಾದ ದೇವರು ಧರ್ಮವನ್ನು ನಡೆಸುವುದರಲ್ಲಿ ಪರಿಶುದ್ಧನು ಎಂದು ಅನಿಸಿಕೊಳ್ಳುವನು.
17ಪಟ್ಟಣ ಪ್ರದೇಶಗಳು ಹಾಳಾಗಿ ಪಶುಪಾಲಕರಿಗೆ ಹುಲ್ಲುಗಾವಲುಗಳಾಗುವವು. ಕುರಿಮರಿಗಳು ಅಲ್ಲಿ ಮೇಯುವವು.#5:17 ಕುರಿಮರಿಗಳು ಅಲ್ಲಿ ಮೇಯುವವು. ಅಂದರೆ ಇತರ ಜನರು ತಿನ್ನುವರು.
18ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧ ದಂಡನೆಯನ್ನು, ರಥವನ್ನು ಹಗ್ಗಗಳಿಂದಲೋ ಎಂಬಂತೆ ಪಾಪವನ್ನು ಎಳೆದುಕೊಳ್ಳುತ್ತಾ,
19ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ನಡೆಸಲಿ.
ಇಸ್ರಾಯೇಲರ ಸದಮಲಸ್ವಾಮಿಯ ಉದ್ದೇಶವನ್ನು ನಾವು ತಿಳಿಯಬೇಕು. ಅದು ಆದಷ್ಟು ಬೇಗ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ!
20ಅಯ್ಯೋ, ಕೆಟ್ಟದ್ದನ್ನು ಒಳ್ಳೆಯದೆಂದೂ, ಒಳ್ಳೆಯದನ್ನು ಕೆಟ್ಟದೆಂದೂ ಬೋಧಿಸಿ;
ಕತ್ತಲನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಂದೂ ಸಾಧಿಸಿ; ಕಹಿಯನ್ನು ಸಿಹಿಯೆಂದು,
ಸಿಹಿಯನ್ನು ಕಹಿ ಎಂದು ಎಣಿಸುವವರ ಗತಿಯನ್ನು ಏನೆಂದು ಹೇಳಲಿ!
21ಅಯ್ಯೋ, ತಮ್ಮನ್ನು ತಾವೇ ಜ್ಞಾನಿಗಳೆಂದೂ, ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೆಂದೂ ಭಾವಿಸಿಕೊಳ್ಳುವವರ ಗತಿಯನ್ನು ಏನು ಹೇಳಲಿ!.
22ಅಯ್ಯೋ, ಸುರಾಪಾನದಲ್ಲಿ ಶೂರರೂ, ಮದ್ಯಮಿಶ್ರಣದಲ್ಲಿ ಸಾಹಸಿಗಳೂ;
23ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ, ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನು ಹೇಳಲಿ!
24ಅವರು ಸೇನಾಧೀಶ್ವರನಾದ ಯೆಹೋವನ ಉಪದೇಶವನ್ನು ನಿರಾಕರಿಸಿ,
ಇಸ್ರಾಯೇಲರ ಸದಮಲಸ್ವಾಮಿಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೊಳೆಯನ್ನು ನುಂಗಿಬಿಡುವಂತೆಯೂ,
ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆತು ಹೋಗುವಂತೆಯೂ, ಅದರ ಚಿಗುರು ಧೂಳಿನಂತೆಯೂ ತೂರಿ ಹೋಗುವುದು.
25ಹೀಗಿರಲು ಯೆಹೋವನು ತನ್ನ ಜನರ ಮೇಲೆ ಕೋಪಗೊಂಡು, ಅವರ ಮೇಲೆ ಕೈಯೆತ್ತಿ, ಅವರನ್ನು ಹೊಡೆದುಬಿಡುವನು.
ಆಗ ಬೆಟ್ಟಗಳು ನಡಗುವವು. ಹೆಣಗಳು ಬೀದಿಗಳಲ್ಲಿ ಕಸವಾಗಿ ಬಿದ್ದಿರುವವು.
ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೇ ಕೈಯೆತ್ತಿಯೇ ಇರುವುದು.
26ಆತನು ದೂರದ ಜನಾಂಗದವರಿಗೆ ಗುರುತಾಗಿ ಧ್ವಜವೆತ್ತಿ, ಅವರನ್ನು ಭೂಲೋಕದ ಅಂಚಿನಿಂದ ಸಿಳ್ಳು ಹಾಕಿ ಕರೆಯುವನು.
ಇಗೋ ಅವರೆಲ್ಲ ತ್ವರೆಪಟ್ಟು ವೇಗವಾಗಿ ಬರುತ್ತಾರೆ.
27ಅವರಲ್ಲಿ ಯಾರೂ ಬಳಲಿ ಮುಗ್ಗರಿಸುವುದಿಲ್ಲ. ಯಾರೂ ತೂಕಡಿಸಿ ನಿದ್ರಿಸುವುದಿಲ್ಲ.
ಅವರ ನಡುಕಟ್ಟು ಬಿಚ್ಚಿಲ್ಲ. ಅವರ ಕೆರದ ಬಾರು ಹರಿಯುವುದಿಲ್ಲ.
28ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ.
ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.
29ಅವರು ಸಿಂಹದಂತೆ ಘರ್ಜಿಸುತ್ತಾರೆ. ಪ್ರಾಯದ ಸಿಂಹಗಳ ಹಾಗೆ ಆರ್ಭಟಿಸುತ್ತಾರೆ.
ಗುರುಗುಟ್ಟುತ್ತಾ ಬೇಟೆ ಹಿಡಿದು ಹೊತ್ತುಕೊಂಡು ಹೋಗುತ್ತಾರೆ. ರಕ್ಷಿಸುವವರು ಯಾರೂ ಇಲ್ಲ.
30ಸಮುದ್ರವು ಭೋರ್ಗರೆಯುವಂತೆ ಆ ದಿನದಲ್ಲಿ ಇವರು ಯೆಹೂದ್ಯರನ್ನು ಕಂಡು ಗರ್ಜಿಸುವರು.
ಭೂಮಿಯನ್ನು ದೃಷ್ಟಿಸಿದರೆ ಅಂಧಕಾರವೂ, ವ್ಯಾಕುಲವೂ ತುಂಬಿರುವುದು. ಮೋಡ ಕವಿದು ಬೆಳಕು ಕತ್ತಲಾಗುವುದು.
Currently Selected:
ಯೆಶಾ 5: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.